ಇಪ್ಪತ್ತನಾಲ್ಕು ವರ್ಷದ ಬ್ಯಾಂಕ್ನಲ್ಲಿ ನೂರಾರು ಕೋಟಿ ರೂ. ವಂಚನೆ! ಇಲ್ಲಿದೆ ಪಿನ್ ಟು ಪಿನ್ ಮಾಹಿತಿ
ಇಪತ್ತನಾಲ್ಕು ವರ್ಷ ನಡೆದುಕೊಂಡು ಬಂದಿದ್ದ ನಂಬಿಕಸ್ಥ ಬ್ಯಾಂಕ್ ಈಗ ಒಂದು ಫ್ರಾಡ್ ಬ್ಯಾಂಕ್ ಆಗಿದೆ. ಎಂಟು ಪರ್ಸೆಂಟ್ ಹತ್ತು ಪರ್ಸೆಂಟ್ ಬಡ್ಡಿ ಆಸೆಗಾಗಿ ಹಣ ಇಟ್ಟವರು ಈಗ ಕಣ್ಣು ಬಾಯಿ ಬಿಡುವಂತಾಗಿದೆ.
ಶುಶೃತಿ ಸೌಹಾರ್ದ ಸಹಕಾರಿ ಬ್ಯಾಂಕ್, (Shushruti Souharda Co-operative Bank) ಈ ಹೆಸರಿನ ಬ್ಯಾಂಕ್ಗಳನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್, ಪೀಣ್ಯ, ಚಿಕ್ಕಜಾಲ, ಆನೇಕಲ್ನಲ್ಲಿ ನೋಡಿರುತ್ತೀರಾ. 1997 ರಲ್ಲಿ ಸೆಂಟ್ರಲ್ ಗವರ್ನಮೆಂಟ್ ಕೆಲಸ ಬಿಟ್ಟು ಶ್ರೀನಿವಾಸ್ ಮೂರ್ತಿ ಎಂಬಾತ ಶುಶೃತಿ ಸೌಹಾರ್ದ ಸಹಕಾರಿ ಬ್ಯಾಂಕ್ನ್ನು ಸ್ಥಾಪಿಸಿದ್ದ. ಬ್ಯಾಂಕ್ನಲ್ಲಿ ಒಂದಷ್ಟು ಕಲರ್ ಫುಲ್ಆಫರ್ಗಳನ್ನು ನೀಡದ್ದ. ಆತನ ಟಾರ್ಗೆಟ್ ಒಂದೇ ಆಗಿತ್ತು, ಬ್ಯಾಂಕ್ಗೆ ಕೋಟ್ಯಾಂತರ ರೂಪಾಯಿ ಹಣ ಬರಬೇಕು ಅಂತ ಅದಕ್ಕೆ ಠೇವಣಿ ದಾರರನ್ನು ಸೆಳೆಯುವ ಕೆಲಸ ಮಾಡಿದ್ದ. ಆತನ ಸೆಳೆಯುವ ಕೆಲಸ ಒಂದು ಹಂತಕ್ಕೆ ಸಕ್ಸಸ್ ಸಹ ಆಗಿತ್ತು. ಆದರೆ ಪರಿಣಾಮವಾಗಿಯೇ ಬ್ಯಾಂಕ್ ಬರೋಬ್ಬರಿ ಇಪತ್ತನಾಲ್ಕು ವರ್ಷ ನಡೆದುಕೊಂಡು ಬಂದಿತ್ತು. ಇಪತ್ತನಾಲ್ಕು ವರ್ಷ ನಡೆದುಕೊಂಡು ಬಂದಿದ್ದ ನಂಬಿಕಸ್ಥ ಬ್ಯಾಂಕ್ ಈಗ ಒಂದು ಫ್ರಾಡ್ ಬ್ಯಾಂಕ್ ಆಗಿದೆ. ಎಂಟು ಪರ್ಸೆಂಟ್ ಹತ್ತು ಪರ್ಸೆಂಟ್ ಬಡ್ಡಿ ಆಸೆಗಾಗಿ ಹಣ ಇಟ್ಟವರು ಈಗ ಕಣ್ಣು ಬಾಯಿ ಬಿಡುವಂತಾಗಿದೆ.
ಜನರ ಪೆನ್ಷನ್ ಹಣದಲ್ಲಿ ಫಾರಿನ್ ಟ್ರಿಪ್! ಮಾಲ್ಡವೀಸ್, ಯೂರೋಪ್ ಟ್ರಿಪ್ಗೆ ಕೋಟಿ ಕೋಟಿ ಖರ್ಚು
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತ ಹೇಳುವ ಹಾಗೆ ಇಲ್ಲಿ ಶುಶೃತಿ ಬ್ಯಾಂಕ್ನಲ್ಲಿ ಠೇವಣಿದಾರರು ಇಟ್ಟಿದ್ದ ಕೋಟಿ ಕೋಟಿ ಹಣದಲ್ಲಿ ಶ್ರೀನಿವಾಸ್ ಮೂರ್ತಿ ಅಂಡ್ ಫ್ಯಾಮಿಲಿ ಮಸ್ತ್ ಮಜಾ ಮಾಡಿದ್ದಾರೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ , ರಾಜಗೋಪಾಲ್ ನಗರ ಚಿಕ್ಕಜಾಲದಲ್ಲಿ ದಾಖಲಾಗಿದ್ದ ವಂಚನೆ ಕೇಸ್ಗಳನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಬಳಿಕ ಸಿಸಿಬಿ ಶ್ರೀನಿವಾಸ್ ಮೂರ್ತಿ ಮನೆ, ಮಗಳ ಮನೆ ಸೇರಿ ಬ್ಯಾಂಕ್ ಹಣ ಲೂಟಿ ಹೊಡೆದಿದ್ದ ಸುಮಾರು 11 ಜನರಿಗೆ ಸೇರಿದ್ದ ಹದಿನಾಲ್ಕು ಕಡೆ ದಾಳಿ ಮಾಡಿತ್ತು. ದಾಳಿ ವೇಳೆ ಹಣ, ಚಿನ್ನ, ಆಸ್ತಿ ಪತ್ರಗಳು ಎಲ್ಲವು ಸಿಕ್ಕಿದ್ದವು. ಅದೆಲ್ಲಕ್ಕಿಂತ ಹೆಚ್ಚಾಗಿ ಆರೋಪಿಗಳು ಪಾಸ್ ಪೋರ್ಟ್ನಲ್ಲಿ ಇದ್ದ ಒಂದಷ್ಟು ಸೀಲ್ಗಳು ಸಿಸಿಬಿ ತಲೆ ಕೆಡಿಸಿತ್ತು. ಠೇವಣಿದಾರರು ಇಟ್ಟಿದ್ದ ಕೋಟಿ ಕೋಟಿ ಹಣದಲ್ಲಿ ಆರೋಪಿಗಳು ಎಜುಕೇಶನ್ ಟ್ರಿಪ್, ಹಾಗೂ ಫ್ಯಾಮಿಲಿ ಟ್ರಿಪ್ ಹೆಸರಿನಲ್ಲಿ ಫಾರಿನ್ ಟ್ರಿಪ್ ಹೊಡೆದಿದ್ದಾರೆ. ಟ್ರಿಪ್ನಲ್ಲಿ ಕೋಟ್ಯಾಂತರ ಹಣವನ್ನು ಖರ್ಚು ಮಾಡಿದ್ದಾರೆ ಎನ್ನುವ ಅಂಶಗಳು ಕಂಡು ಬಂದಿದೆ. ಆರೋಪಿಗಳು ಪಾಸ್ ಪೋರ್ಟ್ನಲ್ಲಿ ಮಾಲ್ಡೀವ್ಸ್, ಯುರೋಪಿಯನ್ ಕಂಟ್ರಿಗಳಿಗೆ ಪ್ರವಾಸ ಹೋಗಿ ಬಂದಿರುವುದು ಪತ್ತೆಯಾಗಿದೆ.
ಕನಿಷ್ಟ ಹತ್ತು ಲಕ್ಷ ಠೇವಣಿ, ಹತ್ತು ಪರ್ಸೆಂಟ್ ಬಡ್ಡಿ.!
ಈ ಶುಶೃತಿ ಬ್ಯಾಂಕ್ನ ಟಾರ್ಗೆಟ್ ಅಂದರೆ ಅದು ಹಣವಿದ್ದವರು. ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿದ್ದವರೆ ಇವರ ಟಾರ್ಗೆಟ್. ಈ ಬ್ಯಾಂಕ್ನಲ್ಲಿ ಹತ್ತು ಲಕ್ಷ ಹಣವನ್ನು ಎಫ್ಡಿ ಇಡಬೇಕು ಆಗ ಮಾತ್ರ ಎಂಟು ಪರ್ಸೆಂಟ್, ಹತ್ತು ಪರ್ಸೆಂಟು, ಹನ್ನೆರಡು ಪರ್ಸೆಂಟ್ ಬಡ್ಡಿ ಕೊಡುತ್ತೇವೆ ಎಂದು ಗ್ರಾಹಕರಿಗೆ ಕಥೆ ಹೇಳಿಬಿಟ್ಟು ನೂರಾರು ಕೋಟಿ ವಂಚನೆ ಮಾಡಲಾಗಿದೆ ಅನ್ನೊ ಆರೋಪ ಇದೆ. ಅಧಿಕ ಬಡ್ಡಿ ನೀಡುವ ಅಮಿಷವೊಡ್ಡಿ, ಗ್ರಾಹಕರಿಂದ ನೂರಾರು ಕೋಟಿ ಹಣ ಹೂಡಿಕೆ ಮಾಡಿಸಿಕೊಂಡಿರೊದು ಪತ್ತೆಯಾಗಿದೆ. ನಿವೃತ್ತಿಯಾದವರ ಕೊನೆ ಕಾಲದಲ್ಲಿ ಹಣ ಇರತ್ತೆ ಆದರೆ ಅದನ್ನು ಹೂಡಿಕೆ ಮಾಡುವ ಧೈರ್ಯ ಇರಲ್ಲಾ ಹೀಗಾಗಿ ಈ ಬ್ಯಾಂಕ್ ಮೊರೆ ಹೋಗಿದ್ದಾರೆ. ಇಪ್ಪತ್ತನಾಲ್ಕು ವರ್ಷಗಳಿಂದ ನಡೆಯುತ್ತಿದೆ ಅನ್ನೊ ನಂಬಿಕೆಯಲ್ಲಿ ನಿವೃತ್ತಿಯಾದಾಗ ಬಂದ ಹಣವನ್ನು ಠೇವಣಿ ಇಡುತ್ತಿದ್ದರು. ಅದರಿಂದ ಬಂದ ಬಡ್ಡಿ ಹಣದಲ್ಲಿ ಜೀವನ ನಡೆಸುವ ಪ್ಲಾನ್ನಲ್ಲೇ ಠೇವಣಿ ಇಟ್ಟಿರುವ ಅಂಶಗಳು ಬೆಳಕಿಗೆ ಬಂದಿದೆ.
ಸಂಬಂಧಿಕರು, ಸ್ನೇಹಿತರಿಗೆ ಕೋಟಿ ಕೋಟಿ ಸಾಲ! ಕುಟುಂಬದ ದುರಾಸೆಯಿಂದ ದಿವಾಳಿಯತ್ತ ಸಾಗಿದ ಬ್ಯಾಂಕ್!
ಒಂದು ಕಡೆ ಅಧಿಕ ಬಡ್ಡಿ ನೀಡುತ್ತೇವೆ ಎಂದು ಗ್ರಾಹಕರ ಬಳಿ ನೂರಾರು ಕೋಟಿ ಹೂಡಿಕೆ. ಮತ್ತೊಂದು ಕಡೆ ಸ್ನೇಹಿತರು, ಸಂಬಂಧಿಸಿಕರು, ಪರಿಚಿತರಿಗೆಲ್ಲಾ, ನಕಲಿ ಅಕೌಂಟ್ ಮೂಲಕ ಕೋಟಿ ಕೋಟಿ ಸಾಲ ನೀಡಿದ್ದರು. ಯಾವಾಗ ಕೊಟ್ಟ ದುಡ್ಡು ವಾಪಸು ಬಂದಿಲವೋ ಅದರ ಎಫೆಕ್ಟ್ ಹೂಡಿಕೆದಾರರ ಮೇಲೆ ಬಿದ್ದಿತ್ತು. ಅಂದರೆ ಇಲ್ಲಿ ಮ್ಯಾನೇಜರ್ನಿಂದ ಚೇರ್ಮನ್ ತನಕ ಅವರಿಗೆ ಬೇಕಾದವರಿಗೆ ಹತ್ತು ಕೋಟಿ, ಹದಿನೈದು ಕೋಟಿ, ಸಾಲ ಕೊಟ್ಟಿದ್ದಾರೆ. ಕೊಟ್ಟ ಸಾಲಕ್ಕೆ ಲೆಕ್ಕವೂ ಇಲ್ಲಾ ದಾಖಲೆಯೂ ಇಲ್ಲಾ, ಇಷ್ಟೆಲ್ಲಾ ಸಾಲ ಕೊಟ್ಟ ಬಳಿಕ ಸಾಲ ಪಡೆದವರು ವಾಪಸ್ಸು ಕಟ್ಟಿಯೂ ಇಲ್ಲಾ. ನಂತರದ ದಿನದಲ್ಲಿ ಹಣ ವಾಪಸ್ಸು ನೀಡುವಂತೆ ಗ್ರಾಹಕರು ಎಷ್ಟೇ ಕೇಳಿದರು ಶುಶೃತಿ ಬ್ಯಾಂಕ್ ಚೇರ್ಮೆನ್ ಶ್ರೀನಿವಾಸ್ ಮೂರ್ತಿ ಸೇರಿದಂತೆ ಕುಟುಂಬದವರು, ಮಾತ್ರ ನಾಟ್ ರೀಚಬಲ್ ಆಗಿದ್ದರು.
ಯಾವಾಗ ಗ್ರಾಹಕರ ಒತ್ತಡ ಜಾಸ್ತಿ ಆಯಿತೋ ಹೂಡಿಕೆದಾರರಿಗೆ ಧಮ್ಕಿ ಹಾಕೋಕು ಶುರುಮಾಡಿದರು. ಈ ಸಂಬಂಧ ನಗರದ ವಿಲ್ಸನ್ ಗಾರ್ಡನ್, ಚಿಕ್ಕಜಾಲ, ರಾಜ ಗೋಪಾಲ್ ನಗರ, ಹನುಮಂತ ನಗರ ಸೇರಿ ನಾಲ್ಕು ಕಡೆಗಳ ಎಫ್ಐಆರ್ ಕೂಡ ದಾಖಲಾಗಿತ್ತು. ಸದ್ಯ ಕೇಸ್ ಸಂಬಂಧ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ನಿರ್ದೇಶಕರು ಹಾಗೂ ಬ್ರಾಂಚ್ ಮ್ಯಾನೇಜರ್ಗಳಾದ ಆಶ, ಪ್ರಶಾಂತ್ ಕುಮಾರ್, ಸುರೇಶ್, ಧರಣಿದೇವಿ ಸೇರಿ ಐವರನ್ನು ಬಂಧನ ಮಾಡಲಾಗಿದೆ. ಇಂದು ಸಿಸಿಬಿ ದಾಳಿ ನಡೆಸಿದ ವೇಳೆ 39 ಲಕ್ಷ ನಗದು, 30 ಲಕ್ಷದ ಎಫ್ಡಿಗಳ 50 ಕ್ಕೆ ಆಸ್ತಿ ದಾಖಲಾತಿಗಳು ಹಾಗೂ ಯಾರಿಗೆಲ್ಲ ಸಾಲ ನೀಡಿದ್ದಾರೆ, ಹಣ ಹೇಗೆಲ್ಲಾ ಬ್ಯಾಂಕ್ ನಿಂದ ಮಿಸ್ ಯ್ಯೂಸ್ ಆಗಿದೆ ಅನ್ನೋ ಬಗ್ಗೆ ದಾಖಲಾತಿಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿವೆ. ಇನ್ನು ಮುಂದೆ ಹೆಚ್ಚಿನ ಬಡ್ಡಿ ಸಿಗತ್ತೆ ಜೊತೆಗೆ ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳು ಸೇಫ್ ಅನ್ನೊ ಭಾವನೆ ಇದ್ದರು ಅದನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ. ಇಲ್ಲವಾದರೆ ಕೊನೆಗಾಲದಲ್ಲಿ ಸಹಾಯ ಆಗುತ್ತೆ ಅಂತ ಕೂಡಿಟ್ಟ ಹಣ ಸಂಪೂರ್ಣ ನದಿಗೆ ಎಸೆದಂತಾಗಬಹುದು.
ವರದಿ: ಪ್ರಜ್ವಲ್ ಟಿವಿ 9
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:14 pm, Fri, 14 October 22