
ಬೆಂಗಳೂರು, ಡಿಸೆಂಬರ್ 31: ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೋವಿಡ್ ಅವಧಿಯಲ್ಲಿ ನಡೆಸಿದೆ ಎನ್ನಲಾದ ಅವ್ಯವಹಾರದ ತನಿಖೆಯ ಅಂತಿಮ ವರದಿಯನ್ನು ನಿವೃತ್ತ ನ್ಯಾಯಮೂರ್ತಿಗಳಾದ ಮೈಕೆಲ್ ಡಿ ಕುನ್ಹಾ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ಗೆ ರಿಪೋರ್ಟ್ ಹಸ್ತಾಂತರಿಸಿದ್ದಾರೆ.
ಕೋವಿಡ್ ಅವಧಿಯಲ್ಲಿ ಸಂಭವಿಸಿದ ಸಾವುಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿರುವ ನಿವೃತ್ತ ನ್ಯಾಯಮೂರ್ತಿಗಳಾದ ಮೈಕೆಲ್ ಡಿ ಕುನ್ಹಾ ಅವರು ಇಂದು ತಮ್ಮ ಅಂತಿಮ ವರದಿಯನ್ನು ಮುಖ್ಯಮಂತ್ರಿ @siddaramaiah ಅವರ ಸಮ್ಮುಖದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರಿಗೆ ಸಲ್ಲಿಸಿದರು. pic.twitter.com/4JfQGmSpQO
— CM of Karnataka (@CMofKarnataka) December 31, 2025
ಕೊರೊನಾ ಸೋಂಕು ಅಬ್ಬರದ ವೇಳೆ, ಔಷಧ ಮತ್ತು ಉಪಕರಣಗಳ ಖರೀದಿಯಲ್ಲಿನ ಭ್ರಷ್ಟಾಚಾರ ಆರೋಪದ ಕುರಿತು ತನಿಖೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಗಸ್ಟ್ 25, 2023ರಲ್ಲಿ ಆದೇಶಿಸಿತ್ತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ತನಿಖಾ ಆಯೋಗಕ್ಕೆ ಇದರ ಹೊಣೆ ನೀಡಲಾಗಿತ್ತು. ಬಳಿಕ ಈ ಬಗ್ಗೆ ತನಿಖೆ ನಡೆಸಿದ್ದ ಆಯೋಗ 2024ರ ಆಗಸ್ಟ್ ವೇಳೆಗೆ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ ಮಾಡಿತ್ತು. ಈಗ ತನಿಖೆಯ ಅಂತಿಮ ವರದಿ ಸಲ್ಲಿಸಿದೆ. ಈ ಬಗ್ಗೆ ಸಿಎಂ ಕಚೇರಿಯೇ ಮಾಹಿತಿ ನೀಡಿದೆ.
ಇದನ್ನೂ ಓದಿ: ಬಿಜೆಪಿ ಅವಧಿಯ ಕೋವಿಡ್ ಹಗರಣದ ವಿಸ್ತೃತ ಮಾಹಿತಿಗೆ ರಚನೆಯಾಗಲಿದೆ ಮತ್ತೊಂದು ಸಮಿತಿ; ಅಧಿಕಾರಿಗಳಗೆ ಢವಢವ
ಅಂದಿನ ಸರ್ಕಾರ ಚೀನಾ ಕಂಪನಿಗಳಿಂದ ಪಿಪಿಇ ಕಿಟ್ ಖರೀದಿ ಮಾಡಿದ್ದು, ಕಿಟ್ ಖರೀದಿ ವೇಳೆ ದರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ದರ ವ್ಯತ್ಯಾಸದಿಂದ ಪಿಪಿಇ ಕಿಟ್ ಪೂರೈಕೆದಾರರಿಗೆ 14.21 ಕೋಟಿ ರೂ. ಲಾಭವಾಗಿದೆ. ಪೂರೈಕೆದಾರರಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಅಕ್ರಮ ಎಸಗಲಾಗಿದೆ. ಒಟ್ಟು 769 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಹೇಳಲಾಗಿತ್ತು. ಪಿಪಿಇ ಕಿಟ್ ಹಾಗೂ ಇತರೆ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದ ನ್ಯಾ. ಕುನ್ಹಾ ಆಯೋಗ, ಈ ಸಂಬಂಧ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು ಕೂಡ ಮಾಡಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:42 pm, Wed, 31 December 25