
ಬೆಂಗಳೂರು, ಆಗಸ್ಟ್ 12: ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಸಮೂಹವನ್ನು ಟಾರ್ಗೆಟ್ ಮಾಡಿ ನಡೆಸುತ್ತಿದ್ದ ಗಾಂಜಾ ಜಾಲದ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ಬೆಳಗಾವಿ, ಬೆಂಗಳೂರು ಗ್ರಾಮಾಂತರದ ಆನೇಕಲ್ ಹಾಗೂ ಮೈಸೂರಿನ ನಂಜನಗೂಡಿನಲ್ಲಿ ಗಾಂಜಾಗೆ ಸಂಬಂಧಿಸಿದ ಪ್ರಮುಖ ಪ್ರಕರಣಗಳು ಬೆಳಕಿಗೆ ಬಂದಿವೆ.
ಬೆಳಗಾವಿ ನಗರದ ಉದ್ಯಮಬಾಗದಲ್ಲಿರುವ ಖಾಸಗಿ ಕಾಲೇಜು ಎದುರು ಸಿಹಿ ಚಾಕಲೇಟ್‌ನಲ್ಲಿ ಗಾಂಜಾ ಬೆರೆಸಿ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಭೋಲು ಪ್ರಜಾಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 5 ಗ್ರಾಂ ಗಾಂಜಾ ಮಿಶ್ರಿತ ಚಾಕಲೇಟ್‌ಗೆ ರೂ. 50ರಂತೆ ಮಾರಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 7 ಕೆಜಿ ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್‌ಗಳು, ಮೊಬೈಲ್ ಹಾಗೂ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣದ ಬ್ಯಾಗಡದೇನಹಳ್ಳಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿರುವ ಪೊಲೀಸರು, 10 ಲಕ್ಷ ರೂ. ಮೌಲ್ಯದ 10 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. 2 ಕೊಲೆ ಹಾಗೂ 1 ರಾಬರಿ ಕೇಸ್‌ನಲ್ಲಿ ಭಾಗಿಯಾಗಿರುವ ರೌಡಿಶೀಟರ್ ಪವನ್ ಅಲಿಯಾಸ್ ತಿಕ್ಲ ಪವನ್ (28) ಎಂಬಾತನನ್ನು ಬಂಧಿಸಲಾಗಿದೆ. ಒಡಿಶಾದಿಂದ ಗಾಂಜಾ ತಂದು ಅಲಯನ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಉಬೇದ್ ಮತ್ತು ಜಾಫರ್ ಜೊತೆ ಸೇiಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ದಾಸೋಹ ಭವನದ ಪಾರ್ಕಿಂಗ್ ಬಳಿ ಯುವಕನೊಬ್ಬ ಗಾಂಜಾ ಸೇವಿಸುತ್ತಿರುವ ಆರೋಪ ಕೇಳಿಬಂದಿದೆ. ಈ ಘಟನೆಯ ಫೋಟೋ ಹಾಗೂ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪವಿತ್ರ ದೇಗುಲದ ಸುತ್ತಮುತ್ತ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಾಲಯದ ಸುತ್ತಮುತ್ತ ಕಾವಲು ಹೆಚ್ಚಿಸಿ, ಇಂತಹ ಅಕ್ರಮ ಚಟುವಟಿಕೆಗಳಿಗೆ ತಕ್ಷಣವೇ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ