ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಸೇವಾವಧಿ ವಿಸ್ತರಣೆ
ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಅವರ ಸೇವಾವಧಿ 1 ವರ್ಷಕ್ಕೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆಯ (Jayadeva Hospital) ನಿರ್ದೇಶಕ ಡಾ.ಮಂಜುನಾಥ್ (Dr. Manjunath) ಅವರ ಸೇವಾವಧಿ 1 ವರ್ಷಕ್ಕೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಖುದ್ದಾಗಿ ಡಾ.ಸಿ.ಎನ್. ಮಂಜುನಾಥ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಡಾ. ಮಂಜುನಾಥ್ ಸೇವಾವಧಿ ನಾಳೆ (ಜುಲೈ 19) ರಂದು ಮುಕ್ತಾಯಗೊಳ್ಳುತ್ತಿತ್ತು.
ಒಂದು ವರ್ಷಗಳ ಕಾಲ ನಿರ್ದೇಶಕರನ್ನಾಗಿ ವಿಸ್ತರಿಸಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಡಾ. ಸಿ ಎನ್ ಮಂಜುನಾಥ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರಿಗೆ ಆಭಿನಂದನೆ ಸಲ್ಲಿಸಿದ್ದಾರೆ.
ಡಾ. ಮಂಜುನಾಥ್ರವರ ಅವಧಿ ಜುಲೈ 19ಕ್ಕೆ ಮುಕ್ತಾಯಗೊಳ್ಳಲಿದ್ದು, ಹಾಲಿ ನಿರ್ದೇಶಕರನ್ನು ಮುಂದುವರಿಸಬೇಕೋ ಅಥವಾ ಹೊಸ ನಿರ್ದೇಶಕರ ನೇಮಕ ಮಾಡಬೇಕು ಎಂಬ ವಿಚಾರದಲ್ಲಿ ಸರ್ಕಾರ ಇಲ್ಲಿವರೆಗು ನಿರ್ಧಾರ ಕೈಗೊಂಡಿರಲಿಲ್ಲ. ಈ ಸಂಬಂಧ ಡಾ.ಮಂಜುನಾಥ್ರನ್ನೇ ಮುಂದುವರಿಸುವಂತೆ ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.
ಡಾ.ಮಂಜುನಾಥ್ ನಿರ್ದೇಶಕ ಸ್ಥಾನದಲ್ಲಿ ಮುಂದುವರಿಸುವಂತೆ ಸಿಬ್ಬಂದಿ ವರ್ಗ ನಾಳೆ (ಜುಲೈ 19) ಪ್ರತಿಭಟನೆ ಮಾಡಲು ಮುಂದಾಗಿತ್ತು. ಸರ್ಕಾರ ಡಾ. ಮಂಜುನಾಥ್ ಸೇವೆ ಮುಂದುವರಿಸಬೇಕು ಎಂದು ಸಿಬ್ಬಂದಿ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದರು.
ಒಪಿಡಿಗೆ ಸಮಸ್ಯೆಯಾಗದಂತೆ ನಾಳೆ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇಂಡಿಯನ್ ಮೆಡಿಕಲ್ ಕೌನ್ಸಿಲ್ ನಿಯಮದ ಪ್ರಕಾರ ಗರಿಷ್ಠ 70 ವರ್ಷದ ವರೆಗೂ ಸೇವೆ ಸಲ್ಲಿಸಬಹುದು. ಆದರೆ ಸದ್ಯ ಡಾ. ಮಂಜುನಾಥ್ ಅವರಿಗೆ 65 ವರ್ಷ ಮಾತ್ರ. ಹೀಗಾಗಿ ಇನ್ನಷ್ಟು ವರ್ಷ ಅವರನ್ನ ನಿರ್ದೇಶಕರಾಗಿ ಮುಂದುವರೆಸಬೇಕು ಒತ್ತಾಯ ಮಾಡಲಾಗುತ್ತಿತ್ತು.
Published On - 6:04 pm, Mon, 18 July 22