Bengaluru Traffic: ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಹನ ಸಂಚಾರ ದಟ್ಟಣೆ ನಿರ್ವಹಣೆಗೆ ಜಂಕ್ಷನ್‌ಗಳ ನಿರ್ಮಾಣ

| Updated By: ವಿವೇಕ ಬಿರಾದಾರ

Updated on: Nov 21, 2022 | 10:52 PM

ಬೆಂಗಳೂರಿನ ಪ್ರಮುಖ 10 ಜಂಕ್ಷನ್‌ಗಳಲ್ಲಿನ ​ಸಂಚಾರ ದಟ್ಟಣೆ ನಿಯಂತ್ರಿಸಲು ತ್ವರಿತಗತಿಯಲ್ಲಿ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಸಿ.ಎಸ್ ವಂದಿತಾ ಶರ್ಮಾ ಹೇಳಿದ್ದಾರೆ.

Bengaluru Traffic: ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಹನ ಸಂಚಾರ ದಟ್ಟಣೆ ನಿರ್ವಹಣೆಗೆ ಜಂಕ್ಷನ್‌ಗಳ ನಿರ್ಮಾಣ
ಬೆಂಗಳೂರು ಟ್ರಾಫಿಕ್​ ಸಂಬಂಧ ಮುಖ್ಯ ಕಾರ್ಯದರ್ಶಿ ಸಿ.ಎಸ್ ವಂದಿತಾ ಶರ್ಮಾ ನೇತೃತ್ವದಲ್ಲಿ ಸಮನ್ವಯ ಸಭೆ ನಡೆಯಿತು
Follow us on

ಬೆಂಗಳೂರು: ನಗರದ ಪ್ರಮುಖ 10 ಜಂಕ್ಷನ್‌ಗಳಲ್ಲಿನ ​ಸಂಚಾರ ದಟ್ಟಣೆ ನಿಯಂತ್ರಿಸಲು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ತ್ವರಿತಗತಿಯಲ್ಲಿ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಸಿ.ಎಸ್ ವಂದಿತಾ ಶರ್ಮಾ ಹೇಳಿದ್ದಾರೆ.

ಟ್ರಾಫಿಕ್​ ನಿರ್ವಹಣೆ ಸಂಬಂಧಿಸಿದಂತೆ ವಿಕಾಸಸೌಧದಲ್ಲಿ ಇಂದು ಮುಖ್ಯ ಕಾರ್ಯದರ್ಶಿ ಸಿ.ಎಸ್ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಯವರ ನೇತೃತ್ವದಲ್ಲಿ ಸಮನ್ವಯ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಅವರು ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಪ್ರಮುಖ 10 ಜಂಕ್ಷನ್ (ಸಿಲ್ಕ್ ಬೋರ್ಡ್ ಜಂಕ್ಷನ್, ಇಬ್ಬಲೂರು ಜಂಕ್ಷನ್, ಜಯದೇವ ಜಂಕ್ಷನ್, ಎಂ.ಎಂ.ಟೆಂಪಲ್ ಜಂಕ್ಷನ್ (ಟಿನ್ ಪ್ಯಾಕ್ಟರಿ), ಹೆಬ್ಬಾಳ ಜಂಕ್ಷನ್, ಗೊರಗುಂಟೆಪಾಳ್ಯ ಜಂಕ್ಷನ್, ಸಾರಕ್ಕಿ ಜಂಕ್ಷನ್, ಕೆ.ಎಸ್.ಲೇಔಟ್ ಜಂಕ್ಷನ್, ಕಾಡುಬೀಸನಹಳ್ಳಿ ಜಂಕ್ಷನ್ ಹಾಗೂ ಬನಶಂಕರಿ ಜಂಕ್ಷನ್)ಗಳಲ್ಲಿ ಬಾಕಿ ತೆಗದುಕೊಳ್ಳಬೇಕಿರುವ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು.

ನಗರದ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಲ್ಲಿ ಬಾಕಿಯಿರುವ ರಸ್ತೆ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚಬೇಕು. ಸಂಚಾರಿ ಪೊಲೀಸ್ ವಿಬಾಗದಿಂದ ರಸ್ತೆಗುಂಡಿಗಳನ್ನು ಗುರುತಿಸಿ ಪಾಲಿಕೆಗೆ ಮಾಹಿತಿ ನೀಡುವ ಗುಂಡಿಗಳನ್ನು ಕೂಡಾ ತ್ವರಿತಗತಿಯಲ್ಲಿ ಮುಚ್ಚಲಾಗುವುದು ಎಂದು ಹೇಳಿದರು.

ರಸ್ತೆಗಳಲ್ಲಿ ಮಳೆಯಾದ ವೇಳೆ ನೀರು ನಿಂತು ವಾಹನ ಸವಾರರಿಗೆ ಸಮಸ್ಯೆಯಾಗುವ ಸ್ಥಳಗಳನ್ನು ಸಂಚಾರಿ ಪೊಲೀಸ್ ವಿಭಾಗದಿಂದ ಗುರುತಿಸಿದ್ದು, ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕಾಮಗಾರಿ ನಡೆಸಿ ನೀರು ನಿಲ್ಲದಂತೆ ದುರಸ್ತಿಪಡಿಸಲಾಗಿರುತ್ತದೆ. ಆದರೆ, ಕೆಲ ಸ್ಥಳದಲ್ಲಿ ಕೆಲಸ ಮಾಡಿದ್ದರೂ ಸಮಸ್ಯೆ ಬಗೆಹರಿದಿರುವುದಿಲ್ಲ ಎಂದು ಸಂಚಾರಿ ಪೊಲೀಸರು ತಿಳಿಸಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ರಸ್ತೆಗಳಲ್ಲಿ ರಸ್ತೆ ಮಟ್ಟಕ್ಕಿಂತ ಎತ್ತರವಿರುವ ಮ್ಯಾನ್‌ಹೋಲ್ಸ್(ಒಳಚರಂಡಿ)ಗಳಿಂದ ಅಪಘಾತವಾಗುವ ಸಂಭವವಿದ್ದು, ಈ ಪೈಕಿ ಸಂಚಾರಿ ಪೊಲೀಸ್ ವಿಭಾಗದಿಂದ 112 ಮ್ಯಾನ್‌ಹೋಲ್‌ಗಳನ್ನು ಗುರುತಿಸಲಾಗಿದೆ. ಅದರಂತೆ, ಜಲಮಂಡಳಿ ವತಿಯಿಂದ 53 ಒಳಚರಂಡಿಳನ್ನು ಸರಿಪಡಿಸಿದ್ದು, ಬಾಕಿ 59 ಒಳಚರಂಡಿಗಳನ್ನು ಕೂಡಲೆ ಸರಿಪಡಿಸಲಾಗುವುದು ಎಂದು ತಿಳಿಸಿದರು.

ಅನಾಥ ವಾಹನಗಳನ್ನು ತೆರವುಗೊಳಿಸುವುದು

ನಗರದಲ್ಲಿ 107 ರಸ್ತೆಗಳಿಗೆ ಡಾಂಬರೀಕರಣ ಮಾಡುವುದು, 210 ಕಡೆ ಬೀದಿ ದೀಪಗಳನ್ನು ಅಳವಡಿಸುವುದು, 47 ಕಡೆ ಬಿದಿ ದೀಪಗಳನ್ನು ದುರಸ್ತಿಪಡಿಸುವುದು, 33 ಕಡೆ ಕಸ ಸುರಿಯುವ ಸ್ಥಳ(ಬ್ಲಾಕ್ ಸ್ಪಾಟ್)ಗಳನ್ನು ತೆರವುಗೊಳಿಸುವುದು, 22 ಕಡೆ ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಜಲಮಂಡಳಿ ವತಿಯಿಂದ ಪೈಪ್‌ಗಳನ್ನು ಹಾಕಿರುವುದು, 157 ಕಡೆ ಪಾದಚಾರಿ ಮಾರ್ಗಗಳಲ್ಲಿ ಪೆಟ್ಟಿ ಅಂಗಡಿಗಳಿರುವುದು, 51 ಕಡೆ ಕಟ್ಟಡ ಭಗ್ನಾವಶೇಷಗಳನ್ನು ಹಾಕಿರುವುದು, 330 ಕಡೆ ಹೈ-ಮಸ್ಟ್ ಲೈಟ್ ಅಳವಡಿಸುವುದು, 427 ಕಡೆ ಅವೈಜ್ಞಾನಿಕ ರಸ್ತೆ ಉಬ್ಬುಗಳಿರುವುದನ್ನು ಕೂಡಲೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ನಿಂತಿರುವ ಅನಾಥ ವಾಹನಗಳನ್ನು ಸಂಚಾರಿ ಪೊಲೀಸ್ ಅಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳು ಸಮನ್ವಯಮಾಡಿಕೊಂಡು ಕೂಡಲೆ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು ಎಂದು ಮಾತನಾಡಿದರು.

Published On - 10:48 pm, Mon, 21 November 22