ಮೆಟ್ರೋದಲ್ಲಿ ರೈತನಿಗೆ ಅವಮಾನ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ ಮಾನವ ಹಕ್ಕುಗಳ ಆಯೋಗ
ದೇಶದ ಬೆನ್ನೆಲುಬು ರೈತನಿಗೆ ಬೆಂಗಳೂರು ಮೆಟ್ರೋದಲ್ಲಿ ಫೆ.26 ರಂದು ಅವಮಾನ ಆಗಿತ್ತು. ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಸಿಬ್ಬಂದಿ, ರೈತರೊಬ್ಬರ ಬಟ್ಟೆ ಸ್ವಚ್ಚವಾಗಿಲ್ಲ ಎಂದು ಮೆಟ್ರೋ ಒಳಗೆ ಬಿಡದೆ ಅವಮಾನಿಸಿದ್ದರು. ನಂತರ ಈ ಘಟನೆ ಟಿವಿ9ನಲ್ಲಿ ಪ್ರಸಾರವಾಗುತ್ತಿದ್ದಂತೆ ಅವಮಾನ ಮಾಡಿದ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗವು ಮಧ್ಯ ಪ್ರವೇಶಿಸಿ, ಬಿಎಮ್ಆರ್ಸಿಎಲ್(BMRCL)ಗೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು, ಫೆ.28: ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ (Rajajinagar Metro Station) ರೈತನಿಗೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗವು(Human Rights Commission) ಬಿಎಮ್ಆರ್ಸಿಎಲ್(BMRCL)ಗೆ ನೋಟಿಸ್ ಜಾರಿ ಮಾಡಿದೆ. ವ್ಯಕ್ತಿಯ ಬಟ್ಟೆಯ ಆಧಾರದ ಮೇಲೆ ಸಾರ್ವಜನಿಕ ಸಾರಿಗೆಯಲ್ಲಿ ಅವಕಾಶ ನಿರಾಕರಣೆ ಮಾಡುವಂತಿಲ್ಲ. ಆ ರೀತಿಯಾದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ವರದಿ ನೀಡುವಂತೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದ್ದು, ನಾಲ್ಕು ವಾರದಲ್ಲಿ ಘಟನೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದೆ.
ಘಟನೆ ವಿವರ
ಇದೇ ಫೆಬ್ರವರಿ 26 ರಂದು ಬಟ್ಟೆ ಕೊಳೆಯಿದೆ ಎಂಬ ಕಾರಣಕ್ಕೆ ಬಡ ರೈತನ ಮೇಲೆ ಮೇಟ್ರೋ ಸಿಬ್ಬಂದಿ ದುರಹಂಕಾರದ ವರ್ತನೆ ಮೆರೆದಿದ್ದರು. ಇದನ್ನು ಸಹ ಪ್ರಯಾಣಿಕ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಅಷ್ಟೇ ಅಲ್ಲ, ರೈತನನ್ನು ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಸಹ ಪ್ರಯಾಣಿಕರು ಕಿಡಿಕಾರಿದ್ದರು. ಜೊತೆಗೆ ಸಹ ಪ್ರಯಾಣಿಕರೆಲ್ಲರೂ ಸೇರಿ ಸಿಬ್ಬಂದಿಗೆ ಲೆಕ್ಕಿಸದೇ ರೈತರನ್ನು ಕರೆದುಕೊಂಡು ಹೋಗಿದ್ದರು. ನಂತರ ಸಿಬ್ಬಂದಿ ಅತಿರೇಕದ ವರ್ತನೆಯ ವಿಡಿಯೋವನ್ನು ಬಿಎಂಆರ್ಸಿಎಲ್ಗೆ ಟ್ಯಾಗ್ ಮಾಡಿ ವಿಐಪಿಗಳಿಗೆ ಮಾತ್ರನಾ ಮೆಟ್ರೋ ಎಂದು ಪ್ರಶ್ನಿಸಿ ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದ್ದರು. ‘ರೈತ ಬೆಳೆ ಬೆಳೆದಿಲ್ಲ ಅಂದರೆ ನೀವು ಏನು ತಿಂತೀರಾ ಎಂದು ಜನರು ಪ್ರಶ್ನಿಸಿದ್ದರು.
ಇದನ್ನೂ ಓದಿ:ಮಾನವೀಯತೆ ಮರೆತು ಬಿಟ್ರಾ ನಮ್ಮ ಮೆಟ್ರೋ ಸಿಬ್ಬಂದಿ? ಬಟ್ಟೆ ಕೊಳೆಯಿದೆ ಎಂದು ಒಳಗೆ ಬಿಡದೆ ರೈತನಿಗೆ ಅವಮಾನ
ಬಳಿಕ ಮೆಟ್ರೋ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಟ್ವಿಟರ್ ಬಳಕೆದಾರರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಎಂಆರ್ಸಿಎಲ್, ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿತ್ತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ ಎಂದು ಬಿಎಂಆರ್ಸಿಎಲ್ ತಿಳಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ