ಬೆಂಗಳೂರು ರಸ್ತೆ ಗುಂಡಿ ಮುಚ್ಚುವಲ್ಲಿ ಬಿಬಿಎಂಪಿ ವಿಫಲ: ಹೈಕೋರ್ಟ್ಗೆ ಹಾಜರಾದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ರಸ್ತೆ ಗುಂಡಿಗಳಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಹೈಕೋರ್ಟ್ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿತು.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ವಿಫಲವಾಗಿರುವ ಬಗ್ಗೆ ಹೈಕೋರ್ಟ್ ಹಲವು ದಿನಗಳಿಂದ ಅಧಿಕಾರಿಗಳಿಗೆ ಚಾಟಿ ಬೀಸುತ್ತಲೇ ಇದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ವಿಚಾರಣೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಬಿಬಿಎಂಪಿ ಮುಖ್ಯ ಎಂಜಿನಿಯರ್ ಎಂ.ಲೋಕೇಶ್ ಹಾಜರಾಗಿದ್ದಾರೆ.
‘ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಏನಾದರೂ ಕಷ್ಟಗಳಿವೆಯೇ? ರಸ್ತೆ ಗುಂಡಿಗಳಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ಬಿಬಿಎಂಪಿ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಪಿಎಂ ಬಂದಾಗ ಮಾಡಿದ ರಸ್ತೆಗಳು ಹಾಳಾಗಿರುವ ವರದಿಗಳಿವೆ’ ಎಂದು ಹೈಕೋರ್ಟ್ ಆಕ್ಷೇಪಿಸಿತು.
ಹೈಕೋರ್ಟ್ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತರ ಪರ ವಕೀಲರಾದ ಶ್ರೀನಿಧಿ, ಪ್ರಧಾನಿ ಭೇಟಿ ವೇಳೆ ನಿರ್ಮಿಸಿದ್ದ ರಸ್ತೆಗಳು ಹಾಳಾಗಿಲ್ಲ. ಒಳಚರಂಡಿ ಸಮಸ್ಯೆಯಿಂದ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಲಾಗಿದೆ. ಜಂಟಿ ಸಮೀಕ್ಷೆಯ ಪ್ರಕಾರ, 847.56 ಕಿಮೀ ರಸ್ತೆಯಲ್ಲಿರುವ ಗುಂಡಿಗಳನ್ನು ಸರಿಪಡಿಸಬೇಕಿದೆ. ಈ ಪೈಕಿ 576 ಕಿಮೀ ರಸ್ತೆ ಗುಂಡಿ ಮುಚ್ಚಲು ಟೆಂಡರ್ ಕರೆಯಲಾಗಿದೆ. 397 ಕಿಮೀ ರಸ್ತೆ ಗುಂಡಿ ರಿಪೇರಿಗೆ ಕಾರ್ಯಾದೇಶ ನೀಡಲಾಗಿದೆ. ಜುಲೈ 15ರಂದು ಟೆಂಡರ್ ತೆರೆಯಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ರಸ್ತೆಗಳು ಸರಿಯಾಗುವವರೆಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಗಿಸುವುದಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿದರು.
Published On - 12:02 pm, Thu, 30 June 22