ಹಾದಿ ತಪ್ಪಿದ ಹೆದ್ದಾರಿ ಪ್ರಾಧಿಕಾರ, ಸಾವಿನ ದಾರಿಯಾದ ಬೆಂಗಳೂರು-ಹೈದರಾಬಾದ್ ರಾಷ್ಟ್ರಿಯ ಹೆದ್ದಾರಿ… ಸ್ಥಳೀಯರ ಹೆಣಗಾಟ!

| Updated By: ಸಾಧು ಶ್ರೀನಾಥ್​

Updated on: Feb 23, 2024 | 12:22 PM

ಗ್ರಾಮಸ್ಥರ ಪಾಲಿಗೆ ಸಾವಿನ ರಹದಾರಿಯಾದ ಬೆಂಗಳೂರು-ಹೈದರಾಬಾದ್ ರಾಷ್ಟ್ರಿಯ ಹೆದ್ದಾರಿ. ನಿತ್ಯ ಅಪಘಾತಗಳಿಂದ ಬೇಸತ್ತ ಸಾರ್ವಜನಿಕರು. ಹೆದ್ದಾರಿ ದಾಟಲು ಶಾಲಾ ಮಕ್ಕಳು ಮಹಿಳೆಯರ ಪರದಾಟ. ಒಂದು ವರ್ಷದಲ್ಲಿ 76 ಅಪಘಾತ 36 ಜನರ ದುರ್ಮರಣ. ಸ್ಕೈ ವಾಕ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಒತ್ತಾಯ.

ಹಾದಿ ತಪ್ಪಿದ ಹೆದ್ದಾರಿ ಪ್ರಾಧಿಕಾರ, ಸಾವಿನ ದಾರಿಯಾದ ಬೆಂಗಳೂರು-ಹೈದರಾಬಾದ್ ರಾಷ್ಟ್ರಿಯ ಹೆದ್ದಾರಿ... ಸ್ಥಳೀಯರ ಹೆಣಗಾಟ!
ಹಾದಿತಪ್ಪಿದ ಹೆದ್ದಾರಿ ಪ್ರಾಧಿಕಾರ! ಸಾವಿನ ದಾರಿಯಾದ ಬೆಂಗಳೂರು-ಹೈದರಾಬಾದ್ ರಾಷ್ಟ್ರಿಯ ಹೆದ್ದಾರಿ
Follow us on

ಅದು ಹೇಳಿ ಕೇಳಿ ಶರವೇಗದಲ್ಲಿ ಸಂಚಾರ ಕಾಣುವ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ (Bengaluru-Hyderabad national highway). ಹೀಗಾಗಿ ನಿತ್ಯ ಆ ರಸ್ತೆಯಲ್ಲಿ ಸಾವಿರಾರು ವಾಹನಗಳ ಸಂಚಾರ ಸಾಮಾನ್ಯ. ಅದ್ರೆ ಇದೀಗ ಅದೆ ರಸ್ತೆಯಲ್ಲೆ ಈಶಾ ಫೌಂಡೇಶನ್ ಧಾರ್ಮಿಕ ಕೇಂದ್ರ ಸಹ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ವಾಹನಗಳ ಒಡಾಟ ದುಪ್ಪಟ್ಟಾಗಿದ್ದು ರಾಷ್ಟ್ರೀಯ ಹೆದ್ದಾರಿ ಇದೀಗ ಸ್ಥಳೀಯರಿಗೆ ಸಾವಿನ ಹೆದ್ದಾರಿಯಾಗಿ (road to hell) ಬದಲಾಗಿದೆ. ಅದು ಯಾಕೆ ಅನ್ನೂದನ್ನ ಇಲ್ಲಿ ನೀವೇ ನೋಡಿ.

ಒಂದಲ್ಲ ಎರಡಲ್ಲ ಹತ್ತಾರು ನಿಮಿಷಗಳೇ ಕಾದರೂ ವಾಹನಗಳ ಸಂಚಾರ ಮಾತ್ರ ಕಡಿಮೆಯಾಗುವುದೇ ಇಲ್ಲ. ಇತ್ತ ಒಂದೆಡೆ ಮಗು ಮತ್ತೊಂದೆಡೆ ಮಗುವಿನ ಶಾಲಾ ಬ್ಯಾಗ್​​ಗಳನ್ನ ಹೆಗಲ ಮೇಲೆ ಹಾಕ್ಕೊಂಡ ಪೋಷಕರು ಹೆದ್ದಾರಿ ಕ್ರಾಸ್ ಮಾಡಲು ಹೆಣಗಾಡ್ತಿದ್ರೆ ಬೈಕ್ ಸವಾರರು ಸಹ ಜೀವ ಕೈಯಲ್ಲಿ ಹಿಡಿದು ರೋಡ್ ಕ್ರಾಸ್ ಮಾಡಬೇಕಾದ ಪರಿಸ್ಥಿತಿಯಿದೆ. ಇನ್ನು ಇದೇ ಹೆದ್ದಾರಿಯಲ್ಲಿ ಕ್ಷಣ ಮಾತ್ರ ಆತುರಪಟ್ಟಿದ್ದಕ್ಕೆ ಜೀವಗಳೆ ಕೈ ಚೆಲ್ಲಿ ನಿತ್ಯ ಜನ ಆಸ್ಪತ್ರೆಯ ಕದ, ಯಮನ ಪಾದ ಮುಟ್ಟಿರುವುದು ಉಂಟು.

ಅಂದಹಾಗೆ ಬೆಂಗಳೂರಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೂಲಕ ದೇವನಹಳ್ಳಿ ಚಿಕ್ಕಬಳ್ಳಾಪುರ ಮಾರ್ಗವಾಗಿ ಹೈದರಾಬಾದ್ ಗೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಇನ್ನು ಇದೇ ಹೆದ್ದಾರಿಯಲ್ಲಿ ನಂದಿ ಬೆಟ್ಟ, ಈಶಾ ಫೌಂಡೇಶನ್ ಅಂತಹ ಪ್ರವಾಸೀ ಕೇಂದ್ರಗಳೂ ಇವೆ. ವಾರಾಂತ್ಯ ಬಂತೆಂದರೆ ಸಾಕು ಸಾವಿರಾರು ವಾಹನಗಳು ಮುಂಜಾನೆಯಿಂದಲೆ ರಸ್ತೆಗೆ ನುಗ್ಗಿಬರುತ್ತವೆ.

ಹೀಗಾಗಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ನಿತ್ಯ ಹೆದ್ದಾರಿ ಬದಿಯಲ್ಲಿನ ಗ್ರಾಮಸ್ಥರು ಹೆದ್ದಾರಿ ದಾಟಲು ಸಾವಿನ ಮನೆ ಗೆದ್ದು ಬರಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಹೌದು ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ, ವೆಂಕಟಗಿರಿಕೋಟೆ, ಮುದಗುರ್ಕಿ ಸೇರಿದಂತೆ ಹತ್ತಾರು ಗ್ರಾಮಸ್ಥರು ಹೆದ್ದಾರಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ರಸ್ತೆ ದಾಟಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಗ್ರಾಮಸ್ಥರೆಲ್ಲ ತಮ್ಮ ಗ್ರಾಮಗಳ ಬಳಿ ಸ್ಕೈ ವಾಕ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡಿ ಕೊಡುವಂತೆ ಹಲವು ಭಾರಿ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಅಂತ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Also Read: ಬಳ್ಳಾರಿ ಜೀನ್ಸ್ ಪಾರ್ಕ್ ನಿರ್ಮಾಣ​​: ರಾಹುಲ್ ಗಾಂಧಿ ಮಾತಿಗೂ ಬೆಲೆ ಕೊಡದ ಸಿದ್ದರಾಮಯ್ಯ ಸರ್ಕಾರ!

ಚಿಕ್ಕಬಳ್ಳಾಪುರ ಬಳಿ ಈಶಾ ಫೌಂಡೇಶನ್ ಆದ ನಂತರ ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದ್ದು ಹತ್ತಾರು ನಿಮಿಷಗಳೇ ಕಾದಿದ್ದರೂ ರಸ್ತೆ ದಾಟಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಶಾಲಾ ಕಾಲೇಜುಗಳು ಸಹ ಹೆದ್ದಾರಿ ಬದಿಯಲ್ಲೆ ಇದ್ದು ಶಾಲಾ ಮಕ್ಕಳು ಒಟ್ಟಾಗಿ ಕೈ ಹಿಡಿದು ರಸ್ತೆ ದಾಟ್ತಿದ್ದಾರೆ. ಇನ್ನು ಕಳೆದೊಂದು ವರ್ಷದಲ್ಲಿ ಇದೇ ರಸ್ತೆಯಲ್ಲಿ 76 ಅಪಘಾತ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 45 ಜನ ಕೈ ಕಾಲು ಮುರಿದುಕೊ‌ಂಡು ಗಾಯಗೊಂಡಿದ್ರೆ 36 ಜನ ಜೀವವನ್ನೆ ಕಳೆದುಕೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಸ್ಕೈ ವಾಕ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.

ಒಟ್ಟಾರೆ ಸಿಲಿಕಾನ್ ಸಿಟಿಯ ಹೊರವಲಯ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವಂತೆಲ್ಲ ಹೆದ್ದಾರಿಯಲ್ಲಿ ಸಾವು ನೋವುಗಳು ಹೆಚ್ಚಾಗ್ತಿರುವುದು ನಿಜಕ್ಕೂ ದುರಂತ. ಇನ್ನಾದ್ರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತು ಹೆದ್ದಾರಿ ಬದಿಯಲ್ಲಿನ ಗ್ರಾಮಗಳ ಬಳಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ