ರಾಹುಲ್ ಗಾಂಧಿ ಪತ್ತೆ ಹಚ್ಚಿದ್ದ ಗಾಯಗೊಂಡ ಆನೆ ಮರಿಗೆ ಸೂಕ್ತ ಚಿಕಿತ್ಸೆ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ
Basavaraj Bommai: ರಾಹುಲ್ ಗಾಂಧಿ ನಾಗರಹೊಳೆ ಅಭಯಾರಣ್ಯದಲ್ಲಿ ಆನೆ ಮತ್ತು ಮರಿ ನೋಡಿದ್ದರಂತೆ. ಎರಡೂ ಗಾಯಗೊಂಡಿರುವ ಬಗ್ಗೆ ನನಗೆ ಪತ್ರ ಬರೆದು ತಿಳಿಸಿದ್ದಾರೆ. ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಲಿದ್ದೇವೆ ಎಂದು ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಬೆಂಗಳೂರು: ‘ಭಾರತ್ ಜೋಡೋ’ ಯಾತ್ರೆ ಅಂಗವಾಗಿ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಇತ್ತೀಚೆಗೆ ನಾಗರಹೊಳೆ ಅಭಯಾರಣ್ಯದಲ್ಲಿ ಆನೆ ಮತ್ತು ಮರಿ ಗಾಯಗೊಂಡಿರುವುದನ್ನು ಕಂಡು ತಕ್ಷಣ ಚಿಕಿತ್ಸೆ ಕೊಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿದ್ದರು. ಅದಕ್ಕೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿದ್ದಾರೆ. ರಾಹುಲ್ ಗಾಂಧಿ ನನಗೆ ಒಂದು ಪತ್ರ ಬರೆದಿದ್ದಾರೆ. ನಾಗರಹೊಳೆ ಅಭಯಾರಣ್ಯದಲ್ಲಿ ಆನೆ ಮತ್ತು ಮರಿ ನೋಡಿದ್ದರಂತೆ. ಎರಡೂ ಗಾಯಗೊಂಡಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಲಿದ್ದೇವೆ ಎಂದು ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಇನ್ನು ಇದೇ ವೇಳೆ ‘ಭಾರತ್ ಜೋಡೋ’ ಯಾತ್ರೆಗೆ ಪರ್ಯಾಯ ಯಾತ್ರೆ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಯಾತ್ರೆ ವಿಚಾರವಾಗಿ ಮೊದಲು ನಾವೇ ಸಿದ್ಧತೆ ಮಾಡಿಕೊಂಡಿದ್ವಿ. ಬಿ.ಎಸ್.ಯಡಿಯೂರಪ್ಪ ಮತ್ತು ನನ್ನ ನೇತೃತ್ವದಲ್ಲಿ ಆಗಬೇಕಿತ್ತು. ದಸರಾ ಕಾರ್ಯಕ್ರಮ ಬಂದಿದ್ರಿಂದ ತಾತ್ಕಾಲಿಕವಾಗಿ ನಿಂತಿದೆ. ಕಾಂಗ್ರೆಸ್‌ನ ‘ಭಾರತ್ ಜೋಡೋ’ಗೆ ಯಾರೇ ಬಂದರೂ ತೊಂದರೆಯಿಲ್ಲ ಎಂದು ಹೇಳಿದರು.
ನಾಳೆ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ:
ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಈ ಸಂಬಂಧ ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನಾಡಹಬ್ಬ ದಸರಾ ಮೈಸೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ. ಸಾಂಸ್ಕೃತಿಕ ವೈಭವದ ಪ್ರತೀಕ ಮಾತ್ರವಲ್ಲ ದೇವಿಯ ಆರಾಧನೆ ಮಾಡುವುದೇ ದುಷ್ಟ ಶಕ್ತಿಗಳ ಸಂಹಾರ ಮಾಡಿ ಸಜ್ಜನರಿಗೆ ರಕ್ಷಣೆ ಸಿಗಲಿ ಅಂತಾನೇ ಮಾಡುವುದು. ನಾಳೆ ಬೆಳಗ್ಗೆ 10.30 ಕ್ಕೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ನಾಳೆ ರಾಜ್ಯ ಉಸ್ತುವಾರಿ ಸಚಿವ ಅರುಣ್ ಸಿಂಗ್, ಅಧ್ಯಕ್ಷರು, ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಸುಮಾರು 500 ಜನ ಅಪೇಕ್ಷಿತರು ಇರುವ ಸದಸ್ಯರು ಭಾಗಿಯಾಗಲಿದ್ದಾರೆ. ಸಂಘಟನಾತ್ಮಾಕ ವಿಶ್ಲೇಷಣೆ ಮತ್ತು ಕೇಂದ್ರ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಚಿಂತನೆ ವಿವರಣೆ ನಡೆಯಲಿದೆ. ಗೋಷ್ಠಿಯ ಜೊತೆಗೆ ಪ್ರಶ್ನೋತ್ತರವೂ ಇರುತ್ತದೆ. ಸಶಕ್ತ ಭಾರತಕ್ಕೆ ಕರ್ನಾಟಕ ಕೊಡುಗೆ ನೀಡುತ್ತಾ ಬಂದಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಭಾರತಕ್ಕೆ ಕರ್ನಾಟಕದ ಕೊಡುಗೆ ಏನಿರಬೇಕು ಅನ್ನೋ ರೋಡ್ ಮ್ಯಾಪ್ ನೊಂದಿಗೆ ಸಭೆಯನ್ನ ಆಯೋಸಿದ್ದೇವೆ. ಅದರ ಪ್ರಕಾರ ಅಜೆಂಡಾ ರೂಪಿಸುತ್ತೇವೆ. ಅದಕ್ಕೆ ಪೂರಕವಾಗಿ ಸಂಘಟನೆಯನ್ನ ಬಲಗೊಳಿಸುತ್ತೇವೆ ಎಂದು ತಿಳಿಸಿದರು.
Published On - 11:21 am, Thu, 6 October 22