ಬೆಂಗಳೂರು, ಸೆ.07: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆ.ಜಿ ಉಚಿತ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಸದ್ಯ ಕೇಂದ್ರ ಸಹಕಾರ ನೀಡಲಿಲ್ಲ ಎಂದು 5 ಕೆ.ಜಿ ಅಕ್ಕಿ ಹಾಗೂ ಓರ್ವ ವ್ಯಕ್ತಿಗೆ ಪ್ರತಿ ತಿಂಗಳು 170 ರೂ. ಕೊಡುವ ಯೋಜನೆಯನ್ನ ಕೈಗೆತ್ತಿಕೊಂಡಿತ್ತು. ಆದರೆ, ನಕಲಿ ಬಿಪಿಎಲ್ ಕಾರ್ಡ್(BPL Card) ಫಲಾನುಭವಿಗಳು ಇದರ ದುರುಪಯೋಗ ಪಡೆದುಕೊಳ್ಳುವ ಪ್ರಮಾಣ ಹೆಚ್ಚಾಗಿದ್ದು. ಇದರ ಬಗ್ಗೆ ಬೆಳಕು ಚೆಲ್ಲಿದ ಟಿವಿ9ನ ನಿರಂತರ ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ಕೊನೆಗೂ ನಕಲಿ ಬಿಪಿಎಲ್ ಕಾರ್ಡ್ಗಳಿಗೆ ಗುನ್ನಾ ಇಡಲು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಣದ ಬದಲಿಗೆ ಆಹಾರ ಅಂದರೆ ಎಣ್ಣೆ, ಬೇಳೆಯನ್ನೊಳ್ಳಗೊಂಡ ಫುಡ್ ಕಿಟ್ ನೀಡುವ ಬಗ್ಗೆ ವಿಸ್ತೃತ ಚರ್ಚೆ ನಡೆದಿತ್ತು. ಸದ್ಯ ನಕಲಿ ಬಿಪಿಎಲ್ ಕಾರ್ಡ್ಗಳನ್ನ ತಡೆದು ನಂತರ ಆಹಾರ ಕಿಟ್ ವಿತರಣೆ ಸಂಬಂಧ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಬರೋಬ್ಬರಿ 1 ಕೋಟಿ 13 ಲಕ್ಷ ಜನರ ಬಳಿ ನಕಲಿ ಬಿಪಿಎಲ್ ಕಾರ್ಡ್ಗಳಿವೆ ಶೇ.80 ರಷ್ಟು ಜನರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ. ಈಗಾಗಲೇ ನೀತಿ ಆಯೋಗವೂ ಸಹ ತೀವ್ರ ಆಕ್ಷೇಪವನ್ನ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಮನೆಯಲ್ಲಿ TV, ಬೈಕ್, ಫ್ರಿಡ್ಜ್ ಹೊಂದಿರುವವರು.. BPL ಕಾರ್ಡ್ ಹೊಂದಿದ್ರೆ ಕೂಡಲೇ ಹಿಂದಿರುಗಿಸಿ -ಸಚಿವ ಉಮೇಶ್ ಕತ್ತಿ
ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಮಹತ್ವದ ಬೆಳವಣಿಗೆ ಆಗಲಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಕಲಿ ಬಿಪಿಎಲ್ ಕಾರ್ಡ್ ಗಳನ್ನ ಪತ್ತೆ ಮಾಡಿ ಎಪಿಎಲ್ ಕಾರ್ಡ್ಗೆ ವರ್ಗಾಯಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಇಲಾಖಾ ಮಟ್ಟದಲ್ಲೇ ಸಮಿತಿ ರಚನೆಗೆ ಚಿಂತನೆ ನಡೆಸಲಾಗುತ್ತಿದೆ. ಕಮಿಟಿ ನಕಲಿ ಬಿಪಿಎಲ್ ಕಾರ್ಡ್ ಹೊಂದಿರುವವರನ್ನ ಪರಿಶೀಲನೆ ನಡೆಸಿ, ಅವರನ್ನ ಎಪಿಎಲ್ ಕಾರ್ಡ್ ಗೆ ಸೇರಿಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಲು ಕೆಲವು ಅರ್ಹತೆಗಳು ಬೇಕಾಗಿದೆ. ಆರ್ಹತೆ ಹಾಗೂ ಮಾನದಂಡವನ್ನ ಆಧರಿಸಿ ಎಪಿಎಲ್ ಹಾಗೂ ಬಿಪಿಎಲ್ ಎಂದು ಗುರುತಿಸಲಾಗುತ್ತದೆ.
ಇನ್ನು ಬೇರೆ ರಾಜ್ಯಗಳ ಸ್ಥಿತಿಗತಿಯನ್ನ ಗಮನಿಸುವುದಾದರೆ, ತಮಿಳುನಾಡು, ಕೇರಳ, ಆಂಧ್ರ ಹಾಗೂ ತೆಲಂಗಾಣ ಪ್ರದೇಶಗಳಲ್ಲೇ ಯಾವುದೂ 50% ಗಿಂತ ಜಾಸ್ತಿ ಬಿಪಿಎಲ್ ಕಾರ್ಡ್ ಇಲ್ಲ. ಆದರೆ, ನಮ್ಮಲ್ಲಿ ಬಿಪಿಎಲ್ ಶೇ.80% ಇದೆ. ಅನೇಕ ಸರ್ಕಾರಗಳ ಬಂದು ಬದಲಾದಂತೆ ನಕಲಿ ಬಿಪಿಎಲ್ ಕಾರ್ಡ್ ಸಂಖ್ಯೆ ಹೆಚ್ಚಾಗುತ್ತಲೇ ಹೋಗಿದೆ. ಯಾವುದೇ ಬಿಪಿಎಲ್ ಕಾರ್ಡ್ದಾರರು ಆದಾಯ ತೆರಿಗೆ ಪಾವತಿದಾರರಾಗಬಾರದು. ಆದಾಯ 1200 ರೂ.ಗಿಂತ ಜಾಸ್ತಿ ಇರಬಾರದು ಎಂಬ ಗೈಡ್ ಲೈನ್ಸ್ ಇದೆ. ಇದೀಗ ಆ ಗೈಡ್ ಲೈನ್ ಆಧರಿಸಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಪರಿಶೀಲನೆ ನಡೆಸಲು ಮುಂದಾಗಿದೆ. ಇದು ಪೂರ್ಣವಾದ ಬಳಿಕೆ ಎಷ್ಟು ಬಿಪಿಎಲ್ ಇದೆ, ಅದನ್ನ ಎಪಿಎಲ್ಗೆ ಹಾಕುತ್ತೇವೆ. ಆಗ ಬಿಪಿಎಲ್ನಲ್ಲಿ ಅನರ್ಹ ಇದ್ದವರು ಎಪಿಎಲ್ಗೆ ಹೋಗುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಒಟ್ಟಾರೆ, ನಕಲಿ ಬಿಪಿಎಲ್ ಕಾರ್ಡ್ ಹಾವಳಿ ಬಗ್ಗೆ ಸುದ್ದಿ ಮಾಡಿದ್ದ ಟಿವಿ9, ಇದೀಗ ಸರ್ಕಾರಕ್ಕೆ ಕಣ್ಣು ತೆರೆಸಿದೆ. ಕೊನೆಗೂ ಎಚ್ಚೆತ್ತ ಆಹಾರ ಇಲಾಖೆ ಹಾಗೂ ರಾಜ್ಯ ಸರ್ಕಾರ, ನಕಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮುಂದಾಗಿರುವುದು ಮಹತ್ವದ ಬೆಳವಣಿಗೆಯೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ