ACB ಕಲೆಕ್ಷನ್ ಸೆಂಟರ್ ಆರೋಪ: ಎಸಿಬಿ ಎಡಿಜಿಪಿ ಸರ್ವಿಸ್ ರೆಕಾರ್ಡ್ ಹಾಜರುಪಡಿಸಲು ಹೈಕೋರ್ಟ್ ಸೂಚನೆ
ಎಸಿಬಿ ಕಲೆಕ್ಷನ್ ಸೆಂಟರ್ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿ ಈವರೆಗೆ ಎಸಿಬಿ ಬಿ ರಿಪೋರ್ಟ್ಗಳ ಮಾಹಿತಿ ಸಲ್ಲಿಸದ ಹಿನ್ನೆಲೆ ಈಗಲೇ ಡಿಪಿಎಆರ್ ಕಾರ್ಯದರ್ಶಿ ಖುದ್ದು ಹಾಜರಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರು: ಎಸಿಬಿ(ACB) ಕಲೆಕ್ಷನ್ ಸೆಂಟರ್ ಆಗಿದೆ. ಎಸಿಬಿ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದವರಿಗೂ ಬಿ ರಿಪೋರ್ಟ್ ಹಾಕುತ್ತಿದೆ ಎಂದು ಹೆಚ್.ಪಿ.ಸಂದೇಶ್(HP Sandesh) ಎಸಿಬಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದರು. ಸದ್ಯ ಎಸಿಬಿ ಕಲೆಕ್ಷನ್ ಸೆಂಟರ್ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿ ಈವರೆಗೆ ಎಸಿಬಿ ಬಿ ರಿಪೋರ್ಟ್ಗಳ ಮಾಹಿತಿ ಸಲ್ಲಿಸದ ಹಿನ್ನೆಲೆ ಈಗಲೇ ಡಿಪಿಎಆರ್ ಕಾರ್ಯದರ್ಶಿ ಖುದ್ದು ಹಾಜರಿಗೆ ಸೂಚನೆ ನೀಡಲಾಗಿದೆ. ಎಸಿಬಿ ಎಡಿಜಿಪಿಯ ಸರ್ವಿಸ್ ರೆಕಾರ್ಡ್ ಹಾಜರುಪಡಿಸಿ, ಡಿಸಿ ಕಚೇರಿ ಲಂಚ ಪ್ರಕರಣದ 2ನೇ ಆರೋಪಿ ನೇಮಕಾತಿ ವಿವರ, ಗುತ್ತಿಗೆ ನೌಕರನಾಗಿ ನೇಮಿಸಿದ್ದು ಯಾರೆಂದು ತಿಳಿಸಿ ಎಂದು ರಾಜ್ಯ ಸರ್ಕಾರ, ಎಸಿಬಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಲಂಚ ಪ್ರಕರಣ ಹಕೀಕತ್ತು ಏನು? ಐಎಎಸ್ ಅಧಿಕಾರಿಯ ಲಾಬಿ ಬಗ್ಗೆ ಪ್ರಸ್ತಾಪಿಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರು ಐಎಎಸ್ ಅಧಿಕಾರಿ ಮೇಲೆ ದಾಳಿಯಲ್ಲಿ 4.5 ಕೋಟಿ ಹಣ ಸಿಗುತ್ತೆ. 6 ಕೆ.ಜಿ ಚಿನ್ನ ಸಿಕ್ಕ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿದ್ದಾರೆ. ಬಿ ರಿಪೋರ್ಟ್ ಹಾಕಿದ್ದೇಕೆಂದು ಪ್ರಶ್ನಿಸಿದ ನ್ಯಾಯಾಧೀಶರು ವರ್ಗಾವಣೆಗೆ ತುತ್ತಾದರು. ಬೇರೆ ನ್ಯಾಯಾಧೀಶರು ಬಂದ ಮೇಲೆ ಬಿ ರಿಪೋರ್ಟ್ ಅಂಗೀಕಾರಗೊಂಡಿದೆ. ಇಂತಹ ಘಟನೆಗಳು ನೋವು ತರಿಸುತ್ತವೆ ಎಂದು ನ್ಯಾ. ಹೆಚ್.ಪಿ. ಸಂದೇಶ್ ವಿಷಾದಿಸಿದರು.
ಇದನ್ನೆಲ್ಲಾ ನೋಡಿ ಕಣ್ಮುಚ್ಚಿ ಕೂರುವುದು ಹೇಗೆ? ವರ್ಗಾವಣೆ ಬೆದರಿಕೆ ಬಗ್ಗೆ ಹೇಳಿದವರ ಹೆಸರೂ ಬಹಿರಂಗಪಡಿಸುವೆ. ಹಾಲಿ ಎಡಿಜಿಪಿ ಬಂದ ನಂತರ ಎಷ್ಟು ಬಿ ರಿಪೋರ್ಟ್ ಆಗಿದೆ? IAS, IPS ಲಾಬಿಗೆ ಒಳಗಾಗುತ್ತಿದ್ದೀರಿ. ರಾಜ್ಯಕ್ಕೆ ಅವಮಾನವಾಗ್ತಿದ್ರೂ ಕಳಂಕಿತ ಡಿಸಿಯನ್ನು ರಕ್ಷಿಸುತ್ತಿದ್ದೀರಿ. ಡಿಸಿ ಕಡೆ ಕೆಲಸ ಮಾಡಿಸಿಕೊಡ್ತೀನಿ ಅಂದಿದ್ದು ರೆಕಾರ್ಡ್ ಆಗಿದೆ. ಐಎಎಸ್ ಅಧಿಕಾರಿ ಎಂದು ಡಿಸಿ ವಿರುದ್ಧ ಕ್ರಮ ಕೈಗೊಂಡಿಲ್ಲವೇ? ರಾಜ್ಯದಲ್ಲಿ ಅಧಿಕಾರಿಗಳೇ ದರ್ಬಾರ್ ಮಾಡಲು ಬಿಟ್ಟಿದ್ದೀರಿ. ರಾಜ್ಯ ಸರ್ಕಾರ ಕೂಡ ಅಪರಾಧದ ಭಾಗವಾಗಿರುವಂತಿದೆ ಎಂದು ರಾಜ್ಯಸರ್ಕಾರಕ್ಕೆ ಹೈಕೋರ್ಟ್‌ನ ನ್ಯಾ. ಹೆಚ್.ಬಿ. ಸಂದೇಶ್ ತರಾಟೆಗೆ ತೆಗೆದುಕೊಂಡರು. ಜುಲೈ 7ರೊಳಗೆ ಬಿ ರಿಪೋರ್ಟ್ಗಳ ಮಾಹಿತಿ ನೀಡುವಂತೆಯೂ ಅವರು ತಾಕೀತು ಮಾಡಿದರು.
ಎಸಿಬಿ ಕಲೆಕ್ಷನ್ ಸೆಂಟರ್ ಆಗಿದೆ ಕಳೆದ ವಾರ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್ ಎಸಿಬಿ ಕಲೆಕ್ಷನ್ ಸೆಂಟರ್ ಆಗಿದೆ. ಎಸಿಬಿ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದವರಿಗೂ ಬಿ ರಿಪೋರ್ಟ್ ಹಾಕುತ್ತಿದೆ. ಇಲ್ಲಿಯವರೆಗೆ ಸಲ್ಲಿಸಿರುವ ಅಂತಿಮ ವರದಿಗಳ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚಿಸಿತ್ತು. ಆದರೂ ಸರ್ಕಾರ ಮಾಹಿತಿಯನ್ನು ಒದಗಿಸದೇ, ವಿಭಾಗೀಯ ಪೀಠಕ್ಕೆ ನೀಡಲಾಗಿದೆ ಎಂದು ಸಬೂಬು ನೀಡಿದ್ದಕ್ಕೆ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಎಸಿಬಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಡಿಸಿ ಕಚೇರಿಯಲ್ಲಿ ಕಲೆಕ್ಷನ್ ಗೋಸ್ಕರವೇ ಗುತ್ತಿಗೆ ಆಧಾರದಲ್ಲಿ 2ನೇ ಆರೋಪಿಯನ್ನು ನೇಮಿಸಲಾಗಿದೆ. ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದವರಿಗೂ ಬಿ ರಿಪೋರ್ಟ್ ಹಾಕುತ್ತಿದ್ದೀರಿ. ವಿಭಾಗೀಯ ಪೀಠಕ್ಕೆ ನೀಡಿದ ಮಾಹಿತಿ ನನಗೇಕೆ ನೀಡುತ್ತಿಲ್ಲ. ನೀವು ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ ಅಥವಾ ಕಳಂಕಿತರನ್ನು ರಕ್ಷಿಸುತ್ತಿದ್ದೀರಾ. ಕರಿ ಕೋಟ್ ಇರುವುದು ಆರೋಪಿಗಳನ್ನು ರಕ್ಷಿಸಲಿಕ್ಕಲ್ಲ. ಭ್ರಷ್ಟಾಚಾರ ಕ್ಯಾನ್ಸರ್ ಆಗಿದೆ. ಈ ಕ್ಯಾನ್ಸರ್ 4ನೇ ಹಂತಕ್ಕೆ ಹೋಗಬಾರದು. ಸರ್ಚ್ ವಾರೆಂಟ್ ತೋರಿಸಿ ಅಧಿಕಾರಿಗಳಿಂದ ವಸೂಲಿ ಮಾಡೋದು ನಡೀತಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ನಾವೇನು ಮಾಡುವುದು. ಇದನ್ನೂ ಓದಿ: ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಭೂಕುಸಿತ: ಪ್ರಾಕೃತಿಕ ವಿಕೋಪ ಸಂಭವಿಸದಂತೆ 18 ಗ್ರಾಮಸ್ಥರಿಂದ ದೇವರಿಗೆ ಮೊರೆ
ಎಸಿಬಿಯ ಎಡಿಜಿಪಿ ಸರ್ವಿಸ್ ರೆಕಾರ್ಡ್ ಅನ್ನೂ ಈವರೆಗೆ ಹಾಜರುಪಡಿಸಿಲ್ಲ. ನ್ಯಾಯಮೂರ್ತಿಗೇ ವರ್ಗಾವಣೆ ಬೆದರಿಕೆ ಹಾಕುವ ಹಂತಕ್ಕೆ ತಲುಪಿದ್ದೀರಿ. ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ನನಗೆ ಯಾರ ಹೆದರಿಕೆ ಇಲ್ಲ, ಬೆಕ್ಕಿಗೆ ಗಂಟೆ ಕಟ್ಟಲು ಸಿದ್ದನಿದ್ದೇನೆ. ಜಡ್ಜ್ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನನ್ನ ಜಡ್ಜ್ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ, ಭೂಮಿ ಉಳುಮೆ ಮಾಡಲೂ ಸಿದ್ದನಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ನಾನು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ದನಾಗಿಲ್ಲ. ಭ್ರಷ್ಟಾಚಾರದಲ್ಲಿ ಇಡೀ ರಾಜ್ಯವೇ ಹತ್ತಿ ಉರಿಯುತ್ತಿದೆ. ಎಸಿಬಿ ಏನು ಮಾಡುತ್ತಿದೆ. ಬಿ ರಿಪೋರ್ಟ್ ಮಾಹಿತಿ ಬಹಿರಂಗಪಡಿಸಲು ಹಿಂಜರಿಕೆ ಏಕೆ? ವಿಟಮಿನ್ ಎಂ ಇದ್ದರೆ ಎಲ್ಲರನ್ನೂ ರಕ್ಷಿಸುತ್ತೀರಿ. ದುಡ್ಡು ತಗೊಂಡು ಪೋಸ್ಟಿಂಗ್ ಕೊಡೋದು ನಿಲ್ಲಿಸಿದರೆ ಎಲ್ಲ ಸರಿಹೋಗುತ್ತದೆ. ಎಂದು ಎಸಿಬಿ ವಿರುದ್ಧ ಹೈಕೋರ್ಟ್ ನ್ಯಾ.ಹೆಚ್.ಪಿ.ಸಂದೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನ 2.30 ಕ್ಕೆ ವಿಚಾರಣೆ ಮುಂದೂಡಿರುವ ಹೈಕೋರ್ಟ್ ಡಿಪಿಎಆರ್ ಕಾರ್ಯದರ್ಶಿ ಖುದ್ದು ಹಾಜರಾಗುವಂತೆ ಸೂಚಿಸಿದ್ದಾರೆ.
Published On - 3:04 pm, Mon, 4 July 22