ಯಾವ ಪುರುಷಾರ್ಥಕ್ಕೆ ಸರ್ಕಾರಿ ಜಮೀನು ಅಡ ಇಟ್ರು: ನೈಸ್ ವಿರುದ್ಧ ಹರಿಹಾಯ್ದ ದೇವೇಗೌಡ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 03, 2022 | 2:45 PM

ಟೌನ್ ಶಿಪ್ ಆದ ನಂತರವೇ ಟೋಲ್ ಹಣ ಸಂಗ್ರಹಿಸಬೇಕು ಎಂಬ ಷರತ್ತು ಇದೆ ಎಂದರು. ಒಂದು ದಿನಕ್ಕೆ ನೈಸ್ ಸಂಸ್ಥೆ ಸಂಗ್ರಹಿಸುತ್ತಿರುವ ಟೋಲ್ ಹಣ ಎಷ್ಟು ಎಂದು ಯಾರಾದರೂ ನೋಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಯಾವ ಪುರುಷಾರ್ಥಕ್ಕೆ ಸರ್ಕಾರಿ ಜಮೀನು ಅಡ ಇಟ್ರು: ನೈಸ್ ವಿರುದ್ಧ ಹರಿಹಾಯ್ದ ದೇವೇಗೌಡ
ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ
Follow us on

ಬೆಂಗಳೂರು: ನೈಸ್ ಕಂಪನಿಯ (Nandi Infrastructure Corridor Enterprises – NICE) ಕಾರ್ಯವೈಖರಿಯಲ್ಲಿ ಹಲವು ಅನುಮಾನಗಳಿವೆ. ಎಚ್ಚರಿಕೆಯಿಂದ ಇರಬೇಕು ಎಂದು ಹಲವು ಬಾರಿ ಹೇಳಿದ್ದೆ. ಅಧಿಕಾರದಲ್ಲಿರುವವರಿಗೆ ಪತ್ರಗಳನ್ನೂ ಬರೆದು ತಾಕೀತು ಮಾಡಿದ್ದೆ. ಆದರೆ ಸಚಿವರು, ಮುಖ್ಯಮಂತ್ರಿ ಸರಿಯಾಗಿ ಉತ್ತರ ನೀಡಿಲ್ಲ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಹೇಳಿದರು. ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ನೈಸ್ ವಿಚಾರ ಚರ್ಚಿಸಲು ತಯಾರಿದ್ದರು. ಆದರೆ ಅವರಿಗೆ ಅವಕಾಶವೇ ಸಿಗಲಿಲ್ಲ. ನೈಸ್ ಕಂಪನಿ ಬಗ್ಗೆ ಮಾಧುಸ್ವಾಮಿಗೂ ಪತ್ರ ಬರೆದಿದ್ದೆ. ವ್ಯವಹಾರ ಸರಿಯಿಲ್ಲ ಎಂದು ಅವರೂ ಒಪ್ಪಿಕೊಂಡಿದ್ದರು. ₹ 5 ಲಕ್ಷ ದಂಡವನ್ನೂ ಹಾಕಿದ್ದರು ಎಂದು ದೇವೇಗೌಡರು ನೆನಪಿಸಿಕೊಂಡರು.

2016ರಲ್ಲಿ ಟೋಲ್ ರೋಡ್ ನಿರ್ಮಾಣ ಪೂರ್ಣಗೊಂಡಿರಲಿಲ್ಲ. ಮೈಸೂರು ರಸ್ತೆ ಪೂರ್ಣವಾದ ಬಳಿಕವೇ ಟೋಲ್ ಸಂಗ್ರಹಿಸಲು ಅವಕಾಶ ನೀಡಬೇಕಿತ್ತು. 2015ರಲ್ಲಿ ನೈಸ್ ಕಂಪನಿ​ಗೆ ಅವಕಾಶ ಮಾಡಿಕೊಟ್ಟರು. 2016ನಲ್ಲಿ ನೈಸ್ ಕಂಪನಿಯವರು ಸ್ಟೇ ತಂದರು. 2016ರಿಂದ 22ರ ಅವಧಿಯಲ್ಲಿ ಒಂದು ದಿನಕ್ಕೆ ಎಷ್ಟು ಟೋಲ್ ಸಂಗ್ರಹವಾಗುತ್ತಿದೆ ಎಂದು ಯಾರೂ ಪರಿಶೀಲಿಸಲಿಲ್ಲ. ವಿಧಾನ ಪರಿಷತ್​ನಲ್ಲಿ ಈ ಕುರಿತು ಚರ್ಚಿಸಿದರೆ ಯಾರೂ ಸರಿಯಾಗಿ ಉತ್ತರಿಸಲಿಲ್ಲ. ವಶಪಡಿಸಿಕೊಂಡ ಭೂಮಿಗಾಗಿ ರೈತರಿಗೆ ಹಾಗೂ ಬಡವರಿಗೆ ಇನ್ನೂ ಪರಿಹಾರ ಹಣವನ್ನೇ ಕೊಟ್ಟಿಲ್ಲ. ತಮಗೆ ಬೇಕಾದಂತೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಬರೆದಿದ್ದ ಪತ್ರದ ಒಂದು ಪ್ರತಿಯನ್ನು ಸಚಿವ ಮಾಧುಸ್ವಾಮಿ ಅವರಿಗೂ ಹಾಕಿದ್ದೆ. ಯಾವ ಮನುಷ್ಯ ನ್ಯಾಯಕ್ಕೋಸ್ಕರ ಹೋರಾಟ ಮಾಡ್ತಾನೆ ಎನ್ನುವ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತೇನೆ. ಸದನ ಸಮಿತಿಯು ಈ ಸಂಬಂಧ ವರದಿ ಕೊಟ್ಟಿದೆ. 2016ರಲ್ಲಿ ಟೋಲ್ ರೋಡ್ ಕೆಲಸ ಪೂರ್ಣಗೊಂಡಿಲ್ಲ. ಟೌನ್ ಶಿಪ್ ಆದ ನಂತರವೇ ಟೋಲ್ ಹಣ ಸಂಗ್ರಹಿಸಬೇಕು ಎಂಬ ಷರತ್ತು ಇದೆ ಎಂದರು. ಒಂದು ದಿನಕ್ಕೆ ನೈಸ್ ಸಂಸ್ಥೆ ಸಂಗ್ರಹಿಸುತ್ತಿರುವ ಟೋಲ್ ಹಣ ಎಷ್ಟು ಎಂದು ಯಾರಾದರೂ ನೋಡಿದ್ದಾರೆ ಎಂದು ಪ್ರಶ್ನಿಸಿದರು.

ಉತ್ತಮ ರಸ್ತೆ ನಿರ್ಮಿಸುವ ಭರವಸೆಯೊಂದಿಗೆ ಸರ್ಕಾರದ ಜಮೀನನ್ನು ನೈಸ್ ಸಂಸ್ಥೆ ಅಡ ಇಟ್ಟಿತ್ತು. ಇದರಿಂದ ಯಾವ ಪುರುಷಾರ್ಥ ಸಾಧಿಸಿದಂತೆ ಆಯಿತು? ನಮ್ಮ ರೈತರ ಜಮೀನು ತೆಗೆದುಕೊಂಡು ಹಣ ನೀಡಿಲ್ಲ. ಅನೇಕ ಜನರು ಈಗಲೂ ಒದ್ದಾಡುತ್ತಿದ್ದಾರೆ ಎಂದು ಹೇಳಿದರು. ಇದು ನನ್ನ ಕನಸಿನ ಯೋಜನೆಯಾಗಿತ್ತು. ಉತ್ತಮ ರಸ್ತೆ ಆಗಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಗೆ ಅನುಮೋದನೆ ಕೊಟ್ಟಿದ್ದೆ. ಆದರೆ ಈಗ ಏನಾಗುತ್ತಿದೆ ಎಂದು ಪ್ರಶ್ನಿಸಿದರು. ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸುಪ್ರೀಂಕೋರ್ಟ್ ಆದೇಶ ಪಾಲಿಸುವಂತೆ ಸೂಚಿಸಿದ್ದೆ. ನಂತರ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದೆ. ಸಿಎಂ ಬೊಮ್ಮಾಯಿ ಈಗಲಾದರೂ ಕ್ರಮ ತೆಗೆದುಕೊಳ್ಳಲಿ. ಭೂಮಿ ಕಳೆದುಕೊಂಡವರು ನೋವು ತೋಡಿಕೊಂಡಿದ್ದಾರೆ ಎಂದು ಒತ್ತಾಯಿಸಿದರು.

ಇದು ಕೇವಲ ಪ್ರಾರಂಭ ಮಾತ್ರ. ಮುಂದಿನ ದಿನಗಳಲ್ಲಿ ಹೋರಾಟ ಇನ್ನೂ ಚುರುಕಾಗುತ್ತದೆ. ನಾನು ಕಣ್ಣು ಮುಚ್ಚಿಕೊಂಡು ಈ ಪ್ರಾಜೆಕ್ಟ್ ಮಾಡಿಲ್ಲ. ನನ್ನ ಮೇಲೆ ನೈಸ್ ಸಂಸ್ಥೆಯು ₹ 2 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿತ್ತು. ಮುಖ್ಯಮಂತ್ರಿಗೆ ಪತ್ರ ಬರೆದಿದ್ದರೂ ಉತ್ತರ ಬರಲಿಲ್ಲ. ಆದರೆ ಲೋಕೋಪಯೋಗಿ ಸಚಿವರು ಮಾತ್ರ ನನ್ನ ಪತ್ರಕ್ಕೆ ಉತ್ತರ ಬರೆದಿದ್ದರು. ‘ನೈಸ್’ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

ಇದನ್ನೂ ಓದಿ: ಹುಟ್ಟೂರಲ್ಲಿ ಮಣ್ಣಿನ ಮಗನಿಗೆ ಮ್ಯೂಸಿಯಂ -ಎಚ್ ಡಿ ದೇವೇಗೌಡರ ಮ್ಯೂಸಿಯಂನಲ್ಲಿ ಏನೆಲ್ಲಾ ಇರಲಿದೆ, ವಿವರ ಇಲ್ಲಿದೆ

ಇದನ್ನೂ ಓದಿ: ದೇವೇಗೌಡರ ಪತ್ನಿ ಚೆನ್ನಮ್ಮಗೆ ಐಟಿ ನೋಟಿಸ್: ಕಬ್ಬಿನ ಗದ್ದೆ ನೋಡಬೇಕಿತ್ತು ಎಂದ ರೇವಣ್ಣ

Published On - 2:43 pm, Sun, 3 April 22