ಬೆಂಗಳೂರಿನ ‘ಆಜಾನ್’ ಅಗ್ನಿಗೆ ನೀರಸ ಸ್ಪಂದನೆ; ಧ್ವನಿವರ್ಧಕ ಬಳಕೆಗೆ ಸಿದ್ಧವಾಗಿದ್ದ ದೇವಸ್ಥಾನಗಳಲ್ಲಿ ಎಂದಿನಂತೆ ಪೂಜೆ, ಹಿಂದೂ ಕಾರ್ಯಕರ್ತರು ಕಣ್ಮರೆ
ರಾಜ್ಯದಲ್ಲೂ ಮಸೀದಿಗಳ ಮೇಲಿನ ಧ್ವನಿವರ್ಧಕ ಬ್ಯಾನ್ ಮಾಡ್ಬೇಕು ಅಂತಾ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದು ಕೂತಿದ್ದವು. ಆದ್ರೆ ಇಂದು ಬೆಳಗ್ಗೆ 7 ಗಂಟೆ ಸಮೀಪಿಸಿದರೂ ದೇವಾಲಯಗಳ ಮುಂದೆ ಓರ್ವ ಹಿಂದೂ ಪರ ಸಂಘಟನೆ ಕಾರ್ಯಕರ್ತ ಕಂಡು ಬಂದಿಲ್ಲ.
ಬೆಂಗಳೂರು: ಹಿಜಾಬ್ನಿಂದ(Hijab) ಶುರುವಾದ ಧರ್ಮ ಯುದ್ಧ ಹಲಾಲ್ವರೆಗೂ(Halal) ಬಂದು ನಾಡಿನಾದ್ಯಂತ ವಿಚಿತ್ರ ಸ್ಥಿತಿಯನ್ನ ತಂದಿಟ್ಟಿದೆ. ಹೊಸತೊಡಕು ಮುಗಿಸಿ, ಹಲಾಲ್ ದಂಗಲ್ ಕೊಂಚ ತಣ್ಣಗಾಗಬಹುದು ಅಂದುಕೊಂಡಿರುವಾಗಲೇ ಬೆಂಗಳೂರಿನಲ್ಲಿ ಹೊಸ ವಿವಾದ ಬಾಯ್ತೆರೆದಿದೆ. ಮಸೀದಿಯಲ್ಲಿ ಕೂಗೋ ಆಜಾನ್(Azaan) ವಿರುದ್ಧ ಬೆಳ್ಳಂಬೆಳಗ್ಗೆ ಮಂದಿರಗಳಲ್ಲಿ ಓಂಕಾರ ಮೊಳಗಿಸೋ ಮೂಲಕ ಹಿಂದೂ ಸಂಘಟನೆಗಳೂ ಯುದ್ಧ ಸಾರಿವೆ. ಆದ್ರೆ ವಿಪರ್ಯಾಸ ಅಂದ್ರೆ ಇನ್ನೂ ಕೂಡ ಯಾವುದೇ ದೇವಸ್ಥಾನಗಳಲ್ಲಿ ಧ್ವನಿ ವರ್ಧಕ ಮೂಲಕ ಹನುಮಾನ್ ಚಾಲಿಸ್, ರಾಮನ ಜಪ ಕೇಳಿ ಬಂದಿಲ್ಲ. ಓರ್ವ ಹಿಂದೂ ಪರ ಕಾರ್ಯಕರ್ತನು ದೇವಸ್ಥಾನ ಬಳಿ ಪತ್ತೆ ಇಲ್ಲ.
ಮಸೀದಿಗಳಲ್ಲಿ ಎಷ್ಟು ಜೋರಾಗಿ ಸ್ಪೀಕರ್ ಹಾಕಿ ಆಜಾನ್ ಅಂದ್ರೆ ಪ್ರಾರ್ಥನೆ ಮಾಡ್ತಾರೋ, ಅದಕ್ಕಿಂತ ಡಬಲ್ ಸೌಂಡ್ ಇಟ್ಟು ನಾವು ಹನುಮಾನ್ ಚಾಲಿಸಾ ಹಾಕ್ತೀವಿ ಅಂತಾ ರಾಜ್ ಠಾಕ್ರೆ, ಆಜಾನ್ ವಿರುದ್ಧ ಗುಡುಗಿದ್ರು. ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಪಕ್ಷದ ಅಧ್ಯಕ್ಷ ರಾಜ್ ಠಾಕ್ರೆ ಹೇಳಿದ ಈ ಮಾತು, ಕರುನಾಡಲ್ಲಿ ದೊಡ್ಡ ಸಮರಕ್ಕೆ ಮುನ್ನುಡಿ ಬರೆದಿತ್ತು. ರಾಜ್ಯದಲ್ಲೂ ಮಸೀದಿಗಳ ಮೇಲಿನ ಧ್ವನಿವರ್ಧಕ ಬ್ಯಾನ್ ಮಾಡ್ಬೇಕು ಅಂತಾ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದು ಕೂತಿದ್ದವು. ಆದ್ರೆ ಇಂದು ಬೆಳಗ್ಗೆ 7 ಗಂಟೆ ಸಮೀಪಿಸಿದರೂ ದೇವಾಲಯಗಳ ಮುಂದೆ ಓರ್ವ ಹಿಂದೂ ಪರ ಸಂಘಟನೆ ಕಾರ್ಯಕರ್ತ ಕಂಡು ಬಂದಿಲ್ಲ.
ಯಲಹಂಕ ನ್ಯೂ ಟೌನ್ ವೀರಾಂಜನೇಯಸ್ವಾಮಿ ದೇವಸ್ಥಾನ, ಪಾದರಾಯನಪುರದ ಆಂಜನೇಯಸ್ವಾಮಿ ದೇವಸ್ಥಾನ, ಚುಂಚಗಟ್ಟ ವೀರಾಂಜನೇಯ ಸ್ವಾಮಿ ದೇವಾಲಯ, ಮೆಜೆಸ್ಟಿಕ್ ಅಣ್ಣಮ್ಮ ದೇವಾಲಯ, ರಾಜಾಜಿನಗರದ ರಾಮಮಂದಿರ, ಸಂಜಯ್ ನಗರದ ವೇಣುಗೋಪಾಲ ಸ್ವಾಮಿ, ಪಾದಾರಾಯನಪುರದ ಆಂಜನೇಯ ದೇವಸ್ಥಾನ, ವಿಜಯನಗರದ ಶಿವಾಲಯ ಹಾಗೂ ಕೆ.ಆರ್ ಮಾರ್ಕೆಟ್ ಗಣಪತಿ ದೇವಸ್ಥಾನದ ಮೇಲೆ ಧ್ವನಿವರ್ಧಕಗಳನ್ನು ಹಾಕಲು ಸಿದ್ದತೆ ಮಾಡಿಕೊಂಡಿದ್ದರು. ಆದ್ರೆ ಇವತ್ತು ಎಲ್ಲೂ ಕೂಡ ಭಜನೆ, ಹನುಮಾನ್ ಚಾಲಿಸ್, ರಾಮ ನಾಮ ಜಪ ಕೇಳಿ ಬಂದಿಲ್ಲ. ದೇವಸ್ಥಾನಗಳ ಬಳಿ ಪೊಲೀಸ್ ಭದ್ರತೆ ಮಾತ್ರ ಕಂಡು ಬಂದಿದೆ. ಕೆಲ ಕಡೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಧ್ವನಿವರ್ಧಕಗಳನ್ನು ಬಳಸಲು ಮುಂದಾಗಿದ್ದು ಪೊಲೀಸರು ತಡೆದಿದ್ದರಿಂದ ಕಾರ್ಯಕರ್ತರು ಮನೆಗಳಿಗೆ ಹಿಂದಿರುಗಿದ್ದಾರೆ ಎನ್ನಲಾಗಿದೆ.
ಧ್ವನಿವರ್ಧಕದ ಮೂಲಕ ದೇವರ ಗೀತೆಗಳು ಮೈಸೂರಿನ ದೇವರಾಜ ಮೊಹಲ್ಲಾದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಧ್ವನಿವರ್ಧಕದ ಮೂಲಕ ದೇವರ ಗೀತೆಗಳನ್ನು ಹಾಕಲಾಗಿದೆ. ಇದು ಬಹಳ ದಿನಗಳಿಂದ ನಡೆದುಕೊಂಡು ಬಂದಿದ್ದು ಒಂದು ದಿನ ಹಾಕದಿದ್ದರೆ ಜನರು ಏಕೆ ಹಾಕಿಲ್ಲ ಅಂತಾ ಕೇಳುತ್ತಾರೆ ಎಂದು ದೇವಸ್ಥಾನದ ಅರ್ಚಕ ಪ್ರವೀಣ್ ತಿಳಿಸಿದ್ದಾರೆ. ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ 8 ಗಂಟೆಯವರೆಗೂ ಹಾಡುಗಳು ಪ್ರಸಾರವಾಗುತ್ತವೆ. ಪ್ರತಿದಿನ ಬೇರೆ ಬೇರೆ ದೇವರ ಹಾಡುಗಳನ್ನು ಹಾಕಲಾಗುತ್ತೆ. ಸೋಮವಾರ ಶಿವನ ಹಾಡು, ಮಂಗಳವಾದ ಸುಬ್ರಮಣ್ಯ ಸೇರಿ ಹಲವು ದೇವರ ನಾಮ ಹಾಕಲಾಗುತ್ತೆ. ಪ್ರಾತಃ ಕಾಲದ ಪೂಜೆ ಜೊತೆ ಹಾಡುಗಳನ್ನು ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಕಾಳಿಮಠದ ಸ್ವಾಮೀಜಿಯಿಂದ ಮಂತ್ರ ಪಠಣ ಸದ್ಯದ ಮಾಹಿತಿ ಪ್ರಕಾರ ಯಾವ ದೇವಸ್ಥಾನದಲ್ಲೂ ಧ್ವನಿವರ್ಧಕಗಳ ಮೂಲಕ ಭಜನೆ, ಹನಿಮಾನ್ ಚಾಲಿಸ್ ಕೇಳಿ ಬಂದಿಲ್ಲ. ಆದ್ರೆ ಮುಸ್ಲೀಮರ 5 ಕೂಗಿಗೂ ನಾವು ರಾಮ ಜೈ ರಾಮ ಎಂದು ಕೂಗುವಂತೆ ಕರೆ ನೀಡಿದ್ದ ಕಾಳಿಮಠದ ಸ್ವಾಮೀಜಿ ಮಂತ್ರ ಪಠಣ ಮಾಡಿದ್ದಾರೆ. ಅರಸೀಕೆರೆಯ ಕಾಳಿಕಾಂಬ ದೇವಾಲಯದಲ್ಲಿ ಧ್ವನಿವರ್ಧಕ ಹಾಕಿ ಬೆಳ್ಳಂ ಬೆಳ್ಳಗ್ಗೆ ಮೈಕ್ ಮೂಲಕ ಮಂತ್ರ ಪಠಣ ಮಾಡಿ ಮಸೀದಿಗಳಲ್ಲಿ ಮೈಗಳನ್ನ ತೆಗೆಸಲು ಮೈಕ್ ಹಾಕಿ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: Karnataka Rain: ಬೆಂಗಳೂರು, ಉತ್ತರ ಕನ್ನಡ, ಕರಾವಳಿ, ಮಲೆನಾಡಿನಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆ
ಇಷ್ಟು ದಿನ ಇಲ್ಲದ ಆಜಾನ್ ವಿಚಾರ ಈಗ ಏಕೆ ಬಂದಿದೆ?- ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರಶ್ನೆ
Published On - 7:08 am, Tue, 5 April 22