ಹುಟ್ಟೂರಲ್ಲಿ ಮಣ್ಣಿನ ಮಗನಿಗೆ ಮ್ಯೂಸಿಯಂ -ಎಚ್ ಡಿ ದೇವೇಗೌಡರ ಮ್ಯೂಸಿಯಂನಲ್ಲಿ ಏನೆಲ್ಲಾ ಇರಲಿದೆ, ವಿವರ ಇಲ್ಲಿದೆ
HD Deve Gowda Museum: ಮಾಜಿ ಪ್ರಧಾನಿ ದೇವೇಗೌಡರ ಹುಟ್ಟೂರಿನಲ್ಲಿ ದೇವೇಗೌಡರ ವಸ್ತುಸಂಗ್ರಹಾಲಯಕ್ಕೆ ನಿನ್ನೆ ಶೃಂಗೇರಿ ಶಾರದಾ ಪೀಠದ ಶ್ರೀಗಳಾದ ಶ್ರೀ ವಿಧುಶೇಖರ ಮಹಾಸ್ವಾಮಿಗಳು ಭೂಮಿ ಪೂಜೆ ನೆರವೇರಿಸಿದ್ದು, ಲೋಕೋಪಯೋಗಿ ಇಲಾಖೆಯ ಐದು ಕೋಟಿ ಅನುದಾನದಲ್ಲಿ ಮ್ಯೂಸಿಯಂ ನಿರ್ಮಾಣವಾಗಲಿದ್ದು ಶೀಘ್ರವೇ ಕಾಮಗಾರಿ ಮುಗಿಸಲಾಗುವುದು ಎಂದು ಹೊಳೆನರಸೀಪುರ ತಹಸೀಲ್ದಾರ್ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಹಾಸನ: ದೇಶ ಕಂಡ ಮುತ್ಸದ್ಧಿ ರಾಜಕಾರಣಿ, ಸರಳ ಸಜ್ಜನಿಕೆಗೆ ಹೆಸರಾಗಿರೋ, ಕರುನಾಡಿನ ಮಣ್ಣಿನ ಮಗ ಎಂದೇ ಖ್ಯಾತವಾದ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ ಅವರ ಹೆಸರಿನಲ್ಲಿ ಮ್ಯೂಸಿಯಂ ಒಂದು ನಿರ್ಮಾಣವಾಗಲಿದೆ (HD Deve Gowda Museum). ಹಳ್ಳಿಯ ಬಡ ರೈತನ ಮಗನಾಗಿ ಹುಟ್ಟಿ, ರಾಜಕೀಯವಾಗಿ ಹಂತ ಹಂತವಾಗಿ ಮೇಲೇರಿ ದೇಶದ ಪ್ರಧಾನಿ ಪಟ್ಟಕ್ಕೇರಿದ ಹಾಸನ ಜಿಲ್ಲೆ ಹರದನಹಳ್ಳಿಯ ಎಚ್.ಡಿ. ದೇವೇಗೌಡರ ಜೀವನ ಸಾಧನೆ ತಿಳಿಸೋ ಒಂದು ಮ್ಯೂಸಿಯಂ ಆಗಬೇಕು ಎನ್ನೋದು ಅವರ ಅಭಿಮಾನಿಗಳ ಹಲವು ದಿನಗಳ ಕೋರಿಕೆಯಾಗಿತ್ತು. ಇದೀಗ ದೇವೇಗೌಡರ ಹುಟ್ಟೂರಿನಲ್ಲಿಯೇ ಮಾಜಿ ಪ್ರಧಾನಿಯ ಮ್ಯೂಸಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ (Former Prime Minister, JDS Supremo HD Deve Gowda). ನಿನ್ನೆ ಶೃಂಗೇರಿಯ ಶ್ರೀಗಳಾದ ಶ್ರೀ ಶ್ರೀ ವಿಧುಶೇಖರ ಮಹಾಸ್ವಾಮಿಜಿಗಳು ಶಿಲಾನ್ಯಾಸ ನೆರವೇರಿಸಿದ್ದು ಶೀಘ್ರವೇ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿ ಸುಂದರ ಮ್ಯೂಸಿಯಂ ತಲೆ ಎತ್ತಲಿದೆ (Haradanahalli in Hassan District).
ಮ್ಯೂಸಿಯಂ ನಲ್ಲಿ ಏನೆಲ್ಲಾ ಮಾಹಿತಿ!! ಮಾಜಿ ಪ್ರಧಾನಿ ದೇವೇಗೌಡ ಎಂದರೆ ಪಕ್ಷಭೇದ ಮರೆತು ಎಲ್ಲರೂ ಗೌರವಿಸುತ್ತಾರೆ. ದಕ್ಷಿಣ ಭಾರತದಿಂದ ಪ್ರಧಾನಿ ಹುದ್ದೆಗೇರಿದ ಕರುನಾಡಿನ ಏಕೈಕ ರಾಜಕಾರಣಿ ಅನ್ನೋ ಹೆಗ್ಗಳಿಕೆ ದೇವೇಗೌಡರದ್ದು. ಪ್ರಧಾನಿಯಾಗಿದ್ದು 10 ತಿಂಗಳಾದರೂ ದಶಕಗಳಾದರೂ ತಮ್ಮ ಆಡಳಿತದ ಛಾಪು ಅಚ್ಚಳಿಯದಂತೆ ಮಾಡಿದ ಕೀರ್ತಿ ದೇವೇಗೌಡ ಅವರದ್ದು. ಈಗಲೂ ದೇವೇಗೌಡರು ನೀರಾವರಿ ಯೋಜನೆಗಳ ಬಗ್ಗೆ, ರೈತರ ಸಮಸ್ಯೆಗಳಿಗೆ ಪರಿಹಾರ ಹುಡುಕೋ ಬಗ್ಗೆ ಯಾವುದೇ ಪಕ್ಷದ ನಾಯಕರಿರಲಿ ಇವರ ಸಲಹೆ ಪಡೆಯುತ್ತಾರೆ. ಈ ವಿಚಾರದಲ್ಲಿ ಅವರಿಗಿರೋ ಆಳವಾದ ಜ್ಞಾನ ಅವರ ಅಧ್ಯಯನ ಹಾಗೂ ಅನುಭವದಿಂದ ಬಂದಿದ್ದು.
ಇಂತಹ ಮಾಜಿ ಪ್ರಧಾನಿಯೊಬ್ಬರ ಮ್ಯೂಸಿಯಂ ಅವರ ಹುಟ್ಟೂರಿನಲ್ಲಿ ನಿರ್ಮಾಣವಾಗುತ್ತದೆ ಎಂದರೆ ಬಹಳಷ್ಟು ಕುತೂಹಲ ಇದ್ದೇ ಇರುತ್ತೆ. ಆ ಮ್ಯೂಸಿಎಂ ನಲ್ಲಿ ಏನೆಲ್ಲ ಇರಲಿದೆ ಎನ್ನೋ ಕಾತರತೆಯೂ ಇರಲಿದೆ. ದೇವೇಗೌಡರ ಮ್ಯೂಸಿಯಂನಲ್ಲಿ ದೇವೇಗೌಡರ ಜೀವನ ಚರಿತ್ರೆಯನ್ನ ಬಿಂಬಿಸುವ ಸಂಪೂರ್ಣ ಮಾಹಿತಿ ಇರಲಿದೆ. ಪ್ರಧಾನಿ ಆಗಿದ್ದಾಗ ಗೌಡರಿಗೆ ದೇಶ ವಿದೇಶಗಳಿಂದ ಬಂದ ಉಡುಗೊರೆಗಳ ಸಂಗ್ರಹ, ದೇವೇಗೌಡರು ತಮ್ಮ ರಾಜಕೀಯ ಜೀವನಕ್ಕೆ ಎಂಟ್ರಿಯಾದ ಮೊದಲ ಚುನಾವಣೆಯಿಂದ ಈವರೆಗಿನ ಘಟನಾವಳಿಗಳನ್ನ ವಿವರಿಸುವ ಕಲರ್ ಫುಲ್ ಭಾವ ಚಿತ್ರಗಳ ಪ್ರದರ್ಶನ, ಗೌಡರ ಬದುಕಿನ ಮಹತ್ತರ ಘಟನೆಗಳನ್ನ ಬಿಂಬಿಸೋ ಮಾಹಿತಿ, ದೇವೇಗೌಡರ ಒಡನಾಡಿಗಳ ಭಾವಚಿತ್ರಗಳು, ದೇವಗೌಡರ ಬಗ್ಗೆ ಪ್ರಕಟವಾಗಿರೋ ಪುಸ್ತಕಗಳ ಪ್ರದರ್ಶನ, ದೇವೇಗೌಡರ ಬದುಕಿನ ಶೈಲಿ ಬಿಂಬಿಸೋ ಚಿತ್ರಾವಳಿ ಹೀಗೆ ಹಳ್ಳಿಯ ಸಾಮಾನ್ಯ ರೈತನೊಬ್ಬನ ಮಗನಾಗಿ ಹುಟ್ಟಿ ಪ್ರಧಾನಿ ಹುದ್ದೆಗೇರಿದ ವ್ಯಕ್ತಿಯೊಬ್ಬರ ಬದುಕು ಹೇಗಿತ್ತು ಎನ್ನೋದನ್ನ ಎಳೆ ಎಳೆಯಾಗಿ ಬಿಡಿಸಿಡುವ ಸಂಪೂರ್ಣ ಚಿತ್ರಣ ಈ ಮ್ಯೂಸಿಯಂ ನಲ್ಲಿ ಸಿಗಲಿದೆ.
ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಕಾಮಗಾರಿ: ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ಅವರ ಜೀವನ ಚರಿತ್ರೆಯನ್ನ ಬಿಂಬಿಸೋ ಮ್ಯೂಸಿಯಂ ತಲೆ ಎತ್ತಲಿದ್ದು ಇದಕ್ಕೆ ಶಿಲಾನ್ಯಾಸವೂ ನೆರವೇರಿದೆ. ಬರೊಬ್ಬರಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮ್ಯೂಸಿಯಂ ನಿರ್ಮಾಣವಾಗಲಿದ್ದು ಇದಕ್ಕಾಗಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಐದು ಕೋಟಿ ರೂ ಅನುದಾನವನ್ನು ಮಂಜೂರು ಮಾಡಿದೆ. ಐದು ಕೋಟಿ ವೆಚ್ಚದಲ್ಲಿ ಸುಂದರ ವಿನ್ಯಾಸದ ಬೃಹತ್ ಕಟ್ಟಡ, ಉದ್ಯಾನ ಹೀಗೆ ಆಕರ್ಷಕವಾಗಿ ಈ ಮ್ಯೂಸಿಯಂ ಹಳ್ಳಿಯಲ್ಲಿ ನಿರ್ಮಾಣವಾಗಲು ಸರ್ಕಾರ ಕೂಡ ನೆರವು ನೀಡುತ್ತಿದೆ. ಸಾಮಾನ್ಯ ವ್ಯಕ್ತಿಯೊಬ್ಬರು ಅವಿರತ ಶ್ರಮದಿಂದ ಹಂತ ಹಂತವಾಗಿ ಸಾಧನೆ ಮೆಟ್ಟಿಲೇರಿದ ಹಳ್ಳಿಯ ರೈತನ ಮಗನ ಬದುಕಿನ ಚಿತ್ರಣ ಇತರರಿಗೆ ಸ್ಪೂರ್ತಿಯಾಗಲಿ ಎನ್ನೋ ಕಾರಣಕ್ಕೆ ಸರ್ಕಾರ ಅನುದಾನ ನೀಡಿ ಈ ಮಹತ್ತರ ಯೋಜನೆ ಸಾಕಾರಕ್ಕೆ ನೆರವಾಗಿದೆ.
ತಂದೆಯ ಮ್ಯೂಸಿಯಂಗೆ ಮಗನಿಂದ ಭೂಮಿ ದಾನ: ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ಅವರ ಹುಟ್ಟೂರು ಹರದನಹಳ್ಳಿಯಲ್ಲಿ ಸದರಿ ಮ್ಯೂಸಿಯಂ ಸರ್ಕಾರದಿಂದ ಐದು ಕೋಟಿ ಅನುದಾನದೊಂದಿಗೆ ನಿರ್ಮಾಣವಾಗುತ್ತಿದ್ದು ಈ ಮಹತ್ತರ ಯೋಜನೆಗೆ ದೇವೇಗೌಡರ ಪುತ್ರ, ಮಾಜಿ ಸಚಿವ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಮ್ಯೂಸಿಯಂಗೆ ಅಗತ್ಯವಾದ ಭೂಮಿಯನ್ನ ಕೊಡುಗೆಯಾಗಿ ನೀಡಿದ್ದಾರೆ. ಒಟ್ಟು ಮೂರು ಅಂತಸ್ತಿನ ಕಟ್ಟಡ ಇಲ್ಲಿ ನಿರ್ಮಾಣವಾಗಲಿದ್ದು, ಸಂಪೂರ್ಣ ದೇವೇಗೌಡರ ಬದುಕು, ಜೀವನ, ಸಾಧನೆ ಎಲ್ಲವನ್ನ ಬಿಂಬಿಸೋ ವಿವರ ಈ ಮ್ಯೂಸಿಯಂ ನಲ್ಲಿ ಇರಲಿದೆ. ಇನ್ನೊಂದು ವರ್ಷದಲ್ಲಿ ದೇವೇಗೌಡರ ಹುಟ್ಟೂರಿನಲ್ಲಿ ಸುಂದರ ವಿನ್ಯಾಸದ ಗೌಡರ ಬದುಕಿನ ಚಿತ್ರಣದ ಮ್ಯೂಸಿಯಂ ನಿರ್ಮಾಣವಾಗಲಿದೆ. – ಕೆ.ಬಿ. ಮಂಜುನಾಥ್, ಟಿವಿ9, ಹಾಸನ