ಬೆಂಗಳೂರು: ರಾಜ್ಯ ಸರ್ಕಾರವು ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಸೇರಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು, ಜಾತ್ರೆಗಳಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಾಪಾರಿಗಳಿಗೂ ಅವಕಾಶ ಇರಬೇಕು ಎಂದು ಕರ್ನಾಟಕದ ಬುದ್ಧಿಜೀವಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಹಿಜಾಬ್ ಧರಿಸಿ ಮಕ್ಕಳು ಪರೀಕ್ಷೆ ಬರೆಯಲು ಅವಕಾಶ ನೀಡಲಿ. ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ಕೊಡದಂತೆ ಕಾನೂನು ತಿದ್ದುಪಡಿ ಮಾಡಬೇಕು ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಸಾಹಿತಿಗಳಾದ ಡಾ.ಕೆ.ಮರುಳ ಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ಬೋಳುವಾರ್ ಮಹಮ್ಮದ್ ಕುಂಞ, ಬಂಜಗೆರೆ ಜಯಪ್ರಕಾಶ್, ರಹಮತ್ ತರೀಕೆರೆ ಸೇರಿದಂತೆ 61 ಬುದ್ಧಿಜೀವಿಗಳು ಪತ್ರ ಬರೆದು ಅಗ್ರಹಿಸಿದ್ದಾರೆ. ಭಗದ್ಗೀತೆಗಿಂತಲೂ ಸಂವಿಧಾನವನ್ನು ನಮ್ಮ ಮಕ್ಕಳು ಓದಬೇಕು. ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗಬೇಕು ಎಂದು ಸಾಹಿತಿಗಳು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಿರುವ ವಿಷಯದ ಬಗ್ಗೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಆಕ್ಷೇಪಿಸಿದೆ. ‘ಮುಜರಾಯಿ ಕಾಯ್ದೆಯಲ್ಲಿ ಇರುವುದು ಗುತ್ತಿಗೆ ಕೊಡಬಾರದು ಎಂದು. ಆದರೆ ಜಾತ್ರೆಯಲ್ಲಿ ಲೈಸೆನ್ಸ್ ನೀಡಿ ಅಂಗಡಿಗಳನ್ನು ಬಾಡಿಗೆಗಳಿಗೆ ಕೊಡುತ್ತಾರೆ. ಹೀಗಾಗಿ ಈ ನಿರ್ಬಂಧಕ್ಕೆ ಯಾವುದೇ ಅರ್ಥವಿಲ್ಲ’ ಎಂದು ಸಂಘಟನೆಯು ಅಭಿಪ್ರಾಯಪಟ್ಟಿದೆ. ಸರ್ಕಾರದ ನಿರ್ಬಂಧವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಂಸ್ಥೆ ನಿರ್ಧರಿಸಿದೆ.
ಈ ಕುರಿತು ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿರುವ ಪಿಯುಸಿಎಲ್ ಅಧ್ಯಕ್ಷ ಅರವಿಂದ ಎನ್., ದೇಗುಲ ವ್ಯಾಪ್ತಿಯಲ್ಲಿ ಹಿಂದೂಯೇತರರಿಗೆ ನಿರ್ಬಂಧವು ಸಂವಿಧಾನಬಾಹಿರ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಮುಂದಿನ ದಿನಗಳಲ್ಲಿ ಇದು ದೊಡ್ಡ ಅಪಾಯಕ್ಕೆ ಕಾರಣವಾಗುತ್ತೆ. ಮೊದಲಿಗೆ ಇವರು ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುತ್ತಾರೆ. ಮುಂದಿನ ಹಂತದಲ್ಲಿ ಇದು ನರಮೇಧಕ್ಕೆ ಕಾರಣವಾಗುತ್ತದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಮಧ್ಯಪ್ರವೇಶಿಸಿ, ಅಗತ್ಯ ಕ್ರಮ ತೆಗೆದುಕೊಂಡು ಪರಿಸ್ಥಿತಿ ನಿಯಂತ್ರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ನಮ್ಮ ಧ್ಯೇಯ: ಸಿಎಂ
ಪಠ್ಯದಲ್ಲಿ ಭಗವದ್ಗೀತೆ (Bhagavad Gita) ಅಳವಡಿಸುವುದು ನಮ್ಮ ಧ್ಯೇಯವಾಗಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕೆಂದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ನಮ್ಮ ಧ್ಯೇಯ ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ನಲ್ಲಿ ಹೇಳಿಕೆ ನೀಡಿದ್ದಾರೆ. ನಿನ್ನೆ ಗುಜರಾತ್ನಲ್ಲಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದ್ದಾರೆ. ಈ ಕುರಿತು ನಮ್ಮ ಸಚಿವರು ಚರ್ಚೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯವರು ವಿವರ ಪಡೆದ ನಂತರ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಂವಿಧಾನದಲ್ಲಿ ಇರುವ ವಿಚಾರಗಳೇ ಬೈಬಲ್, ಕುರಾನ್, ಭಗವದ್ಗೀತೆಯಲ್ಲಿ ಇದೆ: ಡಿಕೆ ಶಿವಕುಮಾರ್
ಇದನ್ನೂ ಓದಿ: TV9 Kannada Survey: ಭಗವದ್ಗೀತೆ ಪಠ್ಯಕ್ರಮದಲ್ಲಿ ಅಗತ್ಯ ಇದೆ ? ಇಲ್ಲಿದೆ ಜನಾಭಿಪ್ರಾಯ