
ಬೆಂಗಳೂರು, (ಜೂನ್ 16): ಕಾಂಚಿ ಕಾಮಕೋಟಿ ಪೀಠದ 70ನೇ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಕಾಂಚಿಯ ಶಂಕರಾಚಾರ್ಯರು, ಆಧ್ಯಾತ್ಮಿಕ ಜ್ಞಾನ, ಧ್ಯಾನ ಮತ್ತು ಶಾಂತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ಶ್ರೀ ಶ್ರೀ ರವಿಶಂಕರ ಗುರುದೇವರ ನಿರಂತರವಾದ ಪ್ರಯತ್ನವನ್ನು ಮೆಚ್ಚಿ ಆಶೀರ್ವದಿಸಿದರು. ಗುರುದೇವರು ನಡೆಸುತ್ತಿರುವ ಸೇವಾ ಕಾರ್ಯಗಳನ್ನು ಮತ್ತು ಭಾರತದ ಪ್ರಾಚೀನ ಜ್ಞಾನ ಪರಂಪರೆಯನ್ನು ಉಳಿಸುವಲ್ಲಿ ಅವರ ಬದ್ಧತೆ ಹಾಗೂ ಆಧ್ಯಾತ್ಮಿಕ ಅಭ್ಯಾಸಗಳನ್ನು ಎಲ್ಲರೂ ಅನುಸರಿಸುವಂತೆ ಸರಳ ಮತ್ತು ಪ್ರಸ್ತುತವಾಗಿಸಿದ ಪರಿಯನ್ನು ಅವರು ಶ್ಲಾಘಿಸಿದರು.
ಕಾಂಚಿಯ ಸ್ವಾಮಿಗಳು, ಆಶ್ರಮದ ಗುರುಕುಲ, ಗೋಶಾಲೆ ಮತ್ತು ವಿವಿಧ ಅಧ್ಯಾತ್ಮಿಕ ಕಲಿಕಾ ಕೇಂದ್ರಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು. ವಿಶ್ವದಾದ್ಯಂತದಿಂದ ಆಗಮಿಸಿದ್ದ ಸಾಧಕರಿಗೆ ತಮ್ಮ ಆಶೀರ್ವಚನದ ಮೂಲಕ ಮಾರ್ಗದರ್ಶನ ಮಾಡಿದರು.
ಗುರುದೇವರೊಂದಿಗೆ ತಮ್ಮ ಸಂಬಂಧವನ್ನು ನೆನೆದು ಕಾಂಚಿ ಶಂಕರಾಚಾರ್ಯರು ಹೀಗೆ ಹೇಳಿದರು. “ಗುರುದೇವರು, ಹಲವು ವರ್ಷಗಳಿಂದ ನಮ್ಮ ಕಾಂಚಿ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ನಾವು ಇಲ್ಲಿಗೆ ಬರುವುದು ನಮಗೆ ಸಹಜ, ಸ್ವಾಭಾವಿಕ ಮತ್ತು ಇದು ಪ್ರೀತಿಯ ಸಂಗಮವಾಗಿದೆ” ಎಂದರು.
ಗುರುದೇವರ ಕೈಂಕರ್ಯಗಳ ಕುರಿತು ಮಾತನಾಡುತ್ತಾ , “ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಆರ್ಟ್ ಆಫ್ ಲಿವಿಂಗ್ ನಡೆಸುತ್ತಿರುವ ಸೇವೆಗಳು ಸಮಾಜದಲ್ಲಿನ ಅಶಾಂತಿಯ ಮೂಲ ಕಾರಣಗಳನ್ನು ನಿವಾರಿಸಿವೆ. ಶಸ್ತ್ರ ಹಿಡಿದಿದ್ದವರು ಪ್ರೀತಿ ಮತ್ತು ಭಕ್ತಿಯ ಮೂಲಕ ಶಾಂತಿಯತ್ತ ಸೆಳೆಯಲ್ಪಟ್ಟಿದ್ದಾರೆ. ಆರ್ಟ್ ಆಫ್ ಲಿವಿಂಗ್ ನಿಂದ ಜರುಗುತ್ತಿರುವ ವೈದೀಕ ಜ್ಞಾನ, ಸಾತ್ವಿಕ ಅಭ್ಯಾಸಗಳು ಹಾಗೂ ಸನಾತನ ಧರ್ಮದ ಮೌಲ್ಯಗಳನ್ನು ರಕ್ಷಿಸಿ ಉಳಿಸುವುದು ನಿಜವಾದ ಮಾನವ ಸೇವೆಯಾಗಿದೆ. ಗುರುದೇವರು ದೀರ್ಘಾಯುಷಿಗಳಾಗಿ, ತಮ್ಮ ಈ ದೈವೀ ಕಾರ್ಯವನ್ನು ಮುಂದುವರಿಸಲಿ.”ಎಂದು ತಿಳಿಸಿದರು.
ಕಾಂಚಿ ಶಂಕರಾಚಾರ್ಯರನ್ನು, ಗುರುದೇವ ಶ್ರೀ ಶ್ರೀ ರವಿಶಂಕರರು ಸಾಂಪ್ರದಾಯಿಕ ಗೌರವದೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು ಮತ್ತು ಸ್ವಾಮಿಗಳ ಈ ಭೇಟಿ ಎಲ್ಲಾ ಆಧ್ಯಾತ್ಮಿಕ ಸಾಧಕರಿಗೆ ಬಹು ದೊಡ್ಡ ಆಶೀರ್ವಾದ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ವೇದ ಮಂತ್ರಗಳ ಪಠಣ, ಭಕ್ತಿ-ಗೌರವದಿಂದ ಪರಸ್ಪರ ಸನ್ಮಾನ ಹಾಗೂ ಭಾರತದ ಆಧ್ಯಾತ್ಮಿಕ ಪರಂಪರೆಯ ಮೌಲ್ಯಗಳನ್ನು ಶಾಶ್ವತವಾಗಿ ಸಂರಕ್ಷಿಸಿ ಬೆಳೆಸುವ ದೃಢ ಸಂಕಲ್ಪದೊಂದಿಗೆ ಸಮಾರಂಭವು ಸಂಪನ್ನವಾಯಿತು.