ವಾಕಿಂಗ್ ಮಾಡ್ತಿದ್ದ ನಿವೃತ್ತ ಶಿಕ್ಷಕಿಯನ್ನು ಕಿತ್ತು ತಿಂದ ಬೀದಿ ನಾಯಿಗಳು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿ ಕಡಿತದಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಇದೀಗ ಬೆಂಗಳೂರಿನ ಜಾಲಹಳ್ಳಿಯ ವಾಯುಸೇನಾ ನೆಲೆಯ 7ನೇ ವಸತಿಗೃಹ ಕ್ಯಾಂಪಸ್ನಲ್ಲಿ ಸುಮಾru 10 ರಿಂದ 12 ಬೀದಿ ನಾಯಿಗಳು ದಾಳಿ ಮಾಡಿ ನಿವೃತ್ತ ಶಿಕ್ಷಕಿಯನ್ನು ಬಲಿ ಪಡೆದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಬೆಂಗಳೂರು, ಆ.28: ಬೆಂಗಳೂರಿನಲ್ಲಿ ಬೀದಿನಾಯಿ(stray dogs)ಗಳ ದಾಳಿಗೆ ನಿವೃತ್ತ ಶಿಕ್ಷಕಿ ಬಲಿಯಾದ ಘಟನೆ ಬೆಂಗಳೂರಿನ ಜಾಲಹಳ್ಳಿಯ ವಾಯುಸೇನಾ ನೆಲೆಯ 7ನೇ ವಸತಿಗೃಹ ಕ್ಯಾಂಪಸ್ನಲ್ಲಿ ನಡೆದಿದೆ. ವಾಕಿಂಗ್ ಮಾಡುತ್ತಿದ್ದಾಗ ರಾಜ್ದುಲಾರಿ ಸಿನ್ಹಾ(76) ಮೇಲೆ ಸುಮಾರು 10 ರಿಂದ 12 ಬೀದಿ ನಾಯಿಗಳು ದಾಳಿ ಮಾಡಿದ್ದವು. ಇದರಿಂದ ಗಂಭೀರ ಗಾಯಗೊಂಡಿದ್ದ ರಾಜ್ದುಲಾರಿ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಈ ಕುರಿತು ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬೀದಿ ನಾಯಿಗಳ ಕಡಿತ ಪ್ರಕರಣ
ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ನಾಯಿ ಕಡಿತಕ್ಕೆ ತುತ್ತಾಗುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. 2020-21ರಲ್ಲಿ 18,629 ಮಂದಿ ನಾಯಿ ಕಡಿತಕ್ಕೆ ತುತ್ತಾಗಿದ್ದರು. 2022-23ರಲ್ಲಿ ಈ ಸಂಖ್ಯೆ 19,770ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬೀದಿ ನಾಯಿಗಳು ಮಾತ್ರವಲ್ಲದೆ, ಸಾಕು ನಾಯಿಗಳು ಕಡಿತಕ್ಕೂ ತುತ್ತಾದ ಕೆಲ ಪ್ರಕರಣಗಳೂ ಸೇರಿವೆ.
ಇದನ್ನೂ ಓದಿ:ಬೆಂಗಳೂರು: ಹೆಚ್ಚಿದ ಬೀದಿ ನಾಯಿ ಕಾಟ, ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಳ
ಈ ಹಿಂದೆ ಸಿಲಿಕಾನ್ ಸಿಟಿಯಲ್ಲಿ 3.10 ಲಕ್ಷ ಬೀದಿ ನಾಯಿಗಳಿದ್ದವು. ಸದ್ಯ 2,79,335 ಶ್ವಾನಗಳಿವೆ. ಈ ಪೈಕಿ 1,65,341 ಗಂಡು ಹಾಗೂ 82,757 ಹೆಣ್ಣು ನಾಯಿಗಳಿವೆ. ಸುಮಾರು ಒಂದು ಲಕ್ಷ ಶ್ವಾನಗಳಿಗೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ ಕೂಡ ಹಾಕಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಜೊತೆಗೆ ನಿತ್ಯ 60ಕ್ಕೂ ಹೆಚ್ಚು ಶ್ವಾನ ಕಡಿತ ದೂರುಗಳು ಬರುತ್ತಿವೆ. ಇದಕ್ಕೆ ನಾಯಿ ಕಡಿತಕ್ಕೆ ತುತ್ತಾದವರಿಗೆ ಗಾಯದ ತೀವ್ರತೆ, ಅಂದರೆ ಪ್ರತಿ ಹಲ್ಲಿಗೆ 2 ಸಾವಿರ ರೂ.ನಂತೆ ಆಧರಿಸಿ ಬಿಬಿಎಂಪಿಯು ಪರಿಹಾರ ನೀಡುತ್ತಿದೆ. ಇದೀಗ ಬೀದಿ ನಾಯಿಗಳು ಓರ್ವ ಶಿಕ್ಷಕಿಯನ್ನು ಬಲಿ ತೆಗೆದುಕೊಂಡಿರುವುದು ದುರಂತ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ