ಇಂಡಿಯಾ ಪೋಸ್ಟ್‌ನಿಂದ ನೆಕ್ಸ್ಟ್-ಡೇ ಡೆಲಿವರಿ ಸೇವೆ: ಬೆಂಗಳೂರು ಸೇರಿ ಲಿಸ್ಟ್​​ನಲ್ಲಿರುವ ನಗರಗಳ ಪಟ್ಟಿ ಇಲ್ಲಿದೆ

ಇಂಡಿಯಾ ಪೋಸ್ಟ್ '24 ಸ್ಪೀಡ್ ಪೋಸ್ಟ್' ಹೆಸರಿನ ಹೊಸ ನೆಕ್ಸ್ಟ್-ಡೇ ಡೆಲಿವರಿ ಸೇವೆಯನ್ನು ಮಾರ್ಚ್ 17ರಿಂದ ಆರಂಭಿಸಲಿದೆ. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್ ಸೇರಿದಂತೆ ಆರು ಮಹಾನಗರಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ತುರ್ತು ಪಾರ್ಸೆಲ್‌ಗಳನ್ನು 24 ಗಂಟೆಯೊಳಗೆ ತಲುಪಿಸುವ ಗುರಿ ಹೊಂದಿದ್ದು, OTP ಆಧಾರಿತ ಸುರಕ್ಷಿತ ಡೆಲಿವರಿ, ಎಂಡ್-ಟು-ಎಂಡ್ ಟ್ರ್ಯಾಕಿಂಗ್, SMS ಅಲರ್ಟ್ ಮತ್ತು ವಿಳಂಬವಾದರೆ ಮನಿ-ಬ್ಯಾಕ್ ಗ್ಯಾರಂಟಿ ಸೌಲಭ್ಯಗಳನ್ನು ಒಳಗೊಂಡಿದೆ.

ಇಂಡಿಯಾ ಪೋಸ್ಟ್‌ನಿಂದ ನೆಕ್ಸ್ಟ್-ಡೇ ಡೆಲಿವರಿ ಸೇವೆ: ಬೆಂಗಳೂರು ಸೇರಿ ಲಿಸ್ಟ್​​ನಲ್ಲಿರುವ ನಗರಗಳ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Image Credit source: AI Image

Updated on: Mar 16, 2026 | 7:12 PM

ಬೆಂಗಳೂರು, ಮಾರ್ಚ್​​ 16: ಪಾರ್ಸೆಲ್‌ಗಳು, ಕಾನ್ಸೈನ್‌ಮೆಂಟ್‌ಗಳು ಮತ್ತು ಇತರ ಅಂಚೆ ವಸ್ತುಗಳನ್ನು 24 ಗಂಟೆಗಳೊಳಗೆ ತಲುಪಿಸುವ ಹೊಸ ಎಕ್ಸ್‌ಪ್ರೆಸ್ ಸೇವೆಯನ್ನು ಆರಂಭಿಸಲು ಇಂಡಿಯಾ ಪೋಸ್ಟ್ ಸಿದ್ಧವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ’24 ಸ್ಪೀಡ್ ಪೋಸ್ಟ್’ ಎಂಬ ಈ ಹೊಸ ಸೇವೆಯನ್ನು ಮಾರ್ಚ್ 17ರಿಂದ (ನಾಳೆ) ಆರಂಭಿಸಲಾಗುತ್ತಿದ್ದು, ತುರ್ತು ಹಾಗೂ ಸಮಯಕ್ಕೆ ತಲುಪಬೇಕಾದ ಪಾರ್ಸೆಲ್‌ಗಳಿಗೆ ಮರುದಿನವೇ ಗ್ಯಾರಂಟಿ ಡೆಲಿವರಿ ನೀಡಲಾಗುತ್ತದೆ ಎಂದು ತಿಳಿಸಿದೆ.

ಈ ಸೇವೆಯನ್ನು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಹಾಗೂ ರಾಜ್ಯ ಸಚಿವ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ನವದೆಹಲಿಯ ಆಕಾಶವಾಣಿ ಭವನದ ರಂಗ ಭವನ ಸಭಾಂಗಣದಲ್ಲಿ ಮಧ್ಯಾಹ್ನ 12:30ಕ್ಕೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಸೇವೆಯ ವಿಶೇಷತೆಗಳು

‘24 ಸ್ಪೀಡ್ ಪೋಸ್ಟ್’ ಸೇವೆ ಮೂಲಕ ಪ್ರಮುಖ ಮಹಾನಗರಗಳಲ್ಲಿ ಮುಂದಿನ ದಿನವೇ (Next-Day) ಖಚಿತ ಡೆಲಿವರಿ ಸೌಲಭ್ಯ ಲಭ್ಯವಾಗಲಿದೆ. ಇದಲ್ಲದೆ OTP ಆಧಾರಿತ ಸುರಕ್ಷಿತ ಡೆಲಿವರಿ, ಎಂಡ್-ಟು-ಎಂಡ್ ಟ್ರ್ಯಾಕಿಂಗ್ ವ್ಯವಸ್ಥೆ, SMS ಅಲರ್ಟ್ ಮೂಲಕ ಪಾರ್ಸೆಲ್ ಸ್ಥಿತಿ ಮಾಹಿತಿ ಸೇರಿ ಹಲವು ಸೌಲಭ್ಯಗಳು ದೊರೆಯಲಿವೆ.

ಯಾವ್ಯಾವ ನಗರಗಳಲ್ಲಿ ಸೇವೆ ಲಭ್ಯ?

ಮೊದಲ ಹಂತದಲ್ಲಿ ಈ ಸೇವೆ ದೇಶದ ಆರು ಪ್ರಮುಖ ಮಹಾನಗರಗಳಲ್ಲಿ ಲಭ್ಯವಾಗಲಿದೆ. ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್​​ನಲ್ಲಿ ಸೇವೆ ಶುರುವಾಗಲಿದೆ. ಇದರ ಜೊತೆಗೆ D+1 ದಿನದಲ್ಲಿ ತಲುಪುವ ‘24 ಸ್ಪೀಡ್ ಪೋಸ್ಟ್’ ಹಾಗೂ D+2 ದಿನಗಳಲ್ಲಿ ತಲುಪುವ ‘48 ಸ್ಪೀಡ್ ಪೋಸ್ಟ್’ ಸೇವೆಗಳನ್ನೂ ಆರಂಭಿಸಲಾಗುತ್ತದೆ. ಇದಕ್ಕಾಗಿ ವಿಶೇಷ ಪ್ರೊಸೆಸಿಂಗ್ ವಿಂಡೋಗಳು ಮತ್ತು ಆದ್ಯತೆಯ ಏರ್ ಟ್ರಾನ್ಸ್‌ಪೋರ್ಟ್ ವ್ಯವಸ್ಥೆ ಇರಲಿದೆ.

ಮನಿ-ಬ್ಯಾಕ್ ಗ್ಯಾರಂಟಿ ಸೌಲಭ್ಯ

ಡೆಲಿವರಿ ತಡವಾದರೆ ಮನಿ-ಬ್ಯಾಕ್ ಗ್ಯಾರಂಟಿ ಸೌಲಭ್ಯವೂ ಇರಲಿದೆ. ಅಂಚೆ ಇಲಾಖೆಯನ್ನು ದೇಶದ ಪ್ರಮುಖ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ರೂಪಿಸುವ ನಿಟ್ಟಿನಲ್ಲಿ, ಪಾರ್ಸೆಲ್ ಪ್ರೊಸೆಸಿಂಗ್ ಮತ್ತು ಡೆಲಿವರಿ ವ್ಯವಸ್ಥೆಯನ್ನು ಆಧುನಿಕಗೊಳಿಸಲಾಗಿದೆ. ದೇಶದಾದ್ಯಂತ ವೇಗ, ವಿಶ್ವಾಸಾರ್ಹತೆ ಹಾಗೂ ಗ್ರಾಹಕ ಅನುಭವವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:09 pm, Mon, 16 March 26

Follow Us