ಬೆಂಗಳೂರು: ಗೃಹ ಜ್ಯೋತಿಗಾಗಿ ಕಾಯುತ್ತಿರುವವರಿಗೆ ವಿದ್ಯುತ್ ಪ್ರಸರಣ ಕಂಪನಿಗಳು ಬರೆ ಎಳೆದಿದೆ. ಹೌದು ಜನರಿಗೆ ಒಂದೇ ತಿಂಗಳಲ್ಲಿ ಒನ್ ಟು ಡಬಲ್ ವಿದ್ಯುತ್ ಬಿಲ್ ಬಂದಿದೆ. ರಾಜ್ಯದ ಎಲ್ಲಾ ವಿದ್ಯುತ್ ಪ್ರಸರಣ ಕಂಪನಿಗಳು ವಿದ್ಯುತ್ ದರವನ್ನ ಏರಿಕೆ(Electricity Price Hike) ಮಾಡುವ ಮೂಲಕ ಸಾರ್ವಜನಿಕರಿಗೆ ಬರೆ ಎಳೆದಿದೆ. ಕಳೆದ ತಿಂಗಳ ಬಿಲ್ಗೂ ಈ ಬಿಲ್ಗೂ ಹೊಂದಾಣಿಕೆಯೇ ಇಲ್ಲದಂತಾಗಿದ್ದು, ಬರೊಬ್ಬರಿ ದುಪ್ಪಟ್ಟು ಏರಿಕೆಯಾಗಿದೆ. ಇನ್ನು ವಿದ್ಯುತ್ ಹೊಂದಾಣಿಕೆ ದರ, ಹಾಗೂ ಹೆಚ್ಚುವರಿ ಶುಲ್ಕದ ಹೆಸರಿನಲ್ಲಿ ಬಿಲ್ ಏರಿಕೆಯಾಗಿದ್ದು, ಬಿಲ್ಗಳಲ್ಲಿ ಬಾಕಿ ಮೊತ್ತ ಎಂದು ನಮೂದಿಸಿ ಹೆಚ್ಚುವರಿ ಹಣ ವಸೂಲಿಗೆ ಇಳಿದಿದ್ದಾರೆ. ಇನ್ನು ಏಪ್ರಿಲ್ ತಿಂಗಳಿನಿಂದಲೇ ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್(KERC)ವಿದ್ಯುತ್ ದರ ಏರಿಕೆ ಮಾಡಿತ್ತು. ಇದಕ್ಕೆ ಚುನಾವಣೆ ಇರುವ ಹಿನ್ನಲೆ ಬಿಜೆಪಿ ಸರ್ಕಾರ ತಡೆ ಹಿಡಿದಿತ್ತು. ಈಗ ಹೊಸ ಸರ್ಕಾರ ಬರ್ತಿದ್ದಂತೆ ಏಪ್ರಿಲ್ ಮೇ ತಿಂಗಳ ಏರಿಕೆ ಮೊತ್ತವನ್ನ ಒಮ್ಮೆಗೆ ಬಿಲ್ಗೆ ಸೇರಿಸಿದ್ದು, ಬಿಲ್ನಲ್ಲಿ ಹಳೆ ಬಾಕಿ ಮೊತ್ತವೆಂದು ನಮೂದಿಸಲಾಗಿದೆ.
ಉದಾಹರಣೆಗೆ ನೋಡುವುದಾದರೆ ಮೀಟರ್ ಆರ್ಆರ್ ನಂ. L56791 ಹೀಗಿದ್ದು, ಕಳೆದ ಬಾರಿ ಮೇ ತಿಂಗಳ ಬಿಲ್ ಮೊತ್ತ 881 ರೂಪಾಯಿ ಬಂದಿತ್ತು. ಇದೀಗ ಜೂನ್ ತಿಂಗಳ ವಿದ್ಯುತ್ ಬಿಲ್ ಬಂದಿದ್ದು, ಬರೊಬ್ಬರಿ 2067 ರೂ ಬಂದಿದೆ. ಅದರಂತೆ ಇನ್ನೊಂದು ಮೀಟರ್ ಕುರಿತು ‘ಆರ್ ಆರ್ ನಂಬರ್ W4LG 73189 ಇದ್ದು, ಕಳೆದ ಬಾರಿ ಮೇ ತಿಂಗಳ ಬಿಲ್ 3976 ರೂ ಬಂದಿತ್ತು. ಈ ಬಾರಿ ಜೂನ್ ತಿಂಗಳ ಬಿಲ್ 6052 ರೂ. ಬಂದಿದೆ. ಪ್ರತಿ ಬಿಲ್ ನಲ್ಲೂ ಬಾಕಿ ಮೊತ್ತ ಹಾಗೂ ನಿಗದಿತ ಶುಲ್ಕ ಎಂದು ಹೆಚ್ಚುವರಿ ವಸೂಲಿ ಮಾಡಲಾಗಿದೆ. ಇದೀಗ ಬಿಲ್ ಏರಿಕೆ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಗೃಹಜ್ಯೋತಿ’ ಘೋಷಣೆ ಬೆನ್ನಲ್ಲೇ ಜನತೆಗೆ ರಾಜ್ಯ ಸರ್ಕಾರ ಕರೆಂಟ್ ಶಾಕ್ ನೀಡಿತ್ತು, ಜೂನ್ 1ರಿಂದಲೇ ವಿದ್ಯುತ್ ದರ ಹೆಚ್ಚಳ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್, ರಾಜ್ಯದಲ್ಲಿ ಪ್ರತಿ ಯೂನಿಟ್ ವಿದ್ಯುತ್ಗೆ 70 ಪೈಸೆ ಹೆಚ್ಚಳ ಮಾಡಿ, ಮೇ 12ರಂದು ವಿದ್ಯುತ್ ದರ ಏರಿಕೆ ಮಾಡಿ ಆದೇಶ ಪ್ರಕಟಿಸಿತ್ತು. ವಿದ್ಯುತ್ ಸರಬರಾಜು ಕಂಪನಿಗಳಿಗೆ ನಷ್ಟದ ಕಾರಣ ನೀಡಿ ಹೆಚ್ಚಳಿಕೆ ಮಾಡಲಾಗಿತ್ತು. ಇದೀಗ ಹೊಸ ಪರಿಷ್ಕೃತ ವಿದ್ಯುತ್ ದರ ಜೂನ್ 1ರಿಂದಲೇ ಜಾರಿ ಆಗಲಿದೆ ಎಂದು ಹೇಳಿತ್ತು. ಇನ್ನು ಏಪ್ರಿಲ್ 1ರಿಂದ ಹೊಸ ದರ ಅನ್ವಯ ಎಂದು ಕೆಇಆರ್ಸಿ ಹೇಳಿತ್ತು. ಚುನಾವಣೆ ಘೋಷಣೆ ಹಿನ್ನೆಲೆ ದರ ಹೆಚ್ಚಳ ಆದೇಶಕ್ಕೆ ತಡೆಬಿದ್ದಿತ್ತು. ಇದೀಗ ಹಳೆ ಬಾಕಿ ಮೊತ್ತವನ್ನ ಸೇರಿಸಿ ಜನರಿಗೆ ದುಪ್ಪಟ್ಟು ಬಿಲ್ ನೀಡುವ ಮೂಲಕ ಬರೆ ಎಳೆದಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Sat, 10 June 23