ಬೆಂಗಳೂರು: ಕಳಪೆ ಆಹಾರ ನೀಡುವ ಹೋಟೆಲ್​ಗಳ ವಿರುದ್ಧ ಆಹಾರ ಇಲಾಖೆ ಭರ್ಜರಿ ಕಾರ್ಯಾಚರಣೆ

ಕೃತಕ ರಾಸಾಯನಿಕ ಬಳಕೆ ವಿಚಾರದಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ವಿರುದ್ಧ ಕ್ರಮ ಆಯ್ತು. ನಾನ್ವೆಜ್ ಪ್ರಿಯರ ಕಬಾಬ್ ಹಾಗೂ ಹೆಣ್ಣುಮಕ್ಕಳ ಹಾಟ್ ಫೆವರೇಟ್ ಪಾನಿಪೂರಿ ವಿರುದ್ಧವೂ ಕ್ರಮ ಆಯ್ತು. ಇದೀಗ ಹೋಟೆಲ್​​ಗಳ ಸರದಿ ಶುರುವಾಗಿದೆ. ಬೆಂಗಳೂರಿನ ಕಳಪೆ ಹೋಟೆಲ್​​​​ಗಳ ವಿರುದ್ಧ ಆಹಾರ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

ಬೆಂಗಳೂರು: ಕಳಪೆ ಆಹಾರ ನೀಡುವ ಹೋಟೆಲ್​ಗಳ ವಿರುದ್ಧ ಆಹಾರ ಇಲಾಖೆ ಭರ್ಜರಿ ಕಾರ್ಯಾಚರಣೆ
ಬೆಂಗಳೂರು: ಕಳಪೆ ಆಹಾರ ನೀಡುವ ಹೋಟೆಲ್​ಗಳ ವಿರುದ್ಧ ಆಹಾರ ಇಲಾಖೆ ಕಾರ್ಯಾಚರಣೆ (ಸಾಂದರ್ಭಿಕ ಚಿತ್ರ)
Edited By:

Updated on: Jul 12, 2024 | 7:40 AM

ಬೆಂಗಳೂರು, ಜುಲೈ 12: ಕಾಟನ್ ಕ್ಯಾಂಡಿಯಿಂದ ಆರಂಭವಾದ ನಿಷೇಧದ ಬಿಸಿ ಸದ್ಯ ಈಗ ಚಹಾ ಪುಡಿ ತನಕ ಬಂದು ನಿಂತಿದೆ. ಯಾವ ಆಹಾರ ಸುರಕ್ಷಿತ? ಯಾವುದರಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂದು ಗ್ರಾಹಕರು ಹೆದರಿ ಹೋಗಿದ್ದಾರೆ. ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಗೆ ಬಳಸುವ ಬಣ್ಣ ನಿಷೇಧ ಮಾಡಿದ್ದ ಆಹಾರ ಇಲಾಖೆ ಇತ್ತೀಚಿಗಷ್ಟೆ ಕಬಾಬ್​ಗೆ ಬಳಲುವ ಕೃತಕ ಬಣ್ಣಕ್ಕೆ ನಿಷೇಧ ಹೇರಿತ್ತು. ಬಳಿಕ ಪಾನಿಪುರಿ ಸೇರಿದಂತೆ ಇನ್ನೂ ಕೆಲವು ಆಹಾರ ಪಾದಾರ್ಥಗಳಲ್ಲಿ ಕೃತಕ ಬಣ್ಣ ಬಳಸಲಾಗುತ್ತಿದೆ ಎಂದಿತ್ತು. ಇವುಗಳಲ್ಲಿ ಸನ್ಸೆಟ್ ಯೆಲ್ಲೋ, ಕಾರ್ಮೋಸಿನ್ ರಾಸಾಯನಿಕಗಳು ಇರುವುದನ್ನು ಪತ್ತೆ ಹಚ್ಚಿ ನಿಷೇಧ ಹೇರಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಇದೀಗ ಕಳಪೆ ಗುಣಮಟ್ಟದ ತಿಂಡಿ, ಆಹಾರ ನೀಡುವ ಹೋಟೆಲ್​​ಗಳ ವಿರುದ್ಧ ಚಾಟಿ ಬೀಸಲು ಆರಂಭಿಸಿದೆ. ಕಳಪೆ ಗಣಮಟ್ಟದ ಆಹಾರ, ತಿಂಡಿ ಮಾರಟ ಹಾಗೂ ಸ್ವಚ್ಛತೆ ಕಾಪಾಡದ ಆರೋಪದಲ್ಲಿ ಹೋಟೆಲ್​​ಗಳಲ್ಲಿ ಮಾದರಿಗಳನ್ನು ಸಂಗ್ರಹಿಸಿದ್ದು ಪ್ರಯೋಗಾಲಯಕ್ಕೆ ಕಳುಹಿಸಿದೆ.

ಬಸ್ ನಿಲ್ದಾಣ ಹಾಗೂ ಬೀದಿ ಬದಿಯ ಹೋಟೆಲ್​​ಗಳ ಆಹಾರದ ಸ್ಯಾಂಪಲ್ಸ್ ಸಂಗ್ರಹಿಸಲು ಆಹಾರ ಇಲಾಖೆ ಮುಂದಾಗಿದೆ. ಬಸ್ ನಿಲ್ದಾಣ ಹಾಗೂ ಬೀದಿ ಬದಿಯ ಹೋಟೆಲ್​​ಗಳಲ್ಲಿ ತಿಂಡಿ ಆಹಾರ ಸೇರಿದಂತೆ ಹೋಟೆಲ್ ಗಳಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ. ಸ್ವಚ್ಛತೆ ಕೊರತೆಯಿಂದ ಆಹಾರ ಸೇವಿಸುವ ಗ್ರಾಹಕರ ಆರೋಗ್ಯದ ಮೇಲೆ ವೆತ್ಯರಿಕ್ತ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳು ಕೇಳಿಬಂದ ಕಾರಣ ಅಂಥ ಹೋಟೆಲ್​​ಗಳಿಂದ ಆಹಾರಗಳ ಮಾದರಿ ಸಂಗ್ರಹಕ್ಕೆ ಮುಂದಾಗಿದೆ.

128 ಹೋಟೆಲ್​​ಗಳಿಗೆ ನೋಟಿಸ್

ಈಗಾಗಲೇ ಬೆಂಗಳೂರಿನ ವಿವಿಧ ಭಾಗಗಳ 760 ಹೋಟೆಲ್​​​ಗಳಿಂದ ಸ್ಯಾಂಪಲ್ಸ್ ಕಲೆ ಹಾಕಿದ್ದು ಈ ಪೈಕಿ ಸ್ವಚ್ಛತೆ ಇಲ್ಲದ 128 ಹೋಟೆಲ್​​ಗಳಿಗೆ ನೋಟಿಸ್ ನೀಡಲಾಗಿದೆ. ಅಸುರಕ್ಷಿತ ಆಹಾರ ಹಾಗೂ ಸ್ವಚ್ಛತೆ ಕಾಪಾಡದ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ಇದರ ಬಳಿಕ ಈಗ ಎರಡನೇ ಹಂತದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬೀದಿ ಬದಿಯ ಹೋಟೆಲ್​​ಗಳ ಆಹಾರದ ಸ್ಯಾಂಪಲ್ಸ್ ಪಡೆಯಲಾಗುತ್ತಿದೆ. ಸ್ಚಚ್ಛತೆಯ ಆಧಾರದ ಮೇಲೆ ಕ್ರಮವಹಿಸಲು ಮುಂದಾಗಿದೆ.

ಸ್ವಚ್ಛತೆ ಕೊರತೆ ಹಾಗೂ ಅಸುರಕ್ಷಿತ ಆಹಾರ ನೀಡುವ ಹೋಟೆಲ್​​ಗಳಿಗೆ ನೋಟಿಸ್ ನೀಡಲು ಮುಂದಾಗಿದ್ದೇವೆ ಎಂದು ಆಯುಕ್ತ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹಸಿರು ಮಾರ್ಗ ಶೀಘ್ರ ವಿಸ್ತರಣೆ: ಸದ್ಯದಲ್ಲೇ ನಾಗಸಂದ್ರ – ಮಾದಾವರ ನಡುವೆ ಸಂಚಾರ

ರಸ್ತೆ ಬದಿಯ ಹೋಟೆಲ್ ಮಾತ್ರವಲ್ಲದೆ ಫೈವ್​ಸ್ಟಾರ್ ಹೋಟೆಲ್​​ಗಳಲ್ಲಿಯೂ ಸ್ವಚ್ಛತೆ ಕೊರತೆ ಹಾಗೂ ಅಸುರಕ್ಷಿತ ಆಹಾರ ನೀಡಲಾಗುತ್ತಿದೆಯೇ ಎಂದು ತಪಾಸಣೆ ನಡೆಸಲಾಗುತ್ತಿದೆ. ಅಂಥ ಹೋಟೆಲ್​ಗಳಿಗೂ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಆಹಾರ ಮತ್ತು ಗುಣಮಟ್ಟ ಇಲಾಖೆ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ