ಮಗನ ಕೊಂದು ಮನೆ ಲಾಕ್ ಮಾಡಿ ಮಲತಂದೆ ಪರಾರಿ: ಶವದ ಮುಂದೆ 3 ದಿನ ನರಳಾಡಿದ ತಾಯಿ!
ಅಪಾರ್ಟ್ಮೆಂಟ್ವೊಂದರಲ್ಲಿ ಮಲತಂದೆಯೊಬ್ಬ ಮಗನನ್ನು ಕೊಂದಿರುವ ಘಟನೆ ಮೂರು ದಿನದ ಬಳಿಕ ಬೆಳಕಿಗೆ ಬಂದಿದೆ. ಹೌದು..ಮಗನನ್ನು ಕೊಂದು, ಪತ್ಮಿ ಮೇಲೆ ಹಲ್ಲೆ ಮಾಡಿ ಮನೆ ಲಾಕ್ ಮಾಡಿಕೊಂಡು ಪರಾರಿಯಾಗಿದ್ದು, ಹೀಗಾಗಿ ತಾಯಿ ಮಗನ ಶವದ ಮುಂದೆ ಮೂರು ದಿನ ನರಳಾಡಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮೂರು ದಿನದ ನಂತರ ಘಟನೆ ಬೆಳಕಿಗೆ ಬಂದಿದ್ಹೇಗೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು, (ನವೆಂಬರ್ 20): ಮಲತಂದೆಯೊಬ್ಬ ಮಗನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದಾಗಿ ಮಲತಂದೆ ಸುದೀಪ್ ಎಂಬಾತ 18 ವರ್ಷದ ಮಗ ಸೋಹಮ್ ದಾಸ್ ನನ್ನು ಬರ್ಬರವಾಗಿ ಹತ್ಯೆಗೈದು ಬಳಿಕ ಮನೆ ಡೋರ್ ಲಾಕ್ ಮಾಡಿಕೊಂಡು ಪರಾರಿಯಾಗಿದ್ದು. ಘಟನೆ ನಡೆದ ಮೂರು ದಿನದ ಬಳಿಕ ಮನೆ ಮಾಲೀಕ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಹಂತಕ ಮಲತಂದೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ತಾಯಿ, ಮೂರು ದಿನಗಳಿಂದ ಅನ್ನ, ನೀರಿಲ್ಲದೆ ಕಣ್ಣಮುಂದೆಯೇ ಮಗನ ಶವ ನೋಡುತ್ತಾ ತಾಯಿ ನರಳಾಡಿದ್ದಾಳೆ.
3 ದಿನಗಳಿಂದ ನರಳಾಡಿದ ತಾಯಿ
ಇನ್ನು ಮೂರು ದಿನದ ಬಳಿಕ ಮಾಲೀಕ ಅಪಾರ್ಟ್ಮೆಂಟ್ ಬಳಿ ಬಂದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಬಂದು ಮುಖ್ಯ ಬಾಗಿಲನನ್ನು ಓಪನ್ ಮಾಡಿಸಿ ನೋಡಿದಾಗ ಒಂದು ರೂಮ್ ನಿಂದ ಸುದೀಪ್ ಪತ್ನಿ ಸೀಮಾದಾಸ್ ಕೂಗುತ್ತಿರೋ ಶಬ್ದ ಕೇಳಿಬಂದಿದೆ. ಮೂರು ದಿನಗಳಿಂದ ಮಗನ ಮೃತದೇಹ ಬಾತ್ ರೂಮ್ನಲ್ಲಿ ಬಿದ್ದಿದ್ದರೆ, ಇನ್ನೊಂದು ರೂಮ್ನಲ್ಲಿ ತಾಯಿ, ಅನ್ನ, ನೀರಿಲ್ಲದೇ ನರಳಾಡಿದ್ದಾಳೆ.
ಇದನ್ನೂ ಓದಿ: 5 ತಿಂಗಳ ಹಿಂದಷ್ಟೇ ಮದುವೆ; 2 ತಿಂಗಳ ಹಿಂದೆಯೇ ಕೊಲೆ; ಬೆಂಗಳೂರಿನ ಅಸ್ಥಿಪಂಜರ ಕೇಸ್‌ಗೆ ಬಿಗ್ ಟ್ವಿಸ್ಟ್
ಪ್ರಕರಣ ಬೆಳಕಿಗೆ ಬಂದಿದ್ಹೇಗೆ?
ದಂಪತಿ ನಡುವೆ ಆಗಾಗ ಜಗಳವಾಗುತ್ತಿದ್ದನ್ನು ಅಕ್ಕ ಪಕ್ಕದ ಮನೆಯವರು ಅಪಾರ್ಟ್ಮೆಂಟ್ ಮಾಲೀಕನಿಗೆ ದೂರು ನೀಡಿದ್ದರು. ಅದರಂತೆ ಮಾಲೀಕ ಸಹ ಬಂದು ಶಾಂತಿಯುತವಾಗಿರಿ ಇಲ್ಲವಾದರೆ ಮನೆ ಖಾಲಿ ಮಾಡಿ ಎಂದು ವಾರ್ನ್ ಮಾಡಿದ್ದ. ಆದರೂ ನವೆಂಬರ್ 16ರ ರಾತ್ರಿ ಮನೆಯಲ್ಲಿ ಮತ್ತೆ ಜೋರಾಗಿ ಜಗಳ ಶುರುವಾಗಿದೆ. ಸ್ವಲ್ಪ ಹೊತ್ತಿನ ನಂತರ ಗಲಾಟೆ ತಣ್ಣಗಾಗಿದ್ದರಿಂದ, ಮಾಮೂಲಿ ಜಗಳವಿರಬೇಕು ಅಂತ ನೆರೆಹೊರೆಯವರು ಮತ್ತು ಮಾಲೀಕರು ಸುಮ್ಮನಾಗಿದ್ದರು. ಆದರೆ ಆ ರಾತ್ರಿ ಸುದೀಪ್ , ಮಗನನ್ನು ಕೊಂದು ಪತ್ನಿ ಮೇಲೆ ಹಲ್ಲೆ ಮಾಡಿ ಡೋರ್ ಲಾಕ್ ಮಾಡಿ ಎಸ್ಕೇಪ್ ಆಗಿದ್ದಾನೆ.
ಮೂರು ದಿನಗಳಾದರೂ ಸೀಮಾ ಆಗಲಿ, ಮಗನಾಗಲಿ ಮನೆಯಿಂದ ಹೊರಗೆ ಬಾರದಿದ್ದನ್ನು ಕಂಡು ಅನುಮಾನಗೊಂಡ ಪಕ್ಕದ ಮನೆಯವರು, ಮಾಲೀಕನಿಗೆ ವಿಷಯ ತಿಳಿಸಿದ್ದಾರೆ. ಮಾಲೀಕರು ಬಂದು ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕೀ ಮೇಕರ್ ಕರೆಸಿ ಬೀಗ ತೆಗೆಸಿದಾಗ, ರೂಂ ಒಳಗಿನಿಂದ ಸೀಮಾ ದಾಸ್ ಕೂಗುತ್ತಿದ್ದ ಶಬ್ದ ಕೇಳಿಸಿದೆ. ತಕ್ಷಣ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಹಾಲ್‌ನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಬಾತ್‌ರೂಂನಲ್ಲಿ ಮಗ ಸೋಹಮ್ ಮೃತದೇಹ ಸಿಕ್ಕಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ಸುದೀಪ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.




