ಬೆಂಗಳೂರು: ಪರೀಕ್ಷಾ ಫಲಿತಾಂಶ ಪ್ರಕಟಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission – KPSC) ವಿರುದ್ಧ ಪ್ರತಿಭಟನೆ ನಡೆಸಲು ಉದ್ಯೋಗಾಕಾಂಕ್ಷಿಗಳು ಸಜ್ಜಾಗಿದ್ದಾರೆ. ಇಂದು (ಜುಲೈ 25) ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹಲವು ವೃಂದಗಳ 3,000 ಹುದ್ದೆಗಳಿಗೆ ಕೆಪಿಎಸ್‌ಸಿ ಪರೀಕ್ಷೆ ನಡೆಸಿತ್ತು. ಆದರೆ ಈವರೆಗೆ ಫಲಿತಾಂಶ ಪ್ರಕಟವಾಗಿಲ್ಲ ಎಂದು ಅಭ್ಯರ್ಥಿಗಳು ದೂರಿದ್ದಾರೆ.
ಗೆಜೆಟೆಡ್ ಪ್ರೊಬೇಶನರಿ, ಎಸ್‌ಡಿಎ, ಪಿಡಬ್ಲ್ಯೂಡಿ ಜೆಇ, ಎಇ, ಗ್ರೂಪ್ ಸಿ, ಎಸಿಎಫ್ ಸೇರಿದಂತೆ ಹಲವು ಹುದ್ದೆಗಳ ನಿರೀಕ್ಷೆಯಲ್ಲಿದ್ದವರು ಆಯೋಗದ ಧೋರಣೆಯಿಂದ ನಿರಾಸೆ ಅನುಭವಿಸಿದ್ದಾರೆ. 2021ರ ಫೆಬ್ರವರಿಯಲ್ಲಿ ಗೆಜೆಟೆಡ್ ಪ್ರೊಬೇಶನರಿ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆದಿತ್ತು. ಪರೀಕ್ಷೆ ಆಗಿ 17 ತಿಂಗಳು ಕಳೆದರೂ ಫಲಿತಾಂಶ ಪ್ರಕಟವಾಗಿಲ್ಲ. ಎಸ್‌ಡಿಎ ನೇಮಕಾತಿಗೆ 2021 ಅಕ್ಟೋಬರ್‌ನಲ್ಲಿ, ಪಿಡಬ್ಲ್ಯೂಡಿ ಜೆಇ ಹಾಗೂ ಎಇ ನೇಮಕಾತಿಗೆ 2021 ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆದಿತ್ತು.
ನಾನಾ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆದಿದ್ದರೂ ಫಲಿತಾಂಶ ಪ್ರಕಟವಾಗಿಲ್ಲ. ಕೆಲ ಹುದ್ದೆಗಳಿಗೆ ಫಲಿತಾಂಶ ಪ್ರಕಟಿಸಲಿದೆಯಾದರೂ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿಲ್ಲ. ಉದ್ಯೋಗಾಕಾಂಕ್ಷಿಗಳ ಪರಿಸ್ಥಿತಿಗೆ ಸ್ಪಂದಿಸಿ ಕೆಲ ದಿನಗಳ ಹಿಂದಷ್ಟೇ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಏಕಾಂಗಿಯಾಗಿ ಪ್ರತಿಭಟಿಸಿದ್ದರು. ಇಂದು ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗವು (Union Public Service Commission – UPSC)ಇಡೀ ನೇಮಕಾತಿ ಪ್ರಕ್ರಿಯೆಯನ್ನು ವೇಳಾಪಟ್ಟಿಗೆ ಅನುಗುಣವಾಗಿ ಒಂದು ವರ್ಷದಲ್ಲಿ ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸುತ್ತದೆ. ಆದರೆ, ಕೆಪಿಎಸ್‌ಸಿ ಏಕೆ ಸಕಾಲಕ್ಕೆ ಫಲಿತಾಂಶ ಪ್ರಕಟಿಸುತ್ತಿಲ್ಲ ಎಂದು ಎಂದು ಕೆಎಎಸ್ ಸಂಘದ ಅಧ್ಯಕ್ಷ ರವಿ ಎಂ. ತಿರ್ಲಾಪುರ ಪ್ರಶ್ನಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಶಾಸಕ ಸುರೇಶ್ ಕುಮಾರ್ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ‘106 ಹುದ್ದೆಗಳಿಗೆ ನಡೆದ ಮುಖ್ಯ ಪರೀಕ್ಷೆ ಫಲಿತಾಂಶವನ್ನು ಜೂನ್ ಒಳಗೆ ಪ್ರಕಟಿಸಲಾಗುವುದು. ಇತರ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಗಳ ಫಲಿತಾಂಶ ಸೇರಿದಂತೆ ಮಾಹಿತಿಗಳನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದು ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಆಶ್ವಾಸನೆ ನೀಡಿದ್ದರು. ಆದರೆ ಈ ಆಶ್ವಾಸನೆ ಈಡೇರಿಲ್ಲ ಎಂದು ಉದ್ಯೋಗಾಕಾಂಕ್ಷಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
Published On - 9:54 am, Mon, 25 July 22