ಬೆಂಗಳೂರು: ಮಳೆ ಆಧರಿತ ಜಮೀನು ನಂಬಿಕೊಂಡು ಬದುಕುತ್ತಿರುವ ರೈತರ ಸಂಖ್ಯೆ ಲಕ್ಷ ದಾಟಿದೆ. ಸದನದಲ್ಲಿ ಗಮನ ಸೆಳೆದರೆ ರೈತರಿಗೆ ಅನುಕೂಲ ಆಗಬಹುದು ಎನ್ನುವ ಕಾರಣಕ್ಕೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ (Shivalinge Gowda) ರೈತರ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ ರೈತರ ಸಂಕಷ್ಟದ ತೀವ್ರತೆಯು ಸರ್ಕಾರಕ್ಕೆ ಅರಿವಾದಂತೆ ಇಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಮೇಶ್ ಕತ್ತಿ ಅವರು ಕೊಟ್ಟಿರುವ ತೀರಾ ಉಡಾಫೆಯಾಗಿತ್ತು. ನೋಡ್ತೀವಿ, ಮಾಡ್ತೀವಿ ಎನ್ನುವ ಉತ್ತರದಿಂದ ಏನು ಪ್ರಯೋಜನ ಎಂದು ವೈ.ಎಸ್.ವಿ.ದತ್ತ (YSV Datta) ಅವರು ಪ್ರಶ್ನಿಸಿದರು. ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆ ಸುರಿದ ಕಾರಣ ರಾಗಿ ಇಳುವರಿ ಚೆನ್ನಾಗಿದೆ. ಕಳೆದ ಎರಡು ವರ್ಷಗಳಿಂದ ಸರ್ಕಾರವು ರಾಗಿಗೆ ಬೆಂಬಲ ಘೋಷಿಸಿದೆ. ಕ್ವಿಂಟಲ್ ರಾಗಿಯು ₹ 3800ಕ್ಕೆ ಮಾರಾಟವಾಗುತ್ತಿತ್ತು. ಈವರೆಗೆ 2.21 ಲಕ್ಷ ರೈತರು ರಾಗಿಯನ್ನು ಮಾರಾಟ ಮಾಡಿದ್ದಾರೆ. ಒಟ್ಟು 5,25,846 ಕ್ವಿಂಟಲ್ ರಾಗಿ ಖರೀದಿಸಲಾಗಿತ್ತು ಎಂದು ಹೇಳಿದರು.
ನಮ್ಮ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಬೆಂಬಲ ಬೆಲೆಯನ್ನು ಒಪ್ಪಿಕೊಂಡು, ಹೊಸ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಈ ಅವೈಜ್ಞಾನಿಕ ಆದೇಶವನ್ನು ಹಿಂದಕ್ಕೆ ಪಡೆಯಬೇಕು. 20 ಲಕ್ಷ ಕ್ವಿಂಟಲ್ ಎನ್ನುವ ಲೆಕ್ಕವನ್ನು ತೆಗೆದುಹಾಕಬೇಕು ಎಂದು ದತ್ತ ಆಗ್ರಹಿಸಿದರು. ಸರ್ಕಾರದ ಈ ಅವೈಜ್ಞಾನಿಕ ಕ್ರಮದ ಕಾರಣದಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿ ರಾಗಿಯನ್ನು ಒಂದು ಸಾವಿರ ರೂಪಾಯಿಯೂ ಯಾರೂ ಕೇಳುತ್ತಿಲ್ಲ. ರಾಗಿಯನ್ನು ತಾತ್ಸಾರ ಮನೋಭಾವದಿಂದ ಕಾಣುವುದು ನಿಲ್ಲಿಸಿ, ವಾಣಿಜ್ಯ ಬೆಲೆಯ ಸ್ಥಾನಮಾನ ನೀಡಬೇಕು. ರಾಗಿ ಬೆಳೆದು, ಬೆಳೆ ಮಾರಿ ಜೀವನ ಮಾಡುವವರ ಸಂಖ್ಯೆಯೂ ದೊಡ್ಡಮಟ್ಟದಲ್ಲಿದೆ. ಅಂಥವರಿಗೆ ಇದೀಗ ಸರ್ಕಾರದ ನಿಲುವಿನಿಂದ ತೊಂದರೆಯಾಗುತ್ತಿದೆ ಎಂದರು.
ಕೇಂದ್ರ ಸರ್ಕಾರವು ಹಣ ಕೊಟ್ಟರೆ ಮಾತ್ರ ನಾವು ಬಿಡುಗಡೆ ಮಾಡ್ತೀವಿ ಎಂದು ನಮ್ಮ ಆಹಾರ ಸಚಿವರು ಹೇಳುತ್ತಿದ್ದಾರೆ. ಇದಕ್ಕಾಗಿ ಮಾರ್ಚ್ 31ನೇ ತಾರೀಖಿನವರೆಗೂ ಕಾಯಬೇಕು ಎಂದು ಎನ್ನುತ್ತಾರೆ. ನಮ್ಮ ರೈತರು ಅಷ್ಟು ದಿನ ಏಕೆ ಕಾಯಬೇಕು? ಕೇಂದ್ರ ಸರ್ಕಾರ ಕೊಡುತ್ತೋ ಇಲ್ಲವೋ, ರಾಜ್ಯ ಸರ್ಕಾರ 3 ಲಕ್ಷ ಟನ್ ರಾಗಿ ಖರೀದಿಗೆ ಕ್ರಮ ವಹಿಸಬೇಕು.. ಇಡೀ ರಾಜ್ಯದಿಂದ ನಮಗೆ ಕರೆ ಬರುತ್ತಿವೆ. ಹೀಗಾಗಿ ಖುದ್ದು ದೇವೇಗೌಡರು ಈ ವಿಚಾರದಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದರು.
ರಾಗಿ ಖರೀದಿ ಸ್ಥಗಿತ: ಸದನದಲ್ಲಿ ಗದ್ದಲ
ರಾಗಿ ಖರೀದಿ ಸ್ಥಗಿತಗೊಳಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ತೀವ್ರವಾಗಿ ಖಂಡಿಸಿದರು. ಈ ವಿಷಯವನ್ನು ಗಮನ ಸೆಳೆಯುವ ಸೂಚನೆ ಸಂದರ್ಭದಲ್ಲಿ ಅರಸೀಕೆರೆಯ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಪ್ರಸ್ತಾಪಿಸಿ, ರೈತರು ಅನುಭವಿಸುತ್ತಿರುವ ತೊಂದರೆಯನ್ನು ಎಳೆಎಳೆಯಾಗಿ ವಿವರಿಸಿದರು.
ಕಳೆದ ಬಾರಿ ಕ್ವಿಂಟಲ್ಗೆ ₹ 3,371 ಲೆಕ್ಕದಲ್ಲಿ ರಾಗಿ ಖರೀದಿಸಿದ್ದಿರಿ. ಆದರೆ ಈ ಬಾರಿ ಈ ಬಾರಿ ಸಣ್ಣ ರೈತರು, ದೊಡ್ಡ ರೈತರು ಎಂದು ವಿಭಜನೆ ಮಾಡಿ ಖರೀದಿಗೆ ನಿರ್ಬಂಧ ವಿಧಿಸಿದ್ದೀರಿ. ಹಾಗಾದರೆ ದೊಡ್ಡ ರೈತರು ಬೆಳೆದ ರಾಗಿಯನ್ನು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ನಿರ್ಬಂಧದ ಮಾತನ್ನು ಪುನರುಚ್ಚರಿಸುವುದು ಬೇಡ. ನೀವು ರೈತರಿಗೆ ಕೊಟ್ಟಿರುವ ಆಶ್ವಾಸನೆ ಈಡೇರಿಸುವ ಕಡೆಗೆ ಗಮನಕೊಡಿ. ರಾಗಿ ಖರೀದಿಸದಿದ್ದರೆ ರೈತರ ಸಿಟ್ಟು ನಿಮ್ಮ ಮೇಲೆ ಬೆಳೆಯುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಬಿಜೆಪಿ ವಿರುದ್ಧ ತೀವ್ರತೆ ಕಳೆದುಕೊಂಡ ಜೆಡಿಎಸ್ ಹೋರಾಟ: ವೈಎಸ್ವಿ ದತ್ತ ಅಸಮಾಧಾನ
ಇದನ್ನೂ ಓದಿ: ಹಾಸನ ಜಿಲ್ಲೆ ರೈತರಿಗೆ ಅನ್ಯಾಯ: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಜೆಡಿಎಸ್ ನಾಯಕ ರೇವಣ್ಣ ಆಗ್ರಹ