ಸಿಎಂ ಕಾರ್ಯಾಲಯದಲ್ಲಿ ಬೆಂಗಳೂರು ಆಡಳಿತಕ್ಕೆ ಸಂಬಂಧಿಸಿದ ಮಹತ್ವದ ಕಡತ ನಾಪತ್ತೆ: ಮಹತ್ವದ ದಾಖಲೆ ಕಳೆದದ್ದು ಹೇಗೆಂಬ ಪ್ರಶ್ನೆಗೆ ಸಿಕ್ಕಿಲ್ಲ ಉತ್ತರ
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದಿದ್ದು, ‘ಒಂದು ವರ್ಷದಿಂದ ಫೈಲ್ ಬಂದಿಲ್ಲ’ ಎಂದು ಹೇಳಿದ್ದರು.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಾಲಯದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸಂಬಂಧಿಸಿದ ಮಹತ್ವದ ಕಡತ ನಾಪತ್ತೆಯಾಗಿದೆ. ರಾಜ್ಯ ಅಡಳಿತದ ಶಕ್ತಿಕೇಂದ್ರದಲ್ಲಿಯೇ ಮಹತ್ವದ ಕಡತವೊಂದು ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದಿದ್ದು, ‘ಒಂದು ವರ್ಷದಿಂದ ಫೈಲ್ ಬಂದಿಲ್ಲ’ ಎಂದು ಹೇಳಿದ್ದರು.
ಸಿಎಂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರಿಗೆ ಈ ಸಂಬಂಧ ಪತ್ರ ಕಳಿಸಿದ್ದಾರೆ. ಬಿಬಿಎಂಪಿ ಜಾಹೀರಾತು ನಿಯಮಗಳನ್ನು ಕುರಿತ ಕಡತವನ್ನು ಸಿಎಂ ಮಾಹಿತಿಗಾಗಿ ಕಳಿಸಲಾಗಿತ್ತು. ಆದರೆ ಫೈಲ್ ನಮ್ಮ ಕಚೇರಿಗೆ ಹಿಂದಿರುಗಿಸಿಲ್ಲ ಎಂದು ಹೇಳಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಕಡತವನ್ನೂ ಇನ್ನೂ ಹಿಂದಿರುಗಿಸಿಲ್ಲ ಎಂದು ಸಿಎಂ ಕಚೇರಿ ಅಧಿಕಾರಿಗಳಿಗೆ ಪತ್ರ ಬರೆದು ನೆನಪಿಸಲಾಗಿದೆ.
2021ರ ಡಿಸೆಂಬರ್ 7ರಂದು ಸಿಎಂ ಕಚೇರಿಗೆ ಕಳುಹಿಸಿದ್ದ ಕಡತ ರವಾನಿಸಲಾಗಿತ್ತು. ಇದರಲ್ಲಿ ಬಿಬಿಎಂಪಿ ‘ಜಾಹೀರಾತು ನೀತಿ-2019’ಕ್ಕೆ ಸಂಬಂಧಿಸಿದ ಮಾಹಿತಿ ಇತ್ತು. ಲೆಕ್ಕಪತ್ರ ಸಮಿತಿಗೆ ಸಲ್ಲಿಕೆಯಾಗಬೇಕಿರುವ ಮಹತ್ವದ ಕಡತ ನಾಪತ್ತೆಯಾಗಿರುವುದರಿಂದ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಕಡತ ಮರಳಿಸುವಂತೆ ಕೋರಿದ್ದಾರೆ.
ಈ ಕಡತದ ಮಹತ್ವವೇನು?
ಈ ಕಡತದಲ್ಲಿ ಬೆಂಗಳೂರಿನಲ್ಲಿ ಜಾಹೀರಾತು ನಿಯಮ ಜಾರಿಗೊಳಿಸುವ ಬಗ್ಗೆ ಮಹತ್ವದ ಮಾಹಿತಿಯಿತ್ತು. ಎಲ್ಲೆಲ್ಲಿ ಜಾಹೀರಾತು ಹಾಕಬೇಕು? ಎಲ್ಲಿ ಹಾಕಬಾರದು? ಎಷ್ಟು ದರ ನಿಗದಿಪಡಿಸಬಹುದು ಎಂಬ ಬಗ್ಗೆ ಈ ಕಡತದಲ್ಲಿ ಮಾಹಿತಿಯಿತ್ತು. ಈ ಕಡತವು ಸಕಾಲಕ್ಕೆ ಮರಳಿ ಬಂದಿದ್ದರೆ ಜಾಹೀರಾತು ನಿಯಮಗಳು ನಗರದಲ್ಲಿ ಜಾರಿಯಾಗುತ್ತಿದ್ದವು ಎಂದು ಮೂಲಗಳು ಹೇಳಿವೆ.
Published On - 2:42 pm, Fri, 25 November 22