ಸಿಎಂ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್ಸ್; ಮಳೆ ಹಾನಿ, ಕಾಮಗಾರಿಗಳ ಪರಿಶೀಲನೆ

| Updated By: ಆಯೇಷಾ ಬಾನು

Updated on: Oct 18, 2021 | 9:59 AM

ಸಿಎಂ ಸಿಟಿ ರೌಂಡ್ಸ್ ಶುರುವಾಗಿದ್ದು HSR ಲೇಔಟ್‌ನಲ್ಲಿರುವ STP ಘಟಕ ಪರಿಶೀಲನೆ ನಡೆಸಿದ್ದಾರೆ. ಘಟಕ ಪರಿಶೀಲನೆ ಬಳಿಕ ಸಿಎಂ ಬೊಮ್ಮಾಯಿ ಅಧಿಕಾರಿಗಳು, ಸ್ಥಳೀಯ ನಿವಾಸಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಸಿಎಂ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್ಸ್; ಮಳೆ ಹಾನಿ, ಕಾಮಗಾರಿಗಳ ಪರಿಶೀಲನೆ
ಪರಿಶೀಲನೆ ಬಳಿಕ ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಚರ್ಚೆ
Follow us on

ಬೆಂಗಳೂರು: ಸಿಎಂ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್ಸ್ ಹಾಕುತ್ತಿದ್ದಾರೆ. ಮಳೆ ಹಾನಿ ಪ್ರದೇಶಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಬಿಬಿಎಂಪಿ, BWSSB ಕಾಮಗಾರಿಗಳ ಪರಿಶೀಲನೆ ನಡೆಸಿದ್ದು HSR ಲೇಔಟ್‌ನಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೂ ಭೇಟಿ ನೀಡಿದ್ದಾರೆ.

ಇಂದು ಸಿಎಂ ಸಿಟಿ ರೌಂಡ್ಸ್
ಬೊಮ್ಮನಹಳ್ಳಿ ವ್ಯಾಪ್ತಿಯ ವಿವಿಧ ಕಾಮಗಾರಿ ಸ್ಥಳಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ಬಿ ಕಾಮಗಾರಿ, ಹಾಗೂ ಮಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಸಿಟಿ ರೌಂಡ್ಸ್ ಹಾಕಲಿದ್ದಾರೆ. BWSSB ತ್ಯಾಜ್ಯ ನೀರು ಶುದ್ದೀಕರಣಾ ಘಟಕದಿಂದ ಸಿಎಂ ಪರಿಶೀಲನೆ ಆರಂಭ ಮಾಡಿದ್ದಾರೆ. ಎಚ್.ಎಸ್.ಆರ್ ಲೇಔಟಿನಲ್ಲಿರುವ ತ್ಯಾಜ್ಯ ನೀರು ಶುದ್ಧೀಕರಣಾ ಘಟಕ, ಬಳಿಕ ಮಳೆಯಿಂದ ಹಾನಿಗೊಳಗಾದ ಎಚ್.ಎಸ್.ಆರ್ ಲೇಔಟ್ 6ನೇ ಸೆಕ್ಟರ್, ಮಡಿವಾಳದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ‌ ಪರಿಶೀಲನೆ ನಡೆಸಲಿದ್ದಾರೆ.

ಪರಿಶೀಲನೆ ಬಳಿಕ ಪರಿಹಾರ ನೀಡಲಾಗುವುದು
ಕಳೆದ ವಾರ ಭಾರಿ ಮಳೆಯಿಂದಾಗಿ ಭಾರಿ ಹಾನಿಯಾಗಿದೆ, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಪರಿಶೀಲನೆ ಬಳಿಕ ಪರಿಹಾರ ನೀಡಲಾಗುವುದು. ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆಯೂ ಪರಿಶೀಲಿಸುತ್ತೇನೆ. ಹಂತ ಹಂತವಾಗಿ ಎಲ್ಲ ಕಡೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಘಟಕ ಪರಿಶೀಲನೆ ಬಳಿಕ ಸಿಎಂ ಬೊಮ್ಮಾಯಿ ಚರ್ಚೆ
ಸಿಎಂ ಸಿಟಿ ರೌಂಡ್ಸ್ ಶುರುವಾಗಿದ್ದು HSR ಲೇಔಟ್‌ನಲ್ಲಿರುವ STP ಘಟಕ ಪರಿಶೀಲನೆ ನಡೆಸಿದ್ದಾರೆ. ಘಟಕ ಪರಿಶೀಲನೆ ಬಳಿಕ ಸಿಎಂ ಬೊಮ್ಮಾಯಿ ಅಧಿಕಾರಿಗಳು, ಸ್ಥಳೀಯ ನಿವಾಸಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಮಳೆ ಹಾನಿಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ರಾಜಕಾಲುವೆ ಒತ್ತುವರಿಯಿಂದಾಗಿ ಸಮಸ್ಯೆಯಾಗಿದೆ. ಮಂತ್ರಿ ಸ್ಕ್ವೇರ್ ಡೆವಲಪರ್ಸ್‌ನಿಂದ ಸಮಸ್ಯೆಯಾಗ್ತಿದೆ. BBMP, BWSSB ಮಧ್ಯೆ ಸಮನ್ವಯತೆ ಇಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದು ಸಮನ್ವಯತೆಯಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಕೆಲವು ಇಲಾಖೆಗಳ ನಡುವೆ ಸಮನ್ವಯತೆ ಕಾಪಾಡಬೇಕಿದೆ. ಈ ಸಂಬಂಧ ವಿಶೇಷ ಸಭೆ ಕರೆದು ಸೂಚನೆ ನೀಡುತ್ತೇನೆ. ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು ಸೂಚನೆ ನೀಡುವೆ. ಮಂತ್ರಿ ಡೆವಲಪರ್ಸ್ ಒತ್ತುವರಿ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ. NGT ಆದೇಶ ನೀಡಿದೆ, ಅದರಂತೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲು ಇಂಜಿನಿಯರ್‌ಗಳ ಜತೆ ಚರ್ಚೆ ಮಾಡಿದ್ದೇವೆ. ಶಾಸಕ ಸತೀಶ್ ರೆಡ್ಡಿ ಜತೆಗೂ‌ ಸಮಸ್ಯೆಗಳಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಹಾಲಿ ಇರುವ ಚರಂಡಿಗಳಲ್ಲಿನ ಹೂಳು ತೆಗೆದು ಚರಂಡಿಗಳ ಲೆವೆಲ್ ಸರಿ ಮಾಡಲಾಗುತ್ತದೆ. STP ಘಟಕಗಳ ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮಡಿವಾಳ ಕೆರೆ ಬಳಿಯ STP ಘಟಕ ದುರಸ್ತಿಗೆ ಕ್ರಮ. ಮೇಲಿನ ಬಡಾವಣೆಗಳಿಂದ ಹರಿದು ಬರುವ ಮಳೆ ನೀರು ಹರಿಯಲು ಮತ್ತೊಂದು ಚರಂಡಿ ನಿರ್ಮಾಣ ಮಾಡಲಾಗುತ್ತೆ. ಮುಂದಿನ ಮೇ, ಜೂನ್‌ ಒಳಗೆ ಸಮಸ್ಯೆ ಬಗೆಹರಿಸುತ್ತೇವೆ. ಹಂತಹಂತವಾಗಿ ಸಮಸ್ಯೆ ಬಗೆಹರಿಸುತ್ತೇವೆ. ಬಿಬಿಎಂಪಿ, ಜಲಮಂಡಳಿ ಮಧ್ಯೆ ಸಮನ್ವಯತೆ ಕೊರತೆ ಇದೆ. ಸಭೆ ಕರೆದು ಅದನ್ನು ಸರಿ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು.

ಸದ್ಯ ಎಸ್.ಎಸ್ ಕಾಲೇಜು ಹಿಂಭಾಗ ಇರುವ ರಾಜಕಾಲುವೆ ಪರಿಶೀಲನೆ ನಡೆಸಿದ್ದು ಜಾಕಿ ಶೋ ರೂಂ ಪಕ್ಕದ ಬಡಾವಣೆ, ಸಿಲ್ಕ್ ಬೋರ್ಡ್ ಜಂಕ್ಷನ್‌ ಬಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಂದ ಆಕ್ಸ್‌ಫರ್ಡ್ ಕಾಲೇಜು ಪಕ್ಕದ ಬಡಾವಣೆಗೆ ಭೇಟಿ ಮಾಡಿ ಪರಿಶೀಲನೆ ಮುಗಿಸಿ ಶಾಸಕ ಸತೀಶ್ ರೆಡ್ಡಿ ನಿವಾಸದತ್ತ ಸಿಎಂ ತೆರಳಿದ್ದಾರೆ. ಸತೀಶ್ ರೆಡ್ಡಿ ನಿವಾಸದಲ್ಲಿ ಉಪಾಹಾರ ಸೇವಿಸಿ ಬಳಿಕ ಸಿಎಂ ಬೊಮ್ಮಾಯಿ ಮಡಿವಾಳ ಕೆರೆ ವೀಕ್ಷಣೆಗೆ ತೆರಳಲಿದ್ದಾರೆ.

ಇದನ್ನೂ ಓದಿ: ಹಾಸನ: ಕುಡಿದ ಅಮಲಿನಲ್ಲಿ ಬಾರ್ ಮುಂದೆ ನಿಂತಿದ್ದ ವ್ಯಕ್ತಿಯ ಮೇಲೆ ಕಾರು ಹತ್ತಿಸಿ ಹತ್ಯೆ