ಮಕ್ಕಳಿಲ್ಲದ ದಂಪತಿಗೆ ಸರ್ಕಾರ ಗುಡ್ನ್ಯೂಸ್: ಸರ್ಕಾರಿ ವಿಮೆಯಡಿ IVF ಚಿಕಿತ್ಸೆ!
ಮಕ್ಕಳಾಗದ ಬಡ ಹಾಗೂ ಮಧ್ಯಮ ವರ್ಗದ ದಂಪತಿಗೆ ಕರ್ನಾಟಕ ಸರ್ಕಾರ ಮಹತ್ವದ ಕೊಡುಗೆವೊಂದು ನೀಡಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಇನ್ಮುಂದೆ IVF ಚಿಕಿತ್ಸೆ ಲಭ್ಯವಾಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಎನಿಸಿದ್ದ ಈ ಚಿಕಿತ್ಸೆಗೆ 1.20 ಲಕ್ಷದವರೆಗೆ ವಿಮಾ ಸೌಲಭ್ಯ ದೊರೆಯಲಿದೆ. ಇದು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ಬಂದಿದ್ದು, ಸಾವಿರಾರು ದಂಪತಿಗಳ ಮಗುವಿನ ಕನಸಿಗೆ ಆಶಾಕಿರಣವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 05: ತಾಯ್ತನದ ಕನಸು ಹೊತ್ತು ಮಕ್ಕಳಾಗದೆ ವರ್ಷಗಟ್ಟಲೆ ಕಣ್ಣೀರಿಡುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ದಂಪತಿಗಳಿಗೆ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಸಿಹಿಸುದ್ದಿ ನೀಡಿದೆ. ಹಣದ ಕೊರತೆಯಿಂದಾಗಿ ಲಕ್ಷಾಂತರ ರೂ ವೆಚ್ಚದ ದುಬಾರಿ ಚಿಕಿತ್ಸೆ ಪಡೆಯಲಾಗದೆ ಹಂಬಲಿಸುತ್ತಿದ್ದ ಪೋಷಕರಿಗೆ ಆಸರೆಯಾಗಲು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ವಿಮಾ ಯೋಜನೆಯಡಿ ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಶನ್) ಚಿಕಿತ್ಸೆಯನ್ನು ಸೇರ್ಪಡೆಗೊಳಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಶೇ 20% ರಿಂದ 25% ರಷ್ಟು ಗರ್ಭಧಾರಣೆ ಸಮಸ್ಯೆಗೆ ತುತ್ತಾಗಿರುವ ಮಹಿಳೆಯರು
ಇತ್ತೀಚಿನ ದಿನಗಳಲ್ಲಿ ದಂಪತಿಗಳಿಗೆ ನಾನಾ ಕಾರಣಗಳಿಂದ ಮಕ್ಕಳು ಆಗುತ್ತಿಲ್ಲ. ಶೇ 20% ರಿಂದ 25% ರಷ್ಟು ಮಹಿಳೆಯರು ಗರ್ಭಧಾರಣೆ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ತಡವಾಗಿ ಮದುವೆ, ಕೆಲಸದ ತೀವ್ರ ಒತ್ತಡ ಹಾಗೂ ಆರ್ಥಿಕ ಸಂಕಷ್ಟಗಳು ಸೇರಿದಂತೆ ನಾನಾ ಕಾರಣಗಳಿಂದ ಹೆಚ್ಚು ಪೋಷಕರಿಗೆ ಮಕ್ಕಳಾಗುತ್ತಿಲ್ಲ. ಹೀಗಾಗಿ ಮಕ್ಕಳನ್ನ ಪಡೆಯಲು ಸಾಕಷ್ಟು ಪೋಷಕರು ಐವಿಎಫ್ ಚಿಕಿತ್ಸೆ ಮೊರೆ ಹೋಗುತ್ತಿದ್ದಾರೆ. ಆದರೆ ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂ ಖರ್ಚು ಮಾಡಬೇಕಿದ್ದು, ಬಡ ಹಾಗೂ ಮದ್ಯಮ ವರ್ಗದವರಿಗೆ ಈ ಚಿಕಿತ್ಸೆ ನಿಲುಕದ ನಕ್ಷತ್ರವಾಗಿದೆ. ದಂಪತಿ ಇದೇ ಕಾರಣಕ್ಕೆ ಮಕ್ಕಳು ಪಡೆಯಲು ಸಾಧ್ಯವಾಗದೆ ಸಂಕಷ್ಟ ಪಡುತ್ತಿದ್ದಾರೆ. ಆದರೆ ಇತಂಹ ಪೋಷಕರಿಗೆ ಈಗ ಆರೋಗ್ಯ ಇಲಾಖೆ ಗಿಫ್ಟ್ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಐವಿಎಫ್ ಚಿಕಿತ್ಸಾ ಸೌಲಭ್ಯ ನೀಡಲು ಮುಂದಾಗಿದೆ.
ಇದನ್ನೂ ಓದಿ: ಚಿಕಿತ್ಸೆ ಪಡೆದ್ರೂ ಮಕ್ಕಳಾಗಿಲ್ಲ: ರಾಯಚೂರು ಖಾಸಗಿ ಐವಿಎಫ್ ಮಾಫಿಯಾ ಬಯಲು
ಖಾಸಗಿ ಆಸ್ಪತ್ರೆಗಳಲ್ಲಿ ಐವಿಎಫ್ ಚಿಕಿತ್ಸೆಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ 1 ಲಕ್ಷ 20 ಸಾವಿರ ರೂ ಹಣ ವಿಮೆ ಅಡಿ ಕ್ಯಾಪಿಂಗ್ ನೀಡಲು ಮುಂದಾಗಿದೆ. ಆ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆರೋಗ್ಯ ಇಲಾಖೆಯಿಂದ ವಿಮಾ ಯೋಜನೆಯಡಿ ದುಬಾರಿ ಚಿಕಿತ್ಸೆ ಪರಿಚಯಕ್ಕೆ ಮುಂದಾಗಿದೆ.
ವಿಮೆಯಡಿ 1.20 ಲಕ್ಷ ರೂ ಕ್ಯಾಪಿಂಗ್: ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಲಭ್ಯ
ಬಡ ತಾಯಂದಿರ ಈ ನೋವಿಗೆ ಸ್ಪಂದಿಸಿರುವ ಆರೋಗ್ಯ ಇಲಾಖೆ, ಐವಿಎಫ್ ಚಿಕಿತ್ಸೆಯನ್ನು ಸರ್ಕಾರಿ ವಿಮಾ ಪ್ಯಾಕೇಜ್ ವ್ಯಾಪ್ತಿಗೆ ತಂದಿದೆ. ನೂತನ ನಿಯಮಾವಳಿಯಂತೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಐವಿಎಫ್ ಚಿಕಿತ್ಸೆ ಪಡೆಯಲು 1,20,000 ರೂ. ವರೆಗೆ ವಿಮಾ ಮೊತ್ತದ ಕ್ಯಾಪಿಂಗ್ ನಿಗದಿಪಡಿಸಲಾಗಿದೆ. ಇದರಿಂದಾಗಿ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ಅತ್ಯಾಧುನಿಕ ಚಿಕಿತ್ಸೆ ಇನ್ಮುಂದೆ ಸಾಮಾನ್ಯ ಕುಟುಂಬಗಳಿಗೂ ಕೈಗೆಟುಕುವಂತಾಗಲಿದ್ದು, ನೊಂದ ಪೋಷಕರ ಬಾಳಿನಲ್ಲಿ ಹೊಸ ಭರವಸೆಯ ಬೆಳಕು ಮೂಡಿಸಿದೆ.
ಏನಿದು ಐವಿಎಫ್ ಚಿಕಿತ್ಸೆ?
ನೈಸರ್ಗಿಕವಾಗಿ ಗರ್ಭಧರಿಸಲು ಸಾಧ್ಯವಾಗದ ದಂಪತಿಗಳಿಗೆ ವೈದ್ಯಕೀಯ ತಂತ್ರಜ್ಞಾನದ ಮೂಲಕ ನೆರವಾಗುವ ಪ್ರಕ್ರಿಯೆಯೇ ಐವಿಎಫ್. ಇದರಲ್ಲಿ ಮಹಿಳೆಯ ದೇಹದಿಂದ ಅಂಡಾಣು ಹಾಗೂ ಪುರುಷನಿಂದ ವೀರ್ಯಾಣುವನ್ನು ಪಡೆದು, ಪ್ರಯೋಗಾಲಯದಲ್ಲಿ ದೇಹದ ಹೊರಗೆ ಫಲೀಕರಣ ಮಾಡಲಾಗುತ್ತದೆ. ಭ್ರೂಣ ರೂಪುಗೊಂಡ ನಂತರ ಅದನ್ನು ಮಹಿಳೆಯ ಗರ್ಭಾಶಯಕ್ಕೆ ಸೇರಿಸಿ ನೈಸರ್ಗಿಕವಾಗಿ ಮಗು ಬೆಳೆಯುವಂತೆ ಮಾಡಲಾಗುತ್ತದೆ. ಸರ್ಕಾರಿ ವಿಮೆಯ ಬೆಂಬಲದೊಂದಿಗೆ ಈ ಪ್ರಕ್ರಿಯೆ ಬಡ ಕುಟುಂಬಗಳಿಗೂ ಲಭ್ಯವಾಗುತ್ತಿರುವುದು ರಾಜ್ಯದ ಆರೋಗ್ಯ ಸೇವೆಯಲ್ಲಿನ ಕ್ರಾಂತಿಕಾರಿ ಹಾಗೂ ಮಾನವೀಯ ಹೆಜ್ಜೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




