ಪಾದಯಾತ್ರೆ ನಾಟಕ ಮಾಡುವ ಕಾಂಗ್ರೆಸ್ಸಿಗರಿಗೆ ಮಿತ್ರಪಕ್ಷ ಡಿಎಂಕೆ ಮನವೊಲಿಸುವ ಧೈರ್ಯವಿಲ್ಲವೇ? -ಸಚಿವ ಸುಧಾಕರ್ ಮಾರ್ಮಿಕ ಪ್ರಶ್ನೆ
ಅಧಿಕಾರದ ದುರಾಸೆಯಿಂದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನೆಪವೊಡ್ಡಿ ಮೈತ್ರಿ ಮಾಡಿಕೊಳ್ಳಲು ಹಪಹಪಿಸುವ ಪಕ್ಷಗಳು ಈಗ ಮೌನಕ್ಕೆ ಶರಣಾಗಿರುವುದು ದುರದೃಷ್ಟಕರ. ಕರ್ನಾಟಕದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುತ್ತಿರುವ ತನ್ನ ಮಿತ್ರ ಪಕ್ಷ ಡಿಎಂಕೆ ವಿರುದ್ಧ ಕಾಂಗ್ರೆಸ್ ನಾಯಕರು ಚೆನ್ನೈನ ಮರೀನಾ ಬೀಚಿಗೆ ಪಾದಯಾತ್ರೆ 3.0 ಕೈಗೊಳ್ಳುವರೇ? ಎಂದು ಚಾಟಿ ಬೀಸಿದ್ದಾರೆ.
ಬೆಂಗಳೂರು: ಮೇಕೆದಾಟಿನಲ್ಲಿ(Mekedatu) ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟಿನ ವಿಚಾರದಲ್ಲಿ ಮತ್ತೆ ತಮಿಳುನಾಡು ಕ್ಯಾತೆ ತೆಗೆದಿದೆ. ತಮಿಳುನಾಡು ವಿಧಾನಸಭೆಯಲ್ಲಿ ಕರ್ನಾಟಕದ ಯೋಜನೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ಸದ್ಯ ಆರೋಗ್ಯ ಸಚಿವ ಡಾ ಕೆ.ಸುಧಾಕರ್(Dr K Sudhakar) ತಮಿಳುನಾಡು ಡಿಎಂಕೆ(DMK) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್(Congress) ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.
ಕರ್ನಾಟಕದ ಜನರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆಗೆ ತಮಿಳುನಾಡಿನ ಕಾಂಗ್ರೆಸ್ ಮೈತ್ರಿ ಸರ್ಕಾರ ಅಡ್ಡಗಾಲು ಹಾಕುತ್ತಿದ್ದರೂ ರಾಜ್ಯದಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಪಕ್ಷ ಕನ್ನಡಿಗರಿಗೆ ದ್ರೋಹ ಎಸಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮೇಕೆದಾಟು ಪಾದಯಾತ್ರೆಯ ಬೀದಿ ನಾಟಕ ಮಾಡಿ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರಿಗೆ ತಮ್ಮ ಮಿತ್ರ ಪಕ್ಷವಾದ ಡಿಎಂಕೆ ಬಳಿ ಮೇಕೆದಾಟು ಯೋಜನೆ ಜಾರಿಗೆ ಸಹಕರಿಸುವಂತೆ ಹೈಕಮಾಂಡ್ ಮೂಲಕ ಮನವೊಲಿಸುವ ಧೈರ್ಯವಿಲ್ಲವೇ? ಅಥವಾ ಕನ್ನಡಿಗರ ಪರವಾಗಿ ಧ್ವನಿ ಎತ್ತುವ ಮನಸ್ಸಿಲ್ಲವೇ? ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ಸುಧಾಕರ್ ಕಿಡಿಕಾರಿದ್ದಾರೆ.
ಅಧಿಕಾರದ ದುರಾಸೆಯಿಂದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನೆಪವೊಡ್ಡಿ ಮೈತ್ರಿ ಮಾಡಿಕೊಳ್ಳಲು ಹಪಹಪಿಸುವ ಪಕ್ಷಗಳು ಈಗ ಮೌನಕ್ಕೆ ಶರಣಾಗಿರುವುದು ದುರದೃಷ್ಟಕರ. ಕರ್ನಾಟಕದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುತ್ತಿರುವ ತನ್ನ ಮಿತ್ರ ಪಕ್ಷ ಡಿಎಂಕೆ ವಿರುದ್ಧ ಕಾಂಗ್ರೆಸ್ ನಾಯಕರು ಚೆನ್ನೈನ ಮರೀನಾ ಬೀಚಿಗೆ ಪಾದಯಾತ್ರೆ 3.0 ಕೈಗೊಳ್ಳುವರೇ? ಎಂದು ಚಾಟಿ ಬೀಸಿದ್ದಾರೆ.
ಕರ್ನಾಟಕದ ಜನರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆಗೆ ತಮಿಳುನಾಡಿನ ಕಾಂಗ್ರೆಸ್ ಮೈತ್ರಿ ಸರ್ಕಾರ ಅಡ್ಡಗಾಲು ಹಾಕುತ್ತಿದ್ದರೂ ರಾಜ್ಯದಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಪಕ್ಷ ಕನ್ನಡಿಗರಿಗೆ ದ್ರೋಹ ಎಸಗುತ್ತಿದೆ.
1/3 pic.twitter.com/VXjxVhaTmY
— Dr Sudhakar K (@mla_sudhakar) March 22, 2022
ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆ ಸೋಮವಾರ ಸರ್ವಾನುಮತದ ನಿರ್ಣಯ ಅಂಗೀಕರಿಸಿತ್ತು. ತಮಿಳುನಾಡು ಬಿಜೆಪಿ ಸದಸ್ಯರೂ ಕೂಡಾ ಈ ನಿರ್ಣಯದ ಪರ ಇದ್ದರು. ತಮಿಳುನಾಡಿನ ರೈತರಿಗೆ ಮೇಕೆದಾಟು ಯೋಜನೆಯಿಂದ ಅನ್ಯಾಯ ಆಗಲಿದೆ ಅನ್ನೋದು ತಮಿಳುನಾಡಿನ ರಾಜಕಾರಣಿಗಳ ವಾದ. ಆದ್ರೆ, ತಮಿಳುನಾಡಿಗೆ ಹರಿದು ಹೋಗುವ ನೀರಿನಲ್ಲಿ ಯಾವುದೇ ವ್ಯತ್ಯಾಸ ಆಗೋದಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ. ಇದೇ ವಿಷಯವನ್ನು ಇಂದು ರಾಜ್ಯದ ವಿಧಾನಸಭೆಯಲ್ಲಿ ಚರ್ಚಿಸಲಾಗಿದೆ. ಶೂನ್ಯವೇಳೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ನ ಶಾಸಕ ಹೆಚ್.ಕೆ.ಪಾಟೀಲ್, ತಮಿಳುನಾಡಿನ ನಿರ್ಣಯ ಪ್ರಸ್ತಾಪಿಸಿ, ಇದಕ್ಕೆ ರಾಜ್ಯದ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ತಮಿಳುನಾಡಿನ ನಿರ್ಣಯ ಖಂಡಿಸಿದ್ದಾರೆ. ಇದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ಧ್ವನಿಗೂಡಿಸಿದ್ದಾರೆ. ರಾಜ್ಯದ ನೆಲ-ಜಲ-ಭಾಷೆಯ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡೋದು ಬೇಡ ತಮಿಳುನಾಡಿನ ವಿರುದ್ಧ ಒಗ್ಗಟ್ಟಾಗಿ ನಿರ್ಣಯ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಕೂಡ, ತಮಿಳುನಾಡಿನ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ರು. ಅಲ್ಲದೆ ಸರ್ಕಾರ ಸರ್ವಪಕ್ಷ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಮುಂದಿನ ಹೆಜ್ಜೆಯಿಡಬೇಕೆಂದು ಒತ್ತಾಯಿಸಿದ್ರು. ಈ ಚರ್ಚೆಯ ವೇಳೆ ಸದನದಲ್ಲಿ ತಮಿಳುನಾಡು ವಿಧಾನಸಭೆಯ ನಿರ್ಧಾರ ವಿರೋಧಿಸಿ ಒಂದು ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯ ಕೇಳಿಬಂದಿತ್ತು. ಇದಕ್ಕೆ ಕಾನೂನು ಸಚಿವ ಮಾಧುಸ್ವಾಮಿ, ಕಾನೂನು ಸಲಹೆ ಪಡೆದು ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದಿದ್ದಾರೆ.
ಒಂದು ವೇಳೆ ತಮಿಳುನಾಡಿನ ನಿರ್ಧಾರವನ್ನು ವಿರೋಧಿಸಿ ಖಂಡನಾ ನಿರ್ಣಯ ಕೈಗೊಳ್ಳುವುದಿದ್ದರೆ, ಸರ್ಕಾರವೇ ಅದನ್ನು ಸದನದಲ್ಲಿ ಮುಂದಿಡುವ ಸಾಧ್ಯತೆಯಿದೆ. ಇದಕ್ಕೆ ಪ್ರತಿಪಕ್ಷಗಳೂ ಬೆಂಬಲ ಸೂಚಿಸಲಿದ್ದು, ಕೇಂದ್ರ ಸರ್ಕಾರದ ಮುಂದೆ ಕರ್ನಾಟಕದ ವಾದವನ್ನು ಪ್ರತಿಪಾದಿಸಲು ನಿರ್ಧರಿಸಿದ್ದಾರೆ. ಸದನದೊಳಗೆ ರಾಜಕೀಯವಾಗಿ ಹಲವು ವಿಚಾರಗಳಲ್ಲಿ ಪರ-ವಿರೋಧ ಜೋರಾಗಿದ್ದರೂ, ರಾಜ್ಯದ ಹಿತದ ವಿಚಾರದಲ್ಲಿ ಎಲ್ಲಾ ಪಕ್ಷಗಳು ಒಗ್ಗೂಡಿದರೆ ಮಾತ್ರ ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯ.
ಇದನ್ನೂ ಓದಿ: ಮಾಜಿ ಸಚಿವ ಕರಣ್ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ
Published On - 6:55 pm, Tue, 22 March 22