ಜಕ್ಕೂರು ಶಾಲೆಯ ಜಮೀನು ಖಾಸಗಿಗೆ ಪರಭಾರೆ ಯತ್ನ ಆರೋಪ: ಪ್ರಸ್ತಾವನೆ ಸಾರ್ವಜನಿಕರ ಮುಂದೆ ತೆರದಿಡಲಾಗುವುದು -ಕ್ರೀಡಾ ಸಚಿವ ಘೋಷಣೆ
ಜಕ್ಕೂರು ವೈಮಾನಿಕ ತರಬೇತಿ ಶಾಲೆ ಜಮೀನು ಸಂಬಂಧ ಅವರು ಸ್ಪಷ್ಟನೆ ನೀಡಿದ್ದು, ತರಬೇತಿ ಶಾಲೆಯನ್ನು 4 ವರ್ಷದಿಂದ ಮುಚ್ಚುವ ಹಂತಕ್ಕೆ ತಂದಿದ್ದರು.
ಬೆಂಗಳೂರು: ಜಮೀನು ಖಾಸಗಿಯವರಿಗೆ ಪರಭಾರೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಈ ಪ್ರಸ್ತಾವನೆಯನ್ನು ಸಾರ್ವಜನಿಕರ ಮುಂದೆ ತೆರೆದಿಡಲಾಗುವುದು. ಸಾರ್ವಜನಿಕರ ಅಭಿಪ್ರಾಯಗಳ ಪರಿಗಣಿಸಿ ಮುಂದುವರಿಯಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ ಹೇಳಿದರು. ಜಕ್ಕೂರು ವೈಮಾನಿಕ ತರಬೇತಿ ಶಾಲೆ ಜಮೀನು ಸಂಬಂಧ ಅವರು ಸ್ಪಷ್ಟನೆ ನೀಡಿದ್ದು, ತರಬೇತಿ ಶಾಲೆಯನ್ನು 4 ವರ್ಷದಿಂದ ಮುಚ್ಚುವ ಹಂತಕ್ಕೆ ತಂದಿದ್ದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮುಚ್ಚುವ ಹಂತಕ್ಕೆ ತಂದಿದ್ದರು. ಇದರ ಹಿಂದೆ ರಿಯಲ್ ಎಸ್ಟೇಟ್ ಉದ್ಯಮದ ದೊಡ್ಡ ಮಾಫಿಯಾ ಇದೆ. ಇದು ನನ್ನ ಗಮನಕ್ಕೆ ಬಂದ ಬಳಿಕ ಶಾಲೆ ಪುನಾರಂಭ ಮಾಡಲಾಗಿತ್ತು. ನಿಯಮ ಉಲ್ಲಂಘಿಸಿದ ಖಾಸಗಿ ಕಟ್ಟಡ ಒಡೆದು ಹಾಕಲು ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿರುವುದರಿಂದ ಈ ರೀತಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಾವುದೇ ಅಪಪ್ರಚಾರಗಳಿಗೆ ಬಗ್ಗುವ ಪ್ರಶ್ನೆ ಇಲ್ಲ ಎಂದು ನಾರಾಯಣಗೌಡ ಹೇಳಿದರು.
ನಿಯಮ ಉಲ್ಲಂಘಿಸಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ತೇವೆ. ಹತ್ತಾರು ವರ್ಷಗಳಿಂದ ಬಾಡಿಗೆ ನೀಡದೇ ಹೈಕೋರ್ಟ್‌ನಲ್ಲಿ ತಡೆ ತರಲಾಗಿದೆ. ಅಲ್ಲೇ ಮುಂದುವರಿದಿರುವ ವಿಮಾನಯಾನ ಸಂಸ್ಥೆಗಳೂ ಇದರಲ್ಲಿ ಭಾಗಿಯಾಗಿವೆ. ಈ ಎಲ್ಲಾ ಕುತಂತ್ರಗಳಿಗೆ ಬಲಿಯಾಗುವುದಿಲ್ಲ. ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ಹಂತಹಂತವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡ್ತಿದೆ. ಖಾಸಗಿಯವರಿಗೆ ನೀಡಲ್ಲವೆಂದು ವಿಧಾನಸಭೆಯಲ್ಲೇ ಭರವಸೆ ನೀಡಿದ್ದೇನೆ. ವೈಮಾನಿಕ ಚಟುವಟಿಕೆಗಳಿಗೆ ಸೀಮಿತವಾಗಿ ಹಂತಹಂತವಾಗಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆ ಮಾತ್ರ ರಾಜ್ಯ ಸರ್ಕಾರದ ಮುಂದೆ ಇದೆ. ಸಿಮ್ಯುಲೇಟರ್ ತರಬೇತಿ ಅಳವಡಿಸುವುದರಿಂದ ಖಾಸಗಿಯವರ ಪಾಲಾಗ್ತಿದ್ದ ಆದಾಯ ರಾಜ್ಯ ಸರ್ಕಾರಕ್ಕೆ ತಂದುಕೊಡುವ ಉದ್ದೇಶ ಹೊಂದಲಾಗಿದೆ. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡುವ ಪ್ರಸ್ತಾಪವೇ ಇಲ್ಲ ಎಂದರು.
ಸರ್ಕಾರದ ಮುಂದೆ ಇರುವುದಿಲ್ಲವೆಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕ್ಯಾಡ್ ಸಂಸ್ಥೆಯನ್ನು ರಚಿಸಿ ಫ್ಲೈಯಿಂಗ್ ಕ್ಲಬ್ ನಿರ್ಮಿಸಲು ಹಿಂದಿನ ಸರ್ಕಾರದ ಅವಧಿಯಲ್ಲಿ ಆದೇಶ ನೀಡಲಾಗಿತ್ತು. ಇದನ್ನು ನಾನು ರದ್ದುಪಡಿಸಿದ್ದೇನೆ. ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ 50 ಎಕರೆ ಮೀಸಲು ಎಂಬ ಸುದ್ದಿ ಸುಳ್ಳು ತಪ್ಪು ಸಂದೇಶವನ್ನು ರವಾನಿಸಿದ್ದಾರೆ, ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಮಹಾರಾಜರು ನೀಡಿರುವ ಒಂದಿಂಚೂ ಜಾಗ ಖಾಸಗಿಯವರಿಗೆ ಬಿಡುವುದಿಲ್ಲ ಎಂದು ಸಚಿವ ನಾರಾಯಣಗೌಡ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.