ಬಿಜೆಪಿ ಅವಧಿಯಲ್ಲಿ ಭೂಮಿ ಹಂಚಿದ್ದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಎಂಬಿ ಪಾಟೀಲ್
ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಕೈಗಾರಿಕಾ ಇಲಾಖೆ ಸಚಿವ ಎಂ.ಬಿ.ಪಾಟೀಲ್, ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್ಗೆ ಅಕ್ರಮವಾಗಿ ಸೈಟ್ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಅವಧಿಯಲ್ಲಿ ಯಾರಿಗೆಲ್ಲಾ ಭೂಮಿ ಹಂಚಿಕೆ ಮಾಡಲಾಗಿತ್ತು ಎಂಬ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು, ಆಗಸ್ಟ್ 29: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್ಗೆ ಅಕ್ರಮವಾಗಿ ಸಿಎ ಸೈಟ್ಗಳನ್ನು ನೀಡಲಾಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಆದರೆ ಈ ಆರೋಪವನ್ನು ರಾಜ್ಯ ಸರ್ಕಾರ ಅಲ್ಲಗಳೆದಿದೆ. ಅಲ್ಲದೇ ಇದೀಗ ಬಿಜೆಪಿ ಅವಧಿಯಲ್ಲಿ ಯಾರು ಯಾರಿಗೆ ಎಷ್ಟೆಷ್ಟು ಭೂಮಿ ಹಂಚಿಕೆ ಮಾಡಲಾಗಿತ್ತು ಎನ್ನುವುದನ್ನು ಸಚಿವ ಎಂಬಿ ಪಾಟೀಲ್ (MB Patil) ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ಪಡೆದುಕೊಂಡ ಜಮೀನಿನಲ್ಲಿ ನಾರಾಯಣಸ್ವಾಮಿಯವರು 2016ರವರೆಗೂ ಯಾವ ಕೈಗಾರಿಕಾ ಚಟುವಟಿಕೆಯನ್ನೂ ಆರಂಭಿಸಲಿಲ್ಲ. ಹೀಗಾಗಿ, ನಿಯಮಾವಳಿಯ ಪ್ರಕಾರ ಸರಕಾರವು 11-11-2016ರಂದು ಈ ಜಮೀನನ್ನು ವಾಪಸ್ ಪಡೆದುಕೊಳ್ಳಲು ಆದೇಶಿಸಿತು. ಈಗ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಿರುವ ನಾರಾಯಣಸ್ವಾಮಿ ಆಗ ಇದರ ವಿರುದ್ಧ ಹೈಕೋರ್ಟಿಮೆಟ್ಟಿಲೇರಿದರು.ಇದನ್ನು ಅವರು ಜ್ಞಾಪಿಸಿಕೊಳ್ಳಬೇಕು. ಇದರಿಂದ ಅವರಿಗೂ ಕ್ಷೇಮ, ರಾಜ್ಯಕ್ಕೂ ಕ್ಷೇಮ ಎಂದಿದ್ದಾರೆ.
ಇದನ್ನೂ ಓದಿ: ಕೆಐಎಡಿಬಿ ನಿವೇಶನ ಅಕ್ರಮ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಚಿವ ಎಂಬಿ ಪಾಟೀಲ್
ಇವರ ರಿಟ್ ಅರ್ಜಿ ಪುರಸ್ಕರಿಸಿದ ಘನ ನ್ಯಾಯಾಲಯವು 29-8-2017ರಂದು ತಡೆಯಾಜ್ಞೆ ನೀಡಿತ್ತು. ಆ ಮೇಲೆ 7-7-2022ರಂದು ನ್ಯಾಯಾಲಯವು ಈ ಪ್ರಕರಣದ ವಿಲೇವಾರಿ ಮಾಡಿದೆ. ಇದಾದ ಮೇಲೂ ನಾರಾಯಣಸ್ವಾಮಿಯವರಿಗೆ ಕೈಗಾರಿಕಾ ಚಟುವಟಿಕೆ ಆರಂಭಿಸಲು 7-11-2022ರಿಂದ 6-5-2023ರವರೆಗೆ 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ನಾರಾಯಣಸ್ವಾಮಿಯವರು ರಾಜಕಾರಣದಲ್ಲಿ ಮುಳುಗಿದ್ದರಿಂದ ಈ ಕಡೆ ಗಮನ ಹರಿಸುವಷ್ಟು ಕಾಲಾವಕಾಶ ಅವರಿಗೆ ಇನ್ನೂ ಸಿಕ್ಕಿಲ್ಲ. ಇಷ್ಟಕ್ಕೂ ಇವರಿಗೆ ಹಂಚಿಕೆ ಮಾಡಿದ್ದ ಎರಡು ಎಕರೆಯಲ್ಲಿ ಕನಿಷ್ಠ ಶೇ 50ರಷ್ಟಾದರೂ ಅಭಿವೃದ್ಧಿ ಪಡಿಸಿ, ಬಳಕೆ ಮಾಡಬೇಕು. ಆದರೆ ನಾರಾಯಣಸ್ವಾಮಿ ಅವರು ಬಳಕೆ ಮಾಡಿರುವುದು ಶೇ 5ರಷ್ಟು ಮಾತ್ರ. ಒಂದು ಶೆಡ್ ಕಟ್ಟಿ ಬಾಡಿಗೆಗೆ ಇದೆ ಎಂದು ಬೋರ್ಡ್ ನೇತು ಹಾಕಿದ್ದಾರೆ. ಇಷ್ಟು ಬಿಟ್ಟರೆ ಏನೂ ಆಗಿಲ್ಲ. ಈ ಘನಾಂಧಾರಿ ಕೆಲಸಕ್ಕಾ ಇವರಿಗೆ ಜಾಗ ಕೊಟ್ಟಿದ್ದು? ಇದರಿಂದ ಯಾರಿಗೆ ಏನು ಪ್ರಯೋಜನ ಆಯಿತು? ಇಂತಹ ವ್ಯಕ್ತಿಗೆ ಕಾಂಗ್ರೆಸ್ ಮತ್ತು ಖರ್ಗೆ ಕುಟುಂಬದ ವಿರುದ್ಧ ಮಾತನಾಡಲು ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.
ನೀತಿ ಪಾಠ ಹೇಳುವ ಇವರು 2006ರಿಂದ ಇಲ್ಲಿಯವರೆಗೂ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಎಷ್ಟು ಹೂಡಿಕೆ ಮಾಡಿದ್ದಾರೆ? ಹಾಗಾದರೆ ಇವರು ನಿವೇಶನ ತೆಗೆದುಕೊಂಡಿದ್ದಾದರೂ ಏಕೆ? ರಿಯಲ್ ಎಸ್ಟೇಟ್ ದಂಧೆ ಮಾಡುವುದಕ್ಕಾ? ಹೋಗಲಿ ಕೈಗಾರಿಕೆ ಮಾಡಲು ಇವರಿಗೆಲ್ಲಿತ್ತು ಪ್ರಾವೀಣ್ಯತೆ ಎಂದು ಕಿಡಿಕಾರಿದ್ದಾರೆ.
ಮುರುಗೇಶ್ ನಿರಾಣಿ ಕೈಗಾರಿಕಾ ಜಾಗದಲ್ಲಿ ಭೂಮಿ ಪಡೆದು ಶಾಲೆ ಮಾಡಿದ್ದಾರೆ
ಮಾರ್ಚ್ 12, 2012ರಲ್ಲಿ ಮುರುಗೇಶ್ ನಿರಾಣಿಯವರು ಬಾಗಲಕೋಟೆ ನವನಗರದಲ್ಲಿ 25 ಎಕರೆ ಭೂಮಿ ಪಡೆದಿದ್ದಾರೆ. ಅಗ್ರೋ ಟೆಕ್ನಾಲಜಿ ಪಾರ್ಕ್ನಲ್ಲಿ ಕೈಗಾರಿಕಾ ಭೂಮಿ ಪಡೆದಿದ್ದಾರೆ. ಕೈಗಾರಿಕಾ ಬದಲು ಇಂಟರ್ನ್ಯಾಷನಲ್ ಸ್ಕೂಲ್ ಮಾಡಿದ್ದಾರೆ. ಖರ್ಗೆಗೆ 5 ಎಕರೆ ಭೂಮಿಯನ್ನು ಕೊಟ್ಟಿರುವುದನ್ನು ಕೇಳುತ್ತಾರೆ. ಕೈಗಾರಿಕಾ ಪ್ಲಾಟ್ನಲ್ಲಿ ಭೂಮಿ ಪಡೆದು ಶಾಲೆ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಮುರುಗೇಶ್ ನಿರಾಣಿ 2008ರಲ್ಲಿ ಕೈಗಾರಿಕೆ ಸಚಿವರು ಆಗಿದ್ದರು. 12-03-2012ರಲ್ಲಿ ಬಾಗಲಕೋಟೆ ನವನಗರ ಎಗ್ರೋ ಟೆಕ್ ಪಾರ್ಕ್, ತಮ್ಮದೇ ಶಿಕ್ಷಣ ಸಂಸ್ಥೆ ತೇಜಸ್ ಇಂಟರ್ನ್ಯಾಷನಲ್ ಸ್ಕೂಲ್ಗೆ 25 ಎಕರೆ ಭೂಮಿ ಪಡೆದಿದ್ದಾರೆ. ತಮ್ಮದೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಎಗ್ರೋ ಟೆಕ್ ಪಾರ್ಕ್ನಲ್ಲಿ 25 ಎಕರೆ ಭೂಮಿ ಅಲರ್ಟ್ ಮಾಡುತ್ತಾರೆ. 25 ಜೊತೆಗೆ ಮತ್ತೆ 6 ಎಕರೆ ಭೂಮಿಯನ್ನು ಪಡೆಯುತ್ತಾರೆ. 2019 ಸಿಎ ಸೈಟ್ 6 ಎಕರೆ ಭೂಮಿಯನ್ನು ಪಡೆಯುತ್ತಾರೆ. ಒಟ್ಟು 31 ಎಕರೆ ಭೂಮಿಯನ್ನು ಮುರುಗೇಶ್ ನಿರಾಣಿ ಪಡೆದಿದ್ದಾರೆ ಎಂದು ತಿಳಿಸಿದರು.
ನೊಟೀಸ್ ಕೊಟ್ಟು ಮುಂದಿನ ಕ್ರಮ ಕೈಗೊಳ್ಳಲು ನಾವು ಸಿದ್ಧ
ರಾಷ್ಟ್ರೋತ್ಥಾನ ಪರಿಷತ್ಗೂ ಏರೋಸ್ಪೇಸ್ ಪಾರ್ಕ್ನಲ್ಲಿ 5 ಎಕರೆ ಜಮೀನು ಕೊಡಲಾಗಿದೆ. ಮಲ್ಟಿ ಯುಟಿಲಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ಗೆ ಜಮೀನು ಕೊಡಲಾಗಿದೆ. ಆದರೆ ಅಲ್ಲಿ ಯಾವುದೇ ಚಟುವಟಿಕೆ ನಡೆಸಿಲ್ಲ. ಇದನ್ನು ವಾಪಸ್ ಪಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದಕ್ಕೆ ಕೆಲವೊಂದು ಪ್ರಕ್ರಿಯೆ ಇವೆ. ಹಾಗಂತ ಭೂಮಿ ಪಡೆದುಕೊಳ್ಳಲು ಅವರಿಗೂ ಅವಕಾಶ ಇದೆ. ನೊಟೀಸ್ ಕೊಟ್ಟು ಮುಂದಿನ ಕ್ರಮ ಕೈಗೊಳ್ಳಲು ನಾವು ಸಿದ್ಧ. ಮುಂದೆ ಹೆಚ್ಚಿನ ಮಾಹಿತಿ ಕೊಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಪರ ಅಥವಾ ವಿರೋಧ ಆದೇಶ ಬಂದರೆ ಸಿದ್ದರಾಮಯ್ಯ ಮುಂದಿನ ಆಯ್ಕೆಗಳೇನು?
ಕೆಐಎಡಿಬಿಯಿಂದ ಜಮೀನು ಪಡೆದು ಅದನ್ನ ಸರಿಯಾಗಿ ಬಳಕೆ ಮಾಡಿಕೊಳ್ಳದಿದ್ದರೆ ಅಂತಹ ಜಮೀನುಗಳನ್ನು ವಾಪಸ್ ಪಡೆಯಲಾಗುವುದು. ಈಗಾಗಲೇ ಕೈಗಾರಿಕಾ ಉದ್ದೇಶಕ್ಕಾಗಿ ಪಡೆದ ಜಮೀನು, ಬಳಕೆಯಾಗದೆ ಹಾಗೆ ಉಳಿದಿದ್ದರೆ ವಾಪಸ್ ಕೈಗಾರಿಕಾ ಜಮೀನುಗಳನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಲು ಮುಂದಾಗಿದ್ದರೆ. ಅಂತಹ ಜಮೀನು ವಾಪಸ್ ಪಡೆಯಲು ಆ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಮಾಡಲಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.