ಬೆಂಗಳೂರು: ಕೊರೊನಾ 3ನೇ ಅಲೆಗೆ ಕಡಿವಾಣ ಹಾಕಲೆಂದು ಸರ್ಕಾರ ಘೋಷಿಸಿರುವ ರಾತ್ರಿಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂಗಳಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ವರ್ಗಗಳಿಗೆ ನೆರವಾಗಲು ಶೀಘ್ರ ಪ್ಯಾಕೇಜ್ ಘೋಷಿಸಬೇಕು ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ರೈತರಿಗೆ, ಬೀದಿಬದಿ ವ್ಯಾಪಾರಸ್ಥರಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಹಸಿವಿನಿಂದ ಯಾರೂ ಮೃತಪಟ್ಟಿಲ್ಲವೆಂದು ನ್ಯಾಯಾಲಯಕ್ಕೆ ಸರ್ಕಾರ ಮಾಹಿತಿ ನೀಡಿದೆ. ಆದರೆ ರಾಜ್ಯದಲ್ಲಿ ಎರಡು ಹೊತ್ತಿನ ಊಟ ಸಿಗದೆ ಸಾಯುವವರು ಸಹ ಇದ್ದಾರೆ. ಇಂಥ ಸಂದರ್ಭದಲ್ಲಿಯೇ ಜನರನ್ನು ದಾರಿ ತಪ್ಪಿಸುವ ಕೆಲಸವೂ ಆಗುತ್ತಿದೆ. ಕರ್ಫ್ಯೂ ಜಾರಿ ಮಾಡಿರುವುದರಿಂದ ಸಣ್ಣಪುಟ್ಟ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ತಜ್ಞರ ವರದಿ, ಪರ ವಿರೋಧ ಚರ್ಚೆಗಳನ್ನು ಗಮನಿಸಿ, ಸರ್ಕಾರ ತೀರ್ಮಾನ ಮಾಡಬೇಕು ಎಂದರು.
ವಾರಾಂತ್ಯ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ನಿರ್ಧಾರವನ್ನು ಬಿಜೆಪಿಯ ಪ್ರಮುಖರೇ ವಿರೋಧಿಸುತ್ತಿದ್ದಾರೆ. ನಿನ್ನೆ (ಜ.18) 41 ಸಾವಿರ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇಂದೂ ಸಹ ಹೆಚ್ಚುಕಡಿಮೆ ಇಷ್ಟೇ ಪ್ರಕರಣಗಳು ವರದಿಯಾಗಬಹುದು. ರಾಜ್ಯ ಸರ್ಕಾರವು ದೊಡ್ಡಮಟ್ಟದ ಪ್ಯಾಕೇಜ್ ಘೋಷಿಸಬೇಕೆಂದು ನಾನು ಹೇಳುತ್ತಿಲ್ಲ. ಸಣ್ಣರೈತರಿಗೆ ಮಾರಾಟ ವ್ಯವಸ್ಥೆ, ಬೀದಿ ಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಲೆಗಳನ್ನು ಮುಚ್ಚುವುದು ಒಳ್ಳೆಯದು
ಕರ್ನಾಟಕದಲ್ಲಿ ಕೊರೊನಾ ಪರಿಸ್ಥಿತಿ ಗಮನಿಸಿದರೆ ಶಾಲೆಗಳನ್ನು 15 ದಿನ ಮುಚ್ಚುವುದು ಒಳ್ಳೆಯದು. ಫೆಬ್ರವರಿ ಮೊದಲ ವಾರದೊಳಗೆ ಎಲ್ಲ ಕಾಲೇಜುಗಳನ್ನು ಮುಚ್ಚುವುದು ಸೂಕ್ತ ಎಂದರು. ನೈಟ್ ಕರ್ಫ್ಯೂ ಬಗ್ಗೆ ಅಸಮಾಧಾನ ವ್ಯಕ್ತಿಪಡಿಸಿದರು. ಇದರಿಂದ ರಾಜ್ಯದ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ನೈಟ್ ಕರ್ಫ್ಯೂ ಮುಂದುವರಿಸುವುದಾದರೆ ಜನರಿಗೆ ಸಹಾಯ ಮಾಡಬೇಕು. ಕೂಲಿಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ಕೊರೊನಾ 3ನೇ ಅಲೆ ಆರಂಭವಾಗಿದೆ ಎಂದು ಹೇಳಿದ ಅವರು, ಇಂದು 22 ಸಾವಿರ ಕೇಸ್ ಬರಲಿದೆ ಎನ್ನಲಾಗುತ್ತಿದೆ. ಕರ್ಫ್ಯೂ ವಿಚಾರವಾಗಿ ಬಿಜೆಪಿ ಪಕ್ಷದ ನಾಯಕರಲ್ಲೇ ಗೊಂದಲಗಳಿವೆ. ಕೆಲವರು ನೈಟ್ ಕರ್ಫ್ಯೂ ಜಾರಿಗೆ ತಂದಿರೋದು ಸರಿಯಿಲ್ಲ ಎನ್ನುತ್ತಿದ್ದಾರೆ. ಕೆಲ ವ್ಯಾಪಾರಿ ಸಂಘಟನೆಗಳಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇನ್ನೊಂದೆರಡು ಬಿರುಸಿನ ಚಟುವಟಿಕೆ ನಡೆಯಲಿದೆ. ಬಾದಾಮಿ ಜಾತ್ರೆಯಲ್ಲಿ ನಲವತ್ತರಿಂದ ಐವತ್ತು ಸಾವಿರ ಭಕ್ತರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯಿದೆ. ಸರ್ಕಾರದ ನೀತಿ ನಿಯಮಗಳಿಂದ ಇದನ್ನು ಕೊರೊನಾ ಪರಿಸ್ಥಿತಿ ಬದಲಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅವರು ಮನವಿ ಮಾಡಿದರು.
ಇನ್ನೊಂದು ವರ್ಷದಲ್ಲಿ ಚುನಾವಣಾ ಸಮಯ ಬರಲಿದೆ. ಆಗ ನಿಯಮಗಳನ್ನು ಉಲ್ಲಂಘಿಸಿದರೆ ಜನರೇ ಪ್ರಶ್ನೆ ಮಾಡುತ್ತಾರೆ. ಈಗಾಗಲೇ ಇಂಥ ಘಟನೆಗಳ ಬಗ್ಗೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವರ ದಯೆಯಿಂದ ಎರಡನೇ ಅಲೆಯಂತೆ ದೊಡ್ಡಮಟ್ಟದ ಗಂಭೀರ ಸಮಸ್ಯೆ ಎದುರಾಗಿಲ್ಲ ಎಂದರು.
ಇದನ್ನೂ ಓದಿ: ನಾಡು, ನುಡಿ, ಜನ, ಜನರ ವಿಚಾರವೇ ಜೆಡಿಎಸ್ನ ಆದ್ಯತೆ: ಮಾಜಿ ಸಚಿವ ಹೆಚ್ಡಿ ರೇವಣ್ಣ