Karnataka Breaking Kannada News Highlights: ನಿತೀನ್ ಗಡ್ಕರಿ ಜೊತೆ ಸಿದ್ದರಾಮಯ್ಯ ಮಹತ್ವದ ಚರ್ಚೆ
Breaking News Today Live Updates: ಕರ್ನಾಟಕ ರಾಜಕೀಯ, ಅಪರಾಧ, ಮಳೆ, ಹವಾಮಾನ, ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಲೆಟೇಸ್ಟ್ ಅಪ್ಡೇಟ್ಸ್ ಇದೀಗ ಟಿವಿ9 ಡಿಜಿಟಲ್ ಕನ್ನಡದಲ್ಲಿ....
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20 ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಿದೆ. ಹೀಗಾಗಿ ನಾನಾ ಕಸರತ್ತುಗಳನ್ನು ಮಾಡ್ತಿದೆ ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರ ಗೆಲ್ಲುವ ಗುರಿಯೊಂದಿಗೆ ಹೋರಾಡಿ ಎಂದು ರಾಜ್ಯ ಕಾಂಗ್ರೆಸ್ನ ಹಿರಿಯ ನಾಯಕರಿಗೆ ಎಐಸಿಸಿ ನಾಯಕರು ಸೂಚನೆ ಕೊಟ್ಟಿದ್ದಾರೆ. ಪಾರದರ್ಶಕ ಆಡಳಿತ ನೀಡಬೇಕು, ಹೈಕಮಾಂಡ್ ನಿಗಾ ವಹಿಸಲಿದೆ ಎಂದು ಸಚಿವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್, ಟ್ರ್ಯಾಕ್ಟರ್ಗೆ ನಿರ್ಬಂಧವಿದಿಸಲಾಗಿದೆ. ವೇಗದ ಮಿತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೂರು ದಿನಗಳ ಕೆಳಗೆ ಅಳವಡಿಸಿದ್ದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ANRPಗಳು ಮೂರೇ ದಿನಕ್ಕೆ ಬಂದ್ ಆಗಿವೆ. ಟೊಮೆಟೊ ದುಬಾರಿ ಆಗ್ತಿದ್ದಂತೆ ರೈತರಿಂದಲೂ ಫುಲ್ ಡಿಮ್ಯಾಂಡ್ ಹೆಚ್ಚಾಗಿದ್ದಿ ಟೊಮೆಟೊ ಸಸಿಗಳಿಗೆ ಬುಕಿಂಗ್ ನಡೆಯುತ್ತಿದೆ. ಸಸಿಗಳನ್ನ ಕೊಳ್ಳಲು ರೈತರು ಪೈಪೋಟಿ ನಡೆಸುತ್ತಿದ್ದಾರೆ. ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
LIVE NEWS & UPDATES
-
Karnataka Breaking News Live: ನಿತೀನ್ ಗಡ್ಕರಿ ಜೊತೆ ಸಿದ್ದರಾಮಯ್ಯ ಮಹತ್ವದ ಚರ್ಚೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿಯಲ್ಲಿ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆಯೂ ಸಿದ್ದರಾಮಯ್ಯ ಅವರು ಗಡ್ಕರಿ ಅವರ ಗಮನ ಸೆಳೆದರು. ಹೆದ್ದಾರಿಯಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಿದರು. ಅಧಿಕಾರಿಗಳು ಹಾಗೂ ತಜ್ಞರ ತಂಡವೊಂದನ್ನು ಹೆದ್ದಾರಿ ವೀಕ್ಷಣೆಗೆ ಕಳುಹಿಸಿ ಲೋಪ ದೋಷ ಸರಿಪಡಿಸುವುದಾಗಿ ಗಡ್ಕರಿ ಅವರು ತಿಳಿಸಿದರು. ಶಿರಾಡಿ ಘಾಟ ಸುರಂಗ ಮಾರ್ಗ ಕುರಿತಾಗಿಯೂ ಮುಖ್ಯಮಂತ್ರಿಗಳು ಸಚಿವರೊಂದಿಗೆ ಮಾತುಕತೆ ನಡೆಸಿದರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಜರಿದ್ದರು.
-
Karnataka Breaking News Live: ಕತ್ತಲಾದ ಹಿನ್ನೆಲೆಯಲ್ಲಿ ಮೃತದೇಹ ಶೋಧ ಕಾರ್ಯ ಸ್ಥಗಿತ
ಮಡಿಕೇರಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಸಿಗ ನೀರುಪಾಲು ಪ್ರಕರಣ ಸಂಬಂಧ ಟಿವಿ9 ಜೊತೆ ಮಾತನಾಡಿದ ಕೊಡಗು ಎಸ್‌ಪಿ ರಾಮರಾಜನ್, ಕತ್ತಲಾದ ಹಿನ್ನೆಲೆಯಲ್ಲಿ ಮೃತದೇಹ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. ನಾಳೆ ಬೆಳಗ್ಗೆಯಿಂದ ಶೋಧ ಕಾರ್ಯ ಮುಂದುವರಿಯುತ್ತದೆ. ಕುಶಾಲನಗರ ತಾಲೂಕಿನ ಹಾರಂಗಿ ಡ್ಯಾಂ ಬಳಿ ಬೆಂಗಳೂರು ಮೂಲದ ಪ್ರವಾಸಿಗ ಸಂದೀಪ್ ನೀರುಪಾಲಾಗಿದ್ದರು. ಮೂವರು ಸ್ನೇಹಿತರ ಜೊತೆ ಹಾರಂಗಿ ಜಲಾಶಯಕ್ಕೆ ಬಂದಿದ್ದರು ಎಂದರು.
-
Karnataka Breaking News Live: ಗೋಪಿ ವೃತ್ತದಿಂದ ಮಹಾವೀರ ವೃತ್ತದವರೆಗೆ ಪಂಜಿನ ಮೆರವಣಿಗೆ
ಶಿವಮೊಗ್ಗ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಗೃಹ ಇಲಾಖೆ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ನ ಎಸ್ಸಿ ಘಟಕ ಪ್ರತಿಭಟನೆ ನಡೆಸಿತು. ಗೋಪಿ ವೃತ್ತದಿಂದ ಮಹಾವೀರ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿ ಆರಗ ಜ್ಞಾನೇಂದ್ರ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
Karnataka Breaking News Live: ಮಂಟಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪ್ರವೀಣ್ ಕುಮಾರ್ ಆಯ್ಕೆ
ಆನೇಕಲ್: ಬೆಂಗಳೂರು ದಕ್ಷಿಣ ತಾಲೂಕಿನ ಮಂಟಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪ್ರವೀಣ್ ಕುಮಾರ್ ಆಯ್ಕೆಯಾಗಿದ್ದಾರೆ. 36 ಸದಸ್ಯರ ಬಲದ ಮಂಟಪ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 23 ಸದಸ್ಯರು, ಕಾಂಗ್ರೆಸ್ ಬೆಂಬಲಿತ 13 ಸದಸ್ಯರಿದ್ದರು. ಆದರೆ, ಅಧ್ಯಕ್ಷರ ಚುನಾವಣೆ ವೇಳೆ ಬಿಜೆಪಿ ಬೆಂಬಲಿತ ಐವರು ಸದಸ್ಯರು ತಿರುಗಿದ ಪರಿಣಾಮ ಫಲಿತಾಂಶ ಸಮಬಲವಾಗಿತ್ತು. ಪರಿಣಾಮ ಅಧಿಕಾರಿಗಳು ಲಾಟರಿ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿದರು. ಈ ವೇಳೆ ಪ್ರವೀಣ್ ಕುಮಾರ್ ಆಯ್ಕೆಯಾಗಿದ್ದಾರೆ. ಇದು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಎಂ.ಕೃಷ್ಣಪ್ಪಗೆ ಮುಖಭಂಗ ತರಿಸಿದ್ದು, ಮಂಟಪ ಗ್ರಾಮ ಪಂಚಾಯಿತಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
Karnataka Breaking News Live: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಪ್ರಕರಣ ದಾಖಲು
ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣ ಸಂಬಂಧ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಲಬುರಗಿ ನಗರದ ಅಶೋಕ್ ನಗರ ಠಾಣೆಯಲ್ಲಿ FIR ದಾಖಲಾಗಿದೆ. ಖರ್ಗೆ ಬೆಂಬಲಿಗ ರಾಜೀವ್ ಜಾನೆ ನೀಡಿದ ದೂರಿನ ಮೇರೆಗೆ FIR ದಾಖಲಾಗಿದೆ.
Karnataka Breaking News Live: ಮೃತರ ಕುಟುಂಬಗಳಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿದ ಶಾಸಕ ವೀರೇಂದ್ರ
ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಮೂವರು ಸಾವನ್ನಪ್ಪಿದ ಪ್ರಕರಣ ಸಂಬಂಧ ಕವಾಡಿಗರಹಟ್ಟಿ ಬಡಾವಣೆಗೆ ಭೇಟಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ ಅವರು ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇದೇ ವೇಳೆ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಸರ್ಕಾರದಿಂದ ತಲಾ 10 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಭರವಸೆಯೂ ನೀಡಿದರು.
Karnataka Breaking News Live: ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಜನ ಪಾಠ ಕಲಿಸುತ್ತಾರೆ: ಶಾಮನೂರು ಶಿವಶಂಕರಪ್ಪ
ದಾವಣಗೆರೆ: ಕಡುಭ್ರಷ್ಟ ಬಿಜೆಪಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಇದೇ ರೀತಿ ಪಾಠ ಕಲಿಸುತ್ತಾರೆ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಮೂರು ಕೋಟಿ ವೆಚ್ಚದಲ್ಲಿ ದಾವಣಗೆರೆ ಕುಂದವಾಡ ಕೆರೆ ನಿರ್ಮಿಸಲಾಗಿತ್ತು. ಈ ಕೆರೆ ಹೂಳೆತ್ತಲು ಬಿಜೆಪಿಯವರು 15 ಕೋಟಿ ಖರ್ಚು ಮಾಡಿದ್ದಾರೆ. ಭಾರತೀಯ ಜನತಾ ಪಕ್ಷ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿತ್ತು. ಹಿರೇಕೆರೂರಿನಲ್ಲಿ ಸಕ್ಕರೆ ಕಾರ್ಖಾನೆ ಮಾಡಲು ದಾವಣಗೆರೆ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಜಮೀನು ಪಡೆದಿದ್ದಾರೆ. ಆದರೆ ಅಲ್ಲಿ ಕಾರ್ಖಾನೆ ಆಗಿದೆಯಾ?, ನಿರಂತರವಾಗಿ ಭ್ರಷ್ಟಾಚಾರವಾಗಿದೆ. ಹೀಗೆ ಭ್ರಷ್ಟಾಚಾರದಲ್ಲಿ ತೊಡಗಿರುವುವವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
Karnataka Breaking News Live: ನಮ್ಮ ಕಡೆಯಿಂದ ಬಾಕಿ ಪೇಮೆಂಟ್ ಎಲ್ಲಾ ಕೊಡಲಾಗಿದೆ: ದಿನೇಶ್ ಗುಂಡೂರಾವ್
ಡಯಾಲಿಸಿಸ್ ಸಿಬ್ಬಂದಿಗಳ ಜೊತೆ ಸಭೆ ಅಂತ್ಯವಾಗಿದೆ. ಅವರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅನಿವಾರ್ಯವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಏಜೆನ್ಸಿ ಹಾಗೂ ಸಿಬ್ಬಂದಿ ಇಬ್ಬರ ಜೊತೆಯೂ ಸಭೆ ಆಗಿದೆ. ಈ ತಿಂಗಳ ಒಳಗೆ ವೇತನ ಪಾವತಿಗೆ ಒಪ್ಪಿಕೊಂಡಿದ್ದಾರೆ. ಲಿಖಿತವಾಗಿ ಬರೆದುಕೊಡಲು ಸೂಚಿಸಿದ್ದಾರೆ. ನಮ್ಮ ಕಡೆಯಿಂದ ಬಾಕಿ ಪೇಮೆಂಟ್ ಎಲ್ಲಾ ಕೊಡಲಾಗಿದೆ. ಅದು ಸರಿಯಾಗಿ ನೌಕರರಿಗೆ ಸರಿಯಾಗಿ ತಲುಪಬೇಕು. ಆಗಸ್ಟ್ 31ರ ಒಳಗೆ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದಾರೆ. ಪ್ರತಿಭಟನೆ ಕೈಬಿಟ್ಟು ಮಾನವೀಯತೆಯ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
Karnataka Breaking News Live: ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿಗರ ನಡುವೆ ಸಂಘರ್ಷ
ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ವಿಠಲಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ಬಳಿಕ ಕಾಂಗ್ರೆಸ್-ಜೆಡಿಎಸ್ ಬೆಂಬಲಿಗರ ನಡುವೆ ಸಂಘರ್ಷ ನಡೆಯುತು. ಪಂಚಾಯತ್ ಸದಸ್ಯರು ಪರಸ್ಪರ ಕತ್ತಿನ ಪಟ್ಟಿ ಹಿಡಿದು ಹೊಡೆದಾಡಿಕೊಂಡರು. JDS ಬೆಂಬಲಿತ ಅಭ್ಯರ್ಥಿಗೆ ಮತ ಹಾಕುವುದಾಗಿ ಹಣ ಪಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರ ಮತ ಹಾಕಿರುವ ಆರೋಪ ಮಾಡಲಾಗಿದೆ. ಚುನಾವಣೆಯಲ್ಲಿ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ.
Karnataka Breaking News Live: ಸಮಗ್ರ ತನಿಖೆಗೆ ಆಗ್ರಹಿಸಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಉಡುಪಿ: ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಆಗ್ರಹಿಸಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ವಿಶ್ವಹಿಂದೂ ಪರಿಷದ್ ಹಾಗೂ ಭಜರಂಗದಳದಿಂದ ಜೋಡುಕಟ್ಟೆಯಿಂದ ಪಾದಯಾತ್ರೆ ಆರಂಭವಾಗಿದ್ದು, ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಮೆರವಣಿಗೆ ಬಳಿಕ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಪ್ರತಿಭಟನಾ ಸಭೆ ನಡೆಯಲಿದ್ದು, ಉಡುಪಿ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
Karnataka Breaking News Live: ಗ್ಯಾರಂಟಿ ಯೋಜನೆಗಾಗಿ ಪೊಲೀಸ್ ಸಿಬ್ಬಂದಿ ಸಂಬಳ ನಿಲ್ಲಿಸಿಲ್ಲ: ಪರಮೇಶ್ವರ್
ಜುಲೈ ತಿಂಗಳ ಪೊಲೀಸ್ ಇಲಾಖೆ ಸಿಬ್ಬಂದಿ ವೇತನ ವಿಳಂಬ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್, ಆಡಳಿತ ವ್ಯವಸ್ಥೆ ಹಾಗೂ ಬೇರೆ ಬೇರೆ ಕಾರಣಗಳಿಂದ ನಿಲ್ಲಿಸಲಾಗುತ್ತಿದೆ. ನೌಕರರ ಸಂಬಳ ತಡೆದು ಗ್ಯಾರಂಟಿ ಯೋಜನೆ ನೀಡುವ ಅಗತ್ಯವಿಲ್ಲ. ಯಾವುವೋ ಕಾರಣಕ್ಕೆ ಯಾದಗಿರಿ ಎಸ್‌ಪಿ ಸಂಬಳ ನಿಲ್ಲಿಸಿರಬಹುದು. ಗ್ಯಾರಂಟಿ ಯೋಜನೆಗೆ ಬೇಕಾದ ಹಣವನ್ನು ಬಜೆಟ್ನಲ್ಲಿ ಇಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಾಗಿ ಪೊಲೀಸ್ ಸಿಬ್ಬಂದಿ ಸಂಬಳ ನಿಲ್ಲಿಸಿಲ್ಲ. ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಲಾಗಿದೆ. ಸ್ಥಳೀಯ ಶಾಸಕರು, ನಾಯಕರಿಂದಲೂ ಕೆಲವು ಆಕ್ಷೇಪ ಬಂದಿತ್ತು. ಹೀಗಾಗಿ ತಡೆಹಿಡಿಯಲಾಗಿದೆ, ಎಚ್ಚರಿಕೆಯಿಂದ ವರ್ಗಾವಣೆ ಮಾಡುತ್ತೇವೆ ಎಂದರು.
Karnataka Breaking News Live: ಇದು ಅತ್ಯಂತ ನೀಚ ಸರ್ಕಾರ, ಪುಕ್ಕಟ್ಟೆ ಸಿದ್ದರಾಮಣ್ಣ: ಎಂಟಿ ಕೃಷ್ಣಪ್ಪ
ತುಮಕೂರು: ಸರ್ಕಾರದ ವಿರುದ್ಧ ಹರಿಹಾಯ್ದ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಇದು ಅತ್ಯಂತ ನೀಚ ಸರ್ಕಾರ, ಪುಕ್ಕಟ್ಟೆ ಸಿದ್ದರಾಮಣ್ಣ ಎಂದು ಲೇವಡಿ ಮಾಡಿದರು. ಇವರ ತೆವಲಿಗೋಸ್ಕರ ಚುನಾವಣೆ ಸಂಧರ್ಭದಲ್ಲಿ ಕೊಟ್ರಲ್ಲ ಮಾತು, ಅದು ಮಾಡ್ತೀವಿ ಇದು ಮಾಡ್ತೀವಿ ಅಂತ ಹೇಳಿ ರೈತರ ತಲೆ ಒಡಿತಿದ್ದಾರೆ. ಸಾಮಾನ್ಯನ ಬದುಕು ಮೂರಾಬಟ್ಟೆ ಆಗಿದೆ. ಮೆಣಸಿನಕಾಯಿ, ಟಮೋಟ ಅಕ್ಕಿ ರೇಟ್ ಜಾಸ್ತಿ ಆಗಿದೆ, ಜನಸಾಮಾನ್ಯರು ತಿನ್ನೋದೆನು? ಎಪಿಎಲ್ ಕಾಡ್೯ ಇರೋರೆಲ್ಲಾ ಹಣವಂತರಲ್ಲ, ಬಡವರೂ ಇದ್ದಾರೆ. ಅವರು ಖರೀದಿ ಮಾಡಿ ಜೀವನ ಮಾಡೋದು ಬಹಳ ಕಷ್ಟ ಇದೆ. ಈ ಸರ್ಕಾರ ಬಂದ ಮೇಲೆ ಮನುಷ್ಯನ ಬದುಕು ಅತ್ಯಂತ ದುಬಾರಿಯಾಗಿದೆ ಜೀವನ ಮಾಡೋಕೆ ಆಗೋಲ್ಲ. ವರ್ಗಾವಣೆ ದಂಧೆ ಸರ್ಕಾರದಲ್ಲಿ ನಡೆಯುತ್ತಿದೆ. ಪೇ 40% ಸಿಎಂ ಅಂತಾ ಇದ್ದರು. ಈಗ 60% ಸಿಎಂ ಅಂತಾ ನಾವು ಹೇಳಬೇಕಾಗುತ್ತೆ. ಸರ್ಕಾರಲ್ಲಿ ಅತ್ಯಂತ ಭ್ರಷ್ಟಾಚಾರ ನಡೆಯುತ್ತಾ ಇದೆ. ಗೃಹಸಚಿವರನ್ನ ಬಿಟ್ರೆ ಉಳಿದೆಲ್ಲಾ ಖಾತೆಯಲ್ಲೂ ದಂಧೆ ನಡೆಯುತ್ತಿದೆ ಎಂದರು.
Karnataka Breaking News Live: ಶಾಸಕರು ಮತ್ತು ಸಚಿವರ ನಡುವೆ ಸೌಹಾರ್ದತೆಯ ಅಗತ್ಯವಿದೆ: ರಾಯರೆಡ್ಡಿ
ಶಾಸಕರು ಮತ್ತು ಸಚಿವರ ನಡುವೆ ಸೌಹಾರ್ದತೆಯ ಅಗತ್ಯವಿದೆ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ನಮ್ಮಂತ ಹಿರಿಯರು ಕೆಲ ಸಚಿವರ ಬಳಿ ಮಾತನಾಡಲು ತೊಂದರೆ ಆಗುತ್ತಿದೆ. ಹೀಗಾಗಿ ಶಾಸಕಾಂಗ ಸಭೆ ಕರೆಯುವಂತೆ ಆಗ್ರಹಿಸಿ ಪತ್ರ ಬರೆದಿದ್ದೆವು ಎಂದರು. ದೆಹಲಿ ಸಭೆಗೆ ನಮ್ಮನ್ನು ಕರೆಯದ ಬಗ್ಗೆ ಅಸಮಾಧಾನ ಇಲ್ಲ. ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದವರನ್ನು ಕರೆದಿದ್ದರು ಎಂದರು. ಜೆಡಿಎಸ್ನಿಂದ ಬಂದು ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯದಲ್ಲಿ ಸೀನಿಯರ್, ಜೂನಿಯರ್ ಪ್ರಶ್ನೆಯೇ ಬರಲ್ಲ. ತಮ್ಮ ಅದೃಷ್ಟ, ಪರಿಶ್ರಮದಿಂದ ಸಿಎಂ ಆದರು ಅಂತಾ ಹೇಳಿದ್ದೇನೆ. ಸಾಮಾಜಿಕ, ಪ್ರಾದೇಶಿಕ ವಿಚಾರ ಇಟ್ಟುಕೊಂಡು ಮಂತ್ರಿ ಮಾಡುತ್ತಾರೆ ಎಂದರು.
Karnataka Breaking News Live: ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಕಮಿಷನ್ ಆರೋಪ ಮಾಡಿದ ಡಾ. ಅಶ್ವಥ್ ನಾರಾಯಣ
ಗುತ್ತಿಗೆದಾರರ ಹಣ ಬಿಡುಗಡೆ ಆಗುತ್ತಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಇಳಿದಿದ್ದಾರೆ. ಅವರಿಗೆ ಅತೀ ಹೆಚ್ಚು ಕಿರುಕುಳ ಕೊಡುತ್ತಿದ್ದಾರೆ. ಅತಿ ಹೆಚ್ಚು ಕಿರುಕುಳ ನೀಡಿ ಇವರ ಬ್ರಾಂಡ್ ಹೆಚ್ಚಳ ಮಾಡಿ ಕೊಡುತ್ತಿದ್ದಾರೆ ಎಂದು ಹೇಳುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಪರೋಕ್ಷವಾಗಿ ಕಮಿಷನ್ ಆರೋಪ ಮಾಡಿದ್ದಾರೆ.
Karnataka Breaking News Live: ಯಾವ ಸಂದರ್ಭ ಏನೂ ಅಂತ ರಾಯರೆಡ್ಡಿ ಹೇಳಬೇಕು; ಬೊಮ್ಮಾಯಿ
ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಬೇಸರಗೊಂಡಿರುವ ಬಗ್ಗೆ ಮಾತನಾಡಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅವರು ಬಹಳ ಅನುಭವಸ್ಥರು, ಮೇದಾವಿಗಳು, ಬುದ್ದಿವಂತರು. ಕಾಲೇಜು ದಿನಗಳಿಂದ ನಾನು ಅವರನ್ನ ಬಲ್ಲೆ. ಅವರ ಮಾತಿಗೆ ವಿಶ್ಲೇಷನೆ, ವಿವರಣೆಯನ್ನ ಅವರೇ ಹೇಳಬೇಕು. ಅವರು ಯಾವ ಉದ್ದೇಶಕ್ಕೆ ವ್ಯಾಖ್ಯಾನ ಮಾಡುತ್ತಾರೆ ಅಂತ ಹೇಳುವುದು ಕಷ್ಟ. ಅವರು ಬಹಳ ಬುದ್ದಿವಂತರು, ಯಾವ ಸಂದರ್ಭ ಏನೂ ಅಂತ ಅವರೇ ಹೇಳಬೇಕು ಎಂದರು.
Karnataka Breaking News Live: ಸಚಿವ ಸಂಪುಟವೇ ಹೋಗಿ ಸಭೆ ಮಾಡುವುದು ಸರಿಯಲ್ಲ: ಬೊಮ್ಮಾಯಿ
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಭೆ ಬಗ್ಗೆ ನಮ್ಮ ಅಭ್ಯಂತರ ಇಲ್ಲ. ಆದರೆ ಸಚಿವ ಸಂಪುಟವೇ ಹೋಗಿ ಸಭೆ ಮಾಡುವುದು ಸರಿಯಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯದ ಜನರು ಸ್ಪಷ್ಟ ಬಹುಮತ ನೀಡಿ ಅಧಿಕಾರಕ್ಕೆ ತಂದಿದ್ದಾರೆ. ಕರ್ನಾಟಕದ ಜನರಿಗೆ ಇದು ಅವಮಾನ ಮಾಡಿದಂತಾಗುತ್ತದೆ. ರಾಜ್ಯ ಸರ್ಕಾರದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಅನಿಸುತ್ತದೆ. ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ತಮ್ಮ ಪಕ್ಷದ ಶಾಸಕರೇ ಕಂಪ್ಲೆಂಟ್ ಮಾಡಿದರೂ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರ ಸ್ಪಷ್ಟವಾಗಿ ಕಾಣುತ್ತಿದೆ, ಅಭಿವೃದ್ಧಿ ಮೇಲೆ ಪೆಟ್ಟು ಬೀಳುತ್ತಿದೆ ಎಂದರು.
Karnataka Breaking News Live: ಮೊದಲಿದ್ದ ಸಿದ್ದರಾಮಯ್ಯ ಬೇರೆ, ಈವಾಗಿನ ಸಿದ್ದರಾಮಯ್ಯ ಬೇರೆ: ಬೊಮ್ಮಾಯಿ
ಮೊದಲಿದ್ದ ಸಿದ್ದರಾಮಯ್ಯ ಬೇರೆ, ಈವಾಗಿನ ಸಿದ್ದರಾಮಯ್ಯ ಬೇರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಿದ್ದರಾಮಯ್ಯ ವರಿಷ್ಠರ ಬಳಿ ತಲೆ ಬಾಗಿರುವುದು ಬಹಳ ವಿರಳ. ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ. ಸಿದ್ದರಾಮಯ್ಯ ನೇಚರ್ ಬೇರೆ, ಅವರು ಮೊದಲಿನ ತರ ಸಿಡಿದೇಳುತ್ತಿಲ್ಲ. ಇವಾಗ ವರಿಷ್ಠರು ಮಾತನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಸರ್ಕಾರದಲ್ಲಿ ಹೈಕಮಾಂಡ್ನಿಂದಲೂ ಹಸ್ತಕ್ಷೇಪ ನಡೆಯುತ್ತಿದೆ. ಸರ್ಕಾರದ ರಿಮೋಟ್ ಕಾಂಗ್ರೆಸ್ ಹೈಕಮಾಂಡ್ ಕೈಯಲ್ಲಿದೆ. ನಿನ್ನೆಯ ಸಭೆಯಲ್ಲಿ ಕಪ್ಪ ಕಾಣಿಕೆ ಬಗ್ಗೆ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹಿಡಿದು ಕಪ್ಪ ಕಾಣಿಕೆ ಹೈಕಮಾಂಡ್ಗೆ ಕೊಡೋದು ಹೊಸದಲ್ಲ. ಇವಾಗ ನಿನ್ನೆ ನಡೆದ ಸಭೆಯಲ್ಲೂ ಮುಂದುವರಿದಿದೆ ಎಂದರು.
Karnataka Breaking News Live: ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ದ ಪ್ರತಿಭಟನೆ
ವಿಜಯಪುರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ನಗರದ ಬಿ. ಆರ್. ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ಆರಗ ಜ್ಞಾನೇಂದ್ರ ವಿರುದ್ದ ಘೋಷಣೆಗಳನ್ನು ಕೂಗಿ ಕ್ಷಮೆ ಕೇಳುವಂತೆ ಒತ್ತಾಯಿಸದರು.
Karnataka Breaking News Live: ಸರಕಾರೀ ಅಧಿಕಾರಿಗಳಿಂದಲೇ ರಾಷ್ಟ್ರ ಧ್ವಜಕ್ಕೆ ಅಗೌರವ
ರಾಮನಗರ: ಪಟ್ಟಣದ ತಹಶಿಲ್ದಾರ ಕಚೇರಿಯು ಧ್ವಜ ಸಂಹಿತೆ ಉಲ್ಲಂಘನೆಯಾಗಿದೆ. ಬಣ್ಣ ಹೋಗಿ ಹಳೇಯದಾದರೂ ಅದೇ ಧ್ವಜ ಹಾರಾಟ ಮಾಡಲಾಗಿದೆ. ಹಳೇಯ ಹಾಗೂ ಕೊಳೆಯಾಗಿರುವ ಧ್ವಜ ಹಾರಾಟ ಆಗಬಾರದು ಎಂದು ನೀತಿ ಸಂಹಿತೆ ಹೇಳುತ್ತದೆ.
Karnataka Breaking News Live: ವೈಟ್ಫೀಲ್ಡ್ ಸೈಬರ್ ಪೊಲೀಸರ ವಿರುದ್ಧ ಕೇರಳದಲ್ಲಿ ಎಫ್ಐಆರ್
ವೈಟ್ಫೀಲ್ಡ್ ಸೈಬರ್ ಪೊಲೀಸರ ವಿರುದ್ಧ ಕೇರಳದಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಸೈಬರ್ ಕ್ರೈಂ ಪ್ರಕರಣವೊಂದರ ರಿಕವರಿಗೆ ತೆರಳಿದ್ದರು. ರಿಕವರಿಗೆ ತೆರಳಿದ್ದ ಸಿಇಎನ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ತಂಡ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಇಂಜಿನಿಯರ್ಗೆ ಮೋಸ ಮಾಡಿದೆ. ಈ ಸಂಬಂಧ ಚಂದಕ್ ಶ್ರೀಕಾಂತ್ ಎಂಬುವರು ದೂರು ಕೊಟ್ಟಿದ್ದು ಸೈಬರ್ ಇನ್ಸ್ಪೆಕ್ಟರ್ ಸೇರಿ ಮೂವರನ್ನು ಕಲ್ಲಂಚೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Karnataka Breaking News Live:ರಾಮನಗರ ನಾಡಕಚೇರಿಯಿಂದ ಧ್ವಜ ಸಂಹಿತೆ ಉಲ್ಲಂಘನೆ, ಬಣ್ಣ ಹೋಗಿ ಹಳೇಯದಾದ್ರೂ ಧ್ವಜ ಹಾರಾಟ
ರಾಮನಗರದ ಮುಖ್ಯ ಹೆದ್ದಾರಿಯಲ್ಲಿರುವ ನಾಡ ಕಚೇರಿಯಿಂದ ಧ್ವಜ ಸಂಹಿತೆ ಉಲ್ಲಂಘನೆಯಾಗಿದೆ. ಬಣ್ಣ ಹೋಗಿ ಹಳೇಯದಾದ್ರೂ ಧ್ವಜ ಹಾರಾಡುತ್ತಿದೆ. ರಾಮನಗರ ಪಟ್ಟಣದ ತಹಶೀಲ್ದಾರರ ಕಚೇರಿ ಮೇಲೆ ಹಳೇಯ ಹಾಗೂ ಕೊಳೆಯಾದ ಧ್ವಜ ಹಾರಾಡುತ್ತಿದೆ. ಈ ರೀತಿಯ ಧ್ವಜ ಹಾರಾಟ ಆಗಬಾರದು ಎನ್ನುತ್ತೆ ನೀತಿ ಸಂಹಿತೆ. ಸರಕಾರೀ ಅಧಿಕಾರಿಗಳಿಂದಲೇ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಲಾಗಿದೆ.
Karnataka Breaking News Live: ಟ್ವೀಟ್ ಮೂಲಕ ಸಿದ್ದರಾಮಯ್ಯಗೆ ಹೆಚ್.ಡಿ.ದೇವೇಗೌಡ ಹಾರೈಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನಕ್ಕೆ ಗಣ್ಯರು ಶುಭಾಶಯ ಕೋರಿದ್ದಾರೆ. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಟ್ವೀಟ್ ಮಾಡಿ ಸಿದ್ದರಾಮಯ್ಯಗೆ ಶುಭಾಶಯ ಕೋರಿದ್ದಾರೆ. ದೇವರು ತಮಗೆ ಆಯುರಾರೋಗ್ಯ ಕರುಣಿಸಲಿ ಎಂದು ಹಾರೈಕೆ ಮಾಡಿದ್ದಾರೆ.
Karnataka Breaking News Live: ಕುಡಿದ ಮತ್ತಲ್ಲಿ ಸಾರ್ವಜನಿಕರೊಂದಿಗೆ ಯುವಕನ ಕಿರಿಕ್
ಜೆಪಿ ನಗರ ದಾಲ್ಮಿಯಾ ಸರ್ಕಲ್ ನಲ್ಲಿ ಕುಡಿದ ಮತ್ತಲ್ಲಿ ಸಾರ್ವಜನಿಕರೊಂದಿಗೆ ಯುವಕ ಕಿರಿಕ್ ಮಾಡಿದ ಘಟನೆ ನಡೆದಿದೆ. ಕುಡಿದು ಕಾರು ಚಾಲನೆ ಮಾಡಿಕೊಂಡು ಬಂದ ವ್ಯಕ್ತಿ ಕಿರಿಕ್ ಮಾಡಿದ್ದಾನೆ. ಸಾರ್ವಜನಿಕರಿಗೆ ಅವಾಚ್ಯ ಪದದಿಂದ ಬೈದು ನಿಂದಿಸಿದ್ದು ಥಳಿಸಿರೋದಾಗಿಯೂ ಸ್ಥಳೀಯರು ಆರೋಪಿಸಿದ್ದಾರೆ. ಟ್ವೀಟ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿ ಘಟನೆ ವಿಡಿಯೋ ಕೂಡ ಟ್ವೀಟ್ ಮಾಡಿದ್ದಾರೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ.
Karnataka Breaking News Live: ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಬೆಂಬಲಿಗರಿಂದ ಶುಭಾಶಯ
ಇಂದು ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬ ಹಿನ್ನೆಲೆ ಬೆಂಗಳೂರಿನ ಕುಮಾರಕೃಪಾ ರಸ್ತೆಯ ನಿವಾಸದ ಮುಂದೆ ಫ್ಲೆಕ್ಸ್, ಬ್ಯಾನರ್ಸ್ ರಾರಾಜಿಸುತ್ತಿವೆ. ಸಿಎಂ ಸರ್ಕಾರಿ ನಿವಾಸದ ಬಳಿ ಬ್ಯಾನರ್ ಗಳ ಭರಾಟೆ ಜೋರಾಗಿದೆ. ಅಭಿಮಾನಿಗಳು, ಬೆಂಬಲಿಗರು ಶುಭ ಕೋರಿ ಫ್ಲೆಕ್ಸ್ ಅಳವಡಿಕೆ ಮಾಡಿದ್ದಾರೆ.
Karnataka Breaking News Live: ಎಲ್ಲ ಹಂತದಲ್ಲೂ ವರ್ಗಾವಣೆಯಲ್ಲಿ ಸರ್ಕಾರ ಭಾಗಿಯಾಗಿದೆ -ಬಿ.ಸಿ.ನಾಗೇಶ್
ಈ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಎಲ್ಲ ಹಂತದಲ್ಲೂ ವರ್ಗಾವಣೆಯಲ್ಲಿ ಭಾಗಿಯಾಗಿದೆ ಸರ್ಕಾರ. ಶಾಸಕರು ಅಸಮಧಾನ ತೋಡಿಕೊಂಡಿರೋದು ಎಲ್ಲರಿಗೂ ಅರ್ಥ ಆಗುತ್ತೆ ಎಂದು ಬೆಂಗಳೂರಿನಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಾಗ್ದಾಳಿ ನಡೆಸಿದ್ದಾರೆ. ಸಚಿವರು ಅವರವರೇ ಮಾತಾಡಿಕೊಂಡು ವರ್ಗಾವಣೆ ಮಾಡ್ಕೊಳ್ತಿದಾರೆ. ಡಿ ದರ್ಜೆ ನೌಕರರನ್ನೂ ಬಿಡದಂತೆ ವರ್ಗಾವಣೆ ದಂಧೆ ನಡೀತಿದೆ. ಇದರ ಬಗ್ಗೆ ನಾವು ಮಾತಾಡಿದರೆ ಸಾಕ್ಷ್ಯ ತನ್ನಿ ಅಂತಾರೆ. ಎಲ್ಲ ಇಲಾಖೆಗಳಲ್ಲೂ ವರ್ಗಾವಣೆಗೆ ಏಜೆಂಟರು ಹುಟ್ಕೊಂಡಿದ್ದಾರೆ. ಈ ಸರ್ಕಾರಕ್ಕೆ ವರ್ಗಾವಣೆ ದಂಧೆ ಬಿಟ್ಟು ಬೇರೆ ಕೆಲಸ ಇಲ್ಲ. ಶಿಕ್ಷಕರ ಅನೇಕ ಸಮಸ್ಯೆಗಳು ನ್ಯಾಯಾಲಯದಲ್ಲಿವೆ ಎಂದರು.
Karnataka Breaking Kannada News Live: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಳವಡಿಸಿದ ಮೂರೇ ದಿನಕ್ಕೆ ಬಂದ್ ಆದ ಎಎನ್ಪಿಆರ್ ಕ್ಯಾಮರಾ
ಎನ್ಹೆಚ್ಎಐ ಅಧಿಕಾರಿಗಳ ನಿರ್ಲಕ್ಷ, ಅವಳಡಿಕೆ ಮಾಡಿದ ಮೂರೇ ದಿನಕ್ಕೆ ಎಎನ್ಪಿಆರ್ ಕ್ಯಾಮರಾಗಳು ಬಂದ್ ಆಗಿವೆ. ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಅಳವಡಿಕೆ ಮಾಡಿರೋ ಎಎನ್ಪಿಆರ್ ಕ್ಯಾಮರಾ ಅತ್ಯಂತ ತಂತ್ರಜ್ಞಾನ ಉಳ್ಳ ಕ್ಯಾಮರಾಗಳು. ದಿನದ 24 ಗಂಟೆ ಕಾರ್ಯನಿರ್ವಹಣೆ ಮಾಡುತ್ತವೆ. ವಾಹನಗಳ ನಂಬರ್ ಪ್ಲೇಟ್ ಗಳನ್ನ ರೀಡ್ ಮಾಡುವ ಕ್ಯಾಮರಾಗಳು. ಆದ್ರೆ ಅಳವಡಿಸಿದ ಮೂರೇ ದಿನಕ್ಕೆ ಬಂದ್ ಆಗಿವೆ.
Karnataka Breaking News Live: ಕವಾಡಿಗರಹಟ್ಟಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ
ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಮೂವರ ಸಾವು ಪ್ರಕರಣಕ್ಕೆ ಸಂಬಂಧಿಸಿ ಕವಾಡಿಗರಹಟ್ಟಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಮನೆಗೆ ತೆರಳಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಸಮೀಕ್ಷೆ ಮಾಡಲಾಗುತ್ತಿದೆ. ಓಆರ್ಎಸ್, ಜಿಂಕ್, ಟೆಟ್ರಾಕ್ಸಿನ್ ಮಾತ್ರೆ ವಿತರಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗೆ ಆಶಾ ಕಾರ್ಯಕರ್ತೆಯರ ಸಾಥ್.
Karnataka Breaking News Live: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ
ಸಂಸತ್ ಭವನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದರು. ರಾಜ್ಯದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಉಪಸ್ಥಿತರಿದ್ದರು.
Karnataka Breaking News Live: ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯನವರು ಇಂದು ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ. ಎರಡನೇ ಬಾರಿ ಸಿಎಂ ಆದ ಬಳಿಕ ಮೊದಲ ಬಾರಿ ಸಂಸತ್ ಭವನದಲ್ಲಿ ಮೋದಿಯನ್ನು ಭೇಟಿ ಮಾಡಿದ್ದಾರೆ. ಗಂಧದ ಹಾರ ಮತ್ತು ಮೈಸೂರು ಪೇಟೆ ಹಾಗೂ ಅಂಬಾರಿ ಕೊಟ್ಟು ಸನ್ಮಾಸಿದ್ದಾರೆ.
Karnataka Breaking News Live: ಆರಗ ಜ್ಞಾನೇಂದ್ರ ವಿರುದ್ಧ ಜಾತಿ ನಿಂದನೆ ಅಡಿ ದೂರು ದಾಖಲು
ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ ಬಗ್ಗೆ ಆರಗ ಜ್ಞಾನೇಂದ್ರ ಅವಹೇಳನ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಆರಗ ಜ್ಞಾನೇಂದ್ರ ವಿರುದ್ಧ ಜಾತಿ ನಿಂದನೆ ಅಡಿ ದೂರು ದಾಖಲಾಗಿದೆ. ದಲಿತ ಮುಖಂಡ ಹರ್ಷೇಂದ್ರ ಕುಮಾರ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಬಿಜೆಪಿ ಧರಣಿ ನಡೆಸಿತ್ತು. ಪ್ರತಿಭಟನೆ ವೇಳೆ ಖರ್ಗೆ, ಖಂಡ್ರೆಯವರನ್ನು ಆರಗ ಜ್ಞಾನೇಂದ್ರ ನಿಂದಿಸಿದ್ದರು.
Karnataka Breaking News Live: ಸಿಎಂ ಸಿದ್ದರಾಮಯ್ಯಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಬಿಎಸ್ ಯಡಿಯೂರಪ್ಪ
ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ‘ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನ್ಮದಿನದ ಶುಭಾಶಯಗಳು’ ನಿಮ್ಮ ಮೇಲೆ ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮೂಲಕ ಬಿಎಸ್ ಯಡಿಯೂರಪ್ಪನವರು ಸಿಎಂಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
Karnataka Breaking News Live: ಉಡುಪಿ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆಗೆ ಸರ್ಕಾರ SITಗೆ ವಹಿಸಬೇಕು -ಕೋಟ ಪೂಜಾರಿ
ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ ತನಿಖೆಗೆ ಸರ್ಕಾರ SITಗೆ ವಹಿಸಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ MLC ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದ್ದಾರೆ. ನಾಳೆ ಮಧ್ಯಾಹ್ನ 12.30ಕ್ಕೆ ರಾಜ್ಯಪಾಲರಿಗೆ ದೂರು ನೀಡುತ್ತಿದ್ದೇವೆ. ಉಡುಪಿ, ಮಂಗಳೂರು ಭಾಗದ ಶಾಸಕರು ರಾಜಭವನಕ್ಕೆ ತೆರಳುತ್ತೇವೆ. ಪ್ರಕರಣವನ್ನು ಸರ್ಕಾರ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸ್ತಿದೆ. ಆದರೆ ಅಧಿಕಾರಿಗಳು ಸರ್ಕಾರದ ಮಾತು ಕೇಳಿ ತನಿಖೆ ಮಾಡ್ತಾರೆ. ಹೀಗಾಗಿ ಪ್ರಕರಣವನ್ನು ಎಸ್‌ಐಟಿಗೆ ವಹಿಸಿ ಸೂಕ್ತ ತನಿಖೆ ನಡೆಸಲಿ ಎಂದರು.
Karnataka Breaking News Live: ತುರುವೇಕೆರೆ ಪಟ್ಟಣ ಬಂದ್ ಮಾಡಿ ಪ್ರತಿಭಟನೆ
ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಂದ್ಗೆ ಕರೆ ನೀಡಿದ್ದಾರೆ. ತುಮಕೂರು ಜಿಲ್ಲೆ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಯಾಗಿದೆ. 18,000 ರೂ.ಗೆ ಮಾರಾಟವಾಗ್ತಿದ್ದ ಕೊಬ್ಬರಿ 7500 ರೂ.ಗೆ ಕುಸಿದಿದೆ. ನಫೆಡ್ನಲ್ಲಿ ಕೊಬ್ಬರಿ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ತಕ್ಷಣವೇ ನಫೆಡ್ನಲ್ಲಿ ಕೊಬ್ಬರಿ ಖರೀದಿಯನ್ನು ಆರಂಭಿಸಬೇಕು. ಕೇಂದ್ರ ಸರ್ಕಾರ ಕೇವಲ 11,750 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಕನಿಷ್ಠ 20 ಸಾವಿರ ರೂ. ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Karnataka Breaking News Live: ಜೈಲುಗಳು ಭಯೋತ್ಪಾದನೆ ಟ್ರೈನಿಂಗ್ ಕೊಡುವ ಕೇಂದ್ರಗಳಾಗಿ ಬದಲಾಗಿವೆ -ಕೋಟಾ ಶ್ರೀನಿವಾಸ ಪೂಜಾರಿ
ರಾಜ್ಯದ ಜೈಲುಗಳು ಭಯೋತ್ಪಾದನೆ ಟ್ರೈನಿಂಗ್ ಕೊಡುವ ಕೇಂದ್ರಗಳಾಗಿ ಬದಲಾಗಿವೆ ಎಂದು ಬೆಂಗಳೂರಿನಲ್ಲಿ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಆಕ್ರೋಶ ಹೊರ ಹಾಕಿದ್ದಾರೆ. ಹಣ ಕೊಟ್ಟರೆ ಏನೂ ವ್ಯವಸ್ಥೆ ಬೇಕಾದರೆ ಸಿಗುತ್ತದೆ. ಅಧಿಕಾರಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಕೇವಲ ಹಿಂಡಲಗಾ ಜೈಲಿನಲ್ಲಿ ಮಾತ್ರ ಅಲ್ಲ ರಾಜ್ಯದ ಬಹುತೇಕ ಎಲ್ಲಾ ಜೈಲಿನಲ್ಲಿ ಇದೇ ವ್ಯವಸ್ಥೆ ಇದೆ. ಬೆಂಗಳೂರಿನ ಜೈಲಿನಲ್ಲಿ ಕುಳಿತು ಉಗ್ರ ಚಟುವಟಿಕೆ ಕೆಲಸ ಮಾಡುತ್ತಾರೆ. ಇದಕ್ಕೆ ಸರ್ಕಾರ ಮತ್ತು ಗೃಹ ಇಲಾಖೆ ನೇರ ಕಾರಣ. ಇದನ್ನ ನಾನು ಖಂಡಿಸುತ್ತೇನೆ ಎಂದರು.
Karnataka Breaking News Live: ಕಲುಷಿತ ನೀರು ಸೇವಿಸಿ ಮೃತ ಪಟ್ಟ ಕುಟುಂಬಗಳ ಮನೆಗಳಿಗೆ ಎಸಿ ಭೇಟಿ
ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವು ಪ್ರಕರಣಕ್ಕೆ ಸಂಬಂಧಿಸಿ ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಗೆ ಎಸಿ ಕಾರ್ತಿಕ್ ಭೇಟಿ ನೀಡಿದ್ದಾರೆ. ಮೃತರ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಎಸಿ ಕಾರ್ತಿಕ್ ಭೇಟಿ ವೇಳೆ ಮೃತ ರಘು ತಾಯಿ ವಿಮಲಮ್ಮ ಕಣ್ಣೀರಿಟ್ಟರು. ಬೆಂಗಳೂರಿನಲ್ಲೇ ಇದ್ದಿದ್ದರೆ ನನ್ನ ಮಗ ಬದುಕಿರುತ್ತಿದ್ದ. ಊರಿಗೆ ಬಂದು ಹೋಗಿದ್ದೇ ಜೀವಕ್ಕೆ ಕಂಟಕ ಆಯಿತೆಂದು ಗೋಳಾಡಿದ್ದಾರೆ.
Karnataka Breaking News Live: ಬಿಸಿಲ ಕೊಪ್ಪದಲ್ಲಿ ವಾಹನಗಳ ನಡುವೆ ಸರಣಿ ಅಪಘಾತ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಸಿಲ ಕೊಪ್ಪದಲ್ಲಿ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಡಿಕ್ಕಿ ಬಳಿಕ ರಸ್ತೆ ಪಕ್ಕದ ಅಂಗಡಿಗಳಿಗೆ ವಾಹನಗಳು ನುಗ್ಗಿವೆ. ಬೊಲೆರೋ, ಬಸ್, ಮಾರುತಿ ಒಮಿನಿ ನಡುವೆ ಸರಣಿ ಅಪಘಾತ ಸಂಭವಿಸಿದೆ. ಗಾಡಿಯಲ್ಲಿದ್ದ ಕೆಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Karnataka Breaking News Live: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅಕ್ರಮ
ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ನಡೆಯುತ್ತಿದ್ದು ಟಿವಿ9 ಬಯಲು ಮಾಡಿದೆ. ಹಿಂಡಲಗಾ ಜೈಲು ರಾಜ್ಯದ 2ನೇ ಅತಿದೊಡ್ಡ ಕೇಂದ್ರ ಕಾರಾಗೃಹ. ಕೈದಿ ಸುರೇಶ್ ಜೈಲಿನ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆಲ್ನ ಪರಿಸ್ಥಿತಿ ಹೇಗಿದೆ ಅನ್ನೋ ವಿಡಿಯೋ ಟಿವಿ9ಗೆ ಲಭ್ಯವಾಗಿದೆ. ಇಲ್ಲಿ ಜೈಲು ಸಿಬ್ಬಂದಿ ಹಣ ನೀಡುವ ಕೈದಿಗಳಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸುತ್ತಾರೆ. ಹಣ ನೀಡದ ಕೈದಿಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಾಋಎ. ಹಣ ಇಲ್ಲದವರು ಪ್ರಶ್ನೆ ಮಾಡಿದ್ರೆ ಅವರ ಮೇಲೆ ಜೈಲು ಸಿಬ್ಬಂದಿ ಹಲ್ಲೆ ಮಾಡ್ತಾರೆ ಎಂಬ ಮಾಹಿತಿ ಸಿಕ್ಕಿದೆ.
Karnataka Breaking News Live: ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ
ರಾಜ್ಯದಲ್ಲಿ ಮಳೆ ಪ್ರಮಾಣ ಬಹುತೇಕ ಇಳಿಮುಖವಾದರೂ ಚಿಕ್ಕಮಗಳೂರು ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಬೆಟ್ಟಗುಡ್ಡಗಳು ಕುಸಿಯೋದು, ಮರಗಳು ಮುರಿದು ಬೀಳೋದು ಇನ್ನೂ ನಿಂತಿಲ್ಲ. ಹಾಗಾಗಿ, ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿ ಹಿತದೃಷ್ಠಿಯಿಂದ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜ ತಾಣಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಿದೆ.
Karnataka Breaking News Live: ಮಂಗಳೂರಿನಲ್ಲಿ MDMA ಸಮೇತ ಮೂವರು ಡ್ರಗ್ ಪೆಡ್ಲರ್ಗಳ ಬಂಧನ
ಮಂಗಳೂರು ಹೊರವಲಯ ಉಳ್ಳಾಲ ಬಳಿ ಕಾರ್ಯಾಚರಣೆ ನಡೆಸಿ MDMA ಸಮೇತ ಮೂವರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ. ತಲಪಾಡಿ ಬಳಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದಾಗ ಬಂಧಿಸಲಾಗಿದೆ. ಉಳ್ಳಾಲದ ಮೊಹಮ್ಮದ್ ಹಫೀಝ್, ಸಜಿಪದ ಅಮೀರ್ ಅಲಿಯಾಸ್ ಅಮ್ಮಿ, ದಾಸರಗುಡ್ಡೆ ಮನೆ ನಿವಾಸಿ ಜಾಕೀರ್ ಹುಸೇನ್ ಅಲಿಯಾಸ್ ತಾಚೀ ಬಂಧನ. 200 ಗ್ರಾಂ ತೂಕದ 10 ಲಕ್ಷ ಮೌಲ್ಯದ MDMA ಜಪ್ತಿ ಮಾಡಲಾಗಿದೆ.
Karnataka Breaking News Live: ಆಟೋದಲ್ಲಿ ಯುವತಿಯನ್ನು ಕೂರಿಸಿಕೊಂಡು ಹೋಗ್ತಿದ್ದ ಅನ್ಯಕೋಮಿ ಚಾಲಕನ ಮೇಲೆ ಹಲ್ಲೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ಮುಂದುವರಿದಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಸ್ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಆಟೋದಲ್ಲಿ ಯುವತಿಯನ್ನು ಕೂರಿಸಿಕೊಂಡು ಹೋಗ್ತಿದ್ದಾಗ ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್(22) ಮೇಲೆ ಹಲ್ಲೆ ನಡೆಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Karnataka Breaking News Live: ಶೀಘ್ರದಲ್ಲೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು
ಶೀಘ್ರದಲ್ಲೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು. ಈಗಾಗಲೇ ಕಾಚಿಗುಡ-ಧೋನ್ವರೆಗೆ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದ್ದು ಯಶವಂತಪುರ-ಹೈದರಾಬಾದ್ ನಡುವೆ ಹೊಸ ರೈಲು ಸಂಚರಿಸಲಿದೆ. ಶೀಘ್ರದಲ್ಲೇ ಯಶವಂತಪುರವರೆಗೆ ಪ್ರಾಯೋಗಿಕ ಸಂಚಾರ ಪೂರ್ಣಗೊಳ್ಳಲಿದೆ. ಆಗಸ್ಟ್ ಅಂತ್ಯದೊಳಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ ಸಾಧ್ಯತೆ.
Karnataka Breaking News Live: ರಾಜ್ಯೋತ್ಸವ ಪ್ರಶಸ್ತಿ ಪುರಸ್ತೃತ ಮಮತಾ ಗೂಡೂರ ವಿಧಿವಶ
ವೃತ್ತಿರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ತೃತ ಮಮತಾ ಗೂಡೂರ(75) ವಿಧಿವಶ. ಮೆದುಳಿನ ರಕ್ತಸ್ರಾವದಿಂದ ಕೆಲ ತಿಂಗಳಿಂದ ಬಳಲುತ್ತಿದ್ದ ಕಲಾವಿದೆ ಇಂದು ಬೆಳಿಗ್ಗೆ 7 ಗಂಟೆ ಗೂಡೂರು ಗ್ರಾಮದ ಮನೆಯಲ್ಲಿ ವಿಧಿವಶರಾಗಿದ್ದಾರೆ. ಇವರು 5 ಸಾವಿರಕ್ಕೂ ಅಧಿಕ ನಾಟಕಗಳನ್ನಾಡಿದ್ದ. 25 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ವಜ್ರಮುನಿ, ಅಂಬರೀಷ್ ಸೇರಿದಂತೆ ಅನೇಕ ಧಿಗ್ಗಜರೊಂದಿಗೆ ತೆರೆ ಹಂಚಿಕೊಂಡಿದ್ದರು.
Karnataka Breaking News Live: ನಾಳೆಯಿಂದ ಲಾಲ್ ಬಾಗ್ ಫ್ಲವರ್ ಶೋ ಆರಂಭ
ನಾಳೆಯಿಂದ ಲಾಲ್ ಬಾಗ್ ಫ್ಲವರ್ ಶೋ ಆರಂಭ. ನಾಳೆ ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ಲಾಲ್ ಬಾಗ್ ಉದ್ಘಾಟಿಸಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 214 ನೇ ಫ್ಲವರ್ ಶೋ ನಾಳೆಯಿಂದ ಆರಂಭವಾಗಲಿದೆ. ಈ ಬಾರಿ ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯ ರವರ ಕಾನ್ಸೆಪ್ಟ್ ನಲ್ಲಿ ಫ್ಲವರ್ ಶೋ ಆಯೋಜಿಸಲಾಗಿದ್ದು ನಾಳೆಯಿಂದ ಆರಂಭವಾಗಿ ಆಗಸ್ಟ್ 15ರವರೆಗೂ ಫ್ಲವರ್ ಶೋ ನಡೆಯಲಿದೆ.
Karnataka Breaking News Live: ಕಬಿನಿ ಡ್ಯಾಮ್ನ ಒಳಹರಿವು ಮತ್ತಷ್ಟು ಇಳಿಕೆ
ಕೇರಳದ ವಯನಾಡು ಭಾಗದಲ್ಲಿ ಮಳೆ ಪ್ರಮಾಣ ಇಳಿಮುಖ ಹಿನ್ನೆಲೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಬಳಿಯ ಕಬಿನಿ ಡ್ಯಾಮ್ನ ಒಳಹರಿವು ಮತ್ತಷ್ಟು ಇಳಿಕೆಯಾಗಿದೆ. 84 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 83.35 ಅಡಿ ಇದೆ. ಜಲಾಶಯದ ಇಂದಿನ ಒಳಹರಿವು 2,043 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಕಬಿನಿ ಜಲಾಶಯದ ಹೊರಹರಿವು 2,750 ಕ್ಯೂಸೆಕ್ ಇದೆ.
Karnataka Breaking News Live: ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಪತಿ
ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಗಂಡ-ಹೆಂಡತಿ ಗಲಾಟೆ ಮಾಡಿಕೊಂಡಿದ್ದು ಪತ್ನಿಯ ಬೆರಳನ್ನೇ ಕಚ್ಚಿ ಪತಿ ತಿಂದಿದ್ದಾನೆ. ಪತ್ನಿ ಪುಷ್ಪಾಳ ಎಡಗೈ ಬೆರಳನ್ನೇ ಪತಿ ವಿಜಯ್ ಕುಮಾರ್ ಕಚ್ಚಿ ತಿಂದಿದ್ದಾನೆ.
Karnataka Breaking News Live: 50 ಪಿಎಸ್ಐಗಳನ್ನು ವರ್ಗಾವಣೆಗೊಳಿಸಿ ಇಲಾಖೆ ಆದೇಶ
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ವರ್ಗಾವಣೆ. 50 ಮಂದಿ ಪಿಎಸ್ಐಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
Karnataka Breaking News Live: ರಾಜ್ಯದಿಂದ I.N.D.I.Aಗೆ 20 ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದೇವೆ -ಡಿಕೆ ಶಿವಕುಮಾರ್
ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆ ಪ್ರಮುಖವಾಗಿ ಚರ್ಚೆ ಮಾಡಿದ್ದೇವೆ. ಕನಿಷ್ಠ 20 ಸ್ಥಾನ ಗೆಲ್ಲುವುದಾಗಿ ಹೈಕಮಾಂಡ್ಗೆ ಭರವಸೆ ನೀಡಿದ್ದೇವೆ ಎಂದು ಎಐಸಿಸಿ ಕಚೇರಿಯಲ್ಲಿ ಸಭೆ ನಂತರ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಕರ್ನಾಟಕದಲ್ಲಿ ಒಗ್ಗಟ್ಟಿನ ಪ್ರದರ್ಶನವಾಗಿದೆ, ನುಡಿದಂತೆ ನಡೆದಿದ್ದೇವೆ. ವಿಧಾನಸಭೆ ಚುನಾವಣೆ ಮಾದರಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ. ರಾಜ್ಯದಿಂದ I.N.D.I.Aಗೆ 20 ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದೇವೆ ಎಂದರು.
Karnataka Breaking News Live: ಮಾತನಾಡಿಸುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ವಕೀಲನ ಮೇಲೆ ಹಲ್ಲೆ, 3 ಅರೆಸ್ಟ್
ಮಾತನಾಡಿಸುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ವಕೀಲನ ಮೇಲೆ ಹಲ್ಲೆ ನಡೆಸಿರುವ ಘಟನೆ ಜುಲೈ 24ರಂದು ಬೆಂಗಳೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 8 ಜನರಿಗೆ ಬೇಲ್ ಕೊಡಿಸಬೇಕು, 5 ಲಕ್ಷ ಹಣ ತಂದುಕೊಡುವಂತೆ ಬಟ್ಟೆ ಬಿಚ್ಚಿಸಿ ಕೂರಿಸಿ ರಾತ್ರಿಯಿಡೀ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ರೌಡಿಶೀಟರ್ ರಾಜೇಶ್@ಕೋಳಿ ರಾಜೇಶ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Karnataka Breaking News Live: ಜಿ-20 ಶೃಂಗಸಭೆಯ ಸದಸ್ಯರಿಂದ ಮೈಸೂರು ಅರಮನೆ ವೀಕ್ಷಣೆ
ಜಿ-20 ಶೃಂಗಸಭೆಯ ಸದಸ್ಯರು ಮೈಸೂರು ಅರಮನೆ ವೀಕ್ಷಣೆ ಮಾಡಿದರು. ನಿನ್ನೆ ಅರಮನೆಗೆ ಭೇಟಿ ನೀಡಿದ್ದ ಥಿಂಕ್ 20 ಸಮ್ಮೇಳನದ ಸದಸ್ಯರು ಮೈಸೂರು ಅರಮನೆಯ ವಿನ್ಯಾಸ, ವೈಶಿಷ್ಟ ಕಂಡು ಬೆರಗಾದರು. 3 ದಿನಗಳ ಕಾಲ ಅಧ್ಯಯನ ಪ್ರವಾಸ ಕೈಗೊಂಡಿರುವ ಇವರು ಮೈಸೂರು ಜಿಲ್ಲೆಯ ಐತಿಹಾಸಿಕ ಪ್ರೇಕ್ಷಣಿಯ ತಾಣಗಳ ವೀಕ್ಷಣೆ ಮಾಡಿದರು. ಮೈಸೂರಿನ ಅಂಬಾವಿಲಾಸ ಅರಮನೆಗೆ 198 ದೇಶಗಳ ಗಣ್ಯರ ಭೇಟಿ ನೀಡಿದ್ರು. ಅರಮನೆ ಆಡಳಿತ ಮಂಡಳಿ ಗಣ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡಿತು.
Karnataka Breaking News Live: ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರ ಸಂಖ್ಯೆ 107ಕ್ಕೆ ಏರಿಕೆ
ಚಿತ್ರದುರ್ಗದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವು ಪ್ರಕರಣಕ್ಕೆ ಸಂಬಂಧಿಸಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಅಸ್ವಸ್ಥರಿಗೆ ಸರ್ಕಾರಿ ಜಿಲ್ಲಾಸ್ಪತ್ರೆ & ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈವರೆಗೆ 7 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Karnataka Breaking News Live: ಸಿಎಂ ಗೃಹ ಸಚಿವರ ರಹಸ್ಯ ಸಭೆ ಬಳಿಕವೂ ಬಗೆಹರಿಯದ ಗೃಹ ಇಲಾಖೆ ವರ್ಗಾವಣೆ ಸಮಸ್ಯೆ
ಗೃಹ ಇಲಾಖೆ ವರ್ಗಾವಣೆ ವಿಚಾರ ಬಗೆಹರಿದಿಲ್ಲ. ಸಿಎಂ ಗೃಹ ಸಚಿವರ ರಹಸ್ಯ ಸಭೆ ಬಳಿಕವೂ ಕೂಡ ಸಮಸ್ಯೆ ಬಗೆಹರಿದಿಲ್ಲ. ನಿನ್ನೆ ಮೊನ್ನೆ ಗೃಹ ಇಲಾಖೆ ವರ್ಗಾವಣೆ ಆದ ಬಳಿಕವೂ ಶಾಸಕರು ಮಾಜಿ ಶಾಸಕರು ಬೇಸರಗೊಂಡಿದ್ದಾರೆ. ಮಾಜಿ ಶಾಸಕರ ಪತ್ರಗಳಿಗಂತೂ ಮನ್ನಣೆಯೇ ನೀಡಿಲ್ಲ. ಕೆಲವು ಕಡೆ ಹಾಲಿ ಶಾಸಕರ ಶಿಫಾರಸುಗಳಿಗೂ ಮನ್ನಣೆ ನೀಡದೇ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ ಗೊಂದಲಗಳ ಹಿನ್ನೆಲೆಯಲ್ಲಿ ವರ್ಗಾವಣೆಗೆ ತಡೆ ನೀಡಲಾಗಿದೆ. ದೆಹಲಿಯಲ್ಲಿ ಸಭೆ ಬಳಿಕವೂ ಕೂಡ ಸಮಸ್ಯೆ ಬಗೆಹರಿಯದೇ ಇದ್ದರೆ ಶಾಸಕರು ಮತ್ತಷ್ಟು ಅಸಮಧಾನಗೊಳ್ಳಬಹುದು. ಇನ್ನು ಸಿಎಂ ಬಳಿಯೇ ಉಳಿದ ಎಲ್ಲ ಇಲಾಖೆಗಳ ವರ್ಗಾವಣೆ ಫೈಲ್ ಗಳೂ ಕೂಡ ತಲುಪಿವೆ. ವರ್ಗಾವಣೆ ವಿಚಾರದಲ್ಲಿ ಸಿಎಂ ಕೂಡ ತಮ್ಮ ಬೇಡಿಕೆಗಳಿಗೆ ಮನ್ನಣೆ ನೀಡ್ತಿಲ್ಲ ಎಂದು ಶಾಸಕರು ಅಸಮಾಧಾನಗೊಂಡಿದ್ದಾರೆ.
Published On - Aug 03,2023 8:04 AM