AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐವಿಎಫ್ ಮಾಡುವ ಮೊದಲು ಈ ಬಗ್ಗೆ ಗಮನ ನೀಡಿ, ಇದರ ವೆಚ್ಚ, ವಿಧಗಳು ಯಾವುವು?

ಇತ್ತೀಚಿನ ದಿನಗಳಲ್ಲಿ ಐವಿಎಫ್ ಬಗ್ಗೆ ಕೇಳದವರೇ ಇಲ್ಲ. ಇದು ಕೇವಲ ಒಂದು ಪದವಾಗಿರದೆ ಮನೆಮಾತಾಗಿದೆ. ಆದರೆ ಇದರ ಬಗ್ಗೆ ಜನರಿಗೆ ಅಷ್ಟಾಗಿ ಮಾಹಿತಿ ಇಲ್ಲ. ಜೀವನಶೈಲಿಯ ಬದಲಾವಣೆಗಳು, ತಡವಾದ ಮದುವೆ ಮತ್ತು ಸಮಾಜದಲ್ಲಿ ಬದಲಾಗುತ್ತಿರುವ ರೂಢಿಗಳಿಂದಾಗಿ, ಭಾರತದಲ್ಲಿ ಸಹಾಯಕ ಸಂತಾನೋತ್ಪತ್ತಿ ಚಿಕಿತ್ಸೆಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚಾಗಿದ್ದು ಇದಕ್ಕೆ ಪೂರಕವಾಗಿ ಅಗತ್ಯವಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಎಷ್ಟು ವೆಚ್ಚವಾಗುತ್ತೆ? ಅದಕ್ಕೆ ಯಾವ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ? ಹೀಗೆ ಹಲವಾರು ರೀತಿಯ ಗೊಂದಲಗಳಿರುತ್ತದೆ. ಇದಕ್ಕೆಲ್ಲಾ ಸ್ಪಷ್ಟ ಉತ್ತರ ಇಲ್ಲಿದೆ. ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ, ಆಸಕ್ತಿ ಎರಡು ಇದ್ದವರು ಈ ಸ್ಟೋರಿ ಓದಬಹುದು.

ಐವಿಎಫ್ ಮಾಡುವ ಮೊದಲು ಈ ಬಗ್ಗೆ ಗಮನ ನೀಡಿ, ಇದರ ವೆಚ್ಚ, ವಿಧಗಳು ಯಾವುವು?
Ivf
ಪ್ರೀತಿ ಭಟ್​, ಗುಣವಂತೆ
|

Updated on: Aug 30, 2025 | 2:55 PM

Share

ಇತ್ತೀಚಿನ ವರ್ಷಗಳಲ್ಲಿ, ‘ಇನ್ ವಿಟ್ರೊ ಫರ್ಟಿಲೈಸೇಶನ್’ (IVF) ಕೇವಲ ಒಂದು ವೈದ್ಯಕೀಯ ಪದವಾಗಿರದೆ, ಮನೆಮಾತಾಗಿದೆ. ಇದರ ಬಗ್ಗೆ ಹೆಚ್ಚುತ್ತಿರುವ ಅರಿವು ಮತ್ತು ಸುಲಭಲಭ್ಯತೆಯಿಂದಾಗಿ, ಅನೇಕ ದಂಪತಿಗಳು ಈಗ ಪಾಲಕರಾಗಲು ಐವಿಎಫ್ ಅನ್ನು ಒಂದು ಉತ್ತಮ ಮಾರ್ಗವೆಂದು ಪರಿಗಣಿಸುತ್ತಿದ್ದಾರೆ. ಜೀವನಶೈಲಿಯ ಬದಲಾವಣೆಗಳು, ತಡವಾದ ಮದುವೆ ಮತ್ತು ಸಮಾಜದಲ್ಲಿ ಬದಲಾಗುತ್ತಿರುವ ರೂಢಿಗಳಿಂದಾಗಿ, ಭಾರತದಲ್ಲಿ ಸಹಾಯಕ ಸಂತಾನೋತ್ಪತ್ತಿ ಚಿಕಿತ್ಸೆಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚಾಗಿದೆ. ಆದರೆ, ಪಾಲಕರಾಗಲು ಬಯಸುವವರ ಮನಸ್ಸಿನಲ್ಲಿ ಹಲವಾರು ರೀತಿಯ ಪ್ರಶ್ನೆಗಳಿರುತ್ತವೆ. ಅದಕ್ಕೆ ಎಷ್ಟು ವೆಚ್ಚವಾಗುತ್ತೆ? ಅದಕ್ಕೆ ಯಾವ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ? ಹೀಗೆ ಹಲವಾರು ರೀತಿಯ ಗೊಂದಲಗಳಿರುತ್ತದೆ. ಇದಕ್ಕೆಲ್ಲಾ ಸ್ಪಷ್ಟ ಉತ್ತರ ಈ ಸ್ಟೋರಿಯಲ್ಲಿದೆ.

ಐವಿಎಫ್ ಗೆ ನಿಜವಾಗಿಯೂ ಎಷ್ಟು ವೆಚ್ಚವಾಗುತ್ತದೆ?

ಭಾರತದಲ್ಲಿ ಐವಿಎಫ್ ವೆಚ್ಚವು ಸಾಮಾನ್ಯವಾಗಿ ಪ್ರತಿ ಚಿಕಿತ್ಸಾ ಚಕ್ರಕ್ಕೆ 1.2 ಲಕ್ಷದಿಂದ 2.5 ಲಕ್ಷದವರೆಗೆ ಇರುತ್ತದೆ, ಇದು ವಿವಿಧ ವೈದ್ಯಕೀಯ ಮತ್ತು ಇತರೆ ಅಂಶಗಳನ್ನು ಅವಲಂಬಿಸಿರುತ್ತದೆ. ಜಾಗತಿಕವಾಗಿ ಹೋಲಿಸಿದರೆ ಇದು ಕಡಿಮೆಯಾಗಿದೆ. ಆದರೆ ಅನೇಕ ದಂಪತಿಗಳು ಒಂದೇ ಚಕ್ರದಲ್ಲಿ ಗರ್ಭಧರಿಸುವುದಿಲ್ಲ ಈ ವಿಷಯವನ್ನು ಪ್ರತಿಯೊಬ್ಬರೂ ನೆನಪಲ್ಲಿಟ್ಟುಕೊಳ್ಳಬೇಕು. ಮೊದಲ ಚಕ್ರವು ಕಡಿಮೆ ವೆಚ್ಚದ್ದಾಗಿರಬಹುದು, ಆದರೆ ಮುಂದಿನ ಚಕ್ರದ ಅಗತ್ಯವಿದ್ದರೆ ಅದರ ವೆಚ್ಚ ಹೆಚ್ಚಾಗಲೂಬಹುದು. ಕೆಲವು ದಂಪತಿಗಳು ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಾಣುತ್ತಾರೆ. ಆದರೆ ಇನ್ನು ಕೆಲವರಿಗೆ 2- 3 ಐವಿಎಫ್ ಚಕ್ರಗಳು ಅಥವಾ ಹೆಚ್ಚುವರಿ ಪ್ರಕ್ರಿಯೆಗಳಾದ ಭ್ರೂಣ ಶೈತ್ಯೀಕರಣ ಅಥವಾ ಆನುವಂಶಿಕ ಪರೀಕ್ಷೆಗಳ (genetic testing) ಅಗತ್ಯತೆ ಇರಬಹುದು. ಹಾಗಾಗಿ ಇವೆಲ್ಲವೂ ನಿಮ್ಮ ವೆಚ್ಚಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಐವಿಎಫ್ ಗಾಗಿ ಆರ್ಥಿಕ ಯೋಜನೆ ಮಾಡುವಾಗ ಯಾವಾಗಲೂ ಅನೇಕ ಸಾಧ್ಯತೆಗಳನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಸ್ಥಳದಿಂದ ಸ್ಥಳಕ್ಕೆ ಐವಿಎಫ್ ವೆಚ್ಚ ಬದಲಾಗಬಹುದು!

ಸಾಮಾನ್ಯವಾಗಿ ಪ್ರದೇಶಕ್ಕೆ ಅನುಗುಣವಾಗಿ ಚಿಕಿತ್ಸೆಯ ವೆಚ್ಚ ಬದಲಾಗಬಹುದು. ಪ್ರಮುಖ ನಗರಗಳಲ್ಲಿ ಐವಿಎಫ್ ಶುಲ್ಕಗಳು ವ್ಯಾಪಕವಾಗಿ ಬದಲಾಗುತ್ತವೆ, ಇದು ಜೀವನ ವೆಚ್ಚ, ಆಸ್ಪತ್ರೆಯ ಮೂಲ ಸೌಕರ್ಯ ಮತ್ತು ಬೇಡಿಕೆಗಳಿಗೆ ಅನುಗುಣಕ್ಕೆ ತಕ್ಕಂತೆ ನಿರ್ಧರಿಸಲಾಗುತ್ತದೆ. ಆದರೆ ಈ ಅಂಶ ಕೂಡ ಖರ್ಚು- ವೆಚ್ಚ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಹಾನಗರಗಳಲ್ಲಿನ ಆಸ್ಪತ್ರೆಗಳು ಸಾಮಾನ್ಯವಾಗಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅನುಭವಿ ತಜ್ಞರನ್ನು ಒದಗಿಸುವುದರಿಂದ ಬೆಲೆಯಲ್ಲಿ ವ್ಯತ್ಯಾಸವಾಗಬಹುದು. ಆದರೆ ಕೇವಲ ಹಣಕಾಸಿನ ಅಂಶ ಮಾತ್ರವಲ್ಲ ಅದನ್ನು ಮೀರಿ ನೋಡುವುದು ಒಳ್ಳೆಯದು. ಒಟ್ಟಾರೆ ಗುಣಮಟ್ಟ, ಪಾರದರ್ಶಕತೆಯ ಬಗ್ಗೆ ಪರಿಶೀಲಿಸುವುದು ಸೂಕ್ತ.

ಐವಿಎಫ್ ಬೆಲೆ ಹೆಚ್ಚಿರುವುದಕ್ಕೆ ಯಾವುದರ ಪ್ರಭಾವವಿದೆ?

ರೋಗನಿರ್ಣಯದ ಪರೀಕ್ಷೆಗಳು:

ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು, ದಂಪತಿಗಳು ರಕ್ತ ಪರೀಕ್ಷೆ, ಸ್ಕ್ಯಾನಿಂಗ್, ವೀರ್ಯ ವಿಶ್ಲೇಷಣೆ ಮುಂತಾದ ಹಲವಾರು ತನಿಖೆಗಳಿಗೆ ಒಳಗಾಗುತ್ತಾರೆ, ಇದರ ವೆಚ್ಚ 10,000 ದಿಂದ 30,000 ವರೆಗೆ ಇರಬಹುದು.

ಐವಿಎಫ್ ಚಕ್ರಗಳ ಸಂಖ್ಯೆ:

ಪ್ರತಿ ಹೆಚ್ಚುವರಿ ಚಕ್ರಕ್ಕೆ ಪುನರಾವರ್ತಿತ ಔಷಧಿಗಳು, ಪ್ರಯೋಗಾಲಯ ಪ್ರಕ್ರಿಯೆಗಳು ಮತ್ತು ಸಮಾಲೋಚನೆಗಳು ಅಗತ್ಯವಿರುತ್ತದೆ. ಜೊತೆಗೆ ಚಕ್ರಗಳು ಹೆಚ್ಚಾದಂತೆ ವೆಚ್ಚ ಕೂಡ ದುಪ್ಪಟ್ಟಾಗುತ್ತದೆ.

ವೈದ್ಯರ ಪರಿಣತಿ ಮತ್ತು ಆಸ್ಪತ್ರೆಯ ತಂತ್ರಜ್ಞಾನ:

ತಜ್ಞರು ಮತ್ತು ಮುಂದುವರಿದ ಭ್ರೂಣಶಾಸ್ತ್ರ ಪ್ರಯೋಗಾಲಯಗಳನ್ನು ಹೊಂದಿರುವ ಆಸ್ಪತ್ರೆಗಳಲ್ಲಿ ಶುಲ್ಕದ ಪ್ರಮಾಣ ಹೆಚ್ಚಾಗಿರಬಹುದು. ಆದರೆ ಇವು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

ಮುಂದುವರಿದ ಪ್ರಕ್ರಿಯೆಗಳು:

ಐಸಿಎಸ್ಐ (Intracytoplasmic Sperm Injection), ಭ್ರೂಣ ಶೈತ್ಯೀಕರಣ, ದಾನಿ ವೀರ್ಯ ಅಥವಾ ಅಂಡಾಣುಗಳು ಮತ್ತು PGT-A (Preimplantation Genetic Testing for Aneuploidy) ನಂತಹ ತಂತ್ರಗಳು ಮೂಲ ವೆಚ್ಚಕ್ಕೆ 20,000 ದಿಂದ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸೇರಿಸಬೇಕಾಗಿ ಬರಬಹುದು.

ಔಷಧಗಳು:

ರೋಗಿಯ ಪ್ರತಿಕ್ರಿಯೆ ಮತ್ತು ವೈದ್ಯಕೀಯ ಕ್ರಮವನ್ನು ಅವಲಂಬಿಸಿ ಫಲವತ್ತತೆ ಔಷಧಿಗಳು ಗಮನಾರ್ಹ ವೆಚ್ಚವನ್ನು ಉಂಟುಮಾಡಬಹುದು ಪ್ರತಿ ಚಕ್ರಕ್ಕೆ 40,000 ದಿಂದ 80,000 ವರೆಗೆ ಇರುತ್ತದೆ.

ಐವಿಎಫ್ ಪ್ಯಾಕೇಜ್ಗಳು ಮತ್ತು ಪ್ರತಿ- ಚಕ್ರದ ಬಿಲ್ಲಿಂಗ್: ಯಾವುದು ಉತ್ತಮ?

ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಅನಿರೀಕ್ಷಿತ ವೆಚ್ಚಗಳು ಬರುವುದನ್ನು ತಪ್ಪಿಸಲು, ಅನೇಕ ಆಸ್ಪತ್ರೆಗಳು ಈಗ ಎಲ್ಲವನ್ನೂ ಒಳಗೊಂಡಿರುವ ಐವಿಎಫ್ ಪ್ಯಾಕೇಜ್ಗಳನ್ನು ನೀಡುತ್ತವೆ. ಇವುಗಳು ಸಾಮಾನ್ಯವಾಗಿ ಸಮಾಲೋಚನೆ, ಔಷಧಿಗಳು, ಸ್ಕ್ಯಾನಿಂಗ್, ಪ್ರಕ್ರಿಯೆಗಳು ಮತ್ತು ಶೈತ್ಯೀಕರಣ ಶುಲ್ಕಗಳನ್ನು ಒಳಗೊಂಡಿರುತ್ತವೆ. ಈ ರೀತಿಯ ಪ್ಯಾಕೇಜ್ ಗಳು ಮೊದಲಿಗೆ ಹೆಚ್ಚು ದುಬಾರಿಯಾಗಿ ಕಾಣಿಸಬಹುದು, ಆದರೆ ಅವು ನಮ್ಮ ಮುಂದಿನ ವೆಚ್ಚದ ನಿಯಂತ್ರಣ ಮಾಡುತ್ತದೆ. ಆದರೆ ಆ ಪ್ಯಾಕೇಜ್ ಏನನ್ನು ಒಳಗೊಂಡಿದೆ ಎಂಬುದನ್ನು ಓದುವುದು ಅತ್ಯಗತ್ಯ. ಅದರಲ್ಲಿಯೂ ಅವಧಿ ಮತ್ತು ಮರುಪಾವತಿ ಅಥವಾ ರದ್ದತಿ ನಿಯಮಗಳನ್ನು ಮೊದಲೇ ಪರಿಶೀಲಿಸಿಕೊಳ್ಳಿ.

ರೋಗಿಗಳು ಗಮನಿಸಬೇಕಾದ ಮತ್ತಿತರ ವೆಚ್ಚಗಳು

ಪ್ಯಾಕೇಜ್ಗಳಿದ್ದರೂ ಸಹ, ಕೆಲವು ವೆಚ್ಚಗಳು ಗಮನಕ್ಕೆ ಬಾರದೆ ಹೋಗಬಹುದು ಹಾಗಾಗಿ ಪ್ರತಿಯೊಂದನ್ನು ಕೂಡ ಸರಿಯಾಗಿ ಗಮನಿಸುವುದು ಬಹಳ ಮುಖ್ಯವಾಗುತ್ತದೆ.

  • ಉತ್ತೇಜನದ ಸಮಯದಲ್ಲಿ ಪುನರಾವರ್ತಿತ ರಕ್ತ ಪರೀಕ್ಷೆಗಳು ಮತ್ತು ಸ್ಕ್ಯಾನಿಂಗ್ ಗಳು
  • ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಹಾರ್ಮೋನ್ ಚುಚ್ಚು ಮದ್ದುಗಳು
  • ಭ್ರೂಣ ಶೈತ್ಯೀಕರಣ/ ಶೇಖರಣಾ ಶುಲ್ಕಗಳು, ಇದನ್ನು ವಾರ್ಷಿಕವಾಗಿ ಬಿಲ್ ಮಾಡಬಹುದು
  • ಅಂಡಾಣು ಸಂಗ್ರಹಣೆಗಾಗಿ ಆಸ್ಪತ್ರೆಯ ವಾಸ್ತವ್ಯದ ಶುಲ್ಕಗಳು ಅಥವಾ ಅರಿವಳಿಕೆ
  • ವೈದ್ಯರು ಶಿಫಾರಸು ಮಾಡಿದರೆ ಆನುವಂಶಿಕ ಪರೀಕ್ಷೆ. ಇವೆಲ್ಲವೂ ನಿಮ್ಮ ಫಲವತ್ತತೆ ಕೇಂದ್ರದೊಂದಿಗೆ ಇವುಗಳನ್ನು ಮೊದಲೇ ಸ್ಪಷ್ಟಪಡಿಸಿಕೊಳ್ಳುವುದು ನಂತರ ಅನಿರೀಕ್ಷಿತ ಬಿಲ್ಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ವಿಮೆ ಮತ್ತು ಸುಲಭ ಕಂತುಗಳ (EMI) ಬೆಂಬಲ?

ಮೊದಲು ಭಾರತದಲ್ಲಿನ ಹೆಚ್ಚಿನ ಆರೋಗ್ಯ ವಿಮಾ ಪಾಲಿಸಿಗಳ ಅಡಿಯಲ್ಲಿ ಐವಿಎಫ್ ಒಳಗೊಂಡಿರಲಿಲ್ಲ. ಆದರೆ ಕೆಲವು ಪ್ರಗತಿಪರ ವಿಮಾದಾರರು ಈಗ ಫಲವತ್ತತೆ ಸಂಬಂಧಿತ ವಿಮಾ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಅಥವಾ ಕೆಲವು ರೋಗನಿರ್ಣಯ ಪ್ರಕ್ರಿಯೆ ಮತ್ತು ಆಸ್ಪತ್ರೆ ವಾಸ್ತವ್ಯಗಳನ್ನು ಒಳಗೊಂಡಿದ್ದಾರೆ. ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಯಾವಾಗಲೂ ನಿಮ್ಮ ವಿಮಾ ಸಂಸ್ಥೆಯ ಸದಸ್ಯರೊಂದಿಗೆ ಮಾತನಾಡಿ ಪರಿಶೀಲನೆ ಮಾಡಿಕೊಳ್ಳಿ. ಇನ್ನು ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು, ಅನೇಕ ಫಲವತ್ತತೆ ಕೇಂದ್ರಗಳು ಈಗ ಸುಲಭ ಕಂತುಗಳ ಯೋಜನೆಗಳು, ಬಡ್ಡಿರಹಿತ ಹಣಕಾಸು ಮತ್ತು ಹಂತ- ಹಂತದ ಪಾವತಿ ಮಾದರಿಗಳನ್ನು ನೀಡುತ್ತವೆ. ಈ ಆಯ್ಕೆಗಳು ದಂಪತಿಗಳಿಗೆ ಸಂಪೂರ್ಣ ಮೊತ್ತವನ್ನು ಮೊದಲೇ ಪಾವತಿಸದೆ ಚಿಕಿತ್ಸೆಯನ್ನು ಪ್ರಾರಂಭಿಸಲು ಅವಕಾಶ ನೀಡುತ್ತವೆ, ಇದರಿಂದಾಗಿ ಐವಿಎಫ್ ಪ್ರಯೋಜನಗಳನ್ನು ಅಗತ್ಯವಿರುವವರು ಸುಲಭವಾಗಿ ಪಡೆಯಬಹುದಾಗಿದೆ.

ಇದನ್ನೂ ಓದಿ: ಐವಿಎಫ್ ನಲ್ಲಿ ಎಐ ಕೈಚಳಕ! ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಒಳ್ಳೆಯ ಐವಿಎಫ್ ಆಸ್ಪತ್ರೆಯನ್ನು ಆಯ್ಕೆ ಮಾಡುವುದು ಹೇಗೆ?

ಬೆಲೆ ಮುಖ್ಯವಾದರೂ, ಇದು ನಿಮ್ಮ ಆಸ್ಪತ್ರೆ ಆಯ್ಕೆಯನ್ನು ನಿರ್ಧರಿಸುವ ಏಕೈಕ ಅಂಶವಾಗಿರಬಾರದು. ಕೆಲವೊಮ್ಮೆ ಕಡಿಮೆ ವೆಚ್ಚದ ಆಸ್ಪತ್ರೆ ಉತ್ತಮ ವೈದ್ಯಕೀಯ ಫಲಿತಾಂಶಗಳನ್ನು ನೀಡದಿರಬಹುದು, ಜೊತೆಗೆ ದುಬಾರಿ ಆಸ್ಪತ್ರೆ ಅತ್ಯಂತ ನೈತಿಕವಾಗಿ ಇರದಿರಬಹುದು. ಹಾಗಾಗಿ ಮೊದಲು ಸರಿಯಾಗಿ ಮೌಲ್ಯಮಾಪನ ಮಾಡಿ. ನಿಮ್ಮ ವಯಸ್ಸಿನ ಗುಂಪಿಗೆ ಸಿಕ್ಕಿರುವ ಯಶಸ್ಸಿನ ದರಗಳು, ಬೆಲೆ ಮತ್ತು ಪ್ರಕ್ರಿಯೆಯ ವಿವರಣೆಯಲ್ಲಿ ಪಾರದರ್ಶಕತೆ, ರೋಗಿಗಳ ವಿಮರ್ಶೆ ಮತ್ತು ಅನುಭವ, ವೈದ್ಯರ ಅರ್ಹತೆ ಮತ್ತು ಅನುಭವ, NABH ಅಥವಾ ICMR ಅನುಮೋದನೆಯಂತಹ ಮಾನ್ಯತೆಗಳನ್ನು ಅಳೆದು ತೂಗಿ ನೋಡಿ. ಇದರ ಜೊತೆಗೆ ಚಿಕಿತ್ಸೆಯ ಮೊದಲು ನಡೆಯುವಂತಹ ಪೂರ್ವ ಸಮಾಲೋಚನೆಯಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಕೇಳಲು ಸಮಯ ತೆಗೆದುಕೊಳ್ಳಿ. ಒಳ್ಳೆಯ ಆಸ್ಪತ್ರೆ ನಿಮ್ಮ ಪ್ರಯಾಣವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ.

ಐವಿಎಫ್ ಕೇವಲ ಒಂದು ವೈದ್ಯಕೀಯ ಪ್ರಕ್ರಿಯೆಯಲ್ಲ. ಇದೊಂದು ಭರವಸೆ, ಭಾವನೆ ಮತ್ತು ನಿರೀಕ್ಷೆಗಳಿಂದ ತುಂಬಿದ ವೈಯಕ್ತಿಕ ಪ್ರಯಾಣ. ಹಾಗಾಗಿ ನಿಮ್ಮ ಕುಟುಂಬ ಬೆಳೆಸುವ ಮೊದಲು ಸಂಶೋಧನೆ ಮಾಡಿ, ವೈದ್ಯರ ಬಳಿ ಸರಿಯಾದ ಪ್ರಶ್ನೆಗಳನ್ನು ಕೇಳಿ, ಬೇರೆ ಆಸ್ಪತ್ರೆಗಳ ಜೊತೆ ಹೋಲಿಕೆ ಮಾಡಿ. ಇದೆಲ್ಲಕ್ಕಿಂತ ಮುಖ್ಯವಾಗಿ, ಐವಿಎಫ್ ಪ್ರಾರಂಭಿಸುವ ಮೊದಲು ವಿವರವಾಗಿ ಖರ್ಚು ವೆಚ್ಚದ ಬಗ್ಗೆ ಸಮಾಲೋಚನೆ ಮಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ