ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಿಸಲು ವಿಶೇಷ ಸಾಮಾಜಿಕ ಮಾಧ್ಯಮ ನಿಗಾ ಕೇಂದ್ರ ಆರಂಭಿಸಲಿದೆ ತಮಿಳುನಾಡು ಸರ್ಕಾರ
ಡಿಎಂಕೆ ಸರ್ಕಾರವು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ತಮಿಳುನಾಡು ಪೊಲೀಸ್ ಇಲಾಖೆಗೆ 10,285 ಕೋಟಿ ರೂ. ಮತ್ತು ಅಗ್ನಿಶಾಮಕ ಇಲಾಖೆಗೆ 496.5 ಕೋಟಿ ರೂ ಅನುದಾನ ನೀಡಿದೆ.
ಚೆನ್ನೈ: ಆನ್‌ಲೈನ್‌ನಲ್ಲಿ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ ಹರಡುವುದನ್ನು ನಿಯಂತ್ರಿಸಲು ಮತ್ತು ತಡೆಯಲು ಪೊಲೀಸ್ ಇಲಾಖೆಯ ಅಡಿಯಲ್ಲಿ ವಿಶೇಷ ಸಾಮಾಜಿಕ ಮಾಧ್ಯಮ ನಿಗಾ ಕೇಂದ್ರವನ್ನು(Special Social Media Monitoring Centre) ರಚಿಸುವುದಾಗಿ ತಮಿಳುನಾಡು (Tamil Nadu) ಸರ್ಕಾರ ಶುಕ್ರವಾರ ಹೇಳಿದೆ. ವಿವರವಾದ ಚರ್ಚೆಯ ನಂತರ ಕೇಂದ್ರದ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಖಚಿತಪಡಿಸಲಾಗುವುದು ಎಂದು ಪೊಲೀಸ್ ಸಿಬ್ಬಂದಿ ಹೇಳಿದರು. ಡಿಎಂಕೆ ಸರ್ಕಾರವು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ (TN Budget) ತಮಿಳುನಾಡು ಪೊಲೀಸ್ ಇಲಾಖೆಗೆ 10,285 ಕೋಟಿ ರೂ. ಮತ್ತು ಅಗ್ನಿಶಾಮಕ ಇಲಾಖೆಗೆ 496.5 ಕೋಟಿ ರೂ ಅನುದಾನ ನೀಡಿದೆ. ರಾಜ್ಯ ಪೊಲೀಸ್ ಇಲಾಖೆಗೆ ಹಿಂದಿನ ವರ್ಷದ ಬಜೆಟ್‌ಗಿಂತ 1,385 ಕೋಟಿ ರೂ, ಮತ್ತು ಅಗ್ನಿಶಾಮಕ ಇಲಾಖೆಗೆ ಕಳೆದ ವರ್ಷಕ್ಕಿಂತ 91 ಕೋಟಿ ರೂ. ಹೆಚ್ಚಿಗೆ ಅನುದಾನ ಲಭಿಸಿದೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಇಲಾಖೆಯ ಪ್ರಧಾನ ಕಚೇರಿಯ ವಿಂಗ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಜೆಟ್‌ನ ಸುಮಾರು 80 ಪ್ರತಿಶತವು ಪೊಲೀಸ್ ಸಿಬ್ಬಂದಿಗೆ ವರ್ಷದ ವೇತನವನ್ನು ನೀಡಲು ಮತ್ತು ಹೆಚ್ಚುವರಿ ಹಣವನ್ನು ಹೊಸದಾಗಿ ರಚನೆಯಾದ ಕಮಿಷನರೇಟ್‌ಗಳಲ್ಲಿ ಮೂಲಸೌಕರ್ಯಕ್ಕಾಗಿ, ಹೊಸ ಉಪಕರಣಗಳು, ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಸೆಂಟರ್ ನಿರ್ಮಾಣ ಮತ್ತು ಇತರ ವಿಷಯಗಳಿಗೆ ಖರ್ಚು ಮಾಡಬಹುದು ಎಂದು ಹೇಳಿದರು.
ಅಂತರ್ಜಾಲದ ಹೆಚ್ಚಳ ಮತ್ತು ಸ್ಮಾರ್ಟ್‌ಫೋನ್‌ಗಳ ಲಭ್ಯತೆಯೊಂದಿಗೆ, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ವಿರುದ್ಧ ಹೋರಾಡುವ ಅಗತ್ಯವು ಈಗಿನ ತುರ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದ್ದರಿಂದ, ಸಾಮಾಜಿಕ ನಿಗಾ ಕೇಂದ್ರವು ಪ್ರಕರಣಗಳನ್ನು ದಾಖಲಿಸುವ ಅಧಿಕಾರ ಮತ್ತು ನಕಲಿ ಪೋಸ್ಟ್‌ಗಳನ್ನು ತೆಗೆದುಹಾಕಲು ಅನುಮತಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಅಟೋಮೇಷನ್ ಘಟಕದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ತಪ್ಪು ಮಾಹಿತಿಯ ತನಿಖೆ ಮತ್ತು ತಡೆಗಟ್ಟುವಿಕೆಗೆ ನಮ್ಮ ಜವಾಬ್ದಾರಿಗಳನ್ನು ವಿಸ್ತರಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿಯವರೊಂದಿಗೆ ನಡೆದ ಸಭೆಯಲ್ಲಿ ಸಾಮಾಜಿಕ ಮಾಧ್ಯಮ ನಿಗಾ ಕೇಂದ್ರದ ಕಾರ್ಯಗಳು ಮತ್ತು ಜವಾಬ್ದಾರಿಗಳ ಕುರಿತು ಸಮಾಲೋಚಿಸಲು ಮತ್ತು ವರದಿಯನ್ನು ತಯಾರಿಸಲು ನಮಗೆ ತಿಳಿಸಲಾಯಿತು.
ಐಐಎಂ ಮತ್ತು ಐಐಟಿಯಿಂದ ಪದವಿ ಪಡೆದಿರುವ ಯುವ ಪೊಲೀಸ್ ಅಧಿಕಾರಿಗಳೊಂದಿಗೆ ವಿಶೇಷ ಸಮಾಲೋಚನಾ ತಂಡವನ್ನು ರಚಿಸಲಾಗುವುದು, ಜೊತೆಗೆ ಉನ್ನತ ಅಧಿಕಾರಿಗಳು ವರದಿಯನ್ನು ಸಲ್ಲಿಸುತ್ತಾರೆ, ”ಎಂದು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ರಾಜ್ಯ ಬಜೆಟ್‌ನಲ್ಲಿ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಪೊಲೀಸ್ ಇಲಾಖೆಗೆ ವಿಶೇಷ ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಸೆಂಟರ್ ಸಿಗಲಿದೆ. ಇದು ಅಂತರ್ಜಾಲ ವೇದಿಕೆಗಳಲ್ಲಿ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ವಿರುದ್ಧ ಹೋರಾಡುತ್ತದೆ ಎಂದು ಹೇಳಿದ್ದಾರೆ.
2017 ರಿಂದ ಸಾಮಾಜಿಕ ಮಾಧ್ಯಮದಲ್ಲಿರುವ ರಾಜ್ಯ ಪೊಲೀಸ್ ಪಡೆ, ಲಾಕ್‌ಡೌನ್‌ನ ಉತ್ತುಂಗದ ಸಮಯದಲ್ಲಿ ಅದರ ಫಾಲೋವರ್ಗಳ ಸಂಖ್ಯೆ ದ್ವಿಗುಣಗೊಂಡಿದೆ. ಆಧುನೀಕರಣ ವಿಭಾಗದ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಸಾಮಾಜಿಕ ಮಾಧ್ಯಮ ಸೆಲ್, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಸುದ್ದಿ ಮತ್ತು ಜಾಗೃತಿ ವಿಡಿಯೊಗಳನ್ನು ಪೋಸ್ಟ್ ಮಾಡುತ್ತದೆ.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಆಗುವ ಅವಘಡಗಳ ಬಗ್ಗೆ ಆತಂಕ ಹೊರಹಾಕಿದ ಪ್ರಕಾಶ್ ರಾಜ್