ವಿಧಾನಸಭೆ ಚುನಾವಣೆಗೆ(Karnataka Assembly Elections 2023) ದಿನ ಹತ್ತಿರ ಬರ್ತಿದ್ದಂತೆ. ರಾಜಕೀಯ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿದ್ದಾರೆ. ಪ್ರಚಾರದಲ್ಲಿ ಮುಳುಗಿದ್ದಾರೆ. ಜೊತೆಗೆ ನಾಯಕ ವಾಕ್ಸಮರ ಕೂಡ ಜೋರಾಗುತ್ತಿದೆ. ಮೊನ್ನೆ ಸಿದ್ದರಾಮಯ್ಯ(Siddaramaiah) ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನ ನಾಯಿಮರಿಗೆ ಹೋಲಿಸಿದ ವಿಚಾರ, ಬಳಸಿದ ಪದ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದ್ರೀಗ ಬಿಜೆಪಿ ಸರ್ಕಾರದ ವಿರುದ್ಧ, ಕಾಂಗ್ರೆಸ್ನಿಂದ ವಲಸೆ ಹೋದವರ ವಿರುದ್ಧ ಆಡಿರೋ ಮಾತು, ಬಳಸಿರೋ ಪದ ದೊಡ್ಡ ಬೆಂಕಿ ಹೊತ್ತಿಸಿದೆ. ಹಾಗೂ ನಿನ್ನೆ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುಂದಿನ ಚುನಾವಣೆಗೆ ಭಾರೀ ಚರ್ಚೆಗಳು ನಡೆದಿವೆ. ಸದ್ಯ ಇದರ ನಡುವೆ ಇಂದು ಕೂಡ ರಾಜಕೀಯ ನಾಯಕರು ತಮ್ಮ ಕ್ಷೇತ್ರ ಭೇಟಿ ಮುಂದುವರೆಸಿದ್ದಾರೆ. ಬಾಗಲಕೋಟೆ, ಗದಗದಲ್ಲಿ ಇಂದು ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಕೈಗೊಳ್ಳಲಿದೆ. ಮತ್ತೊಂದೆಡೆ ಇಂದು ಚಿಕ್ಕಮಗಳೂರು ಜಿಲ್ಲೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರಿಗೆ ಆಗಮಿಸುವ CM ಶಾಸಕ ಬೆಳ್ಳಿಪ್ರಕಾಶ್ ಪುತ್ರಿ ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಎರಡನೇ ದಿನದ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ನಡೆಯಲಿದೆ. ಬನ್ನಿ ರಾಜಕೀಯ ನಾಯಕರ ಪ್ರತಿ ಹೆಜ್ಜೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿ ತಿಳಿಯಿರಿ.
ಗದಗ: ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ಈ ಬಾರಿ ನಾಲ್ಕು ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನಾವು ಸ್ವಲ್ಪ ತಡವಾಗಿ ಬಂದೇವು. ಎರಡು ಗಂಟೆ ತಡವಾಗಿ ಬಂದ್ರೂ ನಿಮ್ಮ ಉತ್ಸಾಹ ಕಡಿಮೆಯಾಗಿಲ್ಲ. ಅದ್ಧೂರಿ ಸ್ವಾಗತ ಮಾಡಿದ್ರಿ. ನಿಮ್ಮೆಲ್ಲರುಗೂ ಕಾಂಗ್ರೆಸ್ ಪರ ಕೋಟಿ ಕೋಟಿ ನಮನ ಎಂದರು.
ಬೆಳಗಾವಿ: ನಾವಂತೂ ಕಳೆದ ಎರಡು ತಿಂಗಳಿಂದ ಚುನಾವಣೆ ತಯಾರಿ ಮಾಡುತ್ತಿದ್ದೇವೆ. ಮಂತ್ರಿ ಬಗ್ಗೆ ತಲೆ ಕೆಡಸಿಕೊಂಡಿಲ್ಲ, ಮಂತ್ರಿ ಮಾಡ್ತಾರೋ ಇಲ್ವೋ ಸಿಎಂ ಅವರಿಗೆ, ವರಿಷ್ಠರಿಗೆ ಬಿಟ್ಟ ವಿಷಯ. ವರಿಷ್ಠರು ಎನೂ ಆದೇಶ ಕೊಡ್ತಾರೆ ಅದರ ಪ್ರಕಾರ ಕೆಲಸ ಮಾಡ್ತೇನಿ. ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲಾ ಬಿಜೆಪಿಯಲ್ಲೇ ಉಳಿಯುತ್ತೇನೆ. 2023ಕ್ಕೆ ಪಕ್ಷಕ್ಕೆ ಎಷ್ಟು ಸಾಧ್ಯವಿದೆಯೋ ಬೆಳಗಾವಿ ಜಿಲ್ಲೆ, ವರಿಷ್ಠರು ಹೇಳಿದ ಕಡೆ ಕೆಲಸ ಮಾಡಿ ಬಿಜೆಪಿ ಪಕ್ಷ ಪೂರ್ಣ ಬಹುಮತ ತರಲು ಪ್ರಯತ್ನ ಮಾಡುವೆ ಎಂದು ಹೇಳಿದರು.
ನಾಳೆಯ ಕರ್ನಾಟಕ ಪ್ರವಾಸದ ಬಗ್ಗೆ ಪ್ರಧಾನಿ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. 10,000 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡ್ತೇವೆ. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಎಂದು ಹೇಳಿದ್ದಾರೆ.
ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು.
— Narendra Modi (@narendramodi) January 18, 2023
ಚಿಕ್ಕಮಗಳೂರು: 4 ಬಾರಿ ನನ್ನನ್ನು ಗೆಲ್ಲಿಸಿದ್ದೀರಿ, ನಿಮ್ಮ ವೋಟಿಗೆ ಮೋಸ ಮಾಡಿಲ್ಲ ಎಂದು ಉತ್ಸವದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದರು. ಕಳೆದ ಬಾರಿ ಕೆಲವರಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಲಾಗುತ್ತಿದೆ. ಅವರ ಕೊಂಕಿನ ನಡುವೆಯೂ ಹಬ್ಬ ಯಶಸ್ವಿಯಾಗಿ ನಡೆಯಿತು. ಕೊರೊನಾ ಸಂಕಟದಿಂದ ಪಾರಾಗಿ ಸಂಭ್ರಮದಿಂದ ಹಬ್ಬ ಆಚರಣೆ. ಹೋರಾಟದ ಭಾಗವಾಗಿ ದತ್ತಪೀಠದಲ್ಲಿ ನಮಗೆ ಗೆಲುವು ಸಿಕ್ಕಿದೆ. ನ್ಯಾಯ ಸಿಗುವಂತೆ ಮಾಡಿದ ಸಿಎಂ ಅವರಿಗೆ ಧನ್ಯವಾದ ಹೇಳ್ತೇನೆ. ಶೀಘ್ರದಲ್ಲೇ ನನ್ನ ರಿಪೋರ್ಟ್ ಕಾರ್ಡ್ ಕೊಡ್ತೇನೆ ಎಂದರು.
ಚಿಕ್ಕಮಗಳೂರು: ಇಂದಿನಿಂದ 5 ದಿನಗಳ ಕಾಲ ನಡೆಯಲಿರುವ ಚಿಕ್ಕಮಗಳೂರು ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಚಿವ ಸುನಿಲ್ ಕುಮಾರ್, ಶಾಸಕ ಎಂ.ಪಿ.ಕುಮಾರಸ್ವಾಮಿ, ಸುರೇಶ್, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್ ಬೋಜೇಗೌಡ, ಮಾಜಿ ಸಚಿವರಾದ ಜೀವರಾಜ್ ಡಿಸಿ, ಎಸ್ಪಿ ಸೇರಿ ಗಣ್ಯರು ಭಾಗಿಯಾಗಿದ್ದಾರೆ.
ಗದಗ: ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಪ್ರಜಾಧ್ವನಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷನಾಯಕ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿ ನಾಯಕರು ಭಾಗಿ ಆಗಿದ್ದಾರೆ.
ಗದಗ: ನಗರದ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದೆ. ಮುಖ್ಯ ವೇದಿಕೆ ಪ್ರವೇಶಕ್ಕೆ ಕಾಂಗ್ರೆಸ್ ನಾಯಕರ ಒದ್ದಾಟ ಶುರುವಾಗಿದ್ದು, ಸಾಕಷ್ಟು ಸಂಖ್ಯೆಯಲ್ಲ ಕಾರ್ಯಕರ್ತರು ಜಮಾಯಿಸಿದ್ದಾರೆ. ಈ ವೇಳೆ ವೇದಿಕೆ ಪ್ರವೇಶದ ಬಳಿ ನೂಕು ನುಗ್ಗಲು ಉಂಟಾಗಿದೆ. ಕಾರ್ಯಕರ್ತರ ನಿಯಂತ್ರಣಕ್ಕೆ ಪೊಲೀಸರು ಹರಸಹಾಸ ಪಟ್ಟರು. ಈ ವೇಳೆ ಕುಡುಕನ ರಂಪಾಟ ಪೊಲೀಸರಿಗೆ ತಲೆನೋವುಂಟು ಮಾಡಿದೆ.
ಕಲಬುರಗಿ: ಮೋದಿ ಮೋದಿ ಪದೇ ಪದೇ ಬರೋದು ತಪ್ಪಾ ಎಂದು ಆರ್ ಅಶೋಕ ಪ್ರಶ್ನಿಸಿದರು. ಅವರು ಬಂದ್ರೆ ಕಾಂಗ್ರೆಸ್ಗೆ ಏನು ಸಮಸ್ಯೆ. ಸಿಂಹ ಬರುತ್ತಿರುವದಕ್ಕೆ ಕಾಂಗ್ರೆಸ್ಗೆ ಭಯವಾಗುತ್ತಿದೆ ಎಂದರು. ಲಂಬಾಣಿ ಜನರಿಗೆ ನಾಳೆ(ಜ. 19) ಸಂತೋಷದ ದಿನ. ಆದ್ರೆ ಅದರಲ್ಲೂ ತಪ್ಪು ಹುಡುಕೊವುದು ತಪ್ಪು. ಮೋದಿ ಪ್ರಧಾನಿಯಾಗಿ ಬೆಳೆ ಪರಿಹಾರ ಎಷ್ಟು ಕೊಟ್ಟಿದ್ದಾರೆ. ಮನೆ ಮನೆಗೂ ನೀರು ಕೊಟ್ಟಿದ್ದಾರೆ. ಅವರ ಮನಮೋಹನ ಸಿಂಗ್ ಸರ್ಕಾರ ಏನು ಕೊಟ್ಟಿದೆ ಅನ್ನೋ ಬಗ್ಗೆ ಕಾಂಗ್ರೆಸ್ಗೆ ತಾಕತ್ ಇದ್ರೆ, ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಯಾದಗಿರಿ: ನಾಳೆ(ಜ.19) ಕೊಡೆಕಲ್ ಗ್ರಾಮದಲ್ಲಿ ಪ್ರಧಾನಿ ಮೋದಿ ಸಮಾವೇಶ ಹಿನ್ನೆಲೆ ಗೋವಿಂದ ಕಾರಜೋಳ, ಪ್ರಭು ಚೌಹಾಣ್ ಸಮಾವೇಶದ ಸ್ಥಳ ಪರಿಶೀಲಿಸಿದರು. ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ನಲ್ಲಿ ಸಮಾವೇಶ ನಡೆಯಲಿದೆ. ವೇದಿಕೆ, ಊಟದ ವ್ಯವಸ್ಥೆ ಸೇರಿದಂತೆ ಸಮಾವೇಶ ಸಿದ್ಧತೆ ಬಗ್ಗೆ ಪರಿಶೀಲನೆ ಮಾಡಲಾಯಿತು. ಇನ್ನು ಅಧಿಕಾರಿಗಳಿಂದಲೂ ಸಚಿವರು ಮಾಹಿತಿ ಪಡೆದರು. ಸ್ಕಾಡಾ ಗೇಟ್ಗಳ ಉದ್ಘಾಟನೆ, ಜಲಧಾರೆ ಯೋಜನೆಗೆ ಅಡಿಗಲ್ಲು ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ಕೊಪ್ಪಳ: ವೇಶ್ಯೆಯರ ಮಾದರಿಯಲ್ಲಿ ತಮ್ಮ ಶಾಸಕ ಸ್ಥಾನ ಮಾರಿಕೊಂಡಿದ್ದಾರೆ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿರುದ್ಧ ಸಾರಿಗೆ ಸಚಿವ ಶ್ರೀರಾಮುಲು ವಾಗ್ದಾಳಿ ಮಾಡಿದ್ದು, ಹರಿಪ್ರಸಾದ್ ಅವರೇ ನೀವು ಯಾವ ಸೀಮೆ ನಾಯಕರು. ಯಾವತ್ತಾದರೂ ನೀವು ಪಂಚಾಯಿತಿ ಎಲೆಕ್ಷನ್ ಆದ್ರೂ ಗೆದ್ದಿದ್ದೀರಾ ಎಂದು ಪದ್ರಶ್ನಿಸಿದರು.
ಬಾಗಲಕೋಟೆ: ಅಧಿಕಾರಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್ ಕೊಡುತ್ತೇವೆ. ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ನಾವು ನೀರಾವರಿ ಯೋಜನೆಗಳನ್ನ ಪೂರ್ಣಗೊಳಿಸ್ತೇವೆ. ಬಾಗಲಕೋಟೆ ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿ ಕೊಡಲು ಆಗಿಲ್ಲ. ನಾವು ಅಧಿಕಾರಕ್ಕೆ ಬಂದರೆ ಪರಿಹಾರ, ಪುನರ್ವಸತಿ ಕೊಡುತ್ತೇವೆ. ಕುಟುಂಬದ ಒಬ್ಬ ಮಹಿಳೆಗೆ 2 ಸಾವಿರ ರೂ. ಕೊಟ್ಟೇ ಕೊಡುತ್ತೇವೆ. ನಾನು ಸಿಎಂ ಆಗಿದ್ದಾಗ ಉಚಿತವಾಗಿ ತಲಾ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಕೇವಲ 5 ಕೆಜಿ ಅಕ್ಕಿ ಕೊಡ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಹೇಳಿದರು.
ಬಾಗಲಕೋಟೆ: ಅರ್ಥವಿಲ್ಲದೆ ಮಾತಾಡುವ ಸುಳ್ಳಿನ ಸರದಾರ ನರೇಂದ್ರ ಮೋದಿ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ಮಾಡಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ರಾಜೀವ್ ಗಾಂಧಿ ಉಜ್ವಲ ಯೋಜನೆ ಜಾರಿಗೆ ತಂದಿದ್ದು ಕಾಂಗ್ರೆಸ್. ಮೋದಿ ದೇಶದ ಯುವಕರಿಗೆ ಉದ್ಯೋಗ ಕೊಡುವುದಾಗಿ ಹೇಳಿದ್ದರು. ಆದರೆ ಉದ್ಯೋಗ ಕೊಡಲಿಲ್ಲ, ಕೇವಲ ಭರವಸೆ ಆಯ್ತು. ಉದ್ಯೋಗಾವಕಾಶ ಕೊಡುವುದಾಗಿ ಸ್ಕಿಲ್ ಇಂಡಿಯಾ ಎಂದರು. ಅದು ಕಿಲ್ ಇಂಡಿಯಾ ಆಯ್ತು. ಮನ್ ಕೀ ಬಾತ್ನಲ್ಲಿ ರೈತರು, ಮಹಿಳೆಯರ ಬಗ್ಗೆ ಮಾತಾಡಲ್ಲ ಎಂದು ಕಿಡಿಕಾರಿದರು.
ಮೈಸೂರು: ಯಶವಂತಪುರದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದು ರೌಡಿಗಳು. ಪೊಲೀಸರು ಹೊಡೆಯುವುದು, ಹೊಡೆಸಿಕೊಳ್ಳುವುದು ಸಾಮಾನ್ಯ ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಆ ಮೂಲಕ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದರು. ಅವತ್ತು ಕಡಿಮೆ ಜನರಿದ್ದ ಹಿನ್ನೆಲೆ ನಮ್ಮ ಮೇಲೆ ದಾಳಿ ಮಾಡಿದರು. ಬಿ.ಕೆ.ಹರಿಪ್ರಸಾದ್ ಹೇಳಿಕೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಬಿ.ಸಿ.ಪಾಟೀಲ್ ವಾಗ್ದಾಳಿ ಮಾಡಿದರು.
ಬಾಗಲಕೋಟೆ: ಮತ್ತೊಮ್ಮೆ ವಿಧಾನ ಪರಿಷತ್ಗೆ ಆಯ್ಕೆ ಮಾಡಿಲ್ಲವೆಂದು ಕಾಂಗ್ರೆಸ್ನ ಹಿರಿಯ ನಾಯಕ ಎಸ್.ಆರ್ ಪಾಟೀಲ್ (SR Patil) ಅಸಮಾಧಾನಗೊಂಡಿದ್ದು, ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದಿದ್ದರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ರಿಂದ ಅಂತರ ಕಾಯ್ದುಕೊಂಡಿದ್ದರು. ಕಾಂಗ್ರೆಸ್ನ ಹಿರಿಯ ನಾಯಕರು ಸಹ ಎಸ್.ಆರ್ ಪಾಟೀಲ್ ಅವರ ಮನವೊಲಿಸುವ ಕೆಲಸ ಮಾಡಿದ್ದರು. ಆದರೆ ಅದು ಯಾವುದು ಪ್ರಯೋಜನವಾಗಿರಲಿಲ್ಲ. ಸದ್ಯ ಈ ಕುರಿತಾಗಿ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನಮ್ಮ ನಡುವೆ ಯಾವುದೇ ಮುನಿಸು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂಗೆ ಸೃಷ್ಟಿ ಮಾಡೋದು ನೀವು. ಈಗ ನಾನು ಅವ್ರು ಒಂದು ಹತ್ತು ದಿನ ಭೇಟಿ ಆಗದೇ ಹೋದ್ರೆ, ಇವರಿಗೂ ಅವರಿಗೂ ಒಳಗಡೆ ಆಂತರಿಕ ಯುದ್ಧ ಇದೆ ಅಂತೀರಿ. ಯಾವ ಮುಸುಕಿನ ಗುದ್ದಾಟನೂ ಇಲ್ಲ, ಏನೂ ಇಲ್ಲ. ನಾವೆಲ್ಲರೂ ಒಂದು. ವಿ ಆರ್ ಆಲ್ ಯುನೈಟೆಡ್, ಮುಂದಿನ ಚುನಾವಣೆಯನ್ನು ಎಲ್ಲರೂ ಯುನೈಟೆಡ್ ಆಗಿ ಎದುರಿಸ್ತೇವೆ ಎಂದರು. ಈ ಮೂಲಕ ಎಸ್ಆರ್ ಪಾಟೀಲ್ ಹಾಗೂ ಸಿದ್ದು ನಡುವಿನ ಅಂತರಕ್ಕೆ ಬ್ರೇಕ್ ಬಿದ್ದಿದೆ.
ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಈ ಹಿನ್ನೆಲೆ ಮೋದಿ ಭೇಟಿಗೆ ಹೆಚ್ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಒಂದೇ ತಿಂಗಳಲ್ಲಿ 25 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಮಸ್ಯೆಗೆ ಮೋದಿ ಏನು ಹೇಳುತ್ತಾರೋ ನೋಡೋಣ. ಹಕ್ಕು ಪತ್ರ ವಿತರಣೆ ಇದೊಂದು ನಾಟಕ. ಏನೋ ಒಂದು ಕಾರ್ಯಕ್ರಮ ಮಾಡಬೇಕು ಮಾಡುತ್ತಿದ್ದಾರೆ. ರೈತರಿಗೆ ಮೋದಿ ಏನು ಸಂದೇಶ ಕೊಡುತ್ತಾರೆ ನೋಡೋಣ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನಪರ ಕೆಲಸ ಮಾಡುವ ಶಕ್ತಿ ಇಲ್ಲ. ಮೈತ್ರಿ ಸರ್ಕಾರದಲ್ಲಿ 8-10 ಸಭೆ ಮಾಡಿ ಕೆಲಸ ಮಾಡಿದ್ದೇವೆ. ಈಗ ಸ್ಕಾಡಾ ಯೋಜನೆ ಉದ್ಘಾಟನೆಗೆ ಮೋದಿ ಬರ್ತಿದ್ದಾರೆ ಎಂದು ವಿಜಯಪುರ ಜಿಲ್ಲೆಯ ಕನ್ನೊಳ್ಳಿ ಕ್ರಾಸ್ನಲ್ಲಿ ಹೆಚ್ಡಿಕೆ ವ್ಯಂಗ್ಯವಾಡಿದ್ದಾರೆ.
ದೆಹಲಿಯಲ್ಲಿ ಮೋದಿ-ಬಿಎಸ್ವೈ ಎರಡು ಬಾರಿ ಭೇಟಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ವೇಳೆ 2 ಬಾರಿ ಭೇಟಿಯಾಗಿದೆ ಮೊದಲ ದಿನ 5 ನಿಮಿಷ, 2ನೇ ದಿನ 10 ನಿಮಿಷ ಸಮಾಲೋಚನೆ ನಡೆಸಿದ್ದಾರೆ. ಮೊದಲ ಭೇಟಿ ವೇಳೆ ಬಿಎಸ್ವೈ ಶಿವಮೊಗ್ಗದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದು 2ನೇ ದಿನ ಪಕ್ಷ ಸಂಘಟನೆ ಬಗ್ಗೆ ಯಡಿಯೂರಪ್ಪ ಸಮಾಲೋಚನೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆಯೂ ಮೋದಿ-ಬಿಎಸ್ವೈ ಸಮಾಲೋಚನೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನಿರ್ಧರಿಸುತ್ತಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಬಳಿ ಪ್ರಧಾನಿ ಮೋದಿ ಹೇಳಿದ್ದಾರಂತೆ.
ನಾ ನಾಯಕಿ ಕಾರ್ಯಕ್ರಮದಲ್ಲಿ ಸಿದ್ದು ವಾರೇ ನೋಟ ವಿಚಾರಕ್ಕೆ ಸಂಬಂಧಿಸಿ ಬಾಗಲಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಗ್ತಾ ನಗ್ತಾನೇ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಬಗ್ಗೆ ಮಾತಾಡಬಾರದು, ಚರ್ಚೆ ಮಾಡಬಾರದು. ಯಾವುದು ಸಮಾಜಕ್ಕೆ ಅವಶ್ಯಕತೆ ಇರುತ್ತೆ ಅದನ್ನ ಚರ್ಚೆ ಮಾಡಬೇಕು. ಕೆಲವು ಮಿಡಿಯಾ ಜನರು ನನ್ನ ಬಗ್ಗೆ ನೆಗಟಿವ್ ಮಾಡೋಕೆ ಇರೋದು. ಮುಖ್ಯ ವಿಷಯ ಬಿಟ್ಟು ಹಿಂದಿನದು, ಮುಂದಿನದು ತಗೊಂಡಯ ಬಿಡ್ತಾರೆ. ಅದಕ್ಕೆ ಏನು ಮಾಡಾಕಾಗುತ್ತಪ್ಪ. ಮಿಡಿಯಾದವರಿಗೂ ಸ್ವಾತಂತ್ರ್ಯ ಇದೆ. ಏನ್ ಬೇಕಾದ್ರೂ ಬರ್ಕೊಳ್ಲಿ ಅಂತ ಸುಮ್ನೆ ಬಿಟ್ಟು ಬಿಟ್ಟಿದ್ದೀನಿ. ಸಾಮಾಜಿಕ ಜಾಲತಾಣಗಳದ್ದು ಸ್ವಾತಂತ್ರ್ಯ ಇದೆಯಲ್ಲಪ್ಪ ಎಂದರು.
ನಾನು ಅಲೆಮಾರಿ ಅಲ್ಲ, 8 ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂದು ಬಾಗಲಕೋಟೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವವರು ಲೀಡರ್ ಅಲ್ವಾ? ಪ್ರಧಾನಿ ನರೇಂದ್ರ ಮೋದಿ 2 ಕ್ಷೇತ್ರಗಳಲ್ಲಿ ನಿಂತಿರಲಿಲ್ವಾ? ಜನರು ಎಲ್ಲಿ ಪ್ರೀತಿ ಮಾಡ್ತಾರೆ ಆ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನೆ. ನಾನು ಎರಡೇ ದಿನ ಬಾದಾಮಿ ಕ್ಷೇತ್ರಕ್ಕೆ ಬಂದರೂ ಗೆದ್ದಿದ್ದೇನೆ. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಆಗ ರಾಜೀವ್ ಗಾಂಧಿ ಮೃತಪಟ್ಟ ಹಿನ್ನೆಲೆ ಸೋಲಬೇಕಾಯಿತು. ಕೊನೇ ಚುನಾವಣೆ ಅಂತ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿದೆ. ಆದರೆ ಚಾಮುಂಡೇಶ್ವರ ಕ್ಷೇತ್ರದ ಜನರು ನನ್ನನ್ನು ಸೋಲಿಸಿಬಿಟ್ರು. ಬಾದಾಮಿ ದೂರ ಆಗಿರೋದಕ್ಕೆ ಹತ್ತಿರದ ಸ್ಥಳಕ್ಕೆ ಹೊರಟಿದ್ದೀನಿ. ವಿಪಕ್ಷ ಸ್ಥಾನದಲ್ಲಿದ್ರೂ ನಿರೀಕ್ಷೆ ಮೀರಿ ಕೆಲಸಗಳನ್ನು ಮಾಡಿದ್ದೇನೆ ಎಂದರು.
ನಾಳೆ ಪ್ರಧಾನಮಂತ್ರಿ ಕಾರ್ಯಕ್ರಮ ಹಿನ್ನೆಲೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಬಳ್ಳಾರಿ ವಲಯದ ಐಜಿಪಿ ಬಿಎಸ್ ಲೋಕೇಶ್ ಕುಮಾರ್ ನೇತೃತ್ವದಲ್ಲಿ 7 ಜನ ಎಸ್ಪಿ, 22 ಡಿವೈಎಸ್ಪಿ, 14 ಸಿಐಡಿ ಡಿವೈಸ್ಪಿ, 53 ಸಿಪಿಐ, 120 ಪಿಎಸ್ಐ, 931 ಕಾನ್ಸ್ಟೇಬಲ್, 15 KSRP, 10 DAR ತುಕಡಿ ಸೇರಿದಂತೆ, 2 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ಯಾದಗಿರಿ, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ, ಗದಗ, ವಿಜಯಪುರ, ಮತ್ತು ಬೆಳಗಾವಿ ಜಿಲ್ಲಾ ಪೊಲೀಸರಿಂದ ಬಂದೋಬಸ್ತ್ ಕೈಗೊಳ್ಳಲಾಗಿದ್ದು ವೇದಿಕೆ, ಊಟದ ಸ್ಥಳ, ಹೆಲಿಪ್ಯಾಡ್, ವಾಹನಗಳ ಪಾರ್ಕಿಂಗ್ ಸ್ಥಳ, ಹಾಗೂ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸರು ನಿಗಾ ಇಟ್ಟಿದ್ದಾರೆ ಎಂದು ಟಿವಿ9ಗೆ ಬಳ್ಳಾರಿ ವಲಯದ ಐಜಿಪಿ ಲೋಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಉಚಿತ ವಿದ್ಯುತ್, ಮಹಿಳೆಯರಿಗೆ 2000ರೂ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಬಿಜೆಪಿ ಮಾಜಿ ಎಂಎಲ್‌ಸಿ ಮಹಾಂತೇಶ್ ಕವಟಗಿಮಠ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಅಂತಿಮ ಯಾತ್ರೆಯಲ್ಲಿದೆ. ಜನರಿಗೆ ಈ ರೀತಿ ಸುಳ್ಳು ಆಶ್ವಾಸನೆ ಗಳಿಂದ, ತಪ್ಪು ಮಾಹಿತಿಗಳಿಂದ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹಗಲು ಗನಸು ಕಾಣುತ್ತಿದೆ. ಸುಳ್ಳು ಹೇಳಿಕೆಯಿಂದ ಕಾಂಗ್ರೆಸ್ 75 ವರ್ಷದಿಂದ ಕೇಂದ್ರ, ರಾಜ್ಯದಲ್ಲಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಿದೆ. ಸುಳ್ಳು ಆಶ್ವಾಸನೆ ಯಿಂದ ಅಧಿಕಾರಕ್ಕೆ ಬರುವ ಹಗಲುಗನಸು ಈಡೇರುವುದಿಲ್ಲ ಎಂದರು.
ಕಾಂಗ್ರೆಸ್ನಿಂದ ಗೃಹಲಕ್ಷ್ಮೀ ಯೋಜನೆ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ನವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಯಾಕೆ ಜಾರಿ ಮಾಡಲಿಲ್ಲ? ಕಾಂಗ್ರೆಸ್ನವರು ಕೊಟ್ಟಿದ್ದ ಭರವಸೆಗಳನ್ನೇ ಈಡೇರಿಸಲಿಲ್ಲ. ಆದ್ರೆ ನಾವೂ ನುಡಿದಂತೆ ನಡೆದುಕೊಂಡಿದ್ದೇವೆ. ನಾನು ಘೋಷಣೆ ಮಾಡಿದ್ದೆ, ಅದನ್ನೇ ಕಾಂಗ್ರೆಸ್ನವರು ಹೇಳಿದ್ದಾರೆ ಎಂದರು.
18 ವರ್ಷದವರಿಗೂ ಮದ್ಯಪಾನಕ್ಕೆ ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಬಿಜೆಪಿ ಸರ್ಕಾರದ ಈ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಯು.ಟಿ. ಖಾದರ್ ಆಕ್ರೋಶ ಹೊರ ಹಾಕಿದ್ದಾರೆ. ಒಂದು ತಲೆಮಾರನ್ನು ನಾಶ ಮಾಡಲು ಹೊರಟಿರುವ ಕ್ರಮ ಇದು. ಕೇಂದ್ರ, ರಾಜ್ಯ ಸರ್ಕಾರಕ್ಕೆ ಯುವಕರಿಗೆ ಉದ್ಯೋಗ ಕೊಡಲು ಆಗಲಿಲ್ಲ. ಈಗ ದುಶ್ಚಟಕ್ಕೆ ಯುವಕರನ್ನು ಪ್ರೇರೇಪಿಸುವ ಯೋಚನೆ ಮಾಡ್ತಿದ್ದಾರೆ. ಬಿಜೆಪಿಗೆ ಇದರ ಪರಿಣಾಮ ಗೊತ್ತಿಲ್ಲ, ಕೇವಲ ದುಡ್ಡು ಮಾಡಬೇಕಷ್ಟೇ. ಮದ್ಯಪಾನ, ಗಾಂಜಾದಿಂದಲೇ ಕ್ರಿಮಿನಲ್ ಚಟುವಟಿಕೆ ಆಗುವುದು. ಮಂಗಳೂರಿನಲ್ಲಿ ವಿಡಿಯೋ ಗೇಮ್, ಸ್ಕಿಲ್ ಗೇಮ್ ನಡೀತಾ ಇದೆ. ಮಕ್ಕಳು ಶಾಲೆಗೆ ಹೋಗುವ ಬದಲು ಸ್ಕಿಲ್ ಗೇಮ್ ಮಾಡುತ್ತಿದ್ದಾರೆ. ಬಿಜೆಪಿಯವರ ಈ ಕೆಲಸವನ್ನು ಯಾವ ತಾಯಿಯೂ ಸಹಿಸುವುದಿಲ್ಲ. ಭವಿಷ್ಯಕ್ಕೆ ಮಾರಕವಾದ ಆದಾಯ ನಮಗೆ ಅಗತ್ಯವಿಲ್ಲ. ಮದ್ಯಪಾನ ನಿಷೇಧ ಮಾಡುವುದಾದರೆ ಸಂಪೂರ್ಣ ನಿಷೇಧ ಮಾಡಲಿ. ಬಿಜೆಪಿ ಸರ್ಕಾರ ರಾಜ್ಯದ ಸಾಲವನ್ನು 2.36 ಲಕ್ಷ ಕೋಟಿಗೆ ಏರಿಸಿದೆ. ಕಟೀಲು ಅಭಿವೃದ್ಧಿ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತಾಡಿ ಅಂತಾರೆ. ನಳಿನ್ ಕುಮಾರ್ ಮೇಲೆ ಇನ್ನೂ ಯಾಕೆ ಬಿಜೆಪಿಯಲ್ಲಿ ಕ್ರಮ ಆಗಿಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಪಂಚರತ್ನ ರಥಯಾತ್ರೆ ವೇಳೆ ಹೆಚ್.ಡಿ.ಕುಮಾರಸ್ವಾಮಿ ಟೆಂಪಲ್ ರನ್ ಮಾಡಿದ್ದಾರೆ. ಇಂಡಿ ತಾಲೂಕಿನ ಹೊರ್ತಿ ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಸರ್ಕಾರ ಮಾನ ಮರ್ಯಾದೆ ಕಳೆದುಕೊಂಡಿದೆ. ಯಾವುದೇ ಒಂದು ಗೌರವ ಇಲ್ಲದ ಗೌರವ ರಹಿತ ಆಡಳಿತ. ಮರ್ಯಾದೆಯಿಂದ ಆಡಳಿತ ನಡೆಸದೇ ಹೋಗಿದೆ. ಇಷ್ಟು ಕೆಳಮಟ್ಟಕ್ಕೆ ಹೋದ ಸರ್ಕಾರ ನಾನಂತೂ ನೋಡಿರಲಿಲ್ಲ. ನಿರ್ಭೀತವಾಗಿ ಯಾವುದೇ ಮಾನದಂಡ ಇಲ್ಲದೆ ಲೂಟಿಯೇ ಮುಖ್ಯ ಉದ್ದೇಶ ಆಗಿದೆ. ಯಾವ ಅಧೋಗತಿಗೆ ಹೋಗಿದೆ ಎನ್ನುವುದಕ್ಕೆ ಗುತ್ತಿಗೆದಾರರ ಹೋರಾಟವೇ ಸಾಕ್ಷಿ. 40% ಕಮಿಷನ್ ನಿಂದಾಗಿ 20% ಕೆಲಸ ಕೂಡ ಆಗ್ತಿಲ್ಲ. ತಿಪ್ಪಾರೆಡ್ಡಿ ಈಶ್ವರಪ್ಪ ಯಾರೇ ಇರಬಹುದು. ಮಾನ ಮರ್ಯಾದೆ ಇಲ್ಲದೆ ಎಲ್ಲವನ್ನೂ ಬಿಟ್ಟು ನಿಂತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿದ್ದೇನೆ. ಸಂಪುಟ ವಿಸ್ತರಣೆ ಬಗ್ಗೆ ತಿಳಿಸುವುದಾಗಿ ವರಿಷ್ಠರು ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಗೆಲ್ಲಿಸುವುದಕ್ಕೆ ಮುನಿಯಪ್ಪ ಬಿಡಲ್ಲ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಕೆ.ಹೆಚ್.ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಕೋಲಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿತ ಗೆಲ್ತಾರೆ. ಪ್ರಣಾಳಿಕೆಯಲ್ಲಿದ್ದ ಎಲ್ಲ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಿದೆ. ರಾಜ್ಯ, ದೇಶದಲ್ಲಿ ಪಕ್ಷ ಅಧಿಕಾರಕ್ಕೆ ತರಬೇಕೆಂಬುದು ನಮ್ಮ ಉದ್ದೇಶ. ಎಲ್ಲವನ್ನೂ ಮರೆತು ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದರು.
ಸಿದ್ದರಾಮಯ್ಯ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿ ಎಂದು ದೈವವಾಣಿ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಅಂತಿಮವಾಗಿ ಈ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದರು.
ಸಿದ್ದರಾಮಯ್ಯ ನಾನು ಜಂಟಿಯಾಗಿ ಪ್ರಜಾಧ್ವನಿ ಕಾರ್ಯಕ್ರಮ ಮಾಡುತ್ತಿದ್ದೇವೆ. ನಾವಿದ್ದಾಗ ಪವರ್ 10 ಸಾವಿರ ಮೆಗಾವ್ಯಾಟ್ ಇತ್ತು. ನಾನು ಇಳಿಯುವಾಗ 20 ಮೆಗಾವ್ಯಾಟ್ ಆಯಿತು. ಈ ಯೋಜನೆ ಹೇಗೆ ಜಾರಿಗೆ ತರಬಹುದು, ಹೇಗೆ ಉಳಿತಾಯ ಮಾಡಬಹುದು ಎಂದು ತೋರಿಸ್ತೇನೆ. ಆರ್ ಅಶೋಕ್ ಏನೋ ಮಾತಾಡ್ತಾರೆ. ಅಶೋಕ್ ಅವರೆ ನಿಮ್ಮ ಪ್ರಧಾನಿಯನ್ನ ಕೇಳಿ. ಪವರ್ ಸೆಕ್ಟರ್ ವಿಚಾರದಲ್ಲಿ ನಿಮ್ಮ ಪ್ರಧಾನಿಗಳು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವ್ರನ್ನೇ ಕೇಳಿ ಎಂದರು.
ಜನರ ಸಮಸ್ಯೆ ಆಲಿಸಲು ಪ್ರಜಾಧ್ವನಿ ಸಮಾವೇಶ ನಡೆಸುತ್ತಿದ್ದೇವೆ. ನಾ ನಾಯಕಿ ಸಮಾವೇಶದಲ್ಲಿ ಜನರು ನೋವು ತೋಡಿಕೊಂಡಿದ್ದಾರೆ. ಮಹಿಳೆಯರ ನೋವು ಆಲಿಸಿ ಮಹಿಳೆಯರ ಖಾತೆಗೆ ಹಣ ಹಾಕ್ತೇವೆ. ಪ್ರತಿ ಮಹಿಳೆಯ ಖಾತೆಗೆ ವರ್ಷಕ್ಕೆ $24 ಸಾವಿರ ಹಾಕಲು ನಿರ್ಧಾರ ಮಾಡಿದ್ದೇವೆ. ಮನೆ ಬೆಳಗಲು ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುತ್ತೇವೆ ಎಂದು ಬಾಗಲಕೋಟೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಬೆಲೆ ಏರಿಕೆ ನಿಯಂತ್ರಣ ಮಾಡಲು ಆಗಲಿಲ್ಲ. ಆದ್ದರಿಂದ ಬಡವರಿಗೆ ಸಹಾಯ ಮಾಡಲು ತೀರ್ಮಾನ ಮಾಡಿದ್ದೇವೆ. ಇದೆಲ್ಲವೂ ಹೇಗೆ ಸಾಧ್ಯ ಎಂಬುವುದನ್ನು ನಾವು ತೋರಿಸುತ್ತೇವೆ ಎಂದರು.
ಬಾಗಲಕೋಟೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಮೋದಿ ಮುಖಂಡತ್ವದಲ್ಲಿ ಚುನಾವಣೆ ಮಾಡೋದಾಗಿ ಬಿಜೆಪಿಯವರೇ ಹೇಳುತ್ತಿದ್ದಾರೆ. ಇದರ ಮೇಲೆ ರಾಜ್ಯ ಬಿಜೆಪಿ ಬೊಮ್ಮಾಯಿ ಪ್ರಭಾವ ಹೇಗಿದೆ ಅಂತ ಅರ್ಥ ಆಗುತ್ತದೆ. ಪ್ರಧಾನಿ ಬಂದು ಇಲ್ಲಿ ಆಡಳಿತ ಮಾಡೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಮೀಸಲಾತಿ ವಿಚಾರವನ್ನು ಬಿಜೆಪಿಗರು ಗೊಂದಲದ ಗೂಡು ಮಾಡುತ್ತಿದ್ದಾರೆ. ಇದು ಚುನಾವಣೆ ಮೇಲೆ ಖಂಡಿತ ಪರಿಣಾಮವಾಗುತ್ತದೆ. ಪಂಚಮಸಾಲಿ 2 ಡಿ ಮೀಸಲಾತಿಯನ್ನು ಪಂಚಮಸಾಲಿಗರು ತಿರಸ್ಕರಿಸಿದ್ದಾರೆ. ಒಕ್ಕಲಿಗರು 2 ಸಿ ತಿರಸ್ಕರಿಸಿದ್ದಾರೆ ಎಂದರು.
ಇಂದಲ್ಲ ನಾಳೆ ಬಿಜೆಪಿಯವರಿಗೆ ಜನರು ಬುದ್ಧಿ ಕಲಿಸುತ್ತಾರೆ. ನಾನು ಹಿಂಬಾಗಿಲ ಮೂಲಕ ಬಂದವನು ಎಂದು ಹೇಳುತ್ತಾರೆ. ಇವರಂತೆ ‘ಸಿ’ ಗ್ರೇಡ್ ಬಾಗಿಲಿನಿಂದ ಬಂದವನಲ್ಲ. ಆದರೆ ನಾನು ರಾಜಮಾರ್ಗದಿಂದ ಬಂದವನು. ಇವರಂತೆ ಬಣ್ಣಬದಲಾಯಿಸುವ ರಾಜಕೀಯ ಗೋಸುಂಬೆ ಅಲ್ಲ. ಧಮ್ ಇದ್ರೆ, ತಾಕತ್ತಿದ್ದರೆ ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ಸಿಎಂ, ಬಿಜೆಪಿ ಹೈಕಮಾಂಡ್ಗೆ ಬಿ.ಕೆ.ಹರಿಪ್ರಸಾದ್ ನೇರ ಸವಾಲು ಹಾಕಿದ್ದಾರೆ.
ಯುವ ಸಂಭಾಷಣೆ, ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ ಕಾರ್ಯಕ್ರಮದಲ್ಲಿ ಮೋದಿ ಜೊತೆಗಿನ ಒಡನಾಟದ ಬಗ್ಗೆ ಸಿಎಂಗೆ ವಿದ್ಯಾರ್ಥಿ ಪ್ರಶ್ನೆ ಮಾಡಿದ್ದು ಇದಕ್ಕೆ ಸಿಎಂ ಉತ್ತರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಹೊಸತನ್ನು ಕಲಿಯುವ ಹಂಬಲವಿದೆ. ಪ್ರಧಾನಿ ಮೋದಿ ಎಲ್ಲವನ್ನೂ ಪಾಸಿಟಿವ್ ಆಗಿ ನೋಡುವಂತಹ ವ್ಯಕ್ತಿ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತಕ್ಕೆ ಒಂದು ಸ್ಪಷ್ಟ ಗುರಿ ಸಿಕ್ಕಿದೆ. ನಮ್ಮ ಕರ್ತವ್ಯ ಕಾಲವಿದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾವು ತಂತ್ರಜ್ಞಾನದಲ್ಲಿ ಮುಂದಿದ್ದೇವೆ ಎಂದರು. ಹಾಗೂ ಇದೇ ವೇಳೆ ಕೆಎಲ್ಇ ಕಾಲೇಜಿನಿಂದ ವಿದ್ಯಾರ್ಥಿನಿ ಪ್ರಶ್ನೆಗೆ ಸಿಎಂ ಉತ್ತರಿಸೋವಾಗ ವಿದ್ಯಾರ್ಥಿನಿ ಶರ್ಟ್ ಮೇಲೆ ತಮ್ಮ ಪೊಟೋ ಇರೋದನ್ನ ಗಮನಿಸಿ. ನಿಮ್ಮ ಕಾಲೇಜಿನಲ್ಲಿ ಇಷ್ಟು ಚೆನ್ನಾಗಿರೋ ಯೂನಿಫಾರ್ಮ್ ಇದೆ ಅಂತ ಗೊತ್ತಿರಲಿಲ್ಲ. ನಿಮ್ಮ ಡ್ರೆಸ್ ಮೇಲೆ ನನ್ನ ಫೋಟೋ ಇದೆ ಅಂತ ಹೇಳಿದ್ರು. ಸಿಎಂ ಮಾತಿಗೆ ಇಡೀ ಸಭಾಂಗಣ ನಗೆಗಡಲಿನಲ್ಲಿ ತೇಲಾಡಿತು.
ಕಾಲೇಜಿನಲ್ಲಿ ಚುನಾವಣೆ ನಡೆಸುವ ವಿಚಾರದ ಬಗ್ಗೆ ವಿದ್ಯಾರ್ಥಿ ಪ್ರಸ್ತಾಪಿಸಿದ್ದು ಇದಕ್ಕೆ ಸಿಎಂ ಬೊಮ್ಮಾಯಿ ಓದುವ ಸಮಯದಲ್ಲಿ ಓದಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಇದು ಓದುವ ಸಮಯ. ಚೆನ್ನಾಗಿ ಓದಿ, ಕಾಲೇಜು ಸಮಯವನ್ನು ಎಂಜಾಯ್ ಮಾಡಿ. ಕಾಲೇಜಿನಲ್ಲಿ ಚುನಾವಣೆ ಬೇಡ. ಅದು ದೊಡ್ಡ ಜವಾಬ್ದಾರಿ. ಓದುವ ಸಮಯದಲ್ಲಿ ಓದಿ ಎಂದು ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಕಿವಿಮಾತು ಹೇಳಿದ್ದಾರೆ.
ಸಿಎಂ ಅವರ ಸಂಭಾಷಣೆ ಚರ್ಚೆ ವೇಳೆ ಬೋರ್ಡ್ ಎಕ್ಸಾಮ್‌ಗಳನ್ನು ಮತ್ತಷ್ಟು ಡಿಜಿಟಲೈಸ್ ಮಾಡಬೇಕು ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದ ಸಿಎಂ ಬೊಮ್ಮಾಯಿ, ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಡಿಜಿಟಲೈಜೇಷನ್ ತಲುಪಿಲ್ಲ. ಇನ್ನೂ ಡಿಜಿಟಲ್ ಅವ್ರಿಗೆ ತಲುಪಲು ಸಮಯ ಬೇಕಿದೆ. ಟ್ಯಾಬ್, ಮೊಬೈಲ್ ಅನೇಕ ವ್ಯವಸ್ಥೆಗಳು ಮಕ್ಕಳ ಬಳಿ ಇಲ್ಲ. ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಹೆಚ್ಚಾಗಲಿದೆ. ಸರ್ಕಾರದಿಂದಲೇ ಶಿಕ್ಷಣ ಕಲಿಸುವ ತಂತ್ರಾಂಶ ಸಿದ್ದಪಡಿಸಲಾಗುತ್ತಿದೆ. ಬೈಜೂಸ್ ರೀತಿ ಸರ್ಕಾರದ ತಂತ್ರಾಂಶ ಸಿದ್ದಪಡಿಸಲಾಗುವುದು. ವ್ಯವಸ್ಥೆ ಡಿಜಿಟಲೈಸೇಶನ್‌ಗೆ ಸಿದ್ದವಾದಾಗ ಸರ್ಕಾರ ಕೂಡ ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತದೆ ಎಂದರು
ಯುವ ಸಂಭಾಷಣೆ ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ
https://t.co/mox4tDRt7u— Basavaraj S Bommai (@BSBommai) January 18, 2023
‘ವೇಶ್ಯೆಯರ ಮಾದರಿಯಲ್ಲಿ ತಮ್ಮ ಶಾಸಕ ಸ್ಥಾನ ಮಾರಿಕೊಂಡಿದ್ದಾರೆ’ ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚಿ ಉಲ್ಲೇಖ ಮಾಡಿದ್ದಾರೆ ಎಂದು ಬಾಗಲಕೋಟೆಯಲ್ಲಿ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ತಿಳಿಸಿದ್ದಾರೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಬಿಜೆಪಿಯವರ ಯಾವುದೇ ಟೀಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಸಚಿವ ಮುನಿರತ್ನ ಏನೆಂದು ನನಗೆ ಚೆನ್ನಾಗಿ ಗೊತ್ತಿದೆ ಎಂದರು. ಇನ್ನು ಇದೇ ವೇಳೆ ಬಿ.ಕೆ.ಹರಿಪ್ರಸಾದ್ ಪಿಂಪ್ ಎಂದು ಬಿ.ಸಿ.ಪಾಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಗಂಡಸ್ತನ ಇದ್ದರೆ ಪ್ರೂವ್ ಮಾಡಲಿ. ಬಿಜೆಪಿ ಶಾಸಕ ಯತ್ನಾಳ್ ಸಚಿವರನ್ನು ಪಿಂಪ್ ಅಂತಾ ಹೇಳಿದ್ದಾರೆ. ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಯಾವ ಗಂಡಸರು ಇಲ್ಲ. ಬಿಜೆಪಿಯಲ್ಲಿ ಯತ್ನಾಳ್ ಹೇಳಿಕೆಗೆ ಯಾರೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.
ಬಾಗಲಕೋಟೆಯಲ್ಲಿ ಇಂದು ಕಾಂಗ್ರೆಸ್ನ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಈ ಹಿನ್ನೆಲೆ ಎಸ್.ಆರ್.ಪಾಟೀಲ್ ನಿವಾಸಕ್ಕೆ ಕಾಂಗ್ರೆಸ್ ನಾಯಕರು ಆಗಮಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಬಿ.ಕೆ.ಹರಿಪ್ರಸಾದ್, ಕೆ.ಹೆಚ್.ಮುನಿಯಪ್ಪ ಭೇಟಿ ನೀಡಿ ಎಸ್.ಆರ್.ಪಾಟೀಲ್ ನಿವಾಸದಲ್ಲಿ ಉಪಾಹಾರ ಸೇವಿಸಿದ್ದಾರೆ. ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 62ರಲ್ಲಿ ಪಾಟೀಲ್ರ ನಿವಾಸವಿದೆ.
ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ದಾಬಸ್‌ಪೇಟೆ ಯಿಂದ ದೊಡ್ಡಬಳ್ಳಾಪುರ ಮೂಲಕ ದೇವನಹಳ್ಳಿ ಏರ್‌ಪೊರ್ಟ್ ಸಂಪರ್ಕಿಸುವ ರಸ್ತೆ ನಡೆದು ಧರಣಿ ನಡೆಸಲಾಗುತ್ತಿದೆ.
ಮುದ್ದಲಿಂಗನಹಳ್ಳಿ, ಮಣ್ಣೆ, ತ್ಯಾಮಗೊಂಡ್ಲು ಸೇರಿದಂತೆ ಹತ್ತಾರು ಹಳ್ಳಿ ವಿದ್ಯಾರ್ಥಿಗಳು ಸಮಯಕ್ಕೆ ಸಾರಿಯಾಗಿ ಬಾರದ ಸಾರಿಗೆ ಬಸ್ನಿಂದ ಕಂಗಾಲಾಗಿದ್ದಾರೆ. ಹೀಗಾಗಿ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳೊಂದಿಗೆ ಶಾಸಕ ಶ್ರೀನಿವಾಸ ಮೂರ್ತಿ ಪ್ರತಿಭಟನೆಗೆ ಮುಂದಾಗಿದ್ದಾರೆ. ನಾಳೆಯಿಂದಲೇ ಬಸ್ ಬಿಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ರಸ್ತೆ ತಡೆ ಹಿನ್ನಲೆ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಿದೆ.
ಜೆಪಿ ನಗರದ ಆರ್ ವಿ ಡೆಂಟಲ್ ಕಾಲೇಜಿನ ಆಡಿಟೋರಿಯಂನಲ್ಲಿ ಯುವ ಸಂಭಾಷಣೆ, ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ ಸಂವಾದ ಕಾರ್ಯಕ್ರಮ ನಡೆಯುತ್ತಿದೆ. ಎಂಎಲ್ ಸಿ ಗೋಪಿನಾಥ್ ರೆಡ್ಡಿ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಕ್ರೀಡಾಪಟು ಪಂಕಜ್ ಅಡ್ವಾಣಿ, ನಟಿ ಪ್ರಣೀತಾ, ಗಾಯಕ ಚಂದನ್ ಶೆಟ್ಟಿ, ಬಿಜೆಪಿ ಯುವ ಮೂರ್ಚಾದ ಅನಿಲ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ. ಸಂವಾದದಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದಾರೆ.
ಯುವ ಸಂಭಾಷಣೆ ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ
https://t.co/mox4tDRt7u— Basavaraj S Bommai (@BSBommai) January 18, 2023
ಕಲ್ಯಾಣ ಕರ್ನಾಟಕ ಭಾಗದ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ನಾಳೆ ಕಲಬುರಗಿ, ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಮೇಲೆ ಬಿಜೆಪಿ ಟಾರ್ಗೆಟ್ ಮಾಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 41 ವಿಧಾನಸಭಾ ಕ್ಷೇತ್ರಗಳಿವೆ. ಚುನಾವಣೆ ಟಾರ್ಗೆಟ್ ಇಟ್ಟುಕೊಂಡು ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕು ಎನ್ನುವ ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ. 41 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಬಿಜೆಪಿ ಪರ ಗಾಳಿ ಬೀಸುವಂತೆ ಮಾಡಲು ನಾಯಕರು ರಣತಂತ್ರ ಹೆಣೆದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಗೆ ಜನವರಿ 19 ರಂದು ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಖರ್ಗೆಗೆ ಬಿಜೆಪಿ ಸೋಲಿನ ರುಚಿ ತೋರಿಸಿತ್ತು. ಇದೀಗ ಮತ್ತೆ ಕಲಬುರಗಿ ಜಿಲ್ಲೆಯಲ್ಲಿಯೇ ಖರ್ಗೆಗೆ ಟಕ್ಕರ್ ನೀಡಲು ಸಿದ್ದತೆ ಜೋರಾಗಿದೆ. ಮಲ್ಲಿಕಾರ್ಜುನ ಖರ್ಗೆಗೆ ಯಾವ ರೀತಿ ಟಕ್ಕರ್ ಕೊಡ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.
ಜೆಡಿಎಸ್ ಭದ್ರ ಕೋಟೆಯಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಆಪ್ತ ಹೆಚ್.ಟಿ.ಮಂಜುಗೆ ಟಿಕೆಟ್ ಘೊಷಣೆ ಹಿನ್ನಲೆ ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್ ಸಿಗದಿದ್ದಕ್ಕೆ ಹೆಚ್.ಡಿ.ರೇವಣ್ಣ ಆಪ್ತರು ಸಿಡಿದೆದ್ದಿದ್ದಾರೆ. ಬಿ.ಎಲ್.ದೇವರಾಜು & ಅಂಡ್ ಟೀಂ ವರಿಷ್ಠರ ನಿರ್ಧಾರಕ್ಕೆ ಬಂಡಾಯವೆದ್ದಿದ್ದಾರೆ. ಕಳೆದ ಉಪಚುನಾವಣೆಯ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಎಲ್.ದೇವರಾಜು, ನಾರಾಯಣಗೌಡರ ವಿರುದ್ದ ಸೋಲನ್ನಪ್ಪಿದ್ದರು. ಇಂದು ಕೆ.ಆರ್.ಪೇಟೆ TAPCMS ಆವರಣದಲ್ಲಿ ಬೆಂಬಲಿಗರ ಸಭೆ ಆಯೋಜನೆ ಮಾಡಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಿದ್ಧತೆಯ ಬಗ್ಗೆ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಗಂಭೀರ ಚರ್ಚೆ ನಡೆದಿದೆ. ಅಮಿತ್ ಶಾರವರು ಹೇಳಿದಂತೆ ಕರ್ನಾಟಕದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಕರ್ನಾಟಕದ ವಿಚಾರ ಚರ್ಚೆ ವೇಳೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಕರ್ನಾಟಕದಲ್ಲಿ ಆಡಳಿತ ಉತ್ತಮವಾಗಿದೆ, ಇದಕ್ಕೆ ತಕ್ಕ ಸ್ಪಂದನೆ ಸಿಗ್ತಿಲ್ಲ. ರಾಜ್ಯ ಸರ್ಕಾರದ ಉತ್ತಮ ಆಡಳಿತದ ಕುರಿತು ಸೂಕ್ತ ಪ್ರಚಾರ ಸಿಗ್ತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಲಿಂಗಾಯತ ನಾಯಕತ್ವ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಕುರುಬ ಹಾಗೂ ಒಕ್ಕಲಿಗರ ನಾಯಕತ್ವವಿದೆ. ಆದ್ರೆ ಜೆಡಿಎಸ್ ಪಕ್ಷ ಪೂರ್ತಿ ಒಕ್ಕಲಿಗ ಎಂಬಂತಾಗಿದೆ. ಕಾಂಗ್ರೆಸ್, ಜೆಡಿಎಸ್‌ನಲ್ಲಿ ಲಿಂಗಾಯತ ನಾಯಕತ್ವಕ್ಕೆ ಅವಕಾಶ ಇಲ್ಲ. ಕೇಂದ್ರ, ರಾಜ್ಯಸರ್ಕಾರಗಳ ಯೋಜನೆ ತಲುಪಿಸಲು ರೂಟ್ ಮ್ಯಾಪ್ ಸಿದ್ಧಪಡಿಸಿ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ.
ಪಂಚಮಸಾಲಿ ಮೀಸಲಾತಿ ಗೊಂದಲದ ಲಾಭ ಪಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಮೀಸಲಾತಿ ಹೋರಾಟದಿಂದ ಪಂಚಮಸಾಲಿ ಸಮುದಾಯ ಬಿಜೆಪಿಗೆ ದೊಡ್ಡ ಕಂಟಕವಾಗಿದೆ. ಅದೇ ಪಂಚಮಸಾಲಿ ಸಮುದಾಯವನ್ನು ಮುಂದಿಟ್ಟುಕೊಂಡು ಬಿಜೆಪಿಗೆ ಮಸಾಲೆ ಅರೆಯಲು ಕಾಂಗ್ರೆಸ್ ಪ್ಲ್ಯಾನ್ ಮಾಡ್ತಿದೆ. ಬಿಜೆಪಿಯಿಂದ ಕಳೆದ ಬಾರಿ 14 ಮಂದಿ ಪಂಚಮಸಾಲಿಗಳಿಗೆ ಟಿಕೆಟ್ ನೀಡಲಾಗಿತ್ತು. ಅದರಲ್ಲಿ 11 ಮಂದಿ ಪಂಚಮಸಾಲಿ ಸಮುದಾಯದ ಶಾಸಕರಾಗಿದ್ದರು. ಕಾಂಗ್ರೆಸ್ ಕೇವಲ 5 ಮಂದಿ ಪಂಚಮಸಾಲಿಗಳಿಗೆ ಟಿಕೆಟ್ ನೀಡಿತ್ತು. ಅದರಲ್ಲಿ ಮೂವರು ಪಂಚಮಸಾಲಿ ಸಮುದಾಯದವರು ಮಾತ್ರ ಕಾಂಗ್ರೆಸ್ ಶಾಸಕರಾಗಿದ್ದರು. ಈ ಬಾರಿ ಮೀಸಲಾತಿ ಹೋರಾಟದ ಗೊಂದಲಗಳು ಸೃಷ್ಟಿಯಾದ ಹಿನ್ನೆಲೆ ಕಾಂಗ್ರೆಸ್ ಪಂಚಮಸಾಲಿ ಟಿಕೆಟ್ ಹೆಚ್ಚಳ ಮಾಡುವ ಬಗ್ಗೆ ಪ್ಲ್ಯಾನ್ ಮಾಡ್ತಿದೆ.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಎರಡನೇ ದಿನದ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಇಂದು ನಡೆಯಲಿದೆ. ಇಂದು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳಲ್ಲಿ ಯಾತ್ರೆ ಸಂಚರಿಸಲಿದೆ.
ಚುನಾವಣೆ ಹೊತ್ತಿನಲ್ಲಿ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ತಟ್ಟಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿಂದು ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ಫ್ರೀಡಂಪಾರ್ಕ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ನಡೆಯಲಿದ್ದು ಬೇಡಿಕೆ ಈಡೇರಿಸದಿದ್ದರೆ ನಿರಂತರ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ ಮಾಡಿದ್ದಾರೆ.
ನಾಳೆ ಕಲಬುರಗಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಹೀಗಾಗಿ ಬಿಜೆಪಿಯಿಂದ ಭರ್ಜರಿ ತಯಾರಿ ನಡೆದಿದೆ. ಸಮಾವೇಶಕ್ಕೆ ಒಟ್ಟು 3 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲು ಸಿದ್ಧತೆ ನಡೆಯುತ್ತಿದೆ. ಸೇಡಂನಿಂದ ಸಮಾವೇಶ ನಡೆಯುವ ಸ್ಥಳದವರೆಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ್ ನೇತೃತ್ವದಲ್ಲಿ ಬೈಕ್ ಱಲಿ ನಡೆಯಲಿದೆ. 50 ಸಾವಿರ ಬೈಕ್ನಲ್ಲಿ ಒಂದು ಲಕ್ಷ ಜನರನ್ನು ಕರೆತರಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಇಂದು ಚಿಕ್ಕಮಗಳೂರು ಜಿಲ್ಲೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಬೆಂಗಳೂರಿನಿಂದ ಹೆಲಿಕಾಪ್ಟರ್ನಲ್ಲಿ ಬೀರೂರಿಗೆ ಆಗಮಿಸಲಿರುವ ಸಿಎಂ ಇಂದು ಇಡೀ ದಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇರಲಿದ್ದಾರೆ. ಹಾಗೂ ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆಯುವ ಶಾಸಕ ಬೆಳ್ಳಿಪ್ರಕಾಶ್ ಪುತ್ರಿ ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಹೆಲಿಕಾಪ್ಟರ್ನಲ್ಲಿ ಚಿಕ್ಕಮಗಳೂರಿಗೆ ತೆರಳಿ ಸಂಜೆ 5.30ಕ್ಕೆ ಚಿಕ್ಕಮಗಳೂರು ಹಬ್ಬ ಉದ್ಘಾಟಿಸಲಿದ್ದಾರೆ.
ಗದಗ ನಗರದಲ್ಲಿ ಇಂದು ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಗದಗ ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಇದಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಸುಮಾರು 40 ಸಾವಿರ ಜನರು ಭಾಗಿಯಾಗುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 4 ಘಂಟೆಗೆ ಕಾರ್ಯಕ್ರಮ ನಡೆಯಲಿದೆ.
ಜನವರಿ 19ರಂದು ಕಲಬುರಗಿ ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಸುತ್ತಮುತ್ತ ಡ್ರೋನ್ ಕ್ಯಾಮರಾ ಹಾರಾಟ ನಿಷೇಧಿಸಲಾಗಿದೆ. ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಮೋದಿ ಆಗಮಿಸುತ್ತಿದ್ದು ಭದ್ರತೆ ದೃಷ್ಟಿಯಿಂದ ಮಳಖೇಡ ಗ್ರಾಮ, ಕಾರ್ಯಕ್ರಮ ನಡೆಯುವ ಸ್ಥಳ, ತಾತ್ಕಾಲಿಕ ಹೆಲಿಪ್ಯಾಡ್ ಸುತ್ತಮುತ್ತ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಿ ಕಲಬುರಗಿ ಡಿಸಿ ಯಶವಂತ ವಿ.ಗುರುಕರ್ ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಇಂದು ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಹಮ್ಮಿಕೊಳ್ಳಲಾಗಿದ್ದು ಕಾಳಿದಾಸ ಪ್ರೌಢಶಾಲೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಬೆಳಗ್ಗೆ 10ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 2.30ರವರೆಗೆ ಪ್ರಜಾಧ್ವನಿ ಸಮಾವೇಶ ನಡೆಯಲಿದೆ.
Published On - 10:02 am, Wed, 18 January 23