ಬೆಂಗಳೂರು: ಸಾರ್ವಜನಿಕ ಸಾರಿಗೆಯನ್ನು (Government Vehicle) ಬಳಸಲು ಮತ್ತು ಖಾಸಗಿ ವಾಹನಗಳ (Private Vehicle) ಬಳಕೆ ಕಡಿಮೆ ಮಾಡುವಂತೆ ಜನರನ್ನು ಉತ್ತೇಜಿಸಲು ಮತ್ತು ನಗರದಲ್ಲಿ ಸಂಚಾರ ದಟ್ಟಣೆ (Bengaluru Traffic) ಹೆಚ್ಚಿರುವ ರಸ್ತೆಗಳಲ್ಲಿ ವಾಹನ ಸವಾರರಿಂದ ದಟ್ಟಣೆ ಶುಲ್ಕವನ್ನು ವಸೂಲಿಗೆ ಕರ್ನಾಟಕ ಸರ್ಕಾರ ಚಿಂತಿಸುತ್ತಿದೆ. ಈ ಕ್ರಮವು ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಅಭಿವೃದ್ಧಿಪಡಿಸಲು ಸರಕಾರಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (IISC) ಮತ್ತು ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (RIM) ಜಂಟಿಯಾಗಿ ವರದಿ ಸಲ್ಲಿಸಿವೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ಪಾರ್ಕಿಂಗ್ ನೀತಿ ಜಾರಿ, ಜನನಿಬಿಡ ರಸ್ತೆಗಳಲ್ಲಿ ವಾಹನ ಸವಾರರಿಂದ ಶುಲ್ಕ ವಸೂಲಿ ಮತ್ತು ಸಮಗ್ರ ಟ್ರಾಫಿಕ್ ಮ್ಯಾನೇಜ್ಮೆಂಟ್ ಮಾಸ್ಟರ್ ಪ್ಲಾನ್ ರಚಿಸುವುದು ಸೇರಿದಂತೆ ವಿವಿಧ ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಕಾರ್ಯಕ್ರಮ ಯೋಜನೆ ಅಡಿಯಲ್ಲಿ ನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಸಾರ್ವಜನಿಕ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಈ ಸಲಹೆಗಳನ್ನು ಒಟ್ಟುಗೂಡಿಸಿ ಪ್ರತ್ಯೇಕ ವರದಿ ಸಿದ್ದಪಡಿಸಿ ಸಲ್ಲಿಸುವಂತೆ ಐಐಎಸ್ಸಿ ಮತ್ತು ಆರ್ಆಯ್ಎಮ್ಗೆ ರಾಜ್ಯ ಸರ್ಕಾರ ಸೂಚಿಸಿತ್ತು. ಅದರಂತೆ ಐಐಎಸ್ಸಿನ ಪ್ರೊಫೆಸರ್ ಆಶಿಶ್ ವರ್ಮಾ ಮತ್ತು ಆರ್ಆಯ್ಎಂನ ಪ್ರೊಫೆಸರ್ ಮೇಘನಾ ವರ್ಮಾ ಅವರು ವರದಿ ಸಿದ್ದಪಡಿಸಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವರ್ಸಸ್ ಹೈದರಾಬಾದ್: ಯಾವ ನಗರ ಅತಿ ವೆಚ್ಚದಾಯಕ? ಟ್ವಿಟರ್ನಲ್ಲಿ ವೈರಲ್ ಆಗುತ್ತಿವೆ ಪೋಸ್ಟ್ಗಳು
ವರದಿಯು ಜೂನ್ ಮತ್ತು ಆಗಸ್ಟ್ ನಡುವೆ ಸಾರ್ವಜನಿಕರಿಂದ ಒಟ್ಟು 10,479 ಸಲಹೆ, ಸೂಚನೆಗಳನ್ನು ಸ್ವೀಕರಿಸಿದೆ. ಅಪ್ರಸ್ತುತ ಸಲ್ಲಿಕೆಗಳನ್ನು ತೆಗೆದುಹಾಕಿದ ನಂತರ ಕೊನೆಯದಾಗಿ 6,075 ಸಲಹೆ, ಸೂಚನೆಗಳನ್ನು ಪರಿಗಣಿಸಲಾಗಿದೆ.
ಮುಂಬರುವ ವರ್ಷಗಳಲ್ಲಿ ನಗರದಲ್ಲಿ ಹೆಚ್ಚುತ್ತಿರುವ ವಾಹನ ಹಾಗೂ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸಲು, ಸೂಕ್ತವಾದ ಮಾಸ್ಟರ್ಪ್ಲಾನ್ ಹಾಗೂ ಅನ್ವಯವಾಗುವ ಸಾರಿಗೆ ಯೋಜನೆಯನ್ನು ಅಭಿವೃದ್ಧಿಪಡಿಸಬೇಕಿದೆ. ಹಾಗೇ ಇದನ್ನು ಕಾಲಕಾಲಕ್ಕೆ ನವೀಕರಿಸಬೇಕು. ಸಂಚಾರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಯೋಜನೆಗಳು ಅತ್ಯಗತ್ಯ. ಇದಲ್ಲದೆ, ವರದಿಯು ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ, ವಾಹನ ನಿಲುಗಡೆ ನೀತಿಯನ್ನು ಸಮಗ್ರವಾಗಿ ಜಾರಿ ಮತ್ತು ಪಾರ್ಕಿಂಗ್ ಶುಲ್ಕವನ್ನು ಸಂಗ್ರಹ ಮಾಡಬೇಕು.
ವರದಿಯು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ (BMLTA) ಪರಿಣಾಮಕಾರಿ ಅನುಷ್ಠಾನದ ಅಗತ್ಯವನ್ನು ಒತ್ತಿಹೇಳುತ್ತದೆ. ಮತ್ತು ಎಲೆಕ್ಟ್ರಿಕ್ ವಾಹನಗಳು, ಸೈಕಲ್ಗಳು, ಬಸ್ಗಳು ಮತ್ತು ಮೆಟ್ರೋದಂತಹ ಪರಿಸರ ಸ್ನೇಹಿ ಸಾರಿಗೆ ಬಳಸುವಂತೆ ಪ್ರೋತ್ಸಾಹಿಸುತ್ತದೆ.
ಲಂಡನ್ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ದಟ್ಟಣೆ ಶುಲ್ಕದ ಮಾದರಿಯನ್ನು ಇಲ್ಲಿ ಅಳವಡಿಸುವಂತೆ ವರದಿಯಲ್ಲಿ ಹೇಳಲಾಗಿದೆ. ಅಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ವಾಹನಗಳು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ನಿವಾರಣೆಯಾಗಿದೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:22 am, Wed, 6 September 23