ಅಂಥವರ ಬಗ್ಗೆ ನಾನು ಏನೂ ಹೇಳಲ್ಲ: ಜಮೀರ್ ಕೊಟ್ಟ ಹಿಜಾಬ್ ಹೇಳಿಕೆಗೆ ಪ್ರತಿಕ್ರಿಯಿಸಲು ಎಚ್ಡಿಕೆ ನಕಾರ
ಸಂಘಟನೆಗಳ ನಾಯಕರು ಹೇಳಿಕೊಡುವ ಮಾತುಗಳಿಂದ ಪ್ರೇರೇಪಿತರಾಗಿ ಸಮಾಜದ ಶಾಂತಿಯನ್ನು ಹಾಳು ಮಾಡಬೇಡಿ ಎಂದು ಎಚ್ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವ ಕುರಿತು ಕಾಂಗ್ರೆಸ್ ಶಾಸಕ ಮತ್ತು ತಮ್ಮ ಮಾಜಿ ಸಹವರ್ತಿ ಬಿ.ಝಡ್.ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ‘ಅವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಭಾವನೆ ಇರುತ್ತದೆ. ಅದನ್ನು ಅವರು ವ್ಯಕ್ತಪಡಿಸಿರುತ್ತಾರೆ’ ಎಂದರು. ಮತೀಯ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ರಾಜ್ಯದ ಎಲ್ಲ ಸಂಘಟನೆಗಳಿಗೆ ಕಿವಿಮಾತು ಹೇಳುತ್ತೇನೆ ದಯವಿಟ್ಟು ರಾಜ್ಯದ ಶಾಂತಿ ಹಾಳು ಮಾಡಬೇಡಿ. ಇದು ಶಾಂತಿಯುತ ರಾಜ್ಯ ಎಂದು ಹೇಳಿದರು. ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರಿಗೆ ತಿಳಿವಳಿಕೆ ಹೇಳಬೇಕು. ಸಂಘಟನೆಗಳ ನಾಯಕರು ಹೇಳಿಕೊಡುವ ಮಾತುಗಳಿಂದ ಪ್ರೇರೇಪಿತರಾಗಿ ಸಮಾಜದ ಶಾಂತಿಯನ್ನು ಹಾಳು ಮಾಡಬೇಡಿ. ಇಂಥ ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದ್ದೇ ತಪ್ಪು. ಉಡುಪಿಯಲ್ಲಿ ಆದ ಘಟನೆಯನ್ನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದರು.
ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಧಿವೇಶನದಲ್ಲಿ ಚರ್ಚೆ ಮಾಡಲು ಹಲವು ವಿಚಾರಗಳಿವೆ. ಇತ್ತೀಚೆಗೆ ಸದನ ನಡೆಯುತ್ತಿರುವ ರೀತಿ ನನಗೆ ಇಷ್ಟವಾಗುತ್ತಿಲ್ಲ. ಹೀಗಾಗಿಯೇ ನಾನು ಕಲಾಪದಲ್ಲಿ ಭಾಗಿಯಾಗುತ್ತಿಲ್ಲ. ಈ ಬಾರಿಯ ಜಂಟಿ ಅಧಿವೇಶನದಲ್ಲಿ ದಾಖಲೆ ಸಮೇತ ಮಾತನಾಡಲು ಸಿದ್ಧತೆ ಮಾಡಿಕೊಂಡಿದ್ದೇನೆ. ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ನಡೆದ ಲೂಟಿ ಬಗ್ಗೆ ಉದಾಹರಣೆ ಸಮೇತ ವಿವರಿಸುತ್ತೇನೆ ಎಂದರು. ಗೋವಾದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ರಾಹುಲ್ ಗಾಂಧಿಯವರೇ ಪ್ರಕಟಿಸಿದ್ದಾರೆ. ಕರ್ನಾಟಕದಲ್ಲಿ ಮಹದಾಯಿ ನೀರನ್ನು ನಮ್ಮ ಹಕ್ಕು ಎನ್ನುವ ಅವರು, ಗೋವಾದಲ್ಲಿ ಮತ್ತೆ ಮಹದಾಯಿ ಬಗ್ಗೆ ಮಾತಾಡುತ್ತಾರೆ. ದ್ವಂದ್ವ ನೀತಿಯನ್ನು ಕಾಂಗ್ರೆಸ್ ತಾಳಿದೆ ಎಂದು ಎಚ್ಚರಿಸಿದರು.
ಇಲ್ಲಿ ಪಾದಯಾತ್ರೆ ಮಾಡ್ತಾರೆ, ಅಲ್ಲಿ ನೀರು ಕೊಡಲ್ಲ ಅಂತ ಪ್ರಣಾಳಿಕೆ ಬಿಡುಗಡೆ ಮಾಡ್ತಾರೆ. ಇಲ್ಲಿ ಮೇಕೆದಾಟು, ಮಹಾದಾಯಿ ಎನ್ನಲು ಕಾಂಗ್ರೆಸ್ನವರಿಗೆ ಏನು ಹಕ್ಕಿದೆ. ಕಾಂಗ್ರೆಸ್ ಪಕ್ಷವು ಒಂದೊಂದು ರಾಜ್ಯಗಳಲ್ಲಿ ಒಂದೊಂದು ನೀತಿ ಅನುಸರಿಸುತ್ತಿದೆ ಎಂದರು. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ ಕುರಿತು ಪ್ರಸ್ತಾಪಿಸಿದ ಅವರು, ಇದು ಕೊವಿಡ್ನಿಂದ ಕೊವಿಡ್ಗಾಗಿ ಮಾಡಿದ ಭಾಷಣ. ಸರ್ಕಾರದ ಸಾಧನೆ, ಸರ್ಕಾರದ ಮುನ್ನೋಟದ ಬಗ್ಗೆ ಭಾಷಣದಲ್ಲಿ ಏನೂ ಪ್ರಸ್ತಾಪವೇ ಇಲ್ಲ. ರಾಜ್ಯದ ಅಭಿವೃದ್ಧಿಗೆ ಪೂರಕವಾದ ವಿಷಯಗಳನ್ನಾಗಲಿ, ಬಜೆಟ್ ಕುರಿತಾಗಲಿ ಪ್ರಸ್ತಾಪಿಸಿಲ್ಲ. ಬಜೆಟ್ ಬಗ್ಗೆ ಆಶಾಭಾವನೆ ಇಟ್ಟುಕೊಬೇಡಿ ಎನ್ನುವಂತಿದೆ. ಇದು ಕೊವಿಡ್ ಕಿರುಹೊತ್ತಿಗೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಜೆಡಿಎಸ್ಗೆ ಹಣಕಾಸಿನ ಸಮಸ್ಯೆ: ದೇವೇಗೌಡ
ಜೆಡಿಎಸ್ ಪಕ್ಷದಲ್ಲಿ ಹಣಕಾಸಿನ ಸಮಸ್ಯೆಯಿದೆ. ಜೆಡಿಎಸ್ ಉಳಿಯುವುದು ಕಷ್ಟವೆಂದು ಹಲವರು ಮಾತನಾಡುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಆರ್ಥಿಕವಾಗಿ ಬಲಾಢ್ಯವಾಗಿವೆ. ಆದರೆ ಜೆಡಿಎಸ್ನಲ್ಲಿ ಹಣಕಾಸು ಪರಿಸ್ಥಿತಿ ಕಷ್ಟ ಎಮದುಕೊಂಡಿರುವ ಶಾಸಕರಿದ್ದಾರೆ. ಅಂಥವರ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. 2023ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಚುನಾವಣಾ ಆಯೋಗವು ಚುನಾವಣೆ ಘೋಷಣೆ ಹೊರಡಿಸಬಹುದು. ಎಚ್.ಡಿ.ಕುಮಾರಸ್ವಾಮಿ ಒಬ್ಬರೇ 123 ಸ್ಥಾನ ತರಲು ಸಾಧ್ಯವಿಲ್ಲ. ಎಚ್ಡಿಕೆ ಒಬ್ಬರೇ ಒದ್ದಾಡುತ್ತಿದ್ದಾರೆ, ಎಲ್ಲರೂ ಒಗ್ಗೂಡಬೇಕಿದೆ. ಒಗ್ಗಟ್ಟಾಗಿ ಕೆಲಸ ಮಾಡಬೇಕು. ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಶ್ರಮಿಸಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಚುನಾವಣೆಗೆ ಕೇವಲ 13 ತಿಂಗಳು ಬಾಕಿಯಿದೆ. 2023ರ ಮೇ ಎರಡನೇ ವಾರದಲ್ಲಿ ಚುನಾವಣೆ ಮುಗಿಯಬಹುದು. ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಒಮ್ಮೆ, ಕಾಂಗ್ರೆಸ್ ಜೊತೆ ಮತ್ತೊಮ್ಮೆ ಸೇರಿ ಸರ್ಕಾರ ಮಾಡಿದ್ದರು. ಎರಡೂ ಅವಧಿಯಲ್ಲಿ ಕುಮಾರಸ್ವಾಮಿ ಸರ್ಕಾರ ನಡೆಸಿದ ರೀತಿಯನ್ನು ಜನರು ಗುರುತಿಸಿದ್ದಾರೆ. ಸಾಲಮನ್ನಾ, ಮೀಟರ್ ಬಡ್ಡಿ ನಿರ್ಬಂಧ ಸೇರಿದಂತೆ ಹಲವು ಕೆಲಸಗಳನ್ನು ಎಚ್ಡಿಕೆ ಮಾಡಿದ್ದಾರೆ ಎಂದು ದೇವೇಗೌಡ ನೆನಪಿಸಿಕೊಂಡರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಲಾ ಎರಡು ದಿನ ಮುಖಂಡರ ಸಭೆ ನಡೆಸುತ್ತೇವೆ. ನಾನು ಸಂಸತ್ ಕಲಾಪಕ್ಕೆ ಗೈರಾಗುವುದಿಲ್ಲ, ಬಜೆಟ್ ಮೇಲೆ ಮಾತನಾಡಿದ್ದೇನೆ. ಮಾರ್ಚ್ 14ರವರೆಗೆ ಸಂಸತ್ ಕಲಾಪ ಮುಂದೂಡಲಾಗಿದೆ. ತಿಂಗಳಲ್ಲಿ 2 ದಿನ ಜಿಲ್ಲೆಗಳಿಗೆ ಭೇಟಿ ನೀಡಿ ಪಕ್ಷ ಸಂಘಟಿಸುವೆ. ಹಲವು ಜಿಲ್ಲೆಗಳಲ್ಲಿ ನಮ್ಮ ಸಂಘಟನೆ ಪ್ರಬಲವಾಗಿದೆ. ಆದರೆ ಕೆಲವೆಡೆ ಹಿಂದೆ ಬಿದ್ದಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅಂದ್ರೆ ಸಂಸದರಿಗೆ ಹೆದರಿಕೆ: ಆಕ್ಷೇಪಾರ್ಹ ಪದ ಬಳಸಿ ಟೀಕಿಸಿದ ಜೆಡಿಎಸ್ ಶಾಸಕ