ಬೆಂಗಳೂರಿನಲ್ಲಿ ಹಿರಿಯ ಸಚಿವರು ಇರುವಾಗ ಬೆಂಗಳೂರು ಉಸ್ತುವಾರಿ ಇನ್ನೂ ಕೂಡಾ ಸಿಎಂ ಬೊಮ್ಮಾಯಿ ಬಳಿಯೇ ಯಾಕೆ?
ಇಂದು ಬಿಬಿಎಂಪಿ ಚುನಾವಣಾ ಸಿದ್ಧತೆ ಕುರಿತು ಮಲ್ಲೇಶ್ವರಂ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಬೆಂಗಳೂರು ಉಸ್ತುವಾರಿ ಜವಾಬ್ದಾರಿ ಸಂಬಂಧ ಚರ್ಚೆ ನಡೆದಿದೆ.
ಬೆಂಗಳೂರು: ಬೆಂಗಳೂರು ಉಸ್ತುವಾರಿ ಜವಾಬ್ದಾರಿ ಮತ್ತೆ ಮುನ್ನೆಲೆಗೆ ಬಂದಿದೆ. ಬಿಬಿಎಂಪಿ ಚುನಾವಣೆ ಹಿನ್ನೆಲೆ ಉಸ್ತುವಾರಿ ಜವಾಬ್ದಾರಿಗಾಗಿ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರಿನ ಸಚಿವರಿಗೆ ಉಸ್ತುವಾರಿ ನೀಡುವಂತೆ ಅಭಿಪ್ರಾಯ ವ್ಯಕ್ತವಾಗಿದೆ.
ಇಂದು ಬಿಬಿಎಂಪಿ ಚುನಾವಣಾ ಸಿದ್ಧತೆ ಕುರಿತು ಮಲ್ಲೇಶ್ವರಂ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಬೆಂಗಳೂರು ಉಸ್ತುವಾರಿ ಜವಾಬ್ದಾರಿ ಸಂಬಂಧ ಚರ್ಚೆ ನಡೆದಿದೆ. ಈ ಚರ್ಚೆಯಲ್ಲಿ ಬೆಂಗಳೂರಿನ ಸಚಿವರು, ಶಾಸಕರು, ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಬೆಂಗಳೂರಿನ ಸಚಿವರಿಗೆ ಉಸ್ತುವಾರಿ ನೀಡುವಂತೆ ಅಭಿಪ್ರಾಯ ವ್ಯಕ್ತವಾಗಿದೆ. ಹಿರಿಯ ಸಚಿವರು ಇರುವಾಗ ಸಿಎಂ ಬಳಿ ಏಕೆ ಉಸ್ತುವಾರಿ? ಬೆಂಗಳೂರಿನ ಹಿರಿಯ ಸಚಿವರಿಗೆ ಉಸ್ತುವಾರಿ ವಹಿಸುವುದು ಉತ್ತಮ ಎಂದು ಬೆಂಗಳೂರಿನ ಬಿಜೆಪಿ ನಾಯಕರು ಸಭೆಯಲ್ಲಿ ಅಭಿಪ್ರಾಯ ತಿಳಿಸಿದ್ದಾರೆ.
‘ಸಚಿವ ಆರ್.ಅಶೋಕ್ಗೆ ಬೆಂಗಳೂರು ಉಸ್ತುವಾರಿ ಕೊಡಿ’
ಇನ್ನು BBMP ಚುನಾವಣಾ ಸಿದ್ಧತಾ ಸಭೆಯಲ್ಲಿ ವಿ.ಸೋಮಣ್ಣ ‘ಸಚಿವ ಆರ್.ಅಶೋಕ್ಗೆ ಬೆಂಗಳೂರು ಉಸ್ತುವಾರಿ ಕೊಡಿ’ ಎಂದು ಬೇಡಿಕೆ ಇಟ್ಟಿದ್ದಾರೆ. ಯಾರಾದರೂ ಒಬ್ಬರು ನಮ್ಮಲ್ಲಿ ಜವಾಬ್ದಾರಿ ತೆಗೆದುಕೊಳ್ಳಲಿ. ಅಶೋಕ್ ಇದ್ದಾರೆ, ಅವರಿಗೇ ಜವಾಬ್ದಾರಿ ಕೊಡಿ. ಚುನಾವಣೆ ಬಂದಾಗ ನಾನು ಬೆಂಗಳೂರಿನಿಂದ ಹೊರಗೆ ಸ್ಪರ್ಧಿಸಲು ಸಿದ್ಧ. ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗ ಎಲ್ಲಿ ಬೇಕಾದರೂ ಕೊಡಿ ನಾನು ಸ್ಪರ್ಧೆಗೆ ನಾನು ಸಿದ್ಧ. ಮುಂದಿನ ಚುನಾವಣೆಯಲ್ಲಿ ಒಂದು ಮನೆಗೆ ಎರಡು ಅವಕಾಶ ಅಂತಾ ಕೊಟ್ಟರೆ ನನ್ನನ್ನೂ ಪರಿಗಣಿಸಿ ಎಂದು ಸಭೆಯಲ್ಲಿ ಸೋಮಣ್ಣ ಬಹಿರಂಗ ಪಡಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪುತ್ರನ ಸ್ಫರ್ಧೆ ಬಗ್ಗೆ ಪರೋಕ್ಷವಾಗಿ ಸಚಿವ ಸೋಮಣ್ಣ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಬೆಂಗಳೂರಲ್ಲಿ ಬಿಜೆಪಿ ಕಾರ್ಯಕಾರಿಣಿ ಯಶಸ್ವಿ ಬಗ್ಗೆ ಸಮಾಲೋಚನೆ
ಸಭೆ ಬಳಿಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ರು. ಬಿಬಿಎಂಪಿ ಚುನಾವಣೆ ಸಿದ್ಧತೆ ಬಗ್ಗೆ ಇಂದು ಚರ್ಚೆ ನಡೆಸಿದ್ದೇವೆ. ಸೆ.8ರಂದು ನಡೆಯುವ ಜನೋತ್ಸವ ಬಗ್ಗೆ ಚರ್ಚೆ ಮಾಡಿದ್ದೇವೆ. ಬೆಂಗಳೂರಲ್ಲಿ ಬಿಜೆಪಿ ಕಾರ್ಯಕಾರಿಣಿ ಯಶಸ್ವಿ ಬಗ್ಗೆ ಸಮಾಲೋಚನೆ ನಡೆದಿದೆ. ಸೆ.11ರಂದು ನಡೆಯುವ ಕಾರ್ಯಕಾರಿಣಿ ಬಗ್ಗೆಯೂ ಚರ್ಚಿಸಿದ್ದೇವೆ. ಬಿಬಿಎಂಪಿಯಲ್ಲಿ 160ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ ಎಂದರು.
Published On - 4:01 pm, Tue, 23 August 22