
ಬೆಂಗಳೂರು, ಜನವರಿ 14: ಜನವರಿ 31ರ ವರೆಗೆ ವಿಶೇಷ ಅಧಿವೇಶನ ನಡೆಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ವಿಬಿಜಿ ರಾಮ್ ಜಿ ಕಾಯ್ದೆ 2025 ಸಮಾಜದ ಮೇಲೆ ಬೀರುವ ಪರಿಣಾಮಗಳ ಕುರಿತು ಜಂಟಿ ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯಿಸಲು ತೀರ್ಮಾನ ಮಾಡಲಾಗಿದೆ ಎಂದು ವಿಶೇಷ ಕ್ಯಾಬಿನೆಟ್ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಕೇಂದ್ರದಿಂದ ನರೇಗಾ ಯೋಜನೆ ಹೆಸರು ಬದಲಾವಣೆ ವಿಚಾರ ಸಂಬಂಧ ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಯೋಜನೆಯಡಿ ಹಿಂದೆ ಕೇಂದ್ರ ಶೇ.100 ಹಣ ಕೊಡ್ತಿತ್ತು, ಆದರೆ ಈಗ ಶೇ.40ರಷ್ಟು ಹಣವನ್ನು ರಾಜ್ಯವೇ ಕೊಡಬೇಕು. ಹೊಸ ಕಾಯ್ದೆ ಪ್ರಕಾರ ಕೇಂದ್ರ ಹೇಳಿದ ಕಡೆ ಕೆಲಸ ಮಾಡಬೇಕಿದ್ದು, ಬಡವರಿಗೆ ದ್ರೋಹ ಮಾಡಲಾಗ್ತಿದೆ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ಅಲ್ಲದೆ ಬಿಜೆಪಿಗರು ನಕಲಿ ರಾಮನ ಭಕ್ತರಾಗಿದ್ದು, ಮತಕ್ಕಾಗಿ ರಾಮ ಅಂತಾರೆ. ಎಲ್ಲ ದೇವಸ್ಥಾನ ಕಟ್ಟಿದ್ದು ನಾವಾಗಿರುವ ಕಾರಣ ನಿಜವಾದ ರಾಮನ ಭಕ್ತರು ನಾವೇ. ಬಿಜೆಪಿಯವರು ನಕಲಿ ಹಿಂದೂಗಳು ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ‘ವಿಬಿಜಿ ರಾಮ್ ಜಿ ಕಾಯ್ದೆ’ ಭ್ರಷ್ಟಾಚಾರಿ ಕಾಂಗ್ರೆಸ್ ಮಧ್ಯವರ್ತಿಗಳಿಗೆ ತೊಡಕು; ಜೋಶಿ ತಿರುಗೇಟು
ಆದರೆ ವಿಬಿ ಜೀ ರಾಮ್ ಜೀ ಯೋಜನೆಗೆ ಕಾಂಗ್ರೆಸ್ ವಿರೋಧವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಕಾಂಗ್ರೆಸ್ ಅವಧಿಯಲ್ಲಿ ಮನರೇಗಾದಲ್ಲಿ 11 ಲಕ್ಷ ಕೋಟಿ ರೂಪಾಯಿ ಮೊತ್ತದ ಭ್ರಷ್ಟಾಚಾರ ಆಗಿದೆ. ಈ ಅಕ್ರಮ, ವ್ಯಾಪಕ ಭ್ರಷ್ಟಾಚಾರ ತಡೆಯಲೆಂದೇ ಕೇಂದ್ರ ಸರ್ಕಾರ ʼವಿಬಿಜಿ ರಾಮ್ ಜಿ ಕಾಯ್ದೆʼ ಜಾರಿ ತಂದಿದೆ. ಆದರೆ, ಕಾಂಗ್ರೆಸ್‌ಗೆ ಇದೇ ದೊಡ್ಡ ಸಮಸ್ಯೆಯಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಈ ಹಿಂದೆ ಆರೋಪಿಸಿದ್ದರು. ವಿಬಿಜಿ ರಾಮ್ ಜಿ ಕಾಯ್ದೆಯಲ್ಲಿ ಎಐ ತಂತ್ರಜ್ಞಾನ, ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿದ್ದು, ಕೆಲಸದ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತಿದೆ. ಮನರೇಗದಲ್ಲಿ ಹಣ ಹೊಡೆಯುತ್ತಿದ್ದ ಕಾಂಗ್ರೆಸ್‌ನ ಮಧ್ಯವರ್ತಿಗಳಿಗೆ ಇದುವೇ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ವಿರೋಧಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:43 pm, Wed, 14 January 26