ಚಿಕಿತ್ಸೆ ಪಡೆದ್ರೂ ಮಕ್ಕಳಾಗಿಲ್ಲ: ರಾಯಚೂರು ಖಾಸಗಿ ಐವಿಎಫ್ ಮಾಫಿಯಾ ಬಯಲು
ರಾಯಚೂರಿನ ಖಾಸಗಿ ಐವಿಎಫ್ ಆಸ್ಪತ್ರೆ ವಿರುದ್ಧ ರೋಗಿಗಳು ವಂಚನೆ ಆರೋಪ ಮಾಡಿದ್ದಾರೆ. 100% ಯಶಸ್ಸಿನ ಭರವಸೆ ನೀಡಿ ಲಕ್ಷಾಂತರ ಹಣ ವಸೂಲಿ ಮಾಡಿದ್ದು, ಆದರೆ ಫಲಿತಾಂಶ ನೀಡಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಆದರೆ ಆಸ್ಪತ್ರೆ ಮಾತ್ರ ಈ ಆರೋಪಗಳನ್ನು ತಳ್ಳಿಹಾಕಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮುಖ್ಯಾಂಶಗಳು
- ಐವಿಎಫ್ ಚಿಕಿತ್ಸೆ ಹೆಸರಲ್ಲಿ ಖಾಸಗಿ ಆಸ್ಪತ್ರೆ ಲಕ್ಷಾಂತರ ರೂ ವಂಚನೆ
- ರಾಯಚೂರು ಖಾಸಗಿ ಐವಿಎಫ್ ಆಸ್ಪತ್ರೆ ವಿರುದ್ಧ ಸಿಡಿದೆದ್ದ ದಂಪತಿ
- ಅಗತ್ಯವಿದ್ದರೆ ಆಸ್ಪತ್ರೆಯ ಲೈಸೆನ್ಸ್ ರದ್ದು ಎಂದ ಡಿಎಚ್ಓ
ರಾಯಚೂರು, ಜುಲೈ 01: ಮಕ್ಕಳಾಗದ ದಂಪತಿ ಐವಿಎಫ್ (IVF) ಎಂಬ ತಂತ್ರಜ್ಞಾನ ದಡಿಯ ಚಿಕಿತ್ಸೆಗೆ ಹೋಗುವುದು ಮಾಮೂಲು. ಆದರೆ ಇದೇ ಐವಿಎಫ್ನಿಂದ ಮಕ್ಕಳಾಗಿಲ್ಲ, ಸುಮ್ಮನೆ ಹಣ ಪೀಕುದ್ದಾರೆ ಅಂತ ಗಡಿ ಜಿಲ್ಲೆಯ ಖಾಸಗಿ ಆಸ್ಪತ್ರೆ ವಿರುದ್ಧ ಕೆಲ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಾಗುತ್ತವೆ ಅಂತಾ ನಾವು 100% ಗ್ಯಾರಂಟಿ ಕೊಟ್ಟಿಲ್ಲ. ಐವಿಎಫ್ ರಿಸಲ್ಟ್ ಇರುವುದು 40 ಪರ್ಸೆಂಟ್ ಮಾತ್ರ ಅಂತ ಆಸ್ಪತ್ರೆ ನೀಡಿರುವ ಹೇಳಿಕೆ ಶಾಕ್ ಉಂಟುಮಾಡಿದೆ.
ಮಕ್ಕಳಾಗುವ ಭರವಸೆ ಕೊಟ್ಟು ವಂಚನೆ
ಒಂದು ಮಗುವಾದರೂ ಇರ್ಬೇಕು ಅನ್ನೋದು ಪ್ರತಿ ದಂಪತಿಯ ಕನಸು. ಆದರೆ ಮಕ್ಕಳಾಗದೇ ಹಿನ್ನೆಲೆ ಈಗಿನ ಜನ ಐವಿಎಫ್ ಅನ್ನೋ ಹೊಸ ತಂತ್ರಜ್ಞಾನದ ಚಿಕಿತ್ಸೆ ಪಡೆಯೋದು ಮಾಮೂಲಾಗಿದೆ. ಇಂಥಹದ್ದೆ ಐವಿಎಫ್ ಆಸ್ಪತ್ರೆ ಶೇಡಕಾ 100 ರಷ್ಟು ಮಕ್ಕಳು ಮಾಡುತ್ತೇವೆ ಅಂತ ಭರವಸೆ ಕೊಟ್ಟು ವಂಚಿಸುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ರಾಯಚೂರು PWD ಇಲಾಖೆಯಲ್ಲಿ ಭ್ರಷ್ಟಾಚಾರ: ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ಕೋಟ್ಯಂತರ ರೂ ಲೂಟಿ
ರಾಯಚೂರು ನಗರದಲ್ಲಿರುವ ಖಾಸಗಿ ಐವಿಎಫ್ ಆಸ್ಪತ್ರೆ ವಿರುದ್ಧವೇ ಅಲ್ಲಿ ಚಿಕಿತ್ಸೆ ಪಡೆದವರೇ ಈಗ ಕೆರಳಿದ್ದಾರೆ. ಮಕ್ಕಳ ಭಾಗ್ಯ ಕರುಣಿಸದೇ ಕೇವಲ ಹಣ ವಸೂಲಿ ಮಾಡ್ತಿದ್ದಾರೆ ಅಂತ ಆಸ್ಪತ್ರೆ ವಿರುದ್ಧ ಕೆಲ ರೋಗಿಗಳು ಗಂಭೀರ ಆರೋಪ ಮಾಡಿದ್ದಾರೆ. ಚಿಕಿತ್ಸೆ ಪಡೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಮಕ್ಕಳಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೋಗಿಗಳು, ಆಸ್ಪತ್ರೆ 100% ಯಶಸ್ಸಿನ ಭರವಸೆ ನೀಡಿ ಹಣ ಪಡೆದಿದ್ದಾರೆ ಎಂದು ಉಮೇಶ್ ಹಾಗೂ ಶಾಲಮ್ ಎನ್ನುವವರು ಆರೋಪಿಸಿದ್ದಾರೆ. ಇದೇ ರೀತಿ ಸಾಕಷ್ಟು ಜನಕ್ಕೆ ಮೋಸ ಮಾಡಲಾಗಿದೆ ಎನ್ನಲಾಗುತ್ತಿದೆ.
ರಾಯಚೂರಿನ ಇದೇ ಖಾಸಗಿ ಐವಿಎಫ್ ಆಸ್ಪತ್ರೆ ವಿರುದ್ಧ ರಾಯಚೂರು ನಗರದ ನಿವಾಸಿಗಳಾದ ಉಮೇಶ್ ಹಾಗೂ ಶಾಲಮ್ ಎಂಬವರು ಕೆರಳಿದ್ದಾರೆ. ಉಮೇಶ್ ಹಾಗೂ ಶಾಲಮ್ ಇದೇ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳಾಗು ಚಿಕಿತ್ಸೆ ಪಡೆದುಕೊಂಡಿದ್ದರಂತೆ. ಇವರು ಮೂರು-ನಾಲ್ಕು ಹಂತಗಳಲ್ಲಿ ಐವಿಎಫ್ ಚಿಕಿತ್ಸೆ ಪಡೆದರೂ ಮಕ್ಕಳಾಗಲಿಲ್ಲ. ಒಬ್ಬೊಬ್ಬರಿಂದ ಎರಡು ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದಿದ್ದಾರಂತೆ. 100% ಮಕ್ಕಳಾಗುತ್ತದೆ ಎಂಬ ಭರವಸೆ ನೀಡಿ ವಂಚನೆ ಮಾಡಲಾಗಿದೆ. ಜೊತೆಗೆ ಆಸ್ಪತ್ರೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರೋಗಿಗಳು ಆರೋಪಿಸಿದ್ದು, ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳ ಕುಮ್ಮಕ್ಕು ಕೂಡ ಇದೆ ಎಂದು ದೂರಿದ್ದಾರೆ.
ಆರೋಪಗಳನ್ನು ತಳ್ಳಿಹಾಕಿದ ಖಾಸಗಿ ಆಸ್ಪತ್ರೆ ಮಾಲಕಿ ಡಾ. ದೀಪಾ ಹನಮಸಾಗರ್
ಮಕ್ಕಳಾಗುತ್ತದೆ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ಚಿಕಿತ್ಸೆ ನೀಡಿದರೂ ಯಾವುದೇ ಫಲಿತಾಂಶ ಸಿಕಿಲ್ಲ ಅಂತ ಈ ರೋಗಿಗಳು ಆರೋಪಿಸಿದ್ದಾರೆ. ಇದಷ್ಟೇ ಅಲ್ಲದೇ, ಕಾನೂನು ಬಾಹಿರವಾಗಿ ಅನಧಿಕೃತವಾಗಿ ಅಸ್ಪತ್ರೆ ನಡೆಸಲಾಗುತ್ತಿದೆ ಅಂತ ಶಾಲಮ್ ಡಿಎಚ್ಓಗೂ ದೂರು ನೀಡಿದ್ದಾರೆ. ಆದರೆ ಈ ಆರೋಪದ ಬಗ್ಗೆ ಖಾಸಗಿ ಆಸ್ಪತ್ರೆ ಮಾಲಕಿ ಡಾ. ದೀಪಾ ಹನಮಸಾಗರ್, ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಆಸ್ಪತ್ರೆ ಕಾನೂನುಬದ್ಧ ಲೈಸೆನ್ಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಐವಿಎಫ್ ಚಿಕಿತ್ಸೆಯಲ್ಲಿ 100% ಯಶಸ್ಸಿನ ಗ್ಯಾರಂಟಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈದ್ಯಕೀಯವಾಗಿ ಐವಿಎಫ್ ಯಶಸ್ಸಿನ ಪ್ರಮಾಣ ಶೇ.30 ರಿಂದ 40 ರಷ್ಟು ಇರುತ್ತೆ. ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.
ಅಗತ್ಯವಿದ್ದರೆ ಆಸ್ಪತ್ರೆಯ ಲೈಸೆನ್ಸ್ ರದ್ದು ಎಂದ ಡಿಎಚ್ಓ ಡಾ. ಸುರೇಂದ್ರ ಬಾಬು
ಇನ್ನು ಈ ಬಗ್ಗೆ ಡಿಎಚ್ಓ ಡಾ. ಸುರೇಂದ್ರ ಬಾಬು ಪ್ರತಿಕ್ರಿಯಿಸಿದ್ದು, ಆರೋಪಿತ ಖಾಸಗಿ ಆಸ್ಪತ್ರೆ ಲೈಸೆನ್ಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಐವಿಎಫ್ ಚಿಕಿತ್ಸೆಯಲ್ಲಿ 100% ಮಕ್ಕಳಾಗುತ್ತದೆ ಎಂದು ಭರವಸೆ ನೀಡಿ ರೋಗಿಗಳನ್ನು ವಂಚಿಸುವ ಬಗ್ಗೆ ದೂರು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಆಸ್ಪತ್ರೆಯ ಲೈಸೆನ್ಸ್ ಕೂಡ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಲಬುರಗಿ, ರಾಯಚೂರಿನಲ್ಲಿ ಕೃತಕ ಶೇಂದಿ ದಂಧೆ: 1,500 ಕೆಜಿ ಮರಣಾಂತಿಕ ಕೆಮಿಕಲ್ ಸೀಜ್ ಮಾಡಿದ ಅಬಕಾರಿ ಇಲಾಖೆ
ಒಟ್ಟಿನಲ್ಲಿ ಐವಿಎಫ್ ವಿಚಾರ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ್ದು, ಆರೋಗ್ಯ ಇಲಾಖೆ ಈ ಬಗ್ಗೆ ಏನೆಲ್ಲಾ ಕ್ರಮಕೈಗೊಳ್ಳತ್ತೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




