ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫಲಪುಷ್ಪ ಪ್ರದರ್ಶನ: ಲಾಲ್‌ಬಾಗ್‌ನಲ್ಲಿ ಅರಳಲಿದೆ ‘ಗಂಗ’ರ ಭವ್ಯ ಇತಿಹಾಸ!

Lalbagh Flower Show 2026: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಗಸ್ಟ್ 6ರಿಂದ17ರವರೆಗೆ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಹೀಗಾಗಿ ಈಗಾಗಲೇ ತೋಟಗಾರಿಕೆ ಇಲಾಖೆ ಭರದಿಂದ ಸಿದ್ಧತೆ ನಡೆಸಿದೆ. ಹಾಗಾದರೆ ಈ ಬಾರಿಯ ಫಲಪುಷ್ಪ ಪ್ರದರ್ಶನದ ಥೀಮ್​ ಏನು ಎಂಬ ಮಾಹಿತಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫಲಪುಷ್ಪ ಪ್ರದರ್ಶನ: ಲಾಲ್‌ಬಾಗ್‌ನಲ್ಲಿ ಅರಳಲಿದೆ ಗಂಗರ ಭವ್ಯ ಇತಿಹಾಸ!
ಲಾಲ್‌ಬಾಗ್‌
Image Credit source: Wikipedia

Updated on: Jul 22, 2026 | 8:54 PM

ಮುಖ್ಯಾಂಶಗಳು

  • ಸ್ವಾತಂತ್ರ್ಯ ದಿನಾಚರಣೆ ಫ್ಲವರ್ ಶೋಗೆ ಕೌಂಟ್‌ಡೌನ್
  • ಆಗಸ್ಟ್ 6ರಿಂದ 17ರವರೆಗೆ ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನ
  • ಗಂಗರ ಇತಿಹಾಸ, ಕನ್ನಡ ಸಂಸ್ಕೃತಿ ಮತ್ತು ವಾಸ್ತುಶಿಲ್ಪ ಅನಾವರಣ

ಬೆಂಗಳೂರು, ಜುಲೈ 22: ಬೆಂಗಳೂರಿನ (bangaluru) ವಿಶ್ವಪ್ರಸಿದ್ಧ ಲಾಲ್‌ಬಾಗ್‌ನಲ್ಲಿ (Lalbagh Flower Show) ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ  ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಗಳು ಸಾಗಿವೆ. ಈ ಬಾರಿಯ ಪ್ರದರ್ಶನಕ್ಕೆ ಗಂಗರ ಇತಿಹಾಸದ ಮೆರುಗು ಸಿಗಲಿದ್ದು, ದಕ್ಷಿಣ ಕರ್ನಾಟಕವನ್ನು ದೀರ್ಘಕಾಲ ಆಳಿದ ಗಂಗ ರಾಜವಂಶದ ವೈಭವ ಕಣ್ಣುತುಂಬಿಕೊಳ್ಳಲಿದೆ.

ಲಕ್ಷಾಂತರ ಹೂವುಗಳಲ್ಲಿ ಅರಳಲಿದೆ ಗಂಗರ ರಾಜವಂಶ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಗಸ್ಟ್ 6ರಿಂದ 17ರವರೆಗೆ ಒಟ್ಟು 12 ದಿನಗಳ ಕಾಲ 220ನೇ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. ಈ ಬಾರಿಯ ಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ ದಕ್ಷಿಣ ಕರ್ನಾಟಕವನ್ನು ಸುದೀರ್ಘ ಕಾಲ ಆಳಿದ ಗಂಗರ ರಾಜವಂಶ. ಗಂಗರ ಕಾಲದ ವಾಸ್ತುಶಿಲ್ಪ, ಶಿಕ್ಷಣ, ಸಂಸ್ಕೃತಿ ಮತ್ತು ನಾಡಿಗೆ ನೀಡಿದ ಕೊಡುಗೆಯನ್ನ ಲಕ್ಷಾಂತರ ಹೂವುಗಳಿಂದ ಅನಾವರಣಗೊಳಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ: ‘ಲಾಲ್‌ಬಾಗ್ ಮಾರಾಟಕ್ಕಿದೆ’: ಸುರಂಗ ಮಾರ್ಗ ಯೋಜನೆ ವಿರೋಧಿಸಿ ಕರಪತ್ರ ಹಂಚಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದ ಸಂಸದ ತೇಜಸ್ವಿ ಸೂರ್ಯ

ಗಾಜಿನ ಮನೆಯ ಮುಖ್ಯ ವೇದಿಕೆಯಲ್ಲಿ, ಸುಮಾರು 1300 ವರ್ಷಗಳಷ್ಟು ಹಳೆಯದಾದ ಬೇಗೂರಿನ ನಾಗನಾಥೇಶ್ವರ ದೇವಸ್ಥಾನ ಹೂವುಗಳ ಶೃಂಗಾರದಲ್ಲಿ ಕಂಗೊಳಿಸಲಿದೆ. ಬೆಂಗಳೂರು ಎಂಬ ಹೆಸರಿನ ಮೊದಲ ಉಲ್ಲೇಖವಿರುವ ಕ್ರಿ.ಶ. 390ರ ಕನ್ನಡ ಶಾಸನವಿರುವ ಅಪರೂಪದ ಪಂಚಲಿಂಗ ದೇವಾಲಯವು ಫಲಪುಷ್ಪ ಪ್ರದರ್ಶನದ ಪ್ರಮುಖ ಕೇಂದ್ರಬಿಂದುವಾಗಲಿದೆ.

ಗಂಗ ರಾಜರ ಪ್ರತಿಮೆಗಳ ಅನಾವರಣ

ಇನ್ನು ಗಂಗರ ಮಂತ್ರಿ ಚಾವುಂಡರಾಯ ನಿರ್ಮಿಸಿದ ಶ್ರವಣಬೆಳಗೊಳದ ಪ್ರಸಿದ್ಧ ಜೈನ ಬಸದಿ, 22ನೇ ತೀರ್ಥಂಕರ ನೇಮಿನಾಥ ಸ್ವಾಮಿಯ ವಿಗ್ರಹ, ಗೋಮಟೇಶ್ವರನ ಪ್ರತಿಮೆ, ನಂದಿಬೆಟ್ಟದ ಯೋಗನಂದೀಶ್ವರ ದೇವಸ್ಥಾನ, ಗಂಗರ ಧ್ವಜಸ್ತಂಭ ಹಾಗೂ ದಡಿಗ, ಕೊಂಗುಣಿವರ್ಮ, ಶ್ರೀಪುರುಷ, ರಾಚಮಲ್ಲರಂತಹ ಪ್ರಮುಖ ಗಂಗ ರಾಜರ ಪ್ರತಿಮೆಗಳು ಹೂವುಗಳಲ್ಲಿ ಜೀವ ತಳೆಯಲಿವೆ.

ತೋಟಗಾರಿ ಇಲಾಖೆ ನಿರ್ದೇಶಕ  ಜಗದೀಶ್ ಹೇಳಿದ್ದಿಷ್ಟು 

‘ಗಂಗ ರಾಜವಂಶಸ್ಥರು ಕನ್ನಡ ಭಾಷೆ, ಸಾಹಿತ್ಯ, ನೀರಾವರಿ ಹಾಗೂ ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಈ ಭವ್ಯ ಇತಿಹಾಸವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಅವರಿಗೆ ಸಮರ್ಪಿಸಲಾಗುತ್ತಿದೆ’ ಎಂದು ತೋಟಗಾರಿ ಇಲಾಖೆ ನಿರ್ದೇಶಕ  ಜಗದೀಶ್​ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣ:ಲಾಲ್ ಬಾಗ್ ನಲ್ಲಿ ಮರ ಕಡಿಯದಂತೆ ನೀಡಿದ್ದ ಮಧ್ಯಂತರ ಆದೇಶ ಮುಂದುವರಿಕೆ

12 ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನವು ಪ್ರಕೃತಿ ಪ್ರೇಮಿಗಳಿಗೆ ಮಾತ್ರವಲ್ಲದೆ, ಇತಿಹಾಸಾಸಕ್ತರಿಗೂ ಗಂಗರ ಕಾಲದ ಶ್ರೇಷ್ಠ ವೈಭವವನ್ನು ಕಣ್ತುಂಬಿಕೊಳ್ಳಲು ಸುವರ್ಣಾವಕಾಶ ಕಲ್ಪಿಸಲಾಗಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us