ಸಿಎಂ, ಡಿಸಿಎಂಗೆ ಮಾತಲ್ಲೇ ತಿವಿದ ವಿಪಕ್ಷ ನಾಯಕ: ಎಕ್ಸ್​​ ಪೋಸ್ಟ್​​ ಮಾಡಿ ಅಶೋಕ್​​ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡೆಯನ್ನು ವಿಪಕ್ಷ ನಾಯಕ ಆರ್‌. ಅಶೋಕ್ ಅವರು ಕಟುವಾಗಿ ಟೀಕಿಸಿದ್ದಾರೆ. ಜರ್ಮನ್ ಫೆಡರಲ್ ಚಾನ್ಸಲರ್ ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ, ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ರಾಹುಲ್ ಗಾಂಧಿ ಭೇಟಿಯಾಗಲು ಮೈಸೂರಿಗೆ ತೆರಳಿದ್ದನ್ನು ಅವರು ಪ್ರಶ್ನಿಸಿದ್ದಾರೆ. ಇದು ರಾಜ್ಯದ ಹಿತಾಸಕ್ತಿಗಳನ್ನು ನಿರ್ಲಕ್ಷ್ಯವಾಗಿದ್ದು, ಇದರಿಂದ ರಾಜ್ಯಕ್ಕೆ ಹೂಡಿಕೆ ಅವಕಾಶಗಳು ಕೈತಪ್ಪಿವೆ ಎಂದವರು ಆರೋಪಿಸಿದ್ದಾರೆ.

ಸಿಎಂ, ಡಿಸಿಎಂಗೆ ಮಾತಲ್ಲೇ ತಿವಿದ ವಿಪಕ್ಷ ನಾಯಕ: ಎಕ್ಸ್​​ ಪೋಸ್ಟ್​​ ಮಾಡಿ ಅಶೋಕ್​​ ಹೇಳಿದ್ದೇನು?
ಆರ್​​. ಅಶೋಕ್​​ ಕಿಡಿ

Updated on: Jan 13, 2026 | 6:24 PM

ಬೆಂಗಳೂರು, ಜನವರಿ 13: ಜರ್ಮನ್ ಫೆಡರಲ್ ಚಾನ್ಸಲರ್ ಕರ್ನಾಟಕಕ್ಕೆ ಆಗಮಿಸಿದ್ದ ಸಂದರ್ಭವೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ​ ರಾಹುಲ್​​ ಗಾಂಧಿ ಭೇಟಿಗಾಗಿ ಮೈಸೂರಿಗೆ ತೆರಳಿದ್ದನ್ನು ವಿಪಕ್ಷ ನಾಯಕ ಆರ್​​. ಅಶೋಕ್​​ ಕಟುವಾಗಿ ಟಿಕಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​​ ಖಾತೆಯಲ್ಲಿ ಕಿಡಿ ಕಾರಿರುವ ಅವರು, ಆದ್ಯತೆಗಳ ತಪ್ಪು ನಿರ್ಧಾರದಿಂದ ಅವಕಾಶಗಳು ಕೈ ತಪ್ಪಿ ಹೋಗಿವೆ ಎಂದಿದ್ದಾರೆ.

ಅಶೋಕ್​​ ಪೋಸ್ಟ್​​ನಲ್ಲಿ ಏನಿದೆ?


ತಮಿಳುನಾಡಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿಗೆ ಆಗಮಿಸಿದ ನಮ್ಮ ನಾಯಕರಾದ ರಾಹುಲ್ ಗಾಂಧಿಯವರನ್ನು ರಾಜ್ಯಕ್ಕೆ ಪ್ರೀತಿಯಿಂದ ಬರಮಾಡಿಕೊಂಡು, ಶುಭ ಹಾರೈಸಿದೆ ಎಂಬ ಸಿದ್ದರಾಮಯ್ಯನವರ ಎಕ್ಸ್​​ ಫೊಸ್ಟ್​​ಗೆ ಪ್ರತಿಕ್ರಿಯಿಸಿದ ಅಶೋಕ್​​, ಜರ್ಮನ್ ಫೆಡರಲ್ ಚಾನ್ಸಲರ್ ಕರ್ನಾಟಕಕ ಭೇಟಿ ನಮ್ಮ ರಾಜ್ಯಕ್ಕೆ ರಾಜತಾಂತ್ರಿಕ, ಆರ್ಥಿಕ ಹಾಗೂ ತಂತ್ರಾತ್ಮಕವಾಗಿ ಅತ್ಯಂತ ಮಹತ್ವದ ಕ್ಷಣವಾಗಿತ್ತು. ಯಾವುದೇ ಜವಾಬ್ದಾರಿಯುತ ಮುಖ್ಯಮಂತ್ರಿ ಇದ್ದರೆ, ಇಂತಹ ಭೇಟಿಗೆ ಅಗತ್ಯದ ಬಗ್ಗೆ ಇರುವ ಗಂಭೀರತೆಯನ್ನು ಅರ್ಥಮಾಡಿಕೊಳ್ಳುತ್ತಿದ್ದರು. ಇದು ಕರ್ನಾಟಕಕ್ಕೆ ಹೂಡಿಕೆ, ಕೈಗಾರಿಕೆ, ಉದ್ಯೋಗ ಮತ್ತು ದೀರ್ಘಕಾಲೀನ ಬೆಳವಣಿಗೆಯ ಅವಕಾಶವಾಗಿತ್ತು. ಆದರೆ ಇಂದು ಕಂಡುಬಂದ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಜಗತ್ತಿನ ಅತ್ಯಂತ ಬಲಿಷ್ಠ ಆರ್ಥಿಕತೆಯೊಂದರ ಮುಖ್ಯಸ್ಥರನ್ನು ಸ್ವಾಗತಿಸುವುದಕ್ಕಿಂತ ರಾಜಕೀಯ ನಿಷ್ಠೆ ಮತ್ತು ಹೈಕಮಾಂಡ್‌ ಸಂತೋಷಪಡಿಸುವುದೇ ಇವರ ಹೆಚ್ಚಿನ ಆದ್ಯತೆಯಾಗಿತ್ತು. ಈ ನಡೆ ರಾಜ್ಯದ ಹಿತಾಸಕ್ತಿಗಳ ಕುರಿತ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತಿದೆ. ಪಕ್ಷಕ್ಕಿಂತ ರಾಜ್ಯವನ್ನು ಮೊದಲು ಇಡುವ, ಅಧಿಕಾರ ರಾಜಕಾರಣಕ್ಕಿಂತ ರಾಜ್ಯದ ಪ್ರಗತಿಗೆ ಆದ್ಯತೆ ನೀಡುವ, ರಾಜಕೀಯ ತೃಪ್ತಿಗಿಂತ ಜಾಗತಿಕ ಅವಕಾಶಗಳಿಗೆ ಮಹತ್ವ ನೀಡುವ ನಾಯಕತ್ವಕ್ಕೆ ಕರ್ನಾಟಕ ಅರ್ಹವಾಗಿದೆ ಎಂದೂ ಅವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:23 pm, Tue, 13 January 26