ಸಚಿವ ಸಂಪುಟ ಸಭೆ: ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗೆ ಕ್ಯಾಬಿನೆಟ್ ಅಸ್ತು
ರಾಜ್ಯದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ 2026-27ರಿಂದ ವಿದ್ಯಾರ್ಥಿ ಸಂಘದ ಚುನಾವಣೆ ಪುನರಾರಂಭ, ಏರೋಸ್ಪೇಸ್ ಪಾಲಿಸಿ ಹಾಗೂ ಉದ್ಯೋಗ ಪ್ರೋತ್ಸಾಹಧನ ಯೋಜನೆ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಪರಮೇಶ್ವರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 09: ರಾಜ್ಯದಲ್ಲಿ ಉದ್ಯೋಗ ಸೃಷ್ಟಿ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆ ಸೇರಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಸಿಎಂ ಡಿಕೆಶಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಡಿಸಿಎಂ ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದು, ಉದ್ಯೋಗ ನಿಧಿ ಯೋಜನೆಯಡಿ 10 ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ನಿರ್ಧರಿಸಲಾಗಿದೆ. ಉದ್ಯೋಗ ಸೃಷ್ಟಿಸಿದರೆ ಪ್ರತಿ ಉದ್ಯೋಗಿಗೆ ಎರಡು ವರ್ಷ ಪ್ರತಿ ತಿಂಗಳು 2,500 ಪ್ರೋತ್ಸಾಹ ಧನ ನೀಡಲಾಗುವುದು. 10 ಕೋಟಿ ಅನುದಾನದಲ್ಲಿ 182 ಕಡೆ ಟೆಲಿ ಐಸಿಯು ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದ್ದು, ಕರ್ನಾಟಕ ಡಿಜಿಟಲ್ ರೇಡಿಯೋಗ್ರಫಿ ಮಿಷನ್ ಹಂತ-1 ಜಾರಿಗೂ ಅನುಮೋದನೆ ನೀಡಲಾಗಿದೆ. ಇದರಡಿ 162 ಎಕ್ಸ್-ರೇ ಘಟಕಗಳನ್ನು ಡಿಜಿಟಲ್‌ಗೆ ಉನ್ನತೀಕರಣ ಮಾಡಲು 40.50 ಕೋಟಿ ಹಣ ವೆಚ್ಚಕ್ಕೆ ಕ್ಯಾಬಿನೆಟ್ ಸಮ್ಮತಿಸಿದೆ ಎಂದವರು ತಿಳಿಸಿದ್ದಾರೆ.
ವಿದ್ಯಾರ್ಥಿ ಚುನಾವಣೆಗೆ ಕ್ಯಾಬಿನೆಟ್ ಅನುಮೋದನೆ
ಇನ್ನು, ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಈ ಹಿಂದೆ ಕಾಲೇಜುಗಳಲ್ಲಿ ನಡೆಯುತ್ತಿದ್ದ ಎಲೆಕ್ಷನ್ಗಳನ್ನು ಕೆಲವು ಕಾರಣಗಳಿಂದ ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಮತ್ತೆ ಚುನಾವಣೆಗಳನ್ನ ಮಾಡಲು ತೀರ್ಮಾನ ತೆಗೆದುಕೊಂಡಿದ್ದೇವೆ. 2026-27ನೇ ಸಾಲಿನಿಂದ ಇದನ್ನು ಜಾರಿಗೆ ತರಲಾಗುತ್ತಿದ್ದು, ಯಾವುದೇ ಪಕ್ಷ ಮತ್ತು ಸಂಘಟನೆಗಳು ಹೋಗಿ ಪ್ರಚಾರ ಮಾಡುವುಂತಿಲ್ಲ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ 100 ದಿನ: ಸರ್ಕಾರದ ಸಾಧನೆಯ ಪಟ್ಟಿ ಇಲ್ಲಿದೆ ನೋಡಿ
ಕರ್ನಾಟಕ ಏರೋಸ್ಪೇಸ್ ಪಾಲಿಸಿಗೆ ಸಂಪುಟ ಅಸ್ತು
ಕರ್ನಾಟಕ ಏರೋಸ್ಪೇಸ್ ಪಾಲಿಸಿ 2026-31ಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಏರೋಸ್ಪೇಸ್, ಡಿಫೆನ್ಸ್, ಏವಿಯೇಷನ್ ಇದರ ಉತ್ಪಾದನೆ ಹಾಗೂನಾವೀನ್ಯತೆ ಕ್ಷೇತ್ರದಲ್ಲಿ ಕರ್ನಾಟಕವನ್ನು ಕೇಂದ್ರವನ್ನಾಗಿ ಸ್ಥಾಪಿಸುವ ಗುರಿ ಹೊಂದಲಾಗಿದೆ. 5 ವರ್ಷಗಳಲ್ಲಿ 60 ಸಾವಿರ ಕೋಟಿ ಹೂಡಿಕೆ ಮಾಡುತ್ತಿದ್ದು, 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಫೋಕಸ್ ಏರಿಯಾ ಮತ್ತು ನಾನ್ ಫೋಕಸ್ ಏರಿಯಾ ಅಂತ ಮಾಡಿದ್ದು, ಹೂಡಿಕೆದಾರರಿಗೆ ಸಬ್ಸಿಡಿ ಕೊಡಲಾಗುತ್ತೆ. ಹೆಚ್ಎಎಲ್ನಲ್ಲಿ 40 ಫ್ಲೈಟ್ ಉತ್ಪಾದನೆ ಮಾಡುವ ಯೋಜನೆಯೂ ಇದ್ದು, ಈ ರೀತಿಯ ಯೋಜನೆಗೆ ಯಾರು ಉತ್ಪಾದಕರು ಬರುತ್ತಾರೋ ಅವರಿಗೆ ಸಬ್ಸಿಡಿ ರೂಪದಲ್ಲಿ ಸಹಾಯ ಮಾಡಲು ಪಾಲಿಸಿ ಸೇರಿಸಿದ್ದೇವೆ ಎಂದು ಡಿಸಿಎಂ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 42.83 ಕೋಟಿ ವೆಚ್ಚದಲ್ಲಿ ಡ್ರೋನ್ ಟೆಕ್ನಾಲಜಿ ಫೆಸಿಲಿಟಿ ಸೆಂಟರ್ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಬಡವರಿಗೆ 15 ಲಕ್ಷ ಸೈಟ್ ಹಂಚಿಕೆಗೆ ನಿರ್ಧಾರ
ರಾಜ್ಯಾದ್ಯಂತ ಬಡವರಿಗೆ 15 ಲಕ್ಷ ಸೈಟ್ ಹಂಚಿಕೆಗೆ ಸಂಪುಟ ಅನುಮೋದನೆ ನೀಡಿದ್ದು, ಪ್ರತಿ ಜಿಲ್ಲೆಗೆ 50 ಸಾವಿರ ನಿವೇಶನ ಕೊಡಲು ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ಮೂರು ಹಂತದಲ್ಲಿ ಸೈಟ್ ಹಂಚಿಕೆ ನಡೆಯಲಿದ್ದು, ಸೆಪ್ಟೆಂಬರ್ನಲ್ಲಿ 5 ಲಕ್ಷ ಸೈಟ್ ಹಂಚಿಕೆ ಮಾಡಲಾಗುತ್ತೆ. 2ನೇ & 3ನೇ ಹಂತದಲ್ಲಿ ತಲಾ 5 ಲಕ್ಷ ಸೈಟ್ ಹಂಚಿಕೆ ನಡೆಯಲಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಶಕ್ತಿ ಯೋಜನೆ ಸ್ಮಾರ್ಟ್ಕಾರ್ಡ್ ವಿತರಣೆ
ಶಕ್ತಿ ಯೋಜನೆ ಸಂಬಂಧ ಸ್ಮಾರ್ಟ್ಕಾರ್ಡ್ ನೀಡಲು ಸರ್ಕಾರದಿಂದ ತೀರ್ಮಾನಿಸಲಾಗಿದೆ. ಇದಕ್ಕೆ 237 ಕೋಟಿ ರೂ. ಖರ್ಚಾಗಲಿದ್ದು, ಸರ್ಕಾರ 100 ಕೋಟಿ ಹಣ ನೀಡಲಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ವಿತರಣೆ ನಡೆಯಲಿದ್ದು, ಇದರಿಂದ ಮಹಿಳೆಯರ ಉಚಿತ ಪ್ರಯಾಣದ ನಿಖರ ಮಾಹಿತಿ ಸಿಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:34 pm, Wed, 9 September 26




