AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day 2026: ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಈ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು

ಆಗಸ್ಟ್ 15 ಪ್ರತಿಯೊಬ್ಬ ಭಾರತೀಯನಿಗೂ ಬಹಳ ವಿಶೇಷವಾದ ದಿನ. ಈ ದಿನದಂದು ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿಯೂ ಧ್ವಜಾರೋಹಣವನ್ನು ನಡೆಸಲಾಗುತ್ತದೆ. ಅಲ್ಲದೆ ಹರ್‌ ಘರ್‌ ತಿರಂಗಾ ಅಭಿಯಾನದ ಅಡಿಯಲ್ಲೂ ಅನೇಕರು ತಮ್ಮ ಮನೆಗಳಲ್ಲೂ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ. ರಾಷ್ಟ್ರ ಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಮತ್ತು ರಾಷ್ಟ್ರಧ್ವಜಕ್ಕೆ ಅವಮಾನವಾಗದಂತೆ ನಡೆದುಕೊಳ್ಳಬೇಕು. ತ್ರಿವರ್ಣ ಧ್ವಜ ಹಾರಿಸುವಾಗ ಕಡ್ಡಾಯವಾಗಿ ಪಾಲಿಸಬೇಕಾದ ಆ ನಿಮಯಗಳು ಯಾವುವು ಎಂಬುದನ್ನು ನೋಡೋಣ.

Independence Day 2026: ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಈ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು
ತ್ರಿವರ್ಣ ಧ್ವಜImage Credit source: Unsplash
ಮಾಲಾಶ್ರೀ ಅಂಚನ್​
|

Updated on: Aug 12, 2026 | 2:11 PM

Share

ಮುಖ್ಯಾಂಶಗಳು

  • ರಾಷ್ಟ್ರಧ್ವಜವನ್ನು ಹಾರಿಸುವಾಗ ಕೆಲವು ಕಡ್ಡಾಯ ನಿಯಮಗಳನ್ನು ಪಾಲಿಸಲೇಬೇಕು
  • ತ್ರಿವರ್ಣ ಧ್ವಜವನ್ನು ಯಾವಾಗಲೂ ಗೌರವಯುತವಾಗಿ ಹಾರಿಸಬೇಕು
  • • ಧ್ವಜದ ಗಾತ್ರ ಏನೇ ಇರಲಿ ಧ್ವಜ ಸಂಹಿತೆಯ ಪ್ರಕಾರ ತ್ರಿವರ್ಣ ಧ್ವಜ 3:2 ಅನುಪಾತದಲ್ಲಿರಬೇಕು

ಭಾರತದಾದ್ಯಂತ ನಾಗರಿಕರು ಆಗಸ್ಟ್‌ 15 ನೇ ತಾರಿಕಿನಂದು 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಆಚರಿಸಲು ಸಜ್ಜಾಗಿದ್ದಾರೆ. ಎಂದಿನಂತೆ ಈ ದಿನ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿಯೂ ಧ್ವಜಾರೋಹಣವನ್ನು ನಡೆಸಲಾಗುತ್ತದೆ. ಅಲ್ಲದೆ ಸ್ವಾತಂತ್ರ್ಯ ದಿನದ ಅಂಗವಾಗಿ ದೇಶಾದ್ಯಂತ ಹರ್‌ ಘರ್‌ ತಿರಂಗಾ 2026 ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. ಪ್ರಧಾನಿ ಮೋದಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋವನ್ನು ಪೋಸ್ಟ್‌ ಮಾಡುವ ಮೂಲಕ ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ದೇಶದ ನಾಗರಿಕರಿಗೆ ಕರೆಯನ್ನು ನೀಡಿದ್ದಾರೆ. ಈ ಅಭಿಯಾನದಡಿಯಲ್ಲಿ ನೀವು ನಿಮ್ಮ ಮನೆಯಲ್ಲಿ ಹೆಮ್ಮೆಯ ರಾಷ್ಟ್ರ ಧ್ವಜವನ್ನು ಹಾರಿಸುತ್ತಿದ್ದರೆ, ತ್ರಿವರ್ಣ ಧ್ವಜ ಹಾರಿಸುವ ಮುನ್ನ ಪಾಲಿಸಬೇಕಾದ ಈ ಕಡ್ಡಾಯ ನಿಮಯಗಳನ್ನು ತಿಳಿದುಕೊಳ್ಳಿ ಮತ್ತು ರಾಷ್ಟ್ರ ಧ್ವಜಕ್ಕೆ ಅವಮಾನವಾಗದಂತೆ ನಡೆದುಕೊಳ್ಳಿ.

ಏನಿದು ‘ಹರ್ ಘರ್ ತಿರಂಗ’ ಅಭಿಯಾನ?

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ 2022 ರಲ್ಲಿ ‘ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ನೆನಪಿಸಿಕೊಳ್ಳುವ ಮೂಲಕ ಜನರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು ದೇಶಭಕ್ತಿಯ ಮನೋಭಾವವನ್ನು ಬಲಪಡಿಸಲು ಕೇಂದ್ರ ಸರ್ಕಾರ ಈ ಅಭಿಯಾನವನ್ನು ಪ್ರಾರಂಭಿಸಿತು. ಈಗಾಗಲೇ ದೇಶಾದ್ಯಂತ ಹರ್‌ ಘರ್‌ ತಿರಂಗಾ 2026 ಅಭಿಯಾನಕ್ಕೂ ಚಾಲನೆ ನೀಡಲಾಗಿದ್ದು, ಆಗಸ್ಟ್‌ 9 ರಿಂದ ಆರಂಭವಾದ ಈ ಅಭಿಯಾನ ಆಗಸ್ಟ್‌ 17 ರ ವರೆಗೆ ನಡೆಯಲಿದೆ.

ಧ್ವಜಾರೋಹಣ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು?

  • ಧ್ವಜವನ್ನು ಯಾವಾಗಲೂ ಗೌರವಯುತವಾಗಿ ಹಾರಿಸಬೇಕು ಮತ್ತು ಘನತೆಯಿಂದ ನಿಧಾನವಾಗಿ ಕೆಳಗಿಳಿಸಬೇಕು. ಕೆಳಗಿಳಿಸಿದ ಬಳಿಕ ಅದನ್ನು ಮಡಚಿ ಸುರಕ್ಷಿತ ಸ್ಥಳದಲ್ಲಿಡಬೇಕು.
  • ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸಬಾರದು.  ಕೇಸರಿ ಯಾವಾಗಲೂ ಮೇಲ್ಭಾಗದಲ್ಲಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಹಸಿರು ಬಣ್ಣದಲ್ಲಿರಬೇಕು. ಬಿಳಿ ಪಟ್ಟಿಯಲ್ಲಿ ಅಶೋಕ ಚಕ್ರ ಇರಬೇಕು, ಅದು 24 ಗೆರೆಗಳನ್ನು ಹೊಂದಿರಬೇಕು.
  • ತ್ರಿವರ್ಣ ಧ್ವಜವನ್ನು ಸ್ಪಷ್ಟವಾಗಿ ಗೋಚರಿಸುವ ಸ್ಥಳದಲ್ಲಿ ಹಾರಿಸಬೇಕು ಮತ್ತು ರಾಷ್ಟ್ರ ಧ್ವಜದ ಪಕ್ಕದಲ್ಲಿ ಬೇರೆ ಯಾವುದೇ ಧ್ವಜವನನ್ನು ಹಾರಿಸಬಾರದು.
  • ಹಾನಿಗೊಳಗಾದ ಅಥವಾ ಸ್ವಚ್ಛವಾಗಿರದ ಧ್ವಜವನ್ನು ಎಂದಿಗೂ ಪ್ರದರ್ಶಿಸಬಾರದು. ನೀವು ಹಾರಿಸುವ ರಾಷ್ಟ್ರ ಧ್ವಜ ಪರಿಪೂರ್ಣ ಸ್ಥಿತಿಯಲ್ಲಿ ಇರಬೇಕು. ಧ್ವಜ ಸಂಹಿತೆಯ ಪ್ರಕಾರ, ಕೈಯಿಂದ ನೇಯ್ದ, ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ ಅಥವಾ ರೇಷ್ಮೆ ಖಾದಿ ಬಂಟಿಂಗ್‌ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳನ್ನು ಹಾರಿಸಬಹುದು.
  • 2002 ರ ತಿದ್ದುಪಡಿ ಮಾಡಿದ ಧ್ವಜ ಸಂಹಿತೆಯ ಪ್ರಕಾರ, ಭಾನುವಾರ ಮತ್ತು ರಜಾದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲಿ ವ್ಯಕ್ತಿಗಳು, ಖಾಸಗಿ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಧ್ವಜವನ್ನು ಹಾರಿಸಬಹುದು.
  • ಧ್ವಜದ ಗಾತ್ರ ಏನೇ ಇರಲಿ ಧ್ವಜ ಸಂಹಿತೆಯ ಪ್ರಕಾರ ತ್ರಿವರ್ಣ ಧ್ವಜ 3:2 ಅನುಪಾತದಲ್ಲಿರಬೇಕು. ಮತ್ತು ಧ್ವಜದ ಮಧ್ಯ ಭಾಗವು 24 ಸಮಾನ ಅಂತರದ ಗೆರೆಗಳೊಂದಿಗೆ ಕಡು ನೀಲಿ ಬಣ್ಣದಲ್ಲಿನ ಅಶೋಕ ಚಕ್ರವನ್ನು ಹೊಂದಿರಬೇಕು.
  • ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಿರಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರೆ, ಧ್ವಜ ವಾಲದಂತೆ ಮತ್ತು ನೆಲ ಅಥವಾ ನೀರನ್ನು ಮುಟ್ಟದಂತೆ ನೋಡಿಕೊಳ್ಳಿ.
  • ಒಂದು ವೇಳೆ ತ್ರಿವರ್ಣ ಧ್ವಜ ಹಾನಿಗೊಳಗಾದರೆ ಅದನ್ನು ಕಸದ ಬುಟ್ಟಿ ಅಥವಾ ಇನ್ನಾವುದೇ ಸ್ಥಳದಲ್ಲಿ ಎಸೆಯಬಾರದು ಬದಲಿಗೆ ಗೌರವಯುತವಾಗಿ ಸುಡಬೇಕು ಅಥವಾ ಹೂಳಬೇಕು. ಸುಟ್ಟ ನಂತರ ಆ ಬೂದಿಯನ್ನು ನದಿ ನೀರಿನಲ್ಲಿ ಬಿಡಬೇಕು.
  • ಧ್ವಜವನ್ನು ಸಾರ್ವಜನಿಕವಾಗಿ ಉದ್ದೇಶಪೂರ್ವಕವಾಗಿ ಹರಿದು ಹಾಕಬಾರದು, ಸುಡಬಾರದು ಅಥವಾ ವಿರೂಪಗೊಳಿಸಬಾರದು, ಏಕೆಂದರೆ ಇದು ಅಪರಾಧವಾಗಿದೆ.
  • ಧ್ವಜವನ್ನು ಕೊಳಕು ಜಾಗದಲ್ಲಿ ಅಥವಾ ಹಾನಿ ಮಾಡುವ ರೀತಿಯಲ್ಲಿ ಸಂಗ್ರಹಿಸಬಾರದು.
  • ಅಭಿಯಾನ ಮುಗಿದ ನಂತರ ಧ್ವಜವನ್ನು ಗೌರವಯುತವಾಗಿ ಇಳಿಸಬೇಕು ಮತ್ತು ಜೋಪಾನವಾಗಿ ಸಂಗ್ರಹಿಸಿಡಬೇಕು.

ಇದನ್ನೂ ಓದಿ: 79 ಅಥವಾ 80? ಸ್ವಾತಂತ್ರ್ಯ ದಿನಾಚರಣೆಯ ಲೆಕ್ಕಾಚಾರದಲ್ಲಿ ನಿಮಗೂ ಗೊಂದಲವಿದೆಯೇ? ಇಲ್ಲಿದೆ ಸ್ಪಷ್ಟ ಉತ್ತರ!

ಒಂದು ವೇಳೆ ಧ್ವಜವನ್ನು ಅಗೌರವಿಸಿದರೆ ಅಥವಾ ಅದನ್ನು ದುರುಪಯೋಗಪಡಿಸಿಕೊಂಡರೆ ಅಥವಾ ಧ್ವಜ ಹಾರಿಸುವಾಗ ಮತ್ತು ಇಳಿಸುವಾಗ ಸರಿಯಾದ ನಿಯಮ ಪಾಲಿಸದಿದ್ದರೆ, ರಾಷ್ಟ್ರ ಸಂಹಿತೆಯನ್ನು ಉಲ್ಲಂಘಿಸಿದರೆ  ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ 1971 ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡವನ್ನು ವಿಧಿಸುವ ಸಾಧ್ಯತೆಯಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us