ಬೆಂಗಳೂರು: ಜಮೀನು ಸರ್ವೆ ಸಂಬಂಧ ಕೋರ್ಟ್(High Court) ಆದೇಶ ಪಾಲನೆಗೆ 8 ವರ್ಷ ವಿಳಂಬಕ್ಕೆ ಕಾರಣರಾದ ಪಾಂಡವಪುರ ತಹಶೀಲ್ದಾರ್‌ಗಳಿಗೆ 3 ಲಕ್ಷ ದಂಡ ವಿಧಿಸಿ(Pandavapura Tahsildar) ಹೈಕೋರ್ಟ್ ಆದೇಶ ನೀಡಿದೆ. ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್.ಹೇಮಲೇಖಾರವರಿದ್ದ ಪೀಠ ಆದೇಶ ಹೊರಡಿಸಿದೆ. ಅಧಿಕಾರಿಗಳ ವಿಳಂಬ ನೀತಿಗೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರ ಹಾಕಿದೆ. ಜನ ಕೊನೆಯ ದಾರಿ ಎಂದು ನ್ಯಾಯಾಲಯಕ್ಕೆ ಬರುತ್ತಾರೆ. ಕೋರ್ಟ್ ಆದೇಶ ಪಾಲನೆಯಾಗದಿದ್ರೆ ಜನ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ತಪ್ಪಿತಸ್ಥ ತಹಶೀಲ್ದಾರ್‌ಗಳಿಂದ 3 ಲಕ್ಷ ರೂ. ದಂಡ ವಸೂಲಿಗೆ ಕೋರ್ಟ್ ಆದೇಶ ನೀಡಿದೆ.
72 ವರ್ಷದ ರೈತ ಮಹಿಳೆ ಪಾರ್ವತಮ್ಮ ಹೈಕೋರ್ಟ್ ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ 2014 ರ ಜುಲೈ ತಿಂಗಳಲ್ಲಿ ತಹಸೀಲ್ದಾರ್ ಗೆ ಆದೇಶ ನೀಡಿದ್ದರೂ ಮಂಡ್ಯದ ಪಾಂಡವಪುರದ ವಡೇಸಮುದ್ರ ಗ್ರಾಮದ ಸರ್ವೆ ನಂಬರ್123/ P4 ನ ಸರ್ವೆ ಹಾಗೂ ಪೋಡಿ ಮಾಡಿ ದುರಸ್ತಿ ಮಾಡಿಕೊಟ್ಟಿಲ್ಲವೆಂದು ಆರೋಪಿಸಿದ್ದರು. ಈ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ಪ್ರಮಾಣ ಪತ್ರ ಸಲ್ಲಿಸಿದ ಪಾಂಡವಪುರದ ಈಗಿನ ತಹಸೀಲ್ದಾರ್ ನಯನಾ ಎಸ್.ಎಲ್., ವಿಳಂಬಕ್ಕೆ ಆಡಳಿತಾತ್ಮಕ ಕಾರಣಗಳನ್ನು ನೀಡಿದ್ದರು. ಆದರೆ ಈಗ ಸರ್ವೆ ಮಾಡಿ ಹೊಸ ನಂಬರ್ ನೀಡಲಾಗಿದೆ, ಕೋರ್ಟ್ ಆದೇಶ ಪಾಲಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಮೈಸೂರಲ್ಲಿ ಚಿರತೆ ಭೀತಿ ಮಧ್ಯೆ ಹುಲಿ ದಾಳಿ: ಓರ್ವ ರೈತನಿಗೆ ಗಾಯ
ಆದರೆ 2014 ರ ಆದೇಶ ಪಾಲನೆಗೆ 8 ವರ್ಷ ವಿಳಂಬವಾಗಿರುವ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಸರ್ಕಾರ ಹೈಕೋರ್ಟ್ ಆದೇಶ ಪಾಲನೆಗೆ ವಿಳಂಬ ಮಾಡದಂತೆ 2022 ರ ಜನವರಿ 31 ರಂದು ಸುತ್ತೋಲೆ ಹೊರಡಿಸಿದ್ದರೂ ಸಮರ್ಪಕವಾಗಿ ಪಾಲಿಸದ ಅಧಿಕಾರಗಳ ಬಗ್ಗೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ವಿಳಂಬಕ್ಕೆ ಕಾರಣರಾದ ತಹಶೀಲ್ದಾರ್‌ಗಳಿಂದ 3 ಲಕ್ಷ ರೂಪಾಯಿ ದಂಡವನ್ನು ಮಂಡ್ಯದ ಜಿಲ್ಲಾಧಿಕಾರಿ ವಸೂಲು ಮಾಡಬೇಕು. ಅವರ ಸೇವಾ ದಾಖಲೆಯಲ್ಲೂ ಇದನ್ನು ನಮೂದು ಮಾಡಬೇಕು. ವಸೂಲು ಮಾಡಿದ ಹಣವನ್ನು ಅರ್ಜಿದಾರರಾದ ಪಾರ್ವತಮ್ಮ ನವರಿಗೆ ನೀಡಬೇಕೆಂದು ಹೈಕೋರ್ಟ್ ಸೂಚಿಸಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ