ನೇಗಿಲ ಯೋಗಿ, ತೇಗ ಸಿರಿ: ರೈತರಿಗಾಗಿ ಹಲವು ಯೋಜನೆ ಜಾರಿಗೆ ಕ್ಯಾಬಿನೆಟ್ ಗ್ರೀನ್​​ ಸಿಗ್ನಲ್​​

ಸಣ್ಣ ರೈತರಿಗೆ ಉಚಿತ ಉಳುಮೆ ಸೌಲಭ್ಯ ಒದಗಿಸುವ ‘ಮುಖ್ಯಮಂತ್ರಿ ನೇಗಿಲಯೋಗಿ’ ಹಾಗೂ ತೇಗದ ಗಿಡ ನೀಡುವ ‘ತೇಗ ಸಿರಿ’ ಯೋಜನೆ ಸೇರಿದಂತೆ ಹಲವು ಕೃಷಿ ಉತ್ತೇಜನ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಗಿಲ ಯೋಗಿ, ತೇಗ ಸಿರಿ: ರೈತರಿಗಾಗಿ ಹಲವು ಯೋಜನೆ ಜಾರಿಗೆ ಕ್ಯಾಬಿನೆಟ್ ಗ್ರೀನ್​​ ಸಿಗ್ನಲ್​​
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Sep 09, 2026 | 6:06 PM

ಬೆಂಗಳೂರು, ಸೆಪ್ಟೆಂಬರ್​​ 09: ಸಿಎಂ ಡಿಕೆ ಶಿವಕುಮಾರ್​​ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಯೋಜನೆಗಳ ಜಾರಿಗೆ ತೀರ್ಮಾನಿಸಲಾಗಿದೆ. ರಸ್ತೆ ಪಕ್ಕದ ಜಮೀನಿನ ರೈತರಿಗೆ ತೇಗದ ಸಸಿ ನೀಡುವ ‘ತೇಗ ಸಿರಿ ಯೋಜನೆ’ ಜಾರಿಗೆ ಸಂಪುಟ ಅನುಮೋದನೆ ನೀಡಿದ್ದು, ರೈತರಿಗೆ ಸರ್ಕಾರದಿಂದಲೇ ತೇಗದ ಸಸಿ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಟೀಕ್ ಗಿಡಗಳನ್ನು ರೈತರು ಪಾಲನೆ ಪೋಷಣೆ ಮಾಡುವ ಜೊತೆಗೆ 15 ವರ್ಷದವರೆಗೂ ಅವನ್ನು ಕಡಿಯುವಂತಿಲ್ಲ. ಮರ ಮಾರಾಟ ಬಳಿಕ 70% ಲಾಭ ರೈತನಿಗೆ ಸಿಗಲಿದೆ. ಮರವನ್ನು ಸರ್ಕಾರ ಅಥವಾ ಖಾಸಗಿಯವರಿಗೂ ರೈತರು ಮಾರಬಹುದಾಗಿದ್ದು, ಈ ಯೋಜನೆಗೆ 493 ಕೋಟಿ ರೂ. ಖರ್ಚು ಮಾಡಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆಗೆ ತೀರ್ಮಾನ

ರೈತರಿಂದ ಟ್ರ್ಯಾಕ್ಟರ್​ಗಳನ್ನ ಸರ್ಕಾರವೇ ಬಾಡಿಗೆ ಪಡೆದು ಬಡ ರೈತರ ಜಮೀನು ಉಳುಮೆ ಮಾಡಲು ಬಳಸಲು ನಿರ್ಧರಿಸಲಾಗಿದೆ. ಜಿಲ್ಲೆಗೆ ಒಂದರಂತೆ 31 ತಾಲೂಕಲ್ಲಿ ಪ್ರಾಯೋಗಿಕವಾಗಿ ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ ಚಾಲನೆಗೆ 152 ಕೋಟಿ ಅನುದಾನ ನೀಡಲಾಗಿದ್ದು, ಶಾಸಕ ಪುಟ್ಟಸ್ವಾಮಿಗೌಡ ಅವರು ಸಣ್ಣ ಪ್ರಮಾಣದಲ್ಲಿ ಕೈಗೊಂಡಿದ್ದ ಮಾದರಿಯಲ್ಲೇ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಈಗ ಎತ್ತುಗಳು ಇಲ್ಲ, ಉಳುಮೆ ಮಾಡಲು ಜನ ಸಿಗುತ್ತಿಲ್ಲ. ಹೀಗಾಗಿ ಬಡ ರೈತರಿಗೆ ಅನುಕೂಲ ಆಗಬೇಕೆಂಬ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದ್ದು, 3 ಎಕರೆಗಿಂತ ಕಡಿಮೆ ಜಮೀನಿರುವ ರೈತರಿಗೆ ಇದರ ಪ್ರಯೋಜನ ಸಿಗಲಿದೆ. ಮೂರು ಎಕರೆ ಮೇಲ್ಪಟ್ಟ ರೈತರಿಗೆ ಯೋಜನೆ ಅನ್ವಯಿಸಲ್ಲ.

ಇದನ್ನೂ ಓದಿ: ಸಚಿವ ಸಂಪುಟ ಸಭೆ: ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗೆ ಕ್ಯಾಬಿನೆಟ್ ಅಸ್ತು

20,000 ಕೋಟಿ ಬಂಡವಾಳ ಹೂಡಿಕೆ ಆಕರ್ಷಣೆಯ ಗುರಿ

ನೂತನ ಜವಳಿ ನೀತಿಗೂ ಸರ್ಕಾರ ಮುಂದಾಗಿದ್ದು, ಮುಂದಿನ 5 ವರ್ಷಗಳಲ್ಲಿ 20,000 ಕೋಟಿ ಬಂಡವಾಳ ಹೂಡಿಕೆ ಆಕರ್ಷಣೆಯ ಗುರಿ ಹೊಂದಲಾಗಿದೆ. ಗಾರ್ಮೆಂಟ್ ಇಂಡಸ್ಟ್ರಿಗಳು ಹೆಚ್ಚಾಗಿ ಬೆಂಗಳೂರಿನಲ್ಲೇ ಇರುವ ಕಾರಣ, ಅವು ಬೇರೆ ಬೇರೆ ಜಿಲ್ಲೆ ಮತ್ತು ತಾಲೂಕುಗಳಲ್ಲಿಯೂ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶವನ್ನು ಹೊಂದಲಾಗಿದೆ. ಕ್ರೆಡಿಟ್ ಲಿಂಕ್, ಕ್ಯಾಪಿಟಲ್ ಸಬ್ಸಿಡಿ, ಶೇ.5 ಕ್ರೆಡಿಟ್ ಲಿಂಕ್ ಬಂಡವಾಳ ಪಡೆಯಲು ಸಹಾಯದ ಜೊತೆಗೆ ಯೂನಿಟ್​​ಗೆ ಎರಡು ರೂಪಾಯಿ ಪವರ್ ಸಬ್ಸಿಡಿಯೂ ಸಿಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:05 pm, Wed, 9 September 26

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us