ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾಗಿ ದೇಶ ವಿದೇಶಗಳಲ್ಲಿ ಧೂಳೆಬ್ಬಿಸಿದ ಕಾಂತಾರ ಸಿನಿಮಾ ಮಾದರಿಯಲ್ಲೇ ರಾಜಧಾನಿ ಬೆಂಗಳೂರಿನಲ್ಲೊಂದು ಘಟನೆ ನಡೆದಿದೆ. ಈ ಘಟನೆ ಬಹುತೇಕ ಕಾಂತಾರ ಸಿನಿಮಾವನ್ನೇ ನೆನಪಿಸುವಂತಿದೆ. ಅಂದು ಅಜ್ಜನೊಬ್ಬ ಊರಿಗಾಗಿ ಜಾಗ ಬರೆದುಕೊಟ್ಟಿದ್ದು, ಇಂದು ಈ ಜಾಗ ನಮ್ದು ಎಂದು ಮೊಮ್ಮಗ ಗ್ರಾಮಸ್ಥರೊಂದಿಗೆ ಯುದ್ಧಕ್ಕೆ ಇಳಿದಿದ್ದಾನೆ. 71 ವರ್ಷದ ಹಿಂದೆಯೇ ಈ ಸ್ವತ್ತು ಸುಂಕೇನಹಳ್ಳಿ ಗ್ರಾಮಸ್ಥರಿಗೆ ಸೇರಿದ್ದು ಎಂದು ವಿಲ್ ಬರೆಯಲಾಗಿದ್ದು. ಈ ಪ್ರಕರಣವನ್ನು ಈಗ ಕುತ್ತಾರಿನ ಕೊರಗಜ್ಜ ದೈವದ ಮುಂದಿಟಲಾಗಿದೆ.
ಇನ್ನು ಸುಂಕೇನಹಳ್ಳಿ ಗ್ರಾಮಸ್ಥರು ಜಾಗ ಉಳಿಸಿಕೊಡುವಂತೆ ಧರ್ಮಸ್ಥಳ ಮಂಜುನಾಥ ಸ್ವಾಮಿ, ಕೊರಗಜ್ಜನಿಗೆ ಹರಕೆ ಕಟ್ಟಿಕೊಂಡಿದ್ದಾರೆ. ಕಾಂತರ ಸಿನಿಮಾ ರೀತಿಯಲ್ಲಿ ಮೊಮ್ಮಗನಿಗೆ ಶಿಕ್ಷೆಯಾಗಲಿದೆ ಎಂದು ಗ್ರಾಮಸ್ಥರು ಹೇಳಿಕೆ ನೀಡಿದ್ದಾರೆ. ಇನ್ನು ಈ ಪ್ರಕರಣ ಇನ್ನೆ ಮೊನ್ನೆಯದಲ್ಲ. 2007ರಲ್ಲೇ ಮೊಮ್ಮಗ ಕೋರ್ಟ್ ಮೆಟ್ಟಿಲು ಹತ್ತಿದ್ದ. ಆದ್ರೆ ಆಗ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ತೀರ್ಪು ನೀಡಿತ್ತು. ಇನ್ನೊಂದೆಡೆ ಶಾಸಕ ಉದಯ್ ಗರುಡಾಚಾರ್ ಬಲಗೈ ಬಂಟನಿಂದ ದೇವಾಲಯ ಜಾಗದ ಮೇಲೆ ಕಣ್ಣಿರಿವ ಆರೋಪ ಕೇಳಿ ಬಂದಿದ್ದು ಸ್ಥಳೀಯ ಶಾಸಕರ ಕಮ್ಮಿಕ್ಕಿನಿಂದಲೇ ಇದೆಲ್ಲ ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ಮಾಡಿದ್ದಾರೆ. ಬರೋಬ್ಬರಿ ಐವತ್ತು ಕೋಟಿ ಬೆಲೆ ಬಾಳಲಿರುವ ಕಾರ್ನರ್ ಸೈಟ್ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸುಂಕೇನಹಳ್ಳಿ ವಾರ್ಡ್ ಗೆ ಸೇರಿದೆ.
ಈಗಾಗಲೇ ಈ ಜಾಗದಲ್ಲಿ ಬೃಹತ್ ಅಶ್ವಥ್ ಕಟ್ಟೆ, ನಾಗರಕಲ್ಲು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗ್ತಿದೆ. ಸುಮಾರು ಎಪ್ಪತ್ತು ವರ್ಷಗಳಿಂದ ಗ್ರಾಮಸ್ಥರು ಈ ಜಾಗದಲ್ಲಿ ಕಡಲೆಕಾಯಿ ಪರಿಷೆಯ ಪೂಜೆ, ಅಣ್ಣಮ್ಮ ಹಾಗೂ ಎಲ್ಲಮ್ಮನ ಜಾತ್ರೆ ಮಾಡ್ತಿದ್ದಾರೆ. 1951 ರಲ್ಲಿ ನರಸಿಂಹಯ್ಯ, ದೊಡ್ಡಕ್ಕ, ರಾಮಪ್ಪ ಸೇರಿದಂತೆ ಒಟ್ಟು ಐದು ಜನರು, ಒಬ್ಬರು ದೇವಾಲಯ ಮತ್ತೊಬ್ಬರು ಭಜನೆ ಮನೆ, ಅಶ್ವಥ್ ಕಟ್ಟೆ ಮತ್ತು ಒಂದು ಮನೆಯನ್ನೂ ಸುಂಕೇನಹಳ್ಳಿ ಗ್ರಾಮಸ್ಥರಿಗೆ ದಾನ ನೀಡಿದ್ರು. ಅದಕ್ಕೆ ವಿಲ್ ಕೂಡ ಮಾಡಿದ್ದಾರೆ. 1951 ರಲ್ಲಿ ಸುಂಕೇನಹಳ್ಳಿ ಗ್ರಾಮಸ್ಥರಿಂದ 425 ರುಪಾಯಿ ಚಂದ ವಸೂಲಿ ಮಾಡಿ ಆ ಹಣವನ್ನು ಬ್ಯಾಂಕ್ ನಲ್ಲಿಟ್ಟು ಅದರಿಂದ ಬರುವ ಹಣದಲ್ಲಿ ಈ ದೇವಾಲಯ ನಿರ್ವಹಣೆ ಮಾಡಬೇಕೆಂದು ವಿಲ್ ಮಾಡಿದ್ದಾರೆ. ಆದರೆ ಕಾಲ ಕಳೆದ ನಂತರ ಅಂದರೆ ಸುಮಾರು 72 ವರ್ಷಗಳ ನಂತರ ಈಗ ಅಂದು ಟ್ರಸ್ಟ್ ನಲ್ಲಿ ಖಜಾಂಚಿಯಾಗಿದ್ದ ಚಿಕ್ಕನರಸಿಂಹಯ್ಯನ ಮೊಮ್ಮಗ ನರಸಿಂಹಮೂರ್ತಿ ಬಂದು ಈ ಜಾಗ ನಮಗೆ ಸೇರಿದ್ದು ಎಂದು 2006 ರಲ್ಲಿ 39 ವರ್ಷಕ್ಕೆ ಖಾಸಗಿ ವ್ಯಕ್ತಿಗಳಿಗೆ ಲೀಸ್ ಗೆ ಹಾಕಲು ಮುಂದಾಗಿದ್ರು. ಈ ವಿಚಾರ ಕೋರ್ಟ್ ಮೆಟ್ಟಿಲು ಏರಿತ್ತು. ಕೋರ್ಟ್ ಕೂಡ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದೆ.
ಇನ್ನೂ ಇಷ್ಟು ದಿನಗಳು ಸುಮ್ಮನಿದ್ದ ಖಜಾಂಚಿಯ ಮೊಮ್ಮಗ ನರಸಿಂಹ ಮೂರ್ತಿ, ಸ್ಥಳೀಯ ಶಾಸಕ ಉದಯ್ ಗರುಡಚಾರ್ ಪ್ರಭಾವ ಬಳಸಿ ಜಾಗ ಗುಳುಂ ಮಾಡಲು ಪ್ಲಾನ್ ಮಾಡ್ತಿದ್ದಾರೆ. ಮೊಮ್ಮಗ ನರಸಿಂಹಮೂರ್ತಿಯ ಹೆಂಡತಿಯ ಅಣ್ಣ ಟಿ ರಮೇಶ್, ಚಿಕ್ಕಪೇಟೆಯ ಬಿಜೆಪಿಯ ಶಾಸಕ ಉದಯ್ ಗರುಡಾಚಾರ್ ಬಲಗೈ ಬಂಟ. ಸದ್ಯ ಖಾಸಗಿ ವ್ಯಕ್ತಿಗಳಿಗೆ ವಾಟರ್ ವಾಷ್ ಸ್ಟೇಷನ್ ನಡೆಸಲು ಅನುಮತಿ ನೀಡಿದ್ದು ಆ ವ್ಯಕ್ತಿಗಳು ಈಗಾಗಲೇ ಜಾಗದಲ್ಲಿ ಪಿಲ್ಲರ್ ಹಾಕಲು ಗುಂಡಿ ತೆಗೆದಿದ್ದಾರೆ ಅದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಿಬಿಎಂಪಿಗೆ ದೂರು ನೀಡಿ ಕೆಲಸ ನಿಲ್ಲಸಿದ್ದಾರೆ.
ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್, ಇದು ನರಸಿಂಹ ಮೂರ್ತಿ ಅವರ ತಾತನಿಗೆ ಸೇರಿದ ಜಾಗವಂತೆ ಅದನ್ನು ನಾನು ಯಾಕೆ ಕಬಳಿಸಲು ಹೋಗಲಿ ಚಿಕ್ಕಪೇಟೆ ಕ್ಷೇತ್ರದಲ್ಲಿ ಯಾರು ಮಾಡದಷ್ಟು ಅಭಿವೃದ್ಧಿಯನ್ನು ನಾನು ಮಾಡಿದ್ದೀನಿ. ಈಗ ಚುನಾವಣೆ ಬಂತು ಈ ಸಂದರ್ಭದಲ್ಲಿ ವಿರೋಧ ಪಕ್ಷದವರಿಗೆ ನನ್ನ ವಿರುದ್ಧ ಮಾತಾಡಲು ಏನು ಸಿಗ್ತಿಲ್ಲ. ಹಾಗಾಗಿ ನನ್ನ ವಿರುದ್ಧ ಈ ಆರೋಪ ಮಾಡಿದ್ದಾರೆ. ಇದು ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಅಷ್ಟೇ. ಈ ವಿಚಾರದ ಹಿನ್ನೆಲೆಯಲ್ಲಿ ಎಲ್ಲರನ್ನೂ ನಮ್ಮ ಆಫೀಸ್ ಗೆ ಕರೆಸಿದ್ದೆ ಈ ಜಾಗವನ್ನು ನರಸಿಂಹಮೂರ್ತಿ ಅವರ ತಾತಾ ಗುತ್ತಿಗೆ ನೀಡಿರೋದಂತೆ. ಅದಕ್ಕೆ ನಾನು ಕಾನೂನು ಬದ್ಧವಾಗಿ ಏನಿದ್ಯೋ ಅದನ್ನು ಮಾಡಲು ಹೇಳಿದ್ದೀನಿ. ಚುನಾವಣಾ ಸಂದರ್ಭದಲ್ಲಿ ನನ್ನ ವಿರುದ್ಧ ಏನಾದರೂ ಮಾಡಲು ಈ ರೀತಿಯಲ್ಲಿ ಆರೋಪ ಮಾಡ್ತಿದ್ದಾರೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಮತದಾರರು ಉದಯ್ ಗರುಡಾಚಾರ್ ಗೆ ಮತ ಹಾಕುವುದು ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ನನ್ನ ಹತ್ತಿರ ಇರೋ ಆಸ್ತಿಯೇ ಸಾಕು ನನಗೆ ಬೇರೆ ಜಾಗಯಾಕೆ ಕಬಳಿಸಲಿ ಎಂದರು.
ಒಟ್ನಲ್ಲಿ ಅವತ್ತು ನೆಮ್ಮದಿಗೋ, ಭಕ್ತಿಗೋ ಅಜ್ಜ ಚಿಕ್ಕನರಸಿಂಹಯ್ಯನ ಜಾಗವನ್ನು ಊರಿಗೆ ದಾನ ನೀಡಿದ್ರು. ಆದರೆ ಇವತ್ತು ಈ ಜಾಗ ಬರೋಬ್ಬರಿ ಐವತ್ತು ಕೋಟಿ ರುಪಾಯಿ ಬೆಲೆ ಬಾಳ್ತಿದ್ದು ಗೊತ್ತಾಗಿರೋ ಮೊಮ್ಮಗ ನರಸಿಂಹ ಮೂರ್ತಿ ಈ ದಾನ ಗೀನಾ ಎಲ್ಲ ನಮಗೆ ಗೊತ್ತಿಲ್ಲ. ಈ ಜಾಗ ನಮಗೆ ಸೇರಿದ್ದು ಎಂದು ಪಟ್ಟು ಹಿಡಿದು ಕೋರ್ಟ್ ಮೊರೆ ಹೋಗಿದ್ದಾನೆ. ಆದ್ರೆ ಗ್ರಾಮಸ್ಥರು ಮಾತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ, ಕೊರಗಜ್ಜನ ಮೊರೆ ಹೋಗಿದ್ದಾರೆ. ಈ ಕೇಸ್ ಯಾರ ಪರವಾಗಿ ಬರುತ್ತೋ ಕಾದು ನೋಡಬೇಕಿದೆ.
ವರದಿ: ಕಿರಣ್ ಸೂರ್ಯ, ಟಿವಿ9 ಬೆಂಗಳೂರು
Published On - 2:49 pm, Sat, 18 February 23