Karnataka Breaking Kannada News Highlights: ಕಾಂಗ್ರೆಸ್(Congress) ಬಹುಮತ ಪಡೆದು ಸರ್ಕಾರ ರಚಿಸಿದ್ದಾಯ್ತು. ಸಚಿವರ ಆಯ್ಕೆ ಕೂಡ ಮುಗಿದು ಖಾತೆ ಹಂಚಿಕೆಯಾಗಿದೆ. ನಮಗೂ ಫ್ರೀ ಕರೆಂಟ್ ಸಿಗುತ್ತಾ ಎಂದು ಮನೆ ಒಡೆಯ ಚಿಂತಿಸುತ್ತಿದ್ದಾನೆ. ನನ್ನ ಅಕೌಂಟ್‌ಗೆ 2 ಸಾವಿರ ಹಣ ಬರುತ್ತಾ ಅನ್ನೋ ಕಾತರ ಮನೆ ಒಡತಿಯದ್ದಾಗಿದೆ. ನನ್ನ ಬಸ್ ಚಾರ್ಜ್ ಫ್ರೀ ಆಗುತ್ತಾ ಅಂತಾ ಮನೆಯ ಹೆಣ್ಣು ಮಕ್ಕಳೆಲ್ಲಾ ಕಾಯುತ್ತಿದ್ದಾರೆ. ಇಷ್ಟು ದಿನ ಕೆಲಸಕ್ಕಾಗಿ ವೇಟಿಂಗ್ ಮಾಡ್ತಿದ್ದ ನಿರುದ್ಯೋಗಿಗಳೆಲ್ಲಾ ಭತ್ಯೆ ಪಡೆಯೋ ಕಾತರದಲ್ಲಿದ್ದಾರೆ. ಸದ್ಯ ಗ್ಯಾರಂಟಿ(congress guarantee) ಘೋಷಣೆ ಯಾವಾಗ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಯೋಜನೆ ಸಂಬಂಧ ನಡೆಯುತ್ತಿರೋ ಸಿದ್ಧತೆಗಳು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಇಂದು ನಡೆಯಬೇಕಿದ್ದ ಸಂಪುಟ ಸಭೆ ನಾಳೆಗೆ ಮುಂದೂಡಿಕೆಯಾಗಿದೆ. 5 ಗ್ಯಾರಂಟಿ ಜಾರಿ ಸಂಬಂಧ ನಾಳೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಬೆಂಗಳೂರು: ವಿಧಾನಪರಿಷತ್ ಸದಸ್ಯರಾದ ಕೆ. ಗೋವಿಂದರಾಜ್ ಮತ್ತು ನಜೀರ್ ಅಹ್ಮದ್ ಅವರನ್ನು ಸಿಎಂ ಸಿದ್ಧರಾಮಯ್ಯ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಕೆ ಗೋವಿಂದರಾಜ್, ನಜೀರ್ ಅಹ್ಮದ್ ನೇಮಕ: ಸರ್ಕಾರ ಆದೇಶ
ಪ್ರಧಾನಿ ಮೋದಿಯವರ ಮುಂದಾಲೋಚನೆಯಿಂದ ಎನ್ಇಪಿ ಜಾರಿ ಮಾಡಿದ್ದಾರೆ. NEP ವಿಚಾರದಲ್ಲಿ ವಿಪಕ್ಷಗಳ ರಾಜಕೀಯ ಖಂಡನೀಯ. ಈಗಾಗಲೇ ಕಾಂಗ್ರೆಸ್ ಪಕ್ಷದವರು ಗೊಡ್ಡು ಬೆದರಿಕೆ ಹಾಕುತ್ತಿದ್ದಾರೆ. ನಾವು ಎಲ್ಲವನ್ನೂ ಎದುರಿಸುತ್ತೇವೆ, ಹೆದರಿ ಓಡುವ ಪ್ರಶ್ನೆಯೇ ಇಲ್ಲ ಎಂದು ಚಿತ್ರದುರ್ಗದಲ್ಲಿ ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ್ರೂ ಬಡವರು ಬಡವರಾಗಿ ಇದ್ದಾರೆ ಎಂದು ಚಿತ್ರದುರ್ಗದಲ್ಲಿ ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ರಾಜ್ಯದ ಜನರಿಗೆ ನೀಡಿದ ಗ್ಯಾರಂಟಿಗೆ ಕಾಂಗ್ರೆಸ್ ಪಕ್ಷವೇ ಹೊಣೆ. ಸರ್ಕಾರ ಮಹಿಳೆಯರಿಗೆ ರಕ್ಷಣೆ ಕೊಡುವ ಬಗ್ಗೆ ಯೋಚನೆ ಮಾಡುತ್ತಿಲ್ಲ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಬಗ್ಗೆ ಯೋಚನೆ ಮಾಡ್ತಿದ್ದಾರೆ. ಬಿಜೆಪಿ ವಿಪಕ್ಷವಾಗಿ ಸಕಾರಾತ್ಮಕ ಹೋರಾಟ ಮಾಡಲಿದೆ ಎಂದರು.
ಮುಗ್ಧ ಬಡವರಿಗೆ ನೀಡಿರುವ ಭರವಸೆ ಕಾಂಗ್ರೆಸ್ ಈಡೇರಿಸಲಿ ಎಂದು ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಾಜಿ ಶಾಸಕ ಅನ್ನದಾನಿ ಹೇಳಿದರು. ಕಾಂಗ್ರೆಸ್ ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಭರವಸೆ ನೀಡಿದಂತೆ ಬಡವರು, ಮುಗ್ಧರಿಗೆ ನ್ಯಾಯ ಒದಗಿಸಬೇಕು. ಭರವಸೆ ಈಡೇರಿಸದಿದ್ರೆ ಹೋರಾಟಕ್ಕೆ ನಾವು ಧ್ವನಿ ಸೇರಿಸುತ್ತೇವೆ ಎಂದರು.
ಬೇರೆ ಖಾತೆ ಕೊಟ್ಟರೂ ಓಕೆ, ಇದೇ ಖಾತೆ ಇದ್ದರೂ ಓಕೆ ಎಂದು ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಸಾವಿರಾರು ಕಾರ್ಮಿಕರಿಗೆ ಅನುಕೂಲವಾಗುವ ಕೆಲಸ ಮಾಡುತ್ತೇವೆ. ಹೆಬ್ಬಾರ್ ಕಾರ್ಮಿಕ ಸಚಿವರಾಗಿದ್ದಾಗ ಅಕ್ರಮ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಪರಿಶೀಲನೆ ನಡೆಸಿ ಅವ್ಯವಸ್ಥೆ ಕಂಡು ಬಂದರೆ ತನಿಖೆ ಮಾಡಿಸ್ತೇವೆ ಎಂದು ಹೇಳಿದರು.
ಬೆಂಗಳೂರು ಪಾಲಿಕೆ ಮಾಜಿ ಮೇಯರ್‌ಗಳ ಸಭೆ ನಡೆಸಿದ್ದೇನೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಯಾವ ರೀತಿ ಅಭಿವೃದ್ಧಿ ಮಾಡಬಹುದು ಅಂತಾ ಸಲಹೆ ಕೇಳಿದ್ದೇನೆ. ರಿಂಗ್‌ರೋಡ್‌ಗಳಲ್ಲಿ ರಸ್ತೆ ಬದಿ, ಕೆರೆಗಳಲ್ಲಿ ಕಸ ಎಸೆಯುತ್ತಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಸಲಹೆಗಳನ್ನು ಕೇಳಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಿನ್ನೆಲೆ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಯೋಜನೆಗಳನ್ನು ಮೊಟಕುಗೊಳಿಸದಂತೆ, ಯೋಜನೆಗಳಿಗೆ ಅನುದಾನ ಕಡಿತಗೊಳಿಸದಂತೆ ಸಿಎಂ ಸಿದ್ಧರಾಮಯ್ಯಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ.
ಸಿಎಂ ಮತ್ತು ಸಚಿವರನ್ನು ಭೇಟಿ ಮಾಡಿ ಲೈಂಗಿಕ ಅಲ್ಪಸಂಖ್ಯಾತ ದುಡಿಯುವವರಿಗೆ ಸಹಾಯ ಮಾಡಬೇಕು. ಲೈಂಗಿಕ ಅಲ್ಪಸಂಖ್ಯಾತರು ಕೂಡ ಸಂವಿಧಾನದ ಅಡಿಯಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಹೇಳಿದರು. ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ನಮ್ಮನ್ನು ಒಳಗೊಂಡಿಲ್ಲ ಅಂದ್ರೆ ಹೇಗೆ ಆಗುತ್ತದೆ. ಗ್ಯಾರೆಂಟಿ ಯೋಜನೆ ಗ್ಯಾರೆಂಟಿಯಾಗಿ ನಮಗೂ ಸಿಗುತ್ತದೆ ಅನ್ನೋ ವಿಶ್ವಾಸವಿದೆ ಎಂದು ಹೇಳಿದರು.
ಅತ್ತೆ, ಸೊಸೆ ನಡುವೆ ಜಗಳ ಹಚ್ಚಲು ಗ್ಯಾರಂಟಿ ಘೋಷಿಸಿದ್ದಾರೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಸಂಸದ ದೇವೇಂದ್ರಪ್ಪ ವಾಗ್ದಾಳಿ ನಡೆಸಿದ್ದಾರೆ. ಅತ್ತೆ ನನಗೆ ಬೇಕು ಅಂತಾರೆ, ಸೊಸೆ ನನಗೆ ಹಣ ಹಾಕಿ ಅಂತಾರೆ. ಗ್ಯಾರಂಟಿ ಹೊಡೆತಕ್ಕೆ ಮೋದಿ ಪ್ರಚಾರ ಮಾಡಿದರೂ ಸೋತೆವು. ಫ್ರೀ ಸಿಗುತ್ತೆ ಎಂದು ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ. ಸೋಮಾರಿತನ, ಬೆಂಕಿ ಹಚ್ಚುವುದಕ್ಕೆ ಈ ಗ್ಯಾರಂಟಿ ಯೋಜನೆ ಮಾಡಲಾಗುತ್ತಿದೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಸಂಸದ ದೇವೇಂದ್ರಪ್ಪ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸುಳ್ಳುಗಾರರು, ಮೋಸಗಾರರ ಪಾರ್ಟಿ ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ವಾಗ್ದಾಳಿ ನಡೆಸಿದರು. ಚುನಾವಣೆ ವೇಳೆ ಕಾಂಗ್ರೆಸ್ನವರು ಗ್ಯಾರಂಟಿ ಘೋಷನೆ ಮಾಡಿದ್ದರು. ಅಧಿಕಾರಕ್ಕೆ ಬಂದು 20 ದಿನಗಳಾದರೂ ಗ್ಯಾರಂಟಿ ಜಾರಿ ಮಾಡಿಲ್ಲ. ಕಾಂಗ್ರೆಸ್ ಜನರನ್ನು ಮೂರ್ಖರನ್ನಾಗಿ ಮಾಡಿದೆ, ಕ್ಷಮೆ ಕೇಳಲಿ. ಜನ ಕರೆಂಟ್ ಬಿಲ್ ಕಟ್ಟುತ್ತಿಲ್ಲ, ಬಸ್ಗಳಲ್ಲಿ ಟಿಕೆಟ್ ಪಡೆಯುತ್ತಿಲ್ಲ. ಅಡ್ಡ ದಾರಿಯಲ್ಲಿ ಕಾಂಗ್ರೆಸ್ ಅಧಿಕಾರ ಬಂದಿದೆ. ಮೋದಿ ಎಲ್ಲೂ $15 ಲಕ್ಷ ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ. ಕಪ್ಪು ಹಣ ತಂದರೆ 15 ಲಕ್ಷ ರೂ. ಕೊಡ್ತೇವೆ ಅಂತಷ್ಟೇ ಹೇಳಿದ್ದಾರೆ. ಗ್ಯಾರಂಟಿ ಜಾರಿ ಮಾಡದಿದ್ರೆ BJP ಹೋರಾಟ ಮಾಡಲಿದೆ ಎಂದರು.
ಐದು ಗ್ಯಾರಂಟಿಗಳ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಸರತ್ತು ನಡೆಸುತ್ತಿದ್ದಾರೆ. ಹಲವು ಸಚಿವರು ಸಿಎಂ ಸಿದ್ದರಾಮಯ್ಯ ಭೇಟಿಗೆ ಆಗಮಿಸುತ್ತಿದ್ದಾರೆ. ಕಂದಾಯ ಸಚಿವ ಕೃಷ್ಣಭೈರೇಗೌಡ, ನಗರಾಭಿವೃದ್ಧಿ ಸಚಿವ ಭೈರತಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿ ಹಲವರು ಭೇಟಿ ನೀಡಿದ್ದು ಗ್ಯಾರಂಟಿಗಳ ಬಗ್ಗೆ ಚರ್ಚಿಸುತ್ತಿದ್ದಾರೆ.
ಐದು ಗ್ಯಾರಂಟಿ ಜಾರಿ ಮಾಡಲು ಷರತ್ತು ಹಾಕಿದರೆ ನಾವು ಒಪ್ಪಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆಯಲಿ. 10 ಕೆಜಿ ಅಕ್ಕಿ ಕೊಡಲು ಆಗದಿದ್ರೆ ಕೇಂದ್ರದ ಬಳಿ ಕೇಳ್ತೀವಿ ಎಂದಿದ್ದಾರೆ. ನಮ್ಮಲ್ಲಿ ಆಗಲ್ಲ ಕೇಂದ್ರದ ಬಳಿ ಕೇಳ್ತೀವಿ ಅಂತಾ ಮೊದಲೇ ಹೇಳಿದ್ರಾ? 60 ಕಿ.ಮೀ.ಗೆ ಮಾತ್ರ ಉಚಿತ ಪ್ರಯಾಣ ಅಂತಾ ಷರತ್ತು ಹಾಕ್ತಿದ್ದೀರಿ. ಈಗಾಗಲೇ ಕೆಎಸ್ಆರ್ಟಿಸಿ ನಷ್ಟದಲ್ಲಿದೆ ಎಂದು ಎನ್.ರವಿಕುಮಾರ್ ಹೇಳಿದರು. ಕೆಎಸ್ಆರ್ಟಿಸಿ ಬಸ್ ಪಂಕ್ಚರ್, ಡೀಸಲ್ ಹಾಕಿಸಲು ಕಾಸು ಇಲ್ಲ. ನಾಳೆ ಕ್ಯಾಬಿನೆಟ್ ಸಭೆಯ ನಿರ್ಧಾರದ ಬಳಿಕ ನಾವು ಮಾತನಾಡ್ತೇವೆ. ನೀವು ನಡೆದಂತೆ ನಡೆಯದಿದ್ರೆ ವಚನ ಭ್ರಷ್ಟರು ಅಂತಾ ಕರೆಯುತ್ತೇವೆ ಎಂದರು.
ಎಲ್ಲಾ ಕಚೇರಿ, ಅಂಗಡಿ ಕನ್ನಡ ನಾಮಫಲಕ ಕಡ್ಡಾಯ ಅನುಷ್ಠಾನಕ್ಕೆ ರಾಮನಗರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಮನವಿ ಮಾಡಲಾಗಿದೆ. ರಾಮನಗರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಗಡಿ ನಾಡು ಹಾಗು ಹಿಂದುಳಿದ ಜಿಲ್ಲೆಗಳಲ್ಲಿ ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿಬೇಕು. ಕನ್ನಡ ನಾಡು ನುಡಿ ರಕ್ಷಣೆಗೆ ಸರ್ಕಾರ ಬದ್ದವಾಗಿರುವಂತೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಸಚಿವರು, ಶಾಸಕರು ಭೇಟಿ ನೀಡಿದ್ದಾರೆ. ಸಚಿವರಾದ ದಿನೇಶ್, ಕೃಷ್ಣ ಭೈರೇಗೌಡ, ಶಾಸಕ ರಿಜ್ವಾನ್ ಬೆಂಗಳೂರಿನ ಕುಮಾರಕೃಪಾ ಪಾರ್ಕ್ ರಸ್ತೆ ಬಳಿಯ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಸಮಾನ ಮನಸ್ಕರ ಒಕ್ಕೂಟದಿಂದ ಮುಖ್ಯಮಂತ್ರಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಗುಂಡು, ತುಂಡು, ಸಿಗರೇಟ್ ಕೈಯಲ್ಲಿದ್ರೆ ಮಾತ್ರ ಬುದ್ಧಿ ಓಡುವ ಜನ. ಇಂತಹ ಬುದ್ಧಿಜೀವಿಗಳು ಮೆಕಾಲೆ ಗರಡಿಯಲ್ಲಿ ಪಳಗಿದವರು. ಮೆಕಾಲೆ ಸದಾ ಭಾರತವನ್ನು ದಾಸ್ಯದ ಚಿಂತನೆಯಲ್ಲೇ ಯೋಚಿಸ್ತಿದ್ದ. ಮೆಕಾಲೆ ಭಾರತೀಯರ ಸಂಸ್ಕೃತಿಯ ವಿರುದ್ಧ ಇದ್ದವನು. ರಾಜ್ಯ ಇರಬಾರದು ಎನ್ನುವ ಚಿಂತನೆ ಕಾರ್ಲ್ ಮಾರ್ಕ್ಸ್ದಾಗಿತ್ತು. ಮಾರ್ಕ್ಸ್ ಚಿಂತನೆಯ ಜನ ಭಾರತ ಶ್ರೇಷ್ಠ ಎಂದು ಹೇಳಿದ್ದಾರಾ? ಅಲೆಗ್ಸಾಂಡರ್ ದಿ ಗ್ರೇಟ್, ಅಕ್ಬರ್ ದಿ ಗ್ರೇಟ್ ಅನ್ನೋರು ಇವರು? ದಾಳಿಕೋರರು, ನಮ್ಮ ಸಂಸ್ಕೃತಿ ನಾಶ ಮಾಡಿದವರು ಇವರೆಲ್ಲಾ. ಆರ್ಯಭಟ, ಚಾಣಕ್ಯ, ಅಶೋಕ ಚಕ್ರವರ್ತಿ ಬಗ್ಗೆ ಎಲ್ಲೂ ಹೇಳಿಲ್ಲ. ರಾಜರಾಜಚೋಳ, ರಾಜೇಂದ್ರ ಚೋಳ, ಕರಿಕಾಳ ಚೋಳ ಅರಸರು, ಇಂಡೋನೇಷ್ಯಾ, ಕಾಂಬೋಡಿಯಾವರೆಗೆ ಭಾರತವನ್ನು ವಿಸ್ತರಿಸಿದ್ದರು. ಇಂತಹ ಸಾಧನೆಯನ್ನು ನಮಗೆ ಇತಿಹಾಸದಲ್ಲಿ ಹೇಳಿ ಕೊಡಲಿಲ್ಲ. ಅಶೋಕ್ ಚಕ್ರವರ್ತಿ ಸಾಮ್ರಾಜ್ಯ ಪರ್ಷಿಯಾ ದಾಟಿ ಹೋಗಿತ್ತು. ನಾವು ಹೇಳಿಕೊಟ್ಟಿದ್ದು ಅಕ್ಬರ್ ಗ್ರೇಟ್, ಅಲೆಗ್ಸಾಂಡರ್ ಗ್ರೇಟ್, ಬುದ್ಧಿಜೀವಿಗಳು ಮೆಕಾಲೆ, ಮಾರ್ಕ್ಸ್ ಗರಡಿಯಲ್ಲಿ ಪಳಗಿದವರು. ಆ ಜನರಿಗೆ ಭಾರತೀಯತೆ, ದೇಶದ ಹಿರಿಮೆ ಗರಿಮೆ ಹೇಳುವುದಿಲ್ಲ. ಅಂತಹ ಜನರು ಇವತ್ತು ಸಿಎಂ ಕಿವಿಗೆ ಪದೇಪದೆ ಊದುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅನ್ನಭಾಗ್ಯ ಯೋಜನೆ ಜಾರಿ ಬಗ್ಗೆ ನಾಳೆ ತೀರ್ಮಾನ ಮಾಡ್ತೇವೆ. ನಾಳೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು. 10 ಕೆಜಿ ಅಕ್ಕಿ ಕೊಟ್ಟೇ ಕೊಡ್ತೇವೆ, ಅದರಲ್ಲಿ ಎರಡನೇ ಮಾತಿಲ್ಲ. 5 ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಜಾರಿ ಮಾಡುತ್ತೇವೆ. ಭಾರತದಲ್ಲಿ ಭತ್ತವನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ. ಕೇಂದ್ರ ಸರ್ಕಾರಕ್ಕೆ 5 ಕೆಜಿ ಅಕ್ಕಿ ನೀಡುವಂತೆ ಮನವಿ ಮಾಡ್ತೇವೆ. ಒಂದು ವೇಳೆ ಕೇಂದ್ರ ಸರ್ಕಾರ ಕೊಡದಿದ್ರೆ ಟೆಂಡರ್ ಕರೆಯುತ್ತೇವೆ. ನಾವೇ ಟೆಂಡರ್ ಮೂಲಕ ಅಕ್ಕಿ ಖರೀದಿಸಿ ವಿತರಣೆ ಮಾಡುತ್ತೇವೆ ಎಂದರು.
ಗ್ಯಾರಂಟಿ ಯೋಜನೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡ್ತೇವೆ ಎಂದು ವಿಧಾನಸೌಧದಲ್ಲಿ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಪ್ರತಿಯೊಂದನ್ನು ಚರ್ಚೆ ಮಾಡಿಯೇ ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ. 5 ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತೇವೆಂದು ನಾವು ಹೇಳಿದ್ದೇವೆ. ಮಾರ್ಗಸೂಚಿಗಳನ್ನು ಆಯಾ ಇಲಾಖೆಗಳು ಸಭೆಯಲ್ಲಿ ಮಂಡಿಸುತ್ತವೆ ಎಂದರು.
ಮುಖ್ಯಮಂತ್ರಿಗಳನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದೇವೆ ಎಂದು ಸಿಎಂ ಭೇಟಿ ಬಳಿಕ ಫಿಲ್ಮ್ ಚೇಂಬರ್ ಅಧ್ಯಕ್ಷ ಹರೀಶ್ ತಿಳಿಸಿದ್ದಾರೆ. ವಾಣಿಜ್ಯ ಮಂಡಳಿಯಿಂದ ಸಮಸ್ಯೆಗಳ ಬಗ್ಗೆ ಮನವಿ ಕೊಟ್ಟಿದ್ದೇವೆ. ಚಿತ್ರರಂಗದ ಧ್ಯೇಯೋದ್ದೇಶದ ಬಗ್ಗೆಯೂ ಸಿಎಂ ಮುಂದೆ ಪ್ರಸ್ತಾಪ ಮಾಡಿದ್ದೇವೆ. ಸಬ್ಸಿಡಿ ವಿಚಾರ ಸದ್ಯಕ್ಕೆ ಚರ್ಚೆ ಮಾಡಿಲ್ಲ ಎಂದು ಭಾ.ಮಾ.ಹರೀಶ್ ತಿಳಿಸಿದ್ದಾರೆ. ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಆಯ್ಕೆ ಸಂಬಂಧ ಚರ್ಚಿಸಿದ್ದೇವೆ. ಕಂಠೀರವ ಸ್ಟುಡಿಯೋ ಅಧ್ಯಕ್ಷರ ಆಯ್ಕೆ ಬಗ್ಗೆಯೂ ಸಮಾಲೋಚನೆ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಉಚಿತ ವಿದ್ಯುತ್ ಬಗ್ಗೆ ಕೆ.ಜೆ.ಜಾರ್ಜ್ ಜೊತೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ. ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಸರ್ಕಾರಿ ನಿವಾಸದಲ್ಲಿ ಇಂಧನ ಖಾತೆ ಸಚಿವ ಜಾರ್ಜ್ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ.
ಗೃಹ ಜ್ಯೋತಿ ಯೋಜನೆಯ ಅನುಷ್ಠಾನದ ಬಗ್ಗೆ ಅಧಿಕಾರಿಗಳು ಪ್ರೆಸೆಂಟೇಷನ್ ನೀಡಿದ್ದಾರೆ. ರಾಜ್ಯದಲ್ಲಿ ಗೃಹ ಬಳಕೆ ವಿದ್ಯುತ್ ಬಳಕೆದಾರರು ಪ್ರತಿ ತಿಂಗಳು ಸರಾಸರಿ 53 ಯೂನಿಟ್ ಮಾತ್ರ ಉಪಯೋಗಿಸುತ್ತಿದ್ದಾರೆ. ಹೆಚ್ಚುವರಿ 147 ಯುನಿಟ್ ಅನ್ನ ಘೋಷಣೆ ಮಾಡಿದರೆ ಅದರ ಬಳಕೆ ಸ್ವರೂಪದ ಬಗ್ಗೆಯೂ ಚರ್ಚಿಸಬೇಕಿದೆ. ಮನೆ ಮಾಲೀಕರು ಹೆಚ್ಚವರಿ ಎಲೆಕ್ಟ್ರಾನಿಕ್ ಉಪಕರಣ ಬಳಸಿದರೇ ಶೇಕಡ 15 ರಿಂದ 20ರಷ್ಟು ಹೆಚ್ಚು ಬಳಕೆ ಮಾಡಬಹುದು. ಹೀಗಾಗಿ 200 ಯೂನಿಟ್ ಬಳಕೆ ವಿಚಾರಕ್ಕೆ ಅರ್ಜಿ ಆಹ್ವಾನ ಹಾಗೂ ಬಿಲ್ ಕಟ್ಟುವ ಮಾದರಿ ಜಾರಿಗೆ ತರಬಹುದು. ಈಗಾಗಲೇ ಇರುವ ದೆಹಲಿ ಮಾಡಲ್ ನಂತೆ ಕಾರ್ಯನಿರ್ವಹಿಸುವುದು ಸಹ ಒಂದು ಆಯ್ಕೆಯಾಗಿ ಪರಿಗಣಿಸಬಹುದು. ವಿದ್ಯುತ್ ಸಬ್ಸಿಡಿ ಬೇಡ ಎಂದು ಸ್ವಯಂ ಪ್ರೇರಿತವಾಗಿ ಕೈ ಬಿಡುವವರನ್ನ ಸಹ ಗುರುತಿಸಬಹುದು. ಈ ರೀತಿ ಸಬ್ಸಿಡಿ ನಿರಾಕರಿಸುವವರು ರಾಜ್ಯದಲ್ಲಿ ಅಂದಾಜು 5 ಲಕ್ಷ ಮಂದಿ ಎಂದು ಗುರುತಿಸಬಹುದಾಗಿದೆ.
ಐದು ಗ್ಯಾರಂಟಿಗಳನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಈಗಾಗಲೇ ಗ್ಯಾರಂಟಿ ಜಾರಿ ಬಗ್ಗೆ ಅಧಿಕಾರಿಗಳ ಜತೆ ಚರ್ಚೆಯಾಗಿದೆ. ಯಾವ ರೀತಿ ಗ್ಯಾರಂಟಿ ಜಾರಿ ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಳೆ ಸಚಿವ ಸಂಪುಟದಲ್ಲಿ ಅಂತಿಮವಾಗಿ ಎಲ್ಲವೂ ಗೊತ್ತಾಗಲಿದೆ. ವಿರೋಧ ಪಕ್ಷದವರು ಯಾವ ಆಧಾರದ ಮೇಲೆ ನಮಗೆ ಹೇಳ್ತಿದ್ದಾರೆ. ನಮಗೆ ಮತ ಹಾಕಿದ ಜನರ ಹಿತ ದೃಷ್ಟಿಯಿಂದ ಕೆಲಸ ಮಾಡುತ್ತೇವೆ. ಜೂ.1ರಂದು ಗ್ಯಾರಂಟಿ ಜಾರಿ ಮಾಡುತ್ತೇವೆ ಅಂತಾ ಯಾರು ಹೇಳಿದ್ದು 5 ಗ್ಯಾರಂಟಿ ಜಾರಿ ಮಾಡಲ್ಲ ಎಂದಿಲ್ಲ, ಜಾರಿ ಮಾಡೇ ಮಾಡುತ್ತೇವೆ ಎಂದರು.
ಫಿಲ್ಮ್ ಚೇಂಬರ್ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ.ಹರೀಶ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಮಾಜಿ ಮೇಯರ್‌ಗಳ ಜತೆ ಸಭೆ ನಡೆಸಲಿದ್ದಾರೆ. ಪದ್ಮಾವತಿ, ಗಂಗಾಂಬಿಕೆ, ಸಂಪತ್‌ರಾಜ್, ಪಿ.ಆರ್.ರಮೇಶ್, ಬಿಬಿಎಂಪಿ ಚುನಾವಣಾ ಪೂರ್ವ ಸಮಿತಿ ಸದಸ್ಯರು ಭಾಗಿ ಸಾಧ್ಯತೆ.
ಬೇರೆ ಬೇರೆ ರಾಜ್ಯಗಳಲ್ಲೂ ಬಸ್‌ನಲ್ಲಿ ಉಚಿತ ಪ್ರಯಾಣ ಇದೆ ಎಂದು ಬೆಂಗಳೂರಿನಲ್ಲಿ ಸಾರಿಗೆ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ತಮಿಳುನಾಡು, ಮಹಾರಾಷ್ಟ್ರ, ದೆಹಲಿಯಲ್ಲೂ ಉಚಿತ ಪ್ರಯಾಣ ಇದೆ. ಎಲ್ಲಾ ರಾಜ್ಯದ ಮಾದರಿಗಳನ್ನೂ ನಾವು ತರಿಸಿಕೊಂಡಿದ್ದೇವೆ. ಉಚಿತ ಪ್ರಯಾಣ ಬಗ್ಗೆ ಈಗಾಗಲೇ ಚರ್ಚೆ ಕೂಡ ಮಾಡಿದ್ದೇವೆ. ಚುನಾವಣೆ ವೇಳೆ ನಾವು ನೀಡಿದ ಭರವಸೆ ಈಡೇರಿಸಲು ಬದ್ಧ. ವಿಪಕ್ಷದವರು ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ನಾಳೆ ಸಂಪುಟ ಸಭೆ ಬಳಿಕ ಸಿಎಂ ಎಲ್ಲಾ ಮಾಹಿತಿ ನೀಡುತ್ತಾರೆ ಎಂದರು.
ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದ ಬಳಿ ಅಕ್ಕೈ ಪದ್ಮಶಾಲಿ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಲೈಂಗಿಕ ಅಲ್ಪ ಸಂಖ್ಯಾತರು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ವಿಧಾನ ಪರಿಷತ್, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತರಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಲೈಂಗಿಕ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ತಡೆಯುವಂತೆ ಮನವಿ ಮಾಡಿದ್ದಾರೆ.
ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣದ ಗ್ಯಾರಂಟಿ ಭರವಸೆ ಹಿನ್ನೆಲೆ ಯಾದಗಿರಿಯ ಶಹಾಪುರ ನಗರದಲ್ಲಿ ಬಸ್ ಟಿಕೆಟ್ ಪಡೆಯಲು ಮಹಿಳೆಯರು ನಿರಾಕರಿಸುತ್ತಿದ್ದಾರೆ. ಬಸ್ ಪ್ರಯಾಣ ಫ್ರೀ ಅಂತಾ ಹೇಳಿದ್ದಾರೆ, ಆದ್ರೆ ಇದುವರೆಗೂ ಆಗಿಲ್ಲ. ಯಾವಾಗ ಬಸ್ ಪ್ರಯಾಣ ಫ್ರೀ ಆಗುತ್ತದೆಂದು ಕಂಡಕ್ಟರ್ ಗೆ ಮಹಿಳೆಯರು ಪ್ರಶ್ನೆ ಮಾಡಿದ್ದಾರೆ. ಶಹಾಪುರದಿಂದ ಕಲಬುರಗಿಗೆ ತೆರಳುವ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮಹಿಳೆಯರು ಕಂಡಕ್ಟರ್ ಗೆ ಪ್ರಶ್ನೆ ಮಾಡಿದ್ದಾರೆ.
ಶ್ರೀಶೈಲ ಮಲ್ಲಿಕಾರ್ಜುನನಿಗೆ ದೀರ್ಘ ದಂಢ ನಮಸ್ಕಾರ ಹಾಕಿ ಶರಣಗೌಡ ಕಂದಕೂರ್ ಅಭಿಮಾನಿ ಹರಕೆ ತೀರಿಸಿದ್ದಾರೆ. ಶರಣಗೌಡ ಕಂದಕೂರ್ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕರಾದ ಹಿನ್ನೆಲೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕೊಟಗೇರ ಗ್ರಾಮದ ಮೌನೇಶ್ ಎಂಬಾತ ದೀರ್ಘ ದಂಢ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾರೆ. ಸುಮಾರು 500 ಮೀಟರ್ ವರೆಗೆ ದೀರ್ಘ ದಂಢ ನಮಸ್ಕಾರ ಹಾಕಿದ್ದಾರೆ. ಶಾಸಕರ ಫೋಟೋ ಹಾಗೂ ಜೆಡಿಎಸ್ ಬಾವುಟ ಹಿಡಿದು ಜೆಡಿಎಸ್ ಕಾರ್ಯಕರ್ತರು ಮೌನೇಶ್ ಗೆ ಸಾಥ್ ನೀಡಿದರು.
ಗದಗ-ಬೆಟಗೇರಿ ಅವಳಿ ನಗರ ಸೇರಿ ಹಲವಡೆ ಜಿಟಿಜಿಟಿ ಮಳೆ ಆರಂಭವಾಗಿದೆ. ಬಿಸಿಲಿನಿಂದ ಕಂಗಾಲಾಗಿದ್ದ ಜಿಲ್ಲೆಯ ಜನ್ರಿಗೆ ವರುಣ ತಂಪೆರೆದಿದ್ದಾನೆ. ತುಂತುರು ಮಳೆಯಿಂದ ಮನೆಯಿಂದ ಹೊರಗಡೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಸನ ಜಿಲ್ಲೆಯಲ್ಲೂ ಕೆಇಬಿ ಬಿಲ್ ಗಲಾಟೆ ಶುರುವಾಗಿದೆ. ಬಿಲ್ ಕಲೆಕ್ಷನ್‌ಗೆ ಹೋಗಿದ್ದ ಚೆಸ್ಕಾಂ ಸಿಬ್ಬಂದಿ ಮೇಲೆ ತಂದೆ ಹಾಗೂ ಆತನ ಅಪ್ರಾಪ್ತ ಮಗ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಚೆಸ್ಕಾಂ ಸಿಬ್ಬಂದಿ ಸಂತೋಷ್ ಮೇಲೆ ಹಲ್ಲೆ ನಡೆದಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದ ಹಳೇ ಕೋರ್ಟ್ ರಸ್ತೆಯಲ್ಲಿ ನಡೆದಿದೆ. ಸುರೇಶ್ ಹಾಗೂ ಆತನ ಅಪ್ರಾಪ್ತ ಪುತ್ರ ಹಲ್ಲೆ ನಡೆಸಿದ್ದಾರೆ. ಕೋಳಿ ಅಂಗಡಿ ಮಾಲೀಕನಾಗಿರುವ ಸುರೇಶ್ ಅವರು ಮನೆಯ 1150 ರೂ ವಿದ್ಯುತ್ ಬಿಲ್ ಪಾವತಿಸಬೇಕಿತ್ತು. ನಿನ್ನೆ ಬಿಲ್ ಕಲೆಕ್ಷನ್ ಮಾಡಲು ಹೋದಾಗ ಹಣ ಕಟ್ಟಲ್ಲ ಎಂದು ಚೆಸ್ಕಾಂ ಸಿಬ್ಬಂದಿಯನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಅನುದಾನ ತಡೆಹಿಡಿದಿದ್ದ ವಿಚಾರಕ್ಕೆ ಸಂಬಂಧಿಸಿ ಅನುದಾನ ಮುಂದುವರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಿದ್ಧಗಂಗಾ ಮಠದ ವಸತಿ ನಿಲಯದ ಟೆಂಡರ್ ಮುಂದುವರಿಸಲು, ತಡೆಹಿಡಿದಿದ್ದ 9.90 ಕೋಟಿ ಅನುದಾನ ಮುಂದುವರಿಸಲು PWDಗೆ ಸೂಚನೆ ನೀಡಿದ್ದಾರೆ.
5 ಗ್ಯಾರಂಟಿ ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆಂದು ಸಿಎಂ ಸಿದ್ದರಾಮಯ್ಯ ಶಪಥ ಮಾಡಿದ್ದಾರೆ. ಹೀಗಾಗಿ ಆದಾಯಕ್ಕಾಗಿ ಕಂದಾಯ ಇಲಾಖೆ ಮೇಲೆ ರಾಜ್ಯ ಸರ್ಕಾರ ಕಣ್ಣಿಟ್ಟಿದೆ. ನೊಂದಣಿ, ಸ್ಟ್ಯಾಪ್ ಡ್ಯುಟಿ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಆಸ್ತಿಗಳ ಗೈಡಲೆನ್ಸ್ ವಾಲ್ಯೂವ್ ಹೆಚ್ಚಳದ ಬಗ್ಗೆ ಚಿಂತನೆ ನಡೆದಿದೆ. ಕಂದಾಯ, ಅಬಕಾರಿ, ನೋಂದಣಿ ಇಲಾಖೆಯಲ್ಲಿ ಹಣ ಸೋರಿಕೆಗೆ ಕ್ರಮ ವಹಿಸುವಂತೆ, ಇಲಾಖೆಯಲ್ಲಿ ಅನಗತ್ಯ ಹಣ ಸೋರಿಕೆ ತಡೆಗಟ್ಟುವಿಕೆಗೆ ತಿರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ ಮುರುಳು ಪರವಾನಿಗೆ ಸೇರಿದಂತೆ ಹೊಸ ಸುಲ್ಕ ನಿಗದಿ ಮಾಡುವ ಸಾಧ್ಯತೆ ಇದೆ. ಅಬಕಾರಿ ಇಲಾಖೆಯಲ್ಲಿ ನೂತನ ಮಾದರಿಯ ಆದಾಯಕ್ಕೆ ಪ್ಲ್ಯಾನ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಇಂದು ನಡೆಯಬೇಕಿದ್ದ ಸಂಪುಟ ಸಭೆ ನಾಳೆಗೆ ಮುಂದೂಡಿಕೆಯಾಗಿದೆ. 5 ಗ್ಯಾರಂಟಿ ಜಾರಿ ಸಂಬಂಧ ನಾಳೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗ್ಗೆ 11ಕ್ಕೆ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಯಲಿದೆ. ಇಂದು ಕೂಡ ಅಧಿಕಾರಿಗಳು, ಸಚಿವರ ಜತೆ ಪ್ರತ್ಯೇಕ ಸಭೆ ನಡೆಯುವ ಸಾಧ್ಯತೆ ಇದೆ. ಕೆಲ ಮಾನದಂಡಗಳನ್ನು ನಿಗದಿಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
Published On - 8:18 am, Thu, 1 June 23