2 ಎಕರೆ ಖರೀದಿಸಿದ್ದು ನಿಜ: ಭೂಮಿಯ ವಿವರ ಕೊಟ್ಟ ಛಲವಾದಿ ನಾರಾಯಣಸ್ವಾಮಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 29, 2024 | 4:58 PM

ಎಂಬಿ ಪಾಟೀಲ್ ಶೆಡ್ ಗಿರಾಕಿ ಅಂದಿದ್ದಾರೆ. ‘ನಾನು ಲೂಟಿ ಮಾಡಿದ್ದಿದ್ರೆ ದೊಡ್ಡದಾಗಿ ಶೆಡ್ ಕಟ್ಟುತ್ತಿದ್ದೆ. ನಾನು ಧೂಳಿನಿಂದ ಬಂದವನು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಕಿಡಿಕಾರಿದ್ದು, ಭೂ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

2 ಎಕರೆ ಖರೀದಿಸಿದ್ದು ನಿಜ: ಭೂಮಿಯ ವಿವರ ಕೊಟ್ಟ ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ
Follow us on

ಬೆಂಗಳೂರು, ಆ.29: ಸಚಿವ ಎಂಬಿ ಪಾಟೀಲ್(MB Patil) ಭೂ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ(Chalavadi Narayanaswamy) ಸ್ಪಷ್ಟನೆ ನೀಡಿದ್ದು, ‘ನಾನು 2006-07 ರಲ್ಲಿ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ 2 ಎಕರೆ ಖರೀದಿಸಿದ್ದು ನಿಜ, ಮೊದಲು ಸಾಫ್ಟ್‌ವೇರ್ ಟೆಕ್ನಾಲಜೀಸ್ ಎಂದು ತೆಗೆದುಕೊಂಡು ನಂತರ ಪ್ರಾಜೆಕ್ಟ್ ಬದಲಾಯ್ತು. ಅವರೇ ಪ್ರಾಜೆಕ್ಟ್ ಬದಲಾಯಿಸಿ ಬೃಂದಾವನ ವೇರ್ ಹೌಸ್ ಹೆಸರಿನ ಗೋದಾಮು ಕಟ್ಟಿದ್ದೇವೆ. ಗೋದಾಮು ಕಟ್ಟೋದೇ ಬೇರೆಯವರಿಗೆ ಬಾಡಿಗೆ ಕೊಡುವುದಕ್ಕೆ, ಆ ಜಾಗ 800 ರಿಂದ 900 ಅಡಿ ಆಳ ಇತ್ತು, ಮಣ್ಣು ಲೋಡ್ ತಂದು ಭರ್ತಿ ಮಾಡಿ ಕಾಂಪೌಂಡ್ ಹಾಕಿಸಲಾಯ್ತು.

5000 ಚದರಡಿಯ ಶೆಡ್ ಕಟ್ಟಿ, ರಸ್ತೆ, ಗಾರ್ಡನ್ ಮಾಡಿದ ಮೇಲೆ ಯಾರದ್ದೋ ಕಣ್ಣು ಬಿತ್ತು. ಕಾಣದ ಕೈಗಳು ಹಿಂದಿನಿಂದ ಕೆಲಸ ಮಾಡಿದವು. ಏನೂ ಕಟ್ಟದಿದ್ದರೂ ಜಮೀನು ರಿಜಿಸ್ಟ್ರೇಷನ್ ಮಾಡಿಕೊಟ್ಟ ಉದಾಹರಣೆಗಳಿವೆ. ನಂತರ ನನಗೆ ಆರೋಗ್ಯ ಕೈಕೊಡ್ತು, 2013-14 ರಲ್ಲಿ ಆ ಭೂಮಿ ರದ್ದು ಮಾಡಿದರು. ಆಗ ದೇಶಪಾಂಡೆ ಕೈಗಾರಿಕಾ ಸಚಿವರಾಗಿದ್ದರು, ಅವರಿಗೂ ಜೊತೆಗೆ ಖರ್ಗೆಯವರಿಗೂ ಹೋಗಿ ಕೇಳಿದೆ. ಆದರೆ ಸಮಸ್ಯೆ ಬಗೆಹರಿಸಲಿಲ್ಲ. ನಾನು ಕೋರ್ಟ್​ಗೆ ಹೋಗಿ ಸ್ಟೇ ತಗೊಂಡೆ. ಕೋರ್ಟ್ 10% ದಂಡ ಕಟ್ಟಿ ಭೂಮಿ ತಗೋಬಹುದು ಎಂದು ಆದೇಶ ಕೊಟ್ಟಿತು. ಅದರಂತೆ ನಾನು ದಂಡ ಕಟ್ಟಿ, ನಂತರ ಸೇಲ್ ಡೀಡ್ ನನ್ನ ಹೆಸರಿಗೆ ಮಾಡಿಕೊಡಿ ಅಂತ ಕೇಳಿದೆ.

ಇದನ್ನೂ ಓದಿ:ಬಿಜೆಪಿ ಅವಧಿಯಲ್ಲಿ ಭೂಮಿ ಹಂಚಿದ್ದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಎಂಬಿ ಪಾಟೀಲ್

ಈ ವಿಚಾರ ಮಾತಾಡುವಾಗ ನನಗೆ ಎಂಬಿ ಪಾಟೀಲ್ ಶೆಡ್ ಗಿರಾಕಿ ಅಂದಿದ್ದಾರೆ. ‘ನಾನು ಲೂಟಿ ಮಾಡಿದ್ದಿದ್ರೆ ದೊಡ್ಡದಾಗಿ ಶೆಡ್ ಕಟ್ಟುತ್ತಿದ್ದೆ. ನಾನು ಧೂಳಿನಿಂದ ಬಂದವನು, ಅಷ್ಟು ಯೋಗ್ಯತೆ ಇಲ್ಲ ನನಗೆ. ನಾನು ಕಟ್ಟಿರೋದೇ ಶೆಡ್, ಹಾಗಾಗಿ ಅವರು ಶೆಡ್ ಗಿರಾಕಿ ಅಂದಿದ್ದಾರೆ. ನಾನು ಆ ಜಮೀನು ತಗೊಂಡಿದ್ದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಚಿವರಾಗಿದ್ದಾಗ, ಅದನ್ನು ಕ್ಯಾನ್ಸಲ್ ಮಾಡಿದ್ದು ನಾನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ. ಈಗ ನಿಯಮಾನುಸಾರ ಸೇಲ್ ಡೀಡ್ ಕೊಡಿ, ಇನ್ನೂ ಹಣ ಕಟ್ಟು ಅಂದರೆ ಕಟ್ಟುತ್ತೇನೆ ಎಂದರು.

ಇದೀಗ ನಾನು ಏನೋ ಅಪರಾಧ ಮಾಡಿದ ಹಾಗೆ, ಯಾರಿಗೋ ಮೋಸ ಮಾಡಿದೀನಿ ಎನ್ನುವಂತೆ ಎಂಬಿ ಪಾಟೀಲ್ ಮಾತಾಡಿದ್ದಾರೆ. ನಾನು ಪ್ರಭಾವ ಬೀರಿ ಅದನ್ನು ಖರೀದಿಸಿಲ್ಲ, ಯಾರಿಗೂ ಮೋಸ ಮಾಡಿಲ್ಲ. ಇನ್ನೂ ಆ ಜಮೀನಿನ ಸೇಲ್ ಡೀಡ್ ನನ್ನ ಹೆಸರಿಗೆ ಆಗಿಲ್ಲ. ಬಿಜೆಪಿ ಸರ್ಕಾರ ಇದ್ದಾಗಲೇ ಸೇಲ್ ಡೀಡ್ ಮಾಡಿಕೊಳ್ಳಬಹುದಿತ್ತು. ನಾನು ಪ್ರಭಾವ ಬಳಸಲ್ಲ, ನ್ಯಾಯಯುತವಾಗಿ ಸೇಲ್ ಡೀಡ್ ಮಾಡಿಕೊಡಲಿ. ನನ್ನ ಶೆಡ್ ಗಿರಾಕಿ ಅಂದಿದ್ದಾರೆ, ಸಂತೋಷ. ನಾನು ನಿಮ್ಮಷ್ಟು ದೊಡ್ಡವನಲ್ಲ ಎಂದು ಎಂ ಬಿ ಪಾಟೀಲ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಇನ್ನು ಖರ್ಗೆಯವರಿಂದ ರಾಜಕೀಯ ಕಲಿತು ಅವರ ವಿರುದ್ಧವೇ ಛಲವಾದಿ ಮಾತಾಡ್ತಿದ್ದಾರೆ ಎಂಬ ಪಾಟೀಲ್ ಆರೋಪ ವಿಚಾರ, ‘ನನ್ನ ರಾಜಕೀಯ ಗುರು ಮಲ್ಲಿಕಾರ್ಜುನ ಖರ್ಗೆ ಅಲ್ಲ. ನಾನು ಖರ್ಗೆಯವರ ಜತೆ ಬಹುಕಾಲ ಇದ್ದೆ. ಹಾಗಂತ ಅದು ಗುರು-ಶಿಷ್ಯ ಸಂಬಂಧ ಅಲ್ಲ. ನನ್ನ ರಾಜಕೀಯ ಗುರು ಬಂಗಾರಪ್ಪನವರು. ಖರ್ಗೆಯವರು ನನ್ನ ವೈರಿ ಅಲ್ಲ, ಅವರಿಗೆ ಕೊಡೋ ಗೌರವ ಕೊಟ್ಟೇ ಕೊಡುತ್ತೇನೆ. ದಲಿತ ಸಮುದಾಯದ ಹಿರಿಯ ನಾಯಕರು ಅವರು. ಅವರನ್ನು ನಾನು ಎಲ್ಲೂ ಅಪಮಾನ ಮಾಡಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ