Cyclone Asani: ಅಸಾನಿ ಚಂಡಮಾರುತದ ಅಬ್ಬರದಿಂದ ಸೋಮವಾರದವರೆಗೆ ಈ ರಾಜ್ಯಗಳಲ್ಲಿ ಭಾರೀ ಮಳೆ
Rain Updates: ಅಸಾನಿ ಚಂಡಮಾರುತದಿಂದ ಮುಂದಿನ 5 ದಿನಗಳಲ್ಲಿ ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಕರ್ನಾಟಕದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು: ಅಸಾನಿ ಚಂಡಮಾರುತ (Asani Cyclone) ಅಪ್ಪಳಿಸುವ ಹಿನ್ನೆಲೆಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯ (Heavy Rainfall) ಮುನ್ಸೂಚನೆ ನೀಡಲಾಗಿದೆ. ಮಾರ್ಚ್ 20ರಂದು ಭಾರತದ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ 5 ದಿನಗಳಲ್ಲಿ ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಕರ್ನಾಟಕದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ತಮಿಳುನಾಡು, ಕರ್ನಾಟಕದ ಕೆಲವೆಡೆ ಮಳೆ ಹೆಚ್ಚಾಗಿದ್ದು, ನಾಳೆಯಿಂದ ಇನ್ನಷ್ಟು ವ್ಯಾಪಕವಾಗಿ ಮಳೆಯಾಗುವ ನಿರೀಕ್ಷೆಯಿದೆ.
ಮಾರ್ಚ್ 21ರಂದು ಅಂಡಮಾನ್ ದ್ವೀಪಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇನ್ನೆರಡು ದಿನ ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ಚದುರಿದ ಮಳೆ ಹಾಗೂ ಹಿಮಪಾತವಾಗಲಿದೆ. ಮಾರ್ಚ್ 20-22 ರ ಅವಧಿಯಲ್ಲಿ ರಾಯಲಸೀಮಾ ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಮಾರ್ಚ್ 21 ರಿಂದ ಈಶಾನ್ಯ ಭಾರತದಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಮಾರ್ಚ್ 21ರವರೆಗೆ ಬಂಗಾಳ ಕೊಲ್ಲಿಗೆ ಮೀನುಗಾರಿಕೆಗೆ ಹೋಗದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಮಾರ್ಚ್ 22ರವರೆಗೆ ಅಂಡಮಾನ್ ಸಮುದ್ರಕ್ಕೆ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ತೀರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮಾರ್ಚ್ 21 ಮತ್ತು 22ರ ಅವಧಿಯಲ್ಲಿ ಪೂರ್ವ ಮಧ್ಯ ಬಂಗಾಳ ಕೊಲ್ಲಿಗೆ ಮತ್ತು ಮಾರ್ಚ್ 22ರಂದು ಈಶಾನ್ಯ ಬಂಗಾಳ ಕೊಲ್ಲಿಗೆ ಹೋಗದಂತೆ ಸೂಚನೆ ನೀಡಲಾಗಿದೆ.
05 Teams of 04 BN NDRF Arakkonam airlifted to Andaman Nicobar Islands in view of Cyclone Asani.#CycloneAsani@PMOIndia @AmitShah @ianuragthakur @Murugan_MoS @NDRFHQ @04NDRF @PIBHomeAffairs @ndmaindia @Andaman_Admin @MIB_India @PIB_India @airnews_Chennai @DDNewsChennai pic.twitter.com/L6fx7M8Lto
— PIB in Tamil Nadu (@pibchennai) March 18, 2022
ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮುಂದಿನ ಎರಡು ದಿನಗಳವರೆಗೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರಕ್ಕೆ ಹೊಂದಿಕೊಂಡಂತೆ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉದ್ದಕ್ಕೂ ಮತ್ತು ಉತ್ತರಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
IMD ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಳೆಯ ಎಚ್ಚರಿಕೆಯನ್ನು ನೀಡಿದೆ. ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಅಸಾನಿ ಚಂಡಮಾರುತವನ್ನು ಎದುರಿಸಲು ಸಿದ್ಧತೆಗಳು ನಡೆದಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಎನ್ಡಿಆರ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: Karnataka Weather Today: ಕರಾವಳಿ, ಮಲೆನಾಡಿನಲ್ಲಿ ಇಂದು ತುಂತುರು ಮಳೆ; ಕೇರಳ, ತಮಿಳುನಾಡಿನಲ್ಲಿ ವರುಣನ ಆರ್ಭಟ
Weather Today: ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಮಳೆ