‘ಲಾಲ್‌ಬಾಗ್ ಮಾರಾಟಕ್ಕಿದೆ’: ಸುರಂಗ ಮಾರ್ಗ ಯೋಜನೆ ವಿರೋಧಿಸಿ ಕರಪತ್ರ ಹಂಚಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರಿನ ಹೆಮ್ಮೆಯ ಲಾಲ್‌ಬಾಗ್‌ನ 5 ಎಕರೆ ಭೂಮಿಯನ್ನು ಉತ್ತರ-ದಕ್ಷಿಣ ಸುರಂಗ ರಸ್ತೆ ಯೋಜನೆಗೆ ಬಳಸಿಕೊಳ್ಳುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಂಸದ ತೇಜಸ್ವಿ ಸೂರ್ಯ 'ಲಾಲ್‌ಬಾಗ್ ಮಾರಾಟಕ್ಕಿದೆ' ಕರಪತ್ರ ವಿತರಿಸಿ ಪ್ರತಿಭಟಿಸಿದ್ದಾರೆ. ಈ ಯೋಜನೆ ಬೆಂಗಳೂರಿನ ಹಸಿರು ವಲಯ ಮತ್ತು ಅಂತರ್ಜಲಕ್ಕೆ ಹಾನಿಕರ ಎಂದು ಆರೋಪಿಸಿದ್ದು, ರಿಯಲ್ ಎಸ್ಟೇಟ್ ಲಾಭದ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- ಸುರಂಗ ರಸ್ತೆ ಯೋಜನೆಗೆ ಲಾಲ್‌ಬಾಗ್ ಉದ್ಯಾನವನದ 5 ಎಕರೆ ಜಾಗ ಬಳಕೆ
- ರಾಜ್ಯ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧ
- ‘ಲಾಲ್‌ಬಾಗ್ ಮಾರಾಟಕ್ಕಿದೆ’ ಎಂಬ ಸಂದೇಶವಿರುವ ಕರಪತ್ರ ಹಂಚಿಕೆ
ಬೆಂಗಳೂರು, ಜು.20: ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಅನ್ನು ಸಂಪರ್ಕಿಸುವ ಉದ್ದೇಶಿತ ಉತ್ತರ-ದಕ್ಷಿಣ ಸುರಂಗ ರಸ್ತೆ (Tunnel Road) ಯೋಜನೆಗಾಗಿ ಐತಿಹಾಸಿಕ ಲಾಲ್‌ಬಾಗ್ ಸಸ್ಯಶಾಸ್ತ್ರೀಯ ಉದ್ಯಾನವನದ 5 ಎಕರೆ ಜಾಗವನ್ನು ಬಳಸಿಕೊಳ್ಳುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಲಾಲ್‌ಬಾಗ್‌ನಲ್ಲಿ ‘ಲಾಲ್‌ಬಾಗ್ ಮಾರಾಟಕ್ಕಿದೆ’ (Lalbagh for Sale) ಎಂಬ ಸಂದೇಶವಿರುವ ಕರಪತ್ರಗಳನ್ನು ವಿತರಿಸುವ ಮೂಲಕ ಸರ್ಕಾರದ ವಿರುದ್ಧ ಭಿನ್ನ ಶೈಲಿಯ ಪ್ರತಿಭಟನೆ ನಡೆಸಿದ್ದಾರೆ.
ಭಾನುವಾರ ಬೆಳಗ್ಗೆ ಲಾಲ್‌ಬಾಗ್‌ಗೆ ಭೇಟಿ ನೀಡಿ ನೂರಾರು ಸಾರ್ವಜನಿಕರು ಹಾಗೂ ವಾಸಿಗಳನ್ನು ಭೇಟಿ ಮಾಡಿದ ತೇಜಸ್ವಿ ಸೂರ್ಯ, ಸರ್ಕಾರದ ಈ ಪ್ರಸ್ತಾವನೆಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆತಂಕವಿದೆ ಎಂದು ತಿಳಿಸಿದರು. “ನಾವು ನಮ್ಮ ಧ್ವನಿಯನ್ನು ಎತ್ತಬೇಕಾಗಿದೆ ಮತ್ತು ಇದೊಂದು ಬೃಹತ್ ಜನ ಆಂದೋಲನವಾಗಿ ರೂಪಗೊಳ್ಳಬೇಕಿದೆ. ಯಾವುದೇ ಕಾರಣಕ್ಕೂ ಲಾಲ್‌ಬಾಗ್ ಆವರಣದಲ್ಲಿ ಈ ಯೋಜನೆ ಜಾರಿಯಾಗದಂತೆ ನಾವು ನೋಡಿಕೊಳ್ಳುತ್ತೇವೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಲಾಲ್‌ಬಾಗ್ ಬೆಂಗಳೂರಿನ ಹೆಮ್ಮೆ ಮತ್ತು ನಗರದ ದೊಡ್ಡ ಹಸಿರು ವಲಯಗಳಲ್ಲಿ ಒಂದಾಗಿದೆ. ಇದು ಅಂತರ್ಜಲ ಮರುಪೂರಣಕ್ಕೆ ಸಹಾಯ ಮಾಡುವುದಲ್ಲದೆ, ಲಾಲ್‌ಬಾಗ್ ಕೆರೆಯ ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ:
Lalbagh is Bengaluru’s living heritage and not real estate piece for sale.
This morning, I met walkers, families and regular visitors at Lalbagh. They all had one message – Stop the Tunnel Road project.
CM Shri @DKShivakumar had assured Bengalureans that Lalbagh would be… pic.twitter.com/esWp6rztmk
— Tejasvi Surya (@Tejasvi_Surya) July 19, 2026
ಹೈಕೋರ್ಟ್ ಅಫಿಡವಿಟ್‌ನಲ್ಲಿ ಏನಿದೆ?:
ಸಂಸದರು ವಿತರಿಸಿದ ಕರಪತ್ರದಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನ ಮುಖ್ಯಾಂಶಗಳನ್ನು ಉಲ್ಲೇಖಿಸಲಾಗಿತ್ತು. ಲಾಲ್‌ಬಾಗ್ ಒಟ್ಟು ಸುಮಾರು 97 ಹೆಕ್ಟೇರ್ ಪ್ರದೇಶವನ್ನು ಹೊಂದಿದ್ದು, ಅದರಲ್ಲಿ ತಾತ್ಕಾಲಿಕ ನಿರ್ಮಾಣ ಪ್ರದೇಶ ಸೇರಿದಂತೆ ಸುಮಾರು 2.37 ಹೆಕ್ಟೇರ್ (ಶೇ. 2.47) ಜಾಗವನ್ನು ಮಾತ್ರ ಯೋಜನೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಶಾಶ್ವತವಾಗಿ ಕೇವಲ 1.92 ಹೆಕ್ಟೇರ್ (ಉದ್ಯಾನವನದ ಸುಮಾರು ಶೇ. 1.9 ರಷ್ಟು) ಜಾಗ ಮಾತ್ರ ಅಗತ್ಯವಿದ್ದು, ಕಾಮಗಾರಿ ಮುಗಿದ ನಂತರ ಆ ಜಾಗವನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ಸರ್ಕಾರ ಕೋರ್ಟ್‌ಗೆ ತಿಳಿಸಿದೆ.
ಇದನ್ನೂ ಓದಿ:ಬೆಂಗಳೂರಿನ ಪೌರ ಕಾರ್ಮಿಕರಿಗೆ ಪ್ರವಾಸ ಭಾಗ್ಯ! ಕರ್ನಾಟಕದ 6 ನಗರಗಳಿಗೆ ಸ್ಟಡಿ ಟೂರ್
ರಿಯಲ್ ಎಸ್ಟೇಟ್ ಸುಲಿಗೆಗೆ ಅವಕಾಶ?
ಸರ್ಕಾರದ ವಾದವನ್ನು ತಳ್ಳಿಹಾಕಿದ ತೇಜಸ್ವಿ ಸೂರ್ಯ, “ಈ ಯೋಜನೆಯ ಟೆಂಡರ್ ಮತ್ತು ಸಿದ್ಧಪಡಿಸಲಾಗಿರುವ ವಿಸ್ತೃತ ಯೋಜನಾ ವರದಿ ಪ್ರಕಾರ, ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಐದು ಮಹಡಿಗಳ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಗುತ್ತಿಗೆದಾರರಿಗೆ ಅನುಮತಿ ನೀಡಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು. “ನಮ್ಮ ಹೋರಾಟವು ಅಭಿವೃದ್ಧಿ ಅಥವಾ ಮೂಲಸೌಕರ್ಯ ಯೋಜನೆಗಳ ವಿರುದ್ಧ ಅಲ್ಲ. ಆದರೆ ಮೂಲಸೌಕರ್ಯದ ಹೆಸರಿನಲ್ಲಿ ಬೆಂಗಳೂರಿನ ಉಳಿದಿರುವ ಹಸಿರು ಪರಂಪರೆಯನ್ನು ರಿಯಲ್ ಎಸ್ಟೇಟ್ ಯೋಜನೆಗಳಿಗಾಗಿ ಹಾಳುಮಾಡುವುದನ್ನು ನಾವು ಒಪ್ಪುವುದಿಲ್ಲ” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




